Monday, 28 November 2016

ಕನ್ನಡ ಗುಡಿ

ಕನ್ನಡ ಗುಡಿ



ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ಮಣ್ಣಿದು ಚಂದನದ ಕಂಪಿದೆ.
ಕನ್ನಡದ ನುಡಿಯಿದು ಕೋಗಿಲೆಯ ಇಂಪಿದೆ
ಕನ್ನಡದ ನೋಟವಿದು ನವಿಲಿನಾ ಸೊಬಗಿದೆ.
ಕನ್ನಡದ ನಡೆಯಿದು ಗಜರಾಜನ ಗತ್ತಿದೆ.
ಕನ್ನಡವೇ ಎಲ್ಲೆಲ್ಲೂ.............. ||೧||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ತೇರಿದು ತೋರಣವ ಕಟ್ಟೋಣ
ಅನವರತ ಎಳೆಯೋಣ ಒಂದಾಗಿ ನಾವೆಲ್ಲ
ಕೊನೆಯುಸಿರು ಇರುವರೆಗು
ಕನ್ನಡವೇ ಎಲ್ಲೆಲ್ಲೂ.............. ||೨||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ಕಹಳೆಯಿದು
ಜಯಘೋಷ ಹಾಡಿದೆ
ಕನ್ನಡದ ಮಹತ್ತನ್ನು
ಮುಗಿಲಾಚೆ ಮೊಳಗಿದೆ
ಕನ್ನಡವೇ ಎಲ್ಲೆಲ್ಲೂ.............. ||೩||

ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡದ ದೀಪವಿದು
ಜ್ಞಾನದಾರಿಯ ತೋರಿದೆ
ಕನ್ನಡದ ಹಿರಿಮೆಯ
ಜಗಕೆಲ್ಲ ಬೆಳಗಿದೆ
ಕನ್ನಡವೇ ಎಲ್ಲೆಲ್ಲೂ.............. ||೪||


ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಎನ್ನಡ ಎಕ್ಕಡ ಒತ್ತಟ್ಟಿಗಿರಲಿ
ಕನ್ನಡ ಕಸ್ತೂರಿ ನಿನ್ನೊಟ್ಟಿಗಿರಲಿ
ಕನ್ನಡದ ಕೀರ್ತಿ ಜಗವೆಲ್ಲ ಬೆಳಗಲಿ
ಕನ್ನಡವೇ ಎಲ್ಲೆಲ್ಲೂ.............. ||೫||
ತೊದಲ ನುಡಿಯ ಮೊದಲ ಉಸಿರು
ಈ ............. ಕನ್ನಡ.............. ||ಪ||

ಕನ್ನಡ ಕುಲದೇವಿಯ
ನಾವೆಲ್ಲ ಸ್ತುತಿಸೋಣ
ಕೈಮುಗಿದು ಒಳಗೆ ಬಾ
ಕನ್ನಡದ ಗುಡಿಯಿದು.
ಕನ್ನಡವೇ ಎಲ್ಲೆಲ್ಲೂ.............. ||೬||

