ವಿವೇಚನೆ
ಈ ಪ್ರಪಂಚದಲ್ಲಿ ಸಲಹೆ ಕೊಡುವವರ ಗುಂಪುಗಳು ದಂಡಿಯಾಗಿವೆ. ಅದೇ ರೀತಿ ಸಲಹೆ ಪಡೆಯುವವರ ಗುಂಪುಗಳು ಕೂಡ ದಂಡಿಯಾಗಿವೆ. ಕೆಲವೊಂದು ಸಂದರ್ಭಗಳಲ್ಲಿ ಪರಿಸ್ಥಿತಿಯ ಒತ್ತಡಕ್ಕೋ ಅಥವಾ ವಿಷಯದಲ್ಲಿರುವ ಸಂಕೀರ್ಣತೆಗೋ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೆಲವರು ತಡವರಿಸುತ್ತಾರೆ. ಅಂಥ ಸಂದರ್ಭಗಳಲ್ಲಿ ಆಪ್ತರಾದವರ ಅಥವಾ ಸೂಕ್ತ ಸಲಹೆ ಕೊಡುವವರ ಹುಡುಕಾಟ ಶುರುವಾಗುತ್ತದೆ. ಸಲಹೆಗಳನ್ನು ಕೊಡುವುದರಲ್ಲಿ ಮತ್ತು ಸ್ವೀಕರಿಸುವುದರಲ್ಲಿ ಸಾಕಷ್ಟು ಕ್ಲಿಷ್ಟತೆ ಅಡಗಿದೆ. ಸುಕ್ಕಾಸುಮ್ಮನೆ, ಬೇಕಾಬಿಟ್ಟಿ ಸಲಹೆಗಳನ್ನು ಕೊಡುವುದು ಅಪಾಯ. ಅಳೆದು ತೂಗಿ ಸಲಹೆ ನೀಡಿದರಷ್ಟೆ ಅದಕ್ಕೊಂದು ಬೆಲೆ. ಇಲ್ಲವಾದಲ್ಲಿ ಅನಾಹುತಕ್ಕೆಡೆಮಾಡೀತು! ಇದೇ ಮಾನದಂಡ ಸಲಹೆ ಸ್ವೀಕರಿಸುವವರಿಗೂ ಅನ್ವಯಿಸುತ್ತದೆ.
ನಮ್ಮ ಸುತ್ತ ಹಲವಾರು ಗುಣ ವಿಶೇಷಗಳುಳ್ಳ ಜನಗಳನ್ನು ನಾವು ದಿನನಿತ್ಯ ನೋಡುತ್ತಲೆ ಇರುತ್ತೇವೆ. ನನಗೆಲ್ಲವೂ ತಿಳಿದಿದೆ. ನಾನು ಯಾರ ಮಾತನ್ನು ಕೇಳುವ ಅವಶ್ಯಕತೆಯಿಲ್ಲ. ನಾನು ನಡೆದದ್ದೆ ದಾರಿ ಎನ್ನುವ ಗುಂಪು ಒಂದು ಕಡೆ. ಇಂತವರಿಗೆ ಯಾರ ಸಲಹೆಗಳೂ ಬೇಕಾಗಿಲ್ಲ.
ಎಲ್ಲವನ್ನೂ ತಿಳಿದಿದ್ದರೂ ಬೇರೆಯವರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ವ್ಯವಧಾನ, ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವ ರೀತಿ, ಉತ್ತಮ ಅಂಶಗಳಿದ್ದ ಪಕ್ಷದಲ್ಲಿ ಅಂಥವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಸಲಹೆ ಕೊಟ್ಟವರನ್ನು ಸ್ಮರಿಸುವುದು ಇನ್ನೊಂದು ಗುಂಪು. ಇಂತವರನ್ನು ತಕ್ಕ ಮಟ್ಟಿಗೆ ವಿವೇಚನಾಶೀಲರೆನ್ನಬಹುದು.
