Monday, 24 October 2016

ಮನಸ್ಸಿಗೊಂದು ಮನವಿ


ಮನಸ್ಸಿಗೊಂದು ಮನವಿ



ಎಳೆಮನಸೋ, ಹದಿಮನಸೋ, ಮುದಿಮನಸೋ
ಮನಸು ಮನಸೇ||
ಮನಸಿಗಿಲ್ಲ ವಯಸು| ಮನಸಿಗಿರುವದೇ ಖಾಯಿಸು|
ಹೊತ್ತಿಲ್ಲ ಗೊತ್ತಿಲ್ಲ | ಹಗಲಿಲ್ಲ ಇರುಳಿಲ್ಲ|
ಅಲೆಮಾರಿ ಮನಸಿದು||
ತಿರುಗಿದಷ್ಟೂ ದಣಿವಾಗದ ಮನಸಿದು|
ಮನಸೇ ...... ಆದರೂ ನಿನಗೊಂದು ಮನವಿ
ಬಡತನದ ಹಂಗಿರದ| ಸಿರಿತನ ಬರವಿರದ|
ಏರಿದರೂ ಹಿಗ್ಗದ| ಬಿದ್ದರೂ ಜಗ್ಗದ|
ಜಗಜಟ್ಟಿಯ ಮನಸು ನೀನಾಗು||
ಕಣ್ಣೀರು ಒರೆಸದಿರೆ ಚಿಂತೆಯಿಲ್ಲ
ಕಣ್ಣೀರು ಹಾಕಿಸಬೇಡ|
ಮಗು ಮನಸು ನಿನಗಿರಲಿ|
ನಗು ಮನಸು ನಿನಗಿರಲಿ|
ನಕ್ಕುನಗಿಸುವ ಮನಸು ನಿನದಾಗಲಿ||
ಎಡವಿ ಬಿದ್ದವರ ಮೈದಡವಿ ಆಸರೆಯಾಗದಿರೆ ಚಿಂತೆಯಿಲ್ಲ|
ಅದನೋಡಿ ನಗುವ ಮನಸು ನಿನಗೆ ಬೇಡ||
ಮೂರು ದಿನದ ಬದುಕಿಗೆ
ನೂರಾರು ಮುಖವಾಡದ ಮನಸ್ಯಾಕೋ!