-- ಮಹೇಶ್ ಶ್ರೀ ದೇಶಪಾಂಡೆ 
      ತುಷಾರ ಪ್ರಿಯ

Thursday, 24 November 2016

ತುತ್ತಿನ ಚೀಲ


ತುತ್ತಿನ ಚೀಲ


ತಂಗಾಳಿ ಜೋಗುಳ ಜೀಕುತ
ಕುಳಿತರೆ ಸಾಲದು
ಹೊತ್ತೊತ್ತಿಗೆ ಖಾಲಿಯಾಗುವ ತುತ್ತಿನ ಚೀಲ 
ಹಪಹಪಿಸಿ ಹಿಂಡುತಿದೆ
ಹೊತ್ತೊತ್ತಿಗೆ ಹಾತೊರೆಯುತಿದೆ
ತುತ್ತಿನ ಚೀಲ ತುಂಬಲು ......... 
ಕಲ್ಲು ಮುಳ್ಳುಗಳೇ ರತ್ನಗಂಬಳಿ 
ನಡೆದಷ್ಟೂ ಸವೆಯದು
ನಿಂತರೆ ನಡೆಯದು
ನಡೆಯದೇ ವಿಧಿಯಿಲ್ಲ
ಕಾದುಕುಳಿತಿದೆ ತುತ್ತಿನ ಚೀಲ
ಮಳೆಗಾಳಿಚಳಿಯ ಪರಿವೆ ಇದಕ್ಕಿಲ್ಲ
ಜೀವಗಳ ಜಂಜಾಟ
ಬೆಂಬಿಡದ ಹಸಿವಿನ ಭೂತ
ಖಚಿತವಾದರೂ ಕೈಯ ಕೆಸರು.......
ಬಾಯಿಗಿಲ್ಲ ಮೊಸರು
ಹೊತ್ತೊತ್ತಿನ ತುತ್ತು ತುಂಬಿದರಾಯ್ತು
ದಣಿದಾಗ ಮಲಗಲು ನಿನಗೊಂದು ಸೂರಿಲ್ಲ
ಚಿಂತೆಗಳ ಕಂತೆಯೇ ದಿಂಬಾಗಿರಲು
ನಿದ್ದೆಯೆಲ್ಲಿಂದ ಬಂದೀತು 
ಕಲ್ಲು ಮುಳ್ಳುಗಳೇ ರತ್ನಗಂಬಳಿ 
ಎದ್ದೇಳಲೇಬೇಕು ತುತ್ತಿನ ಚೀಲ ತುಂಬಲು
ಈ ಬದುಕ ಬಂಡಿ ನೂಕಲು 
ಬೆನ್ನಿಗೆ ಬಿದ್ದವರ ಸಾಕಲು


**__**__** 

-ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)