ಇನ್ನೂ ಕೆಲವರು ಎಲ್ಲ ತಿಳಿದಿದೆ ಎಂಬ ಭ್ರಮೆಯಲ್ಲಿರುತ್ತಾರೆ. ಆ ರೀತಿಯ ಅಭಿಪ್ರಾಯ ಜಗಜ್ಜಾಹರಾಗಲು ಏನೆಲ್ಲಾ ಬೇಕೋ ಅದನ್ನೆಲ್ಲಾ ವ್ಯವಸ್ಥಿತವಾಗಿ ಮಾಡುತ್ತಾರೆ. ನಿಜಾಂಶದಲ್ಲಿ ಅವರಿಗೆ ಬೇರೆಯವರ ಸಲಹೆಯ ಅವಶ್ಯಕತೆಯಿರುತ್ತದೆ. ಆದರೆ ಸಲಹೆ ತೆಗೆದುಕೊಳ್ಳಲು ಒಂದು ತರಹದ ಬಿಗುಮಾನ, ಅಹಂ ಅಡ್ಡಿ ಬರುತ್ತದೆ. ಆದರೂ ಸುತ್ತಿಬಳಸಿ ಮಾತನಾಡಿ ಬೇರೆಯವರಿಂದ ಅಭಿಪ್ರಾಯ ಸಲಹೆಗಳನ್ನು ಜಾಣ್ಮೆಯಿಂದ ಸಂಗ್ರಹಿಸುವ ಕಲೆ ಇವರಿಗೆ ಕರಗತ. ತಾವು ತೆಗೆದುಕೊಂಡ ಸಲಹೆಗಳಿಂದ ಸಫಲತೆಯನ್ನು ಕಂಡಿದ್ದರೆ, ಸಲಹೆಪಡೆದವರನ್ನು ಸ್ಮರಿಸುವ ಗೋಜಿಗೆ ಇವರು ಹೋಗುವುದಿಲ್ಲ. ಹಾಗೊಂದು ವೇಳೆ ಸಲಹೆ ಕೊಟ್ಟವರನ್ನು ಹೊಗಳಿ ಬಿಟ್ಟರೆ ಮುಂದಿನ ದಿನಗಳಲ್ಲಿ ಅವರು ತನ್ನ ಮೇಲೆ ಸವಾರಿಮಾಡಬಹುದೆಂದು ಗುಮಾನಿ ಇವರದ್ದು. ಕೊಟ್ಟ ಸಲಹೆಯಿಂದ ಏನಾದರೂ ಎಡವಟ್ಟಾದರೆ ಸಲಹೆ ಕೊಟ್ಟವನಿಗೆ ರಾಹು ಮತ್ತು ಶನಿ ಏಕಕಾಲಕ್ಕೆ ಒಕ್ಕರಿಸಿಕೊಳ್ಳುತ್ತಾರೆ. ಕೊಟ್ಟ ಸಲಹೆಯಿಂದ ಆದ ನಷ್ಟದ ಬಗ್ಗೆ ಇನ್ನಿಲ್ಲದ ಅಲವತ್ತುಗೊಳ್ಳುತ್ತಾರೆ. ಆದ ನಷ್ಟದ ಕಿರೀಟ ನಿಮ್ಮ ತಲೆಯ ಮೇಲಿರುತ್ತದೆ. ಇಂಥವರಿಗೆ ಸಲಹೆ ಕೊಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಎಚ್ಚರ ತಪ್ಪಿದ್ದರೆ ಅಪಾಯ ಖಂಡಿತ.
ನಾವು ಕೊಡುವ ನೂರಾರು ಸಲಹೆಗಳು ಕೆಟ್ಟದಾಗಿರಬಹುದು. ಮೂರ್ಖತನದಿಂದ ಕೂಡಿರಬಹುದು ಅಥವಾ ಸಂದರ್ಭಾನುಸಾರ ಯೋಗ್ಯವಾಗಿಲ್ಲದಿರಬಹುದು. ಆದರೆ ಒಂದು ಸಲಹೆ ಉತ್ತಮವಾಗಿರಬಹುದು, ಜಾಣತನದಿಂದ ಕೂಡಿರಬಹುದು ಅಥವಾ ಸಮಯೋಚಿತವಾಗಿರಬಹುದು. ಆದರೆ ನಾವು ಕೊಡುವ ಸಲಹೆಯನ್ನು ಸ್ವೀಕರಿಸುವ ವ್ಯಕ್ತಿ ನೂರಾರಲ್ಲಿ ಆಯ್ಕೆ ಮಾಡಿಕೊಳ್ಳುತ್ತಾನೋ! ಯೋಗ್ಯವಾದ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೋ! ಆತನ ವಿವೇಚನೆಗೆ ಬಿಟ್ಟಿದ್ದು.
ಅದೇ ರೀತಿ ಆ ವ್ಯಕ್ತಿ ಇತರರಿಂದ ಕೂಡ ಸಲಹೆ ಪಡೆಯುತ್ತಿರಬಹುದು. ಇತರರು ಕೊಡುವ ನೂರಾರು ಸಲಹೆಗಳು ಉತ್ತಮವಾಗಿರಬಹುದು. ಆದರೆ ಒಂದು ಸಲಹೆ ಕೆಟ್ಟದ್ದೂ ಆಗಿರಬಹುದು, ಮೂರ್ಖತನದಿಂದ ಕೂಡಿರಬಹುದು ಅಥವಾ ಸಂದರ್ಭಾನುಸಾರ ಯೋಗ್ಯವಾಗಿಲ್ಲದಿರಬಹುದು.
ಇಲ್ಲಿ ಕೂಡ ಅಷ್ಟೆ, ಸಲಹೆ ಸ್ವೀಕರಿಸುವ ವ್ಯಕ್ತಿ ನೂರಾರಲ್ಲಿ ಆಯ್ಕೆ ಮಾಡಿಕೊಳ್ಳುತ್ತಾನೋ ಅಥವಾ ಯೋಗ್ಯವಲ್ಲದ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾನೋ! ಆತನ ವಿವೇಚನೆಗೆ ಬಿಟ್ಟಿದ್ದು.
ನಮ್ಮ ಪುರಾಣ ಮತ್ತು ಇತಿಹಾಸದ ಪುಟಗಳನ್ನು ತಿರುವಿದಾಗ ಕೆಟ್ಟಸಲಹೆಗಳನ್ನು ಪಡೆದ ಎಷ್ಟೋ ಸಾಮ್ರಾಜ್ಯಗಳು ಅಳಿದುಹೋದ ಉದಾಹರಣಗಳಿವೆ. ಅದೇ ರೀತಿ ಉತ್ತಮ ಸಲಹೆಗಳನ್ನು ಪಡೆದ ರಾಜ ಮಹಾರಾಜರು ಜನಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.
ಶಕುನಿಯ ನೆರಳಲ್ಲಿ ಬೆಳೆದ ದುರ್ಯೋಧನ ಬೆಳಕನ್ನು ನೋಡುವ ಗೋಜಿಗೆ ಹೊಗಲಿಲ್ಲ. ಇದರ ಪರಿಣಾಮ ನಿಮಗೆಲ್ಲ ತಿಳಿದೇಇದೆ. ಶ್ರೀಕೃಷ್ಣನ ಸಲಹೆ ಪಡೆದ ಪಾಂಡವರು ತಮಗೆ ನ್ಯಾಯವಾಗಿ ಸಿಗಬೇಕಾದ ಸಾಮ್ರಾಜ್ಯವನ್ನು ಮರಳಿ ಪಡೆಯುತ್ತಾರೆ.
ಚಾಣಕ್ಯನ ಸಲಹೆ ಪಡೆದ ಚಂದ್ರಗುಪ್ತ ಮಹಾರಾಜನು ಕಳೆದುಕೊಂಡ ರಾಜ್ಯವನ್ನು ಪುನಃ ಗೆಲ್ಲುವಲ್ಲಿ ಸಫ಼ಲನಾಗುವದಲ್ಲದೆ ಸುವರ್ಣಯುಗದ ಪರ್ವಕ್ಕೆ ನಾಂದಿ ಹಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇದು ಸಂದರ್ಭಕ್ಕೆ ತೋಚಿದ ಒಂದೆರಡು ಉದಾಹರಣೆಗಳಷ್ಟೇ!! ನಮ್ಮ ಪುರಾಣ ಇತಿಹಾಸಗಳ ಪುಟಗಳನ್ನು ತಿರುವಿದಾಗ ಇಂತಹ ನೂರಾರು ಉದಾಹರಣೆಗಳು ಕಾಣಸಿಗುತ್ತವೆ.
ಇಲ್ಲಿ ಸಲಹೆ ಕೊಡುವ ವ್ಯಕ್ತಿಗಳು ಮುಖ್ಯವಾಗುವುದೇ ಇಲ್ಲ. ಸಲಹೆ ಕೊಡುವವರ ಯಶಸ್ಸಿನ ಮಾನದಂಡ ಕೂಡ ಗೌಣವಾಗುತ್ತದೆ. ಸರಿ ತಪ್ಪುಗಳನ್ನು ತೂಗಿ ವಿವೇಚನೆಯಿಂದ ಆಯ್ದುಕೊಂಡ ಸಲಹೆ ಆತನ ಯಶಸ್ಸಿನ ಕಾರಣವಾಗುತ್ತದೆ. ಏಕೆಂದರೆ ಆಯ್ಕೆಯ ಪರಿಣಾಮಗಳು ಆ ವ್ಯಕ್ತಿಯನ್ನು ನೇರವಾಗಿ ಬಾಧಿಸುತ್ತದೆಯೋ ಹೊರತು ಸಲಹೆ ಕೊಟ್ಟವರನ್ನಲ್ಲ!
ವಿವೇಚನಾಯುಕ್ತ ಆಲೋಚನೆಗಳೊಂದಿಗೆ ಮುನ್ನಡೆಯುತ್ತ ಹೊಸ ವರ್ಷವನ್ನು ಸ್ವಾಗತಿಸೋಣ.
ಏನಂತೀರಿ!
-ಮಹೇಶ ಶ್ರೀ ದೇಶಪಾಂಡೆ
ತುಷಾರಪ್ರಿಯ