--**__**__**--



- ಮಹೇಶ್ ದೇಶಪಾಂಡೆ
-ತುಷಾರಪ್ರಿಯ


Thursday, 20 October 2016

ಮುತ್ತು

ಮುತ್ತು



ಶರಧಿಯ ತಳದಲಿ ಚಿಪ್ಪಿನಾ ಗರ್ಭದಲಿ
ಸ್ವಾತಿಮಳೆ ಹನಿ ಒಡೆದು ಮುತ್ತೊಂದು ಮೂಡಿದೆ
ನೀನೇ ಅದರೊಡತಿ ........ ನೀನೇ ಅದರೊಡತಿ ........
ಎಂದು ಮನಕೂಗಿ ಹೇಳುತಿದೆ
ನಿನ್ನ ಕೊರಳಲದು ಹೊಳೆಯಲೆಂಬ
ಉತ್ಕಟ ವಾಂಛೆ ಆವರಿಸ ತೊಡಗಿದೆ
ಕಣ್ಣಾಲಿಗಳು ತೇವಗೊಂಡು ಎದೆ ಭಾರವಾಗಿದೆ
ಏನೋ ಹಳವಂಡ .........!
ಉದುರಿದವೆರಡು ಕಂಬನಿ ಹನಿಗಳು
ನೆಲಕಪ್ಪುವ ಮೊದಲೇ ಜೋರಾಗಿ ಮಳೆಸುರಿದು
ಧರೆಗೆ ಹರಿದಿದ್ದು ಮಳೆನೀರೋ! ಕಂಬನಿಯೋ!
ನಾನರಿಯದಾದೆ
ಬಾನಂಚಲಿ ಕೋಲ್ಮಿಂಚ ಕೋಲಾಟ
ಕಣ್ಣು ಕತ್ತಲೆಗೂಡಿ ಎಲ್ಲವೂ ಅಯೋಮಯ!
ಎಡಬಿಡದ ಮಳೆಹನಿಗಳ ಕೂಡ
ಕಂಬನಿಯ ಕೋಡಿ ಪಂಥಕ್ಕಿಳಿದಿದೆ
ನಿಲ್ಲದ ಮಳೆಯಬ್ಬರ
ಕಂಬನಿಯ ಕೋಡಿ ಸೋಲಿಗೆ ಶರಣು
ಹಾಗಾದರೆ ನಾನು ಕಳೆದುಕೊಂಡಿದ್ದಾದರೂ ಏನು?
ಸಂತಸದ ಹೊನಲೋ .........!? ಹತಾಶೆಯ ಕನಲೋ ........!?
ನಾ ಕುಸಿದು ಕುಳಿತೆ
ಕೊನೆಗೂ ಕಳೆದುಹೋದ ಮುತ್ತೊಂದು ನನಗೀಗ ಸಿಕ್ಕಿದೆ
ಸಿಕ್ಕ ಖುಷಿಯಲಿ
ನಾ.......... ನಗುತಲೇ ಇದ್ದೆ......... !
ನಾ.......... ನಗುತಲೇ ಇದ್ದೆ......... !
ಮತ್ತೆ ಹರಿದ ಕಂಬನಿಯ ಕೋಡಿ
ಕಡಲಲಿ ಕರಗುವವರೆಗೆ!
ಮತ್ತೊಂದು ಮುತ್ತು ಕೈವಶವಾಗುವವರೆಗೆ !

*-*-*-*



ಮಹೇಶ ಶ್ರೀ. ದೇಶಪಾಂಡೆ
-ತುಷಾರಪ್ರಿಯ

Saturday, 15 October 2016

ಮನಸು




ಮನಸು




ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಏ...... ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಈ ದೇವರಾಣೆ ......... ಗೆಳತಿ ......... ಈ ದೇವರಾಣೆ
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಹೇಗೋ ಬದಲಾದ ಬದುಕು
ತಿಳಿದಿಲ್ಲ ನಾ ಹೀಗೆಂದು
ತಿಳಿದಿಲ್ಲ ಎಲ್ಲಿ ಏನಾಯ್ತೋ
ನಾ ಮೋಸಗಾರನಾದೆ ನನಗರಿವಿಲ್ಲದೆ
ನೀ ನೀಡು ನ್ಯಾಯ ......... ಮನ್ನಿಸು ನನ್ನ..........
ಇಷ್ಟಾದರೂ ನೀ ದಯತೋರು
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಹುಡುಗುತನದ ಹುಚ್ಚು
ನಾನರಿಯಲಿಲ್ಲ ನಿನ್ನಾಸರಳತೆ
ನಾನಿನಗೆ ನೀಡಬೇಕು, ಅಂಥಾ ಪ್ರೀತಿಯ, ಇದೇನನ್ನ ಬಯಕೆ
ನಿನ್ನೆರಡು ಪಾದದಡಿ ನಾನಿಡುವೆ ಈ ಎರಡು ಜಗವ
ನನ್ನೆಲ್ಲ ನೆಮ್ಮದಿ ನಿನಗಾಗಿ, ನನ್ನೆಲ್ಲ ಖುಷಿ ನಿನಗಾಗಿ,
ನೀನೀಡು ನನಗೆ ನಿನ್ನೆಲ್ಲ ನೋವು 
 ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಕಂಬನಿಗಳು ನನ್ನೀ ಕಥೆಯ ಹೇಳುತಿವೆ
ನೀ ತಿಳಿಯ ಬೇಡ, ಅದುಬರೀ ನೀರೆಂದು
ಕಂಬನಿಯ ಗುರುತು ಅಳಿಸಿವೆ....... ಬಿಕ್ಕಳಿಸಿ ಬಿಕ್ಕಳಿಸಿ,
ನಂಬುಗೆಯ ಬಣ್ಣ ಅದ್ದುವೆ ಅದರೊಳು ಇಂದು
ನೀನನ್ನ ಜೊತೆಯಲಿ ಇದ್ರೆ, ಚ್ಯುತಿಯೆಂದೂ ಆಗದು
ಇನ್ನೆಂದು ನಿನಗೆ ನಾ ದ್ರೋಹ ಮಾಡೆನು
ಈ ಮನಸು ನಿನಗಾಗಿ, ಜೀವಾನೂ ಕೊಡ್ತಿನಿ
ಗೆಳತಿ ......... ನಿನಗೆಂದೂ ನೋವು ನೀಡೊಲ್ಲ
ಈ ದೇವರಾಣೆ ......... ಗೆಳತಿ ......... ಈ ದೇವರಾಣೆ