Monday, 21 November 2016

ಮಂಕಾದ ನಕ್ಷತ್ರಗಳ ಮಧ್ಯೆ


ಮಂಕಾದ ನಕ್ಷತ್ರಗಳ ಮಧ್ಯೆ



                 ಇತ್ತೀಚೆಗೆ ವೃದ್ಧಾಶ್ರಮವೊಂದರಲ್ಲಿ ಕಾರ್ಯಕ್ರಮದ ನಿಮಿತ್ತ ಅಲ್ಲಿರುವ ಹಿರಿಯ ನಾಗರಿಕರ ಜೊತೆಗೆ ಕೆಲ ಗಂಟೆಗಳ ಸಮಯ ಕಳೆಯುವ ಸಂದರ್ಭ ಒದಗಿ ಬಂದಿತ್ತು. ಆಟ ಮತ್ತು ಮನರಂಜನೆಯ ನಿಮಿತ್ತ ಅವರೊಂದಿಗೆ ಕೆಲಕಾಲ ಸಂತೋಷದಿಂದ ಕಳೆಯುವದಾಗಿತ್ತು. ನಾನಿಲ್ಲಿ ಹೇಳಹೊರಟಿರುವುದು ಆಟದಲ್ಲಿ ಗೆದ್ದವರ ಬಗ್ಗೆಯಾಗಲಿ ಅಥಾವ ಸೋತವರ ಬಗ್ಗೆಯಾಗಲಿ ಅಲ್ಲ. ಜೀವನದಲ್ಲಿ ಎಲ್ಲ ತರಹದ ಆಟಗಳನ್ನು ಆಡಿ, ನೋಡಿ, ಸೋತು ಹಿಡಿಯಾಗಿ, ಅಲ್ಲಿ ಬಂದವರಲ್ಲಿ ಒಂದು ಹಿಡಿಯಷ್ಟು ನಗೆಯನ್ನು ಕೊಡುವ ಒಂದು ಚಿಕ್ಕ ಪ್ರಯತ್ನವಾಗಿತ್ತು. ಜೀವನದ ಇಳಿಸಂಜೆಯನ್ನು ಕಳೆಯುತ್ತಿರುವ ಇವರ ಜೊತೆ ಬೆರೆತಾಗ ಅವರಿಗಾದ ಸಂತೊಷದಿಂದ ನನ್ನ ಹೃದಯ ತುಂಬಿಬಂದಿತ್ತು. ಕೆಲ ಹಿರಿಯರು ನನ್ನನ್ನು ನೋಡಿದಾಗಲೆಲ್ಲ ನನ್ನತ್ತ ನೋಟಬೀರಿ ಎರಡೂ ಕೈಜೊಡಿಸಿ ಕೈ ಮುಗಿಯುತ್ತಿದ್ದರು. ಹಿರಿಯ ಜೀವಿಗಳ ಈ ನಡೆ ನನ್ನನ್ನು ನಿಜವಾಗಿಯೂ ಕುಬ್ಜನನ್ನಾಗಿ ಮಾಡಿತ್ತು. ವೃದ್ಧಾಶ್ರಮವೊಂದನ್ನು ಒಳಹೊಕ್ಕು ಅದರ ಆಗು ಹೋಗುಗಳನ್ನು ಹತ್ತಿರದಿಂದ ನೊಡಿದ ಮೊದಲ ಅನುಭವ ನನ್ನದು.  ಅಲ್ಲಿರುವ ಒಬ್ಬೊಬ್ಬರದ್ದೂ ಒಂದೊಂದು ಕತೆ......... ವ್ಯಥೆ! ಒಬ್ಬ ಹಿರಿಯರು ಅವರಿಗೆಷ್ಟು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಂದು ಪದೇ ಪದೇ ಹೇಳುತ್ತಲೆ ಇದ್ದರು. ಹಾಗೆ ಹೇಳುತ್ತಲೆ ನಾನಿಲ್ಲಿ ಚನ್ನಾಗಿದ್ದೇನೆ. ಅವರೂ ಚೆನ್ನಾಗಿದ್ದಾರೆ ಎಂಬ ಮಾತನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಆದರೆ ಅವರೊಳಗೆ ಕುದಿಯುತ್ತಿರುವ ಜ್ವಾಲಾಮುಖಿಯನ್ನು ಹತ್ತಿಕ್ಕಿ ಮಾತನಾಡುತ್ತಿರುವುದು ಸ್ಪಷ್ಟವಾಗಿ ಅನುಭವವಾಗಿತ್ತು. 
                      ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ ಅಂತೆಲ್ಲ ಹೇಳುತ್ತಾರೆ. ಆದರೆ ಈ ಹುಟ್ಟುಸಾವಿನ ಮಧ್ಯೆ ಜೀವನ ಎಂಬುದೊಂದು ಇದೆಯೆಲ್ಲ! ಈ ಜೀವನದ ಒಂದು ಅಂಗವಾಗಿ ವೃದ್ಧಾಪ್ಯ ಒಂದು ಶಾಪವೇ ಸರಿ! ಬದಲಾವಣೆಯೇ ಜೀವನ, ನಿರಂತರ ಚಲನೆಯೇ ಜೀವನ, ಹಳೇ ಬೇರು  ಹೊಸಚಿಗುರು ಎಂಬಿತ್ಯಾದಿ ಹೇಳಿಕೆಗಳೇನೋ ಸರಿ, ಆದರೆ ಅಲ್ಲಿರುವ ಹಿರಿಯ ಜೀವಗಳನ್ನು ನೋಡಿದಾಗ ಅವರು ಹೆಚ್ಚಾಗಿ ನೊಂದಿರುವುದು ವೃದ್ಧಾಪ್ಯದಿಂದಲ್ಲ ಎಂಬುದು ನಿಶ್ಚಳವಾಗಿ ಗೋಚರಿಸುತ್ತದೆ. ಹೊಸ ಚಿಗುರು, ಹಳೇ ಬೇರಿಲ್ಲದೆ ಚಿಗುರಲಾರದು ಎಂಬುದನ್ನು ನಾವೆಲ್ಲ ಮರೆತೇ ಬಿಡುತ್ತೇವೆ.  ಮರೆತರೆ ಯಾವ ನ್ಯಾಯ? ಬಹುತೇಕ ಅಲ್ಲಿರುವ ಎಲ್ಲರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ.  ಸದಾ ನಾಲ್ಕು ಗೋಡೆಗಳ ಮಧ್ಯೆ ಕಾಲಕಳೆಯುವ ಸ್ಥಿಯಲ್ಲಿರುವ ಇವರು, ಯಾರೋ ಹೊಸಬರು, ಹೊರಗಿನವರು ಅಲ್ಲಿಗೆ ಹೋದಾಕ್ಷಣ ಚೈತನ್ಯದ ಚಿಲುಮೆಯಾಗಿಬಿಡುತ್ತಾರೆ. ಸಾಂಗತ್ಯ ಅವರಿಗೆ ಮುದ ನೀಡಿದೆ ಎಂಬುದು ಅವರ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು. ಅವರನ್ನು ಕಾಡುತ್ತಿರುವುದು ಬರಿ ವೃದ್ಧಾಪ್ಯವಲ್ಲ. ಅವರಿಗೆ ಪ್ರೀತಿ ತೋರಿಸುವ ಕಣ್ಣುಗಳು ಬೇಕು.ಹೃದಯಕ್ಕೆ ಹತ್ತಿರವಾಗಿ ಸಾಂತ್ವಾನ ನೀಡುವವರು ಬೇಕು. ಮನಸ್ಸಿನ ಗಾಯಕ್ಕೆ ಮುಲಾಮು ಹಚ್ಚುವವರು ಬೇಕು. ಪ್ರೀತಿಗಾಗಿ ಹಂಬಲಿಸುವ ಅಸಹಾಯಕ ಸ್ಥಿತಿಗೆ ಇಳಿದುಬಿಡುತ್ತಾರೆ. ಅದು ಸಿಗದೇ ಇದ್ದಾಗ ಕಳೆಗುಂದಿ ಬಿಡುತ್ತಾರೆ. ಅದು ಸಹಜ ಕೂಡ. ಇದು ನಿಜಕ್ಕೂ ಅಸಹನೀಯ.

                 ಅವಿಭಕ್ತ ಕುಟುಂಬಗಳ ವ್ಯವಸ್ಥೆ ಕ್ರಮೇಣವಾಗಿ ಮಾಯಾವಾಗುತ್ತಿದೆ. ಜಾಗತೀಕರಣ ಹಾಗೂ ನಗರೀಕರಣದ ನೆಪದಲ್ಲಿ ಯುವ ಜನಾಂಗ ಸ್ವಾರ್ಥಿಯಾಗುತ್ತಿದೆ. ಅನಪೇಕ್ಷಿತ ಕಾರಣಗಳಿಂದಾಗಿ ಹಿರಿಯರು ಮೂಲೆಗುಂಪಾಗುತ್ತಿದ್ದಾರೆ. ಇಂದಿನ ಬಹುತೇಕ ಯುವ ಜನಾಂಗದ ಯೋಚನಾಲಹರಿ ಒಂದೇ ತರಹ ಇದೆ. ತನಗೆಲ್ಲ ತಿಳಿದಿದೆ. ತನ್ನನ್ನು ಸಾಕಿ ಬೆಳೆಸಿದ ಹಿರಿಯರು ಹಳೆಯ ಕಾಲದವರು. ಅವರಿಗೆ ಏನೂ ತಿಳಿಯುವುದಿಲ್ಲ ಎಂಬ ಅಹಂಕಾರ ಇಂದಿನ ಯುವ ಪೀಳಿಗೆಯಲ್ಲಿದೆ ಎಂದರೆ ತಪ್ಪಾಗಲಾರದು.
      ಮಂಕಾದ ನಕ್ಷತ್ರಗಳ ಮಧ್ಯೆ ಸುಡುವ ಸೂರ್ಯ ನಾವಾಗಬಾರದು. ಜೀವನ ಸಂಧ್ಯಾಕಾಲದಲ್ಲಿರುವ ಅವರು ತಮ್ಮ ಪೂರ್ಣಾಯುಷ್ಯವನ್ನು ಆ ನಾಲ್ಕು ಗೋಡೆಗಳ ಮಧ್ಯೆ ಹೊರ ಜಗತ್ತಿನ ಸಂಪರ್ಕವಿಲ್ಲದೆ ಅದು ಹೇಗೆ ಕಳೆಯುತ್ತಾರೋ ನಾನರಿಯೆ! ಆದರೆ ನನ್ನ ಒಡನಾಟದಿಂದ ಅವರ ಒಂಟಿತನ ಕಿಂಚಿತ್ತಾದರೂ ನಿವಾರಣೆಯಾಗಿದ್ದಲ್ಲಿ ನನ್ನ ಭೇಟಿ ಸಾರ್ಥಕ ಎಂದು ನಾನು ಭಾವಿಸುತ್ತೇನೆ.  

**__**__**__**




- ಮಹೇಶ್ ಶ್ರೀ ದೇಶಪಾಂಡೆ
ತುಷಾರ ಪ್ರಿಯ

Friday, 18 November 2016

ಹೂ ಮನಸು

ಹೂ ಮನಸು


ಹೂವಂಥ ಮನಸವಳೆ
ಹೂವಂತೆ ಸಲಹುವೆ||
ಹಿಡಿದಿಡಬೇಡ ಹೂ ಕಂಪ
ಹರಡು ಎಲ್ಲೆಲ್ಲೂ.॒.......
ನಾ ತೇಲುವೆ ಆ ಕಂಪಲಿ
ಇನ್ನಿಲ್ಲದ ಖುಷಿಯಲಿ ||೧||
ಕನಸಲಿ ಬಂದು ಕಾಡುವವಳೆ
ನನಸಾಗಿ ಬಂದು ಬೇಡುವವಳೆ
ಹಾಲಾಹಲವ ಹಾಲಾಗಿಸಿದವಳೆ
ಆ ಸುಧೆಯ ನನ್ನೆದೆಗೆ ಸುರಿದವಳೆ ||೨||
ನಿನಗಿರಲಿ ಜಗದೆಲ್ಲ ಸುಖ
ನಾ ಮರೆವೆ ನನ್ನೆಲ್ಲ ನೋವ
ಜೀವಜೀವಗಳು ಬೆರೆತಾಗ
ನಾ ಬರೆವೆ ನನ್ನೊಲವ ಕಥೆಯ ||೩||
ಹೂವಂಥ ಮನಸವಳೆ
ಹೂವಂತೆ ಸಲಹುವೆ||

**__**__**

-ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 14 November 2016

ದರಬೇಸಿ


ದರಬೇಸಿ


ಪರದೇಶಿಯ ಪಾಡು ನೋಡೋ
ಈ ದರಬೇಸಿಯ ಹಾಡು ಕೇಳೋ||
ಕಾಡು ಮೇಡುಗಳ ಬೀಡಿನಲಿ
ಕಳೆದು ಹೋದೆ ....... ಕುರುಡನಾದೆ
ಏನೂ ನೋಡದಾದೆ
ಭಯವಿಲ್ಲ ..... ಬದುಕಬಲ್ಲೆ.||೧||
ಮೋಡ ಗುಡುಗು ಸಿಡಿಲುಗಳ ಅಬ್ಬರದಲ್ಲಿ
ನಡುಗಿದೆ....... ಕಿವುಡನಾದೆ.
ಏನೂ ಕೇಳದಾದೆ
ಚಿಂತೆಯಿಲ್ಲ .......ಬದುಕಬಲ್ಲೆ.||೨||
ಬಿರುಗಾಳಿ ಮಳೆಯ ಸೆಳವಲಿ
ಸಿಲಿಕಿದೆ..........ಮೂಕನಾದೆ
ಏನೂ ಹೇಳದಾದೆ
ಆತಂಕವಿಲ್ಲ........ ಬದುಕಬಲ್ಲೆ.||೩||
ಆದರೆ ಹೃದಯಹೀನರ ಲೋಕದಲಿ
ಬಂದಿಳಿದೆ........ಎದೆ‘ಬಡಿತ’
ನಿಲ್ಲಿಸಿದೆ .........ಬದುಕಲಾರೆ
ಭಯವಿಲ್ಲ.......ಚಿಂತೆಯಿಲ್ಲ .......ಆತಂಕವಿಲ್ಲ 
ನಿಶ್ಚಿಂತನಾದೆ||೪||


**__**__**
- ಮಹೇಶ ಶ್ರೀ. ದೇಶಪಾಂಡೆ
   ತುಷಾರಪ್ರಿಯ

Wednesday, 9 November 2016

ಮರೆತುಬಿಡು



ಮರೆತುಬಿಡು


ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ಸೂರ್ಯನ ಕೆಂಪು ತಂಪಾದಾಗ
ಚಂದ್ರನ ತಂಪು ಹಿತವಾದಾಗಲೇ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ಹರಿವ ನದಿ ಬತ್ತುವ ಮುನ್ನ
ಸಾಗರದಲೆಗಳು ಉಕ್ಕುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ತಾರೆಗಳ ತೋಟ ಬರಿದಾಗುವ ಮುನ್ನ 
ಒಲವಿನ ನೋಟ ಮರೆಯಾಗುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||
ತಿರುಗುವ ಭೂಮಿ ನಿಲ್ಲುವ ಮುನ್ನ
ಬಿರಿದ ನೆಲ ನಲುಗುವ ಮುನ್ನ
ನೀ ನನ್ನ ಮರೆತು ಬಿಡು ...........ಗೆಳತಿ
ನೀನೀಗ ಹೊರಟು ಹೋಗು ಈ ಮನವ ತೊರೆದು ||



**__**__**
- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Friday, 4 November 2016

ಅರ್ಧ ಕೊಡ


ಅರ್ಧ ಕೊಡ



ನೆಲವೊಂದೆ ಜಲವೊಂದೆ
ನೆತ್ತಿ ಸುಡುವ ಸೂರ್ಯನೂ ಒಂದೇ
ಬೆಳ್ಳಿ ಬೆಳಕ ಚಂದ್ರನೂ ಒಂದೇ
ಬೀಸುವ ತಂಗಾಳಿಯೂ ಒಂದೇ
ಅದೊಂದು ಸೋಜಿಗ
ಪರಮ ಕೌತುಕಗಳ ಆಗರ
ಅಲ್ಲೊಂದು ಹಚ್ಚ ಹಸುರಿನ ಜೀವ
ತಲೆಯೆತ್ತಿ ಬೀಗುತಿದೆ - ಹಸಿರು ತುಂಬಿದ ಕೊಡದಂತೆ
ಮೆಚ್ಚಿ ಮೆರೆಯುವ ಹುಚ್ಚು || ನೆಲವೊಂದೆ ||
ಇಲ್ಲೊಂದು ಕಿಚ್ಚು ಹೆಚ್ಚಾದ ಭಾವ
ತಲೆಬಾಗಿ ಸೊರಗಿದೆ – ಉಸಿರು ಬತ್ತಿದ ಖಾಲಿ ಕೊಡದಂತೆ
ಕೊಚ್ಚಿ ಕೆಡುವುವ ಹುಚ್ಚು || ನೆಲವೊಂದೆ ||
ಮತ್ತೊಂದು ನಿರ್ಜೀವ ನಿರವ ಅರೆಜೀವ
ಹಚ್ಚ ಹಸುರಿನ ಹುಚ್ಚಿಲ್ಲ
ಕಿಚ್ಚು ಹೆಚ್ಚಾದ ಭಾವವಿಲ್ಲ
ಅರೆ ಚಿಗುರು ......... ಬರಿ ಬಯಲು ರೆಂಬೆ
ಚಿಗುರು ಹಸಿರಾಗಿ ಪುಟಿವಾಸೆ
ಬರಿಬಯಲು ಒಣಗಿದ ಭಾವ
ಇದ್ದಷ್ಟುದಿನ ಹಸಿರು ಉಸಿರು
ಜೀವ ಭಾವಗಳ ಕೊಸರಾಟ 
ಹಸಿರು ಉಸಿರು ತಾಕಲಾಟ
ಅರ್ಧಕೊಡದ ತುಳಕಾಟ
ಏರಲೂ ಇಲ್ಲ ........... ಇಳಿಯಲೂ ಇಲ್ಲ ............
ಬದುಕು ಬವಣೆಗೆ ಬಳಲಿ
ಅಳಿವ ಸೂಚನೆ ತಿಳಿದಿದೆ || ನೆಲವೊಂದೆ ||
      

ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