*-*-*-*
  ಮಹೇಶ ಶ್ರೀ. ದೇಶಪಾಂಡೆ
-ತುಷಾರಪ್ರಿಯ
(ಇದು ಹಿಂದಿ ಚಿತ್ರ ಗೀತೆಯ ಭಾವಾನುವಾದ!  ಸಾಧ್ಯವಾದರೆ ಊಹಿಸಿ!)

Thursday, 6 October 2016

’ಪಲಾಯನಗೊಂಡ ಪ್ರತಿಭೆಗಳನ್ನು ತೆಗಳುವ ಬದಲು…!’

ಪ್ರತಿಭಾ ಪಲಾಯನದ ಬಗ್ಗೆ ಈಗಾಗಲೆ ನೂರಾರು ಲೇಖನಗಳು, ಅನಿಸಿಕೆಗಳು, ವಾದ ವಿವಾದಗಳು ಪ್ರಕಟಗೊಂಡಿರಬಹುದು ನನಗನ್ನಿಸಿದ ಕೆಲವು ವಿಚಾರಗಳನ್ನು ನನಗನ್ನಿಸಿದ ರೀತಿಯಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ಮಧ್ಯಮ ವರ್ಗದ ಜನರ ಪ್ರತಿಭೆಗಳ ವಿಚಾರಕ್ಕೆ ಬರೋಣ. ಬರುವ ಆದಾಯದಲ್ಲಿ ಅಷ್ಟೊ ಇಷ್ಟು ಉಳಿಸಿ, ಕೂಡಿಟ್ಟು ಮಕ್ಕಳನ್ನು ಓದಿಸಿ ಕನಸು ಕಾಣುತ್ತ, ಮಕ್ಕಳ ಭವಿಷ್ಯದಲ್ಲಿ ಬೆಳಕು ನೋಡುವ ವರ್ಗದವರಿವರು. ಸರಕಾರದ ಯಾವ ಸವಲತ್ತು ಇವರಿಗೆ ದೊರಕಲಾರದು. ಶೇಕಡ 90 ಅಥವ ಅದಕ್ಕೂ ಹೆಚ್ಚು ಅಂಕಗಳಿಸಿ ವೃತ್ತಿಪರ ಶಿಕ್ಷಣಕ್ಕೆ ಸೀಟು ಗಿಟ್ಟಿಸುವಲ್ಲಿ ಅನೇಕರು ವಿಫಲರಾಗುತ್ತಾರೆ. ಇದಕ್ಕೆಲ್ಲ ಕಾರಣ ನಮ್ಮ ಮೀಸಲಾತಿ ನೀತಿಯಲ್ಲಿರುವ ಧ್ಯೇಯಗಳು ಅಸಮಾನತೆಯ ಕಂದಕವನ್ನು ಪ್ರತಿಭಾವಂತರಲ್ಲಿ ಮತ್ತು ಪ್ರತಿಭೆಯ ಪ್ರಮಾಣ ಕಡಿಮೆ ಇರುವವರಲ್ಲಿ ಸೃಷ್ಟಿಮಾಡುತ್ತದೆ. ಆರಕ್ಕೂ ಏರದ ಮೂರಕ್ಕೂ ಇಳಿಯದ ಜನರಿವರು. ಜೀವನಪೂತರ್ಿ ಕೆಲಸಮಾಡಿದರೂ ಒಂದು ಸ್ವಂತ ಮನೆಮಾಡಿಕೊಂಡ, ಸಾಲಸೋಲಗಳಿಲ್ಲದೆ ಮಕ್ಕಳ ಮದುವೆ ಮಾಡಿದ ಒಂದು ಉದಾಹರಣೆ ತೋರಿಸಿ ನೋಡೋಣ, ಊಹೂಂ! ಸಾಧ್ಯವಿಲ್ಲ, ಹಾಗೂ ಹೀಗೂ ಕಷ್ಟಪಟ್ಟು ಓದಿದ ಮೇಲೆ ತಮ್ಮ ತಮ್ಮ ಭವಿಷ್ಯವನ್ನು ತಮಗಿಷ್ಟದ ರೀತಿಯಲ್ಲಿ ರೂಪಿಸಿಕೊಳ್ಳುವ ಎಲ್ಲ ಸ್ವಾತಂತ್ರ ಅವರಿಗಿದೆ. ಅವರನ್ನು ತಡೆಹಿಡಿದು ದೇಶಪ್ರೇಮದ ನಾಲ್ಕು ಮಾತಾಡಿ ಎದೆ ಬಡಿದುಕೊಂಡರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ! ಪ್ರತಿಭಾ ಪುರಸ್ಕಾರಕ್ಕೆ ನಮ್ಮಲ್ಲಿ ನಾವೆಷ್ಟು ಬೆಲೆ ಕೊಡುತ್ತೇವೆ.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ವೇದಿಕೆಗೆ ಕರೆದು ಐನೂರೋ ಸಾವಿರ ರೂಪಾಯಿಗಳ ಕವರ್ ಸಮೇತ ಪ್ರಮಾಣ ಪತ್ರ ನೀಡಿ ಜನರಿಂದ ಚಪ್ಪಾಳೆ ಹೊಡೆಸಿದ ಸಂಭ್ರಮ, ಭ್ರಮನಿರಶನದಲ್ಲಿ ಕೊನೆಯಾಗಲು ಬಹಳ ದಿನ ಕಾಯಬೇಕಾಗಿಲ್ಲ. ವೃತ್ತಿಶಿಕ್ಷಣ ಕೋಸರ್್ಗಳಿಗೆ ಅಜರ್ಿಗುಜರಾಯಿಸಿ ಬಕಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ. ಅಯ್ಯೋ, ನಿಮ್ಮದು ಜನರಲ್ ಕೆಟೆಗರಿನಾ! ಸ್ವಲ್ಪ ಕಷ್ಟಾನೇ! ಎನ್ನುವ ಚುಚ್ಚುನುಡಿಗಳು ಪ್ರತಿಭಾವಂತ ವಿದ್ಯಾಥರ್ಿಯ ಮನಸ್ಸಿನಲ್ಲಿ ಯಾವ ತರಹದ ಕೆಚ್ಚನ್ನು ಉಂಟು ಮಾಡಬಲ್ಲದೆಂದು ನೀವೇ ಊಹಿಸಿ. ನಮ್ಮ ನೆಲದಲ್ಲಿ ನಾವೇ ಪರಕೀಯರೇ? ಎಂಬ ಸಂಶಯ ಮೂಡುತ್ತದೆ. ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡರೂ ಏನೂ ಮಾಡಲಾಗದ ಸ್ಥಿತಿ. ಯಾವುದೋ ಆದರ್ಶಕ್ಕೆ ಕಟ್ಟುಬಿದ್ದು ಪ್ರತಿಭೆಗಳು ಮುರುಟಿ ಹೋಗಬಾರದು. ಆದರ್ಶಕ್ಕೆ ಕಟ್ಟುಬಿದ್ದರೆ ಸಿಗುವ ಪುರಸ್ಕಾರ ಅಷ್ಟರಲ್ಲೇ ಇದೆ!. ಅಷ್ಟಕ್ಕೂ ನಮ್ಮ ಸರಕಾರ ಪ್ರತಿಭಾ ಪಲಾಯನ ತಡೆಗಟ್ಟಲು ಏನು ಕ್ರಮ ತೆಗೆದುಕೊಂಡಿದೆ? ಏನೂ ಇಲ್ಲವೆಂದು ಹೇಳಬೇಕು. ಇಂದಿನ ಯುವಕರು ನಾಳಿನ ಭವಿಷ್ಯ ಬುನಾದಿ ಎಂದೆಲ್ಲ ಬೊಬ್ಬೆ ಇಡುವ ಆಷಾಡಭೂತಿ ರಾಜಕಾರಣಿಗಳು, ವಯಸ್ಸಾಗಿ ನಡೆದಾಡುವ ಸಾಮಥ್ರ್ಯಕಳೆದುಕೊಂಡು ಗಾಲಿಕುಚರ್ಿಯಲ್ಲಿ ಕುಳಿತುಕೊಂಡು ಸಾಯುವವರೆಗೂ ಅಧಿಕಾರಕ್ಕಾಗಿ ಜೊಲ್ಲು ಸುರಿಸುವ ಇಂಥ ನಾಯಕರು ಪ್ರತಿಭಾಪಲಾಯನಕ್ಕೆ ಏನು ಕ್ರಮ ತೆಗೆದುಕೊಂಡಿರುವರೆಂದು ಜನರಿಗೆ ತಿಳಿಯಬೇಕು. ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿರುವ ಇವರಿಂದ ಏನು ಅಪೇಕ್ಷಿಸಲು ಸಾಧ್ಯ? ಬೇರೆ ದೇಶಗಳಲ್ಲಿ ನಮ್ಮ ಪ್ರತಿಭೆಗಳಿಗೆ ಸಿಗುವ ಮನ್ನಣೆ ನಮ್ಮ ಜನ, ನಮ್ಮ ಸರಕಾರ ನಮ್ಮ ವ್ಯವಸ್ಥೆ ಸರಿಯಾಗಿ ಗುರುತಿಸಿದರೆ ಪ್ರತಿಭಾ ಪಲಾಯನ ನಿಲ್ಲಬಹುದು. ಈ ಸಂದರ್ಭದಲ್ಲಿ ಇಂಗ್ಲೆಂಡನ ಪ್ರತಿಷ್ಟಿತ ಕಂಪನಿಯೊಂದರ ಮುಖ್ಯವ್ಯವಸ್ಥಾಪಕರು ಸಂದರ್ಶನವೊಂದರಲ್ಲಿ ಹೇಳಿದ ಮಾತು ನೆನಪಾಗುತ್ತದೆ. ನೀವು ಏನನ್ನು ಆಮದು ಮಾಡಿ ಕೊಳ್ಳುತ್ತೀರಿ ಎಂದು ಕೇಳಿದಾಗ, ನಾವು ಪ್ರತಿಭೆಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಎಂದು ಹೇಳಿದಾಗ ಅವರ ದೂರಗಾಮಿ ದೃಷ್ಟಿಗೆ ನಾವು ತಲೆಬಾಗಲೇಬೇಕು. ಈ ದೃಷ್ಟಿಕೋನದಲ್ಲಿ ನಾವ್ಯಾರೂ ಚಿಂತನೇ ಮಾಡೋದೇ ಇಲ್ಲ.
ಮುಂದುವರಿದ ಕೆಲ ರಾಷ್ರ್ಟಗಳು ಹೊರದೇಶಗಳೀಗೆ ಉನ್ನತ ವ್ಯಾಸಂಗಕ್ಕಾಗಿ ತೆರಳುವ ಪ್ರತಿ ವಿದ್ಯಾರ್ಥಿಗಳಿಗೆ ಮರಳಿದೇಶಕ್ಕೆ ಬರುವ ಷರತ್ತಿನೊಂದಿಗೆ ವ್ಯಾಸಂಗದ ಎಲ್ಲ ಖರ್ಚುಗಳನ್ನು ಭರಿಸುವುದಲ್ಲದೆ ಪ್ರತಿಭೆಗೆ ತಕ್ಕ ಉದ್ಯೋಗ ಭರವಸೆಯನ್ನೂ ನೀಡುತ್ತದೆ, ಎಂದು ಕೇಳಿದ್ದೇನೆ. ಭಾರತ ಬಲಿಷ್ಠ ರಾಷ್ಟ್ರ, ಅಭಿವೃದ್ಧಿ ಶೀಲ ಹಾಗೂ ಮುಂದುವರೆದ ದೇಶ ಎನ್ನಿಸಿ ಕೊಳ್ಳಬೇಕಾದರೆ ಈ ತರಹದ ಯೋಜನೆಗಳು ಜಾರಿಗೊಳ್ಳಬೇಕು. ಐದುಸಾವಿರ ವರುಷಗಳ ಇತಿಹಾಸ ನಮ್ಮಲ್ಲಿದೆ. ನಳಂದಾ, ತಕ್ಷಶಿಲಾ ಪ್ರಾಚೀನ ವಿಶ್ವ ವಿದ್ಯಾಲಯಗಳಲ್ಲಿ ಹೊರದೇಶದ ವಿದ್ಯಾಥರ್ಿಗಳು, ಯಾತ್ರಾಥರ್ಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರುಹೋಗಿ ವಲಸೆ ಬಂದು ಕಲಿಯುತ್ತಿದ್ದ ಕಾಲವೊಂದಿತ್ತು. ಸ್ವಾತಂತ್ರ್ಯ ಬಯಸಿ ಹೋರಾಡಿದ ನೂರಾರು ಧೀರರು, ಬುದ್ಧಿವಂತರು, ಜ್ಞಾನಿಗಳು ತತ್ವಜ್ಞಾನಿಗಳು ಹಾಗೂ ದೇಶ ಪ್ರೇಮಿಗಳು ಭಾರತದ ಇಂದಿನ ಪರಿಸ್ಥಿತಿಯನ್ನು ಅಂದೇ ಊಹಿಸಿದ್ದರೆ ಸ್ವಾತಂತ್ರ್ಯ ಹೋರಾಟದ ಪ್ರಯತ್ನವನ್ನೇ ಮಾಡುತ್ತಿರಲಿಲ್ಲವೇನೊ! ಅಧಿಕಾರದ ಗದ್ದುಗೆ ಹಿಡಿಯುವುದೇ ಭೃಷ್ಟಾಚಾರ ನಡೆಸಲು ಸಿಗುವ ಲೈಸನ್ಸ್ ಎಂದು ಭಾವಿಸಿರುವ ರಾಜಕಾರಣಿಗಳಿಂದ ಯಾವ ರೀತಿಯ ಅಭಿವೃದ್ಧಿಯನ್ನು ನಿರೀಕ್ಷಿಸಿಸಲು ಸಾಧ್ಯ. ಇಂಥವರಿಂದ ದೇಶದ ಭವಿಷ್ಯ ನಿರ್ಮಾಣಗೊಳ್ಳುವುದು ಕನಸಿನ ಮಾತೆ ಸರಿ!
ಸೂಕ್ತ ಮಾರ್ಗದರ್ಶನ, ಆರ್ಥಿಕ ಸಹಾಯ ಸಿಗದೇ ಎಷ್ಟೊ ಪ್ರತಿಭೆಗಳು ಬೆಳಕಿಗೆ ಬರದೆ ಬಾಡಿ ಹೋಗಿವೆ………….. ಹೋಗುತ್ತಿವೆ. ಈ ನಿಟ್ಟೀನಲ್ಲಿ ನಾವ್ಯಾರು ಯೋಚಿಸುತ್ತಿಲ್ಲ. ಪ್ರತಿಭಾಪಲಾಯನ ಬರಿ ದೇಶದಿಂದ ದೇಶಕ್ಕೆ ಸೀಮಿತ ಗೊಳಿಸಿದರೆ ಸಾಲದು. ಪ್ರಾಂತದಿಂದ ಪ್ರಾಂತಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಪ್ರತಿಭೆಗಳು ವಲಸೆಹೋಗುತ್ತಲೇ ಇವೆ. ಪ್ರತಿಭೆ ಇರುವವರು ಪ್ರತಿಭೆ ಪ್ರಕಟಗೊಳಿಸಲು ಹಾತೊರೆಯುತ್ತಿರುತ್ತಾರೆ ಹೆಸರಿನ ಜೊತೆಗೆ ಹಣದ ಅವಶ್ಯಕತೆಯ ಇದರಲ್ಲಿದೆ ತಪ್ಪೆನಿಲ್ಲ ಎನ್ನುವುದು ನನ್ನ ಭಾವನೆ ಹಳ್ಳಿಯ ಮೂಲೆಯೊಂದರಲ್ಲಿ ಚನ್ನಾಗಿ ಹಾಡಬಲ್ಲ. ಚಿತ್ರ ಬರೆಯಬಲ್ಲ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿದ ಎಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ? ಅರಳುವ ಪ್ರತಿಭೆಗಳನ್ನು ಬಾಡಲು ಬಿಡಬಾರದು
ಅನಿವಾರ್ಯವಾಗಿ ಪ್ರತಿಭಾ ಪಲಾಯನ ಮಾಡಬೇಕಾದ ಸ್ಥಿತಿ ಇಂದು ಎಲ್ಲ ಮಧ್ಯಮ ವರ್ಗದವರ ಮನೆಯಲ್ಲಿ ನಿರ್ಮಾಣವಾಗಿದೆ. ಸ್ವಂತ ಪರಿಸರದಿಂದ, ಮನೆಯಿಂದ, ಬಂಧುಬಳಗದಿಂದ, ಸ್ನೇಹಿತರಿಂದ ದೂರಾಗುವ ಇವರು ಮಾನಸಿಕವಾಗಿ ಎಷ್ಟು ಕುಗ್ಗಿಹೋಗುತ್ತಾರೆಂದು ಅನುಭವಿಸಿಯೇ ತಿಳಿಯಬೇಕು.
ಪಲಾಯನಗೊಂಡ ಪ್ರತಿಭೆಗಳನ್ನು ತೆಗಳುವ ಬದಲು, ತಮ್ಮ ದೇಶದ ಪ್ರತಿಷ್ಠೆಯನ್ನು ಬೇರೆಡೆಯಲ್ಲಿ ಎತ್ತಿಹಿಡಿಯುವ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು.
ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುವ ವಾತಾವರಣವನ್ನು ನಮ್ಮಲ್ಲಿಯೇ ಸೃಷ್ಠಿಸಿ ನೋಡೋಣ. ಆಗ ಯಾರೂ ಬೇರೆಕಡೆಗೆ ಹೋಗುವ ಮನಸ್ಸು ಮಾಡಲಾರರು ಹೋಗುವ ಕನಸು ಕಾಣಲಾರರು. ನಮ್ಮಲ್ಲಿಯ ಪ್ರತಿಭೆ ನಮ್ಮ ಮನೆಯ ದೀಪ ಬೆಳಗಲಿ ಎಂಬ ಮಹದಾಸೆ ಇದ್ದರೆ ಇದೆಲ್ಲ ಸಾಧ್ಯವೋ ಏನೋ?