ಕಾಲಚಕ್ರ
ಇಳಿಸಂಜೆಯ ತಂಪುಗಾಳಿ ಕಿಟಿಕಿಯನ್ಮು ತೂರಿ ಪರದೆ ತೇಲಿಸುತ್ತ ಸುಳಿದಾಡಿದ ಆ ಹೊತ್ತಿನಲ್ಲೆ ಮಗ್ಗಲು ಬದಲಿಸಿ ತಿರುಗಿದೆ. ಎಫ಼್.ಎಂ ಚಾನೆಲ್‌ನಲ್ಲಿ ಸಣ್ಣಗೆ ಕೇಳಿಬರುತ್ತಿದ್ದ, ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾಹೋಯ್ದ..... ....., ಕನಸಿನಲ್ಲಿ ಕೇಳಿಸಿದಂತಾಗಿ ಎಲ್ಲಿ ಬೆಳಗಾಗುವವರೆಗೂ ಮಲಗಿಬಿಟ್ಟೆನೋ ಅಂತ ಥಟ್ಟಿನೆ ಕಣ್ಣುಬಿಟ್ಟೆ. ರಜಾದಿನದ ಆಲಸ್ಯ ಮೈಮನಸ್ಸಿಗೆ ಆವರಿಸಿ ಏಳಲಾರದೆ ಹಾಗೇ ಸ್ವಲ್ಪಹೊತ್ತು ಹೊರಳಾಡಿ 'ಇದು ಬೆಳಗಲ್ಲ' ಮನಸ್ಸಿನಲ್ಲೇ ಮಾತಾಡಿಕೊಂಡೆ. ಸಂಜೆಯ ಮಬ್ಬು ನಿಧಾನವಾಗಿ ಕವಿಯಲಾರಂಭಿಸಿತ್ತು. ಅತ್ತ ಸೂರ್ಯ ಪಡುವಣದಂಚಿಗೆ ಮರೆಯಾಗುವ ತಯಾರಿ ನಡೆಸಿದ್ದ. ಮಬ್ಬು ಕವಿಯುವ ಆ ಸುಂದರ ಬದಲಾವಣೆ ಪ್ರಕ್ರಿಯೆ ಬಗ್ಗೆ ಯೋಚಿಸುತ್ತ ಇನ್ನೊಂದು ಸಣ್ಣ ಜೋಂಪು. ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ, ವಾರಪೂರ್ತಿ ಪಾಠಮಾಡಿ, ದೂರದರ್ಶನ ಸಂವಾದ ಕಾರ್ಯಕ್ರಮಗಳು, ಅಂತರ್ ವಿಶ್ವವಿದ್ಯಾಲಯದ ಚರ್ಚಾಕೂಟಗಳ ನಿರೂಪಣೆಯ ನಿರ್ವಹಣೆ .........ಹೀಗೆ ಹಲವು ಹತ್ತಾರು ಬಿಡುವಿಲ್ಲದ ವೇಳಾಪಟ್ಟಿಯಿಂದ ಸುಸ್ತಾಗಿದ್ದನಾನು ಈ ದಿನ ಪೂರ್ತಿ ಮನೆಯಲ್ಲೇ ಸಮಯ ಕಳೆಯಬೇಕೆಂದು ನಿರ್ಧರಿಸಿದ್ದೆ.
ನನ್ನ ಬದುಕಿನಲ್ಲಾದ ನಾನಾ ತಿರುವುಗಳ ಬಗ್ಗೆ ಯೋಚಿಸುತ್ತ ಮೈಮರಿದು ಎದ್ದುಕುಳಿತೆ. ಎಲ್ಲೋ ಹುಬ್ಬಳಿಯ ಹತ್ತಿರದ ಕುಗ್ರಾಮದಿಂದ ಹೊರಟ ನನ್ನ ಬದುಕಿನ ಬಂಡಿ ಇಂದು ಕನ್ನಡ ವಿಷಯ ಬೋಧಿಸುವ ಪ್ರೊಫ಼ೇಸರ್‌ಗಿರಿಯ ಪದವಿಕೊಟ್ಟು ಜ್ಞಾನಗಂಗೋತ್ರಿ ವಿಶ್ವವಿದ್ಯಾಲಯದ ಬಾಗಿಲವರೆಗೂ ತಲುಪಿದ್ದು ನನ್ನ ಮಟ್ಟಿಗೆ ಸಾಧಾರಣ ವಿಷಯವಾಗಿರಲಿಲ್ಲ.
ಮುದ ನೀಡುವ ನೂರಾರು ವಿಷಯಗಳನ್ನು ಕಾಲಗರ್ಭದಿಂದ ಹೆಕ್ಕಿತೆಗೆದಾಗ ಒಂದೊಂದು ಪುಟದ ಒಂದೊಂದು ಬಣ್ಣ ಮನಸ್ಸಿನಲ್ಲಿ ಮೂಡುವ ಸಪ್ತವರ್ಣದ ಸಂಪುಟವಾಗುತ್ತದೆ. ಒಂಟಿತನ ನನಗೇನೂ ಹೊಸತಲ್ಲ. ದೆಹಲಿಯ ಸಾಫ಼್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ನನ್ನ ಮಗನ ಹತ್ತಿರ ಅಂದುಕೊಂಡಾಗಲೆಲ್ಲ ನನ್ನವಳು ಹೊರಟುನಿಂತುಬಿಡುತ್ತಿದ್ದಳು. ಹೋದಾಗಲೆಲ್ಲ ಹತ್ತು ಹದಿನೈದು ದಿನಗಳವಾಸ್ತವ್ಯ. ಮೊನ್ನೆ ಹೊರಟುನಿಂತಾಗಲೂ ಅಷ್ಟೆ, ನಾನೂ ಅವಳ ಜೊತೆ ಹೊರಡಬೇಕೆಂದು ಅವಳು ಹಂಬಲಿಸುತ್ತಿದ್ದರೂ, ಈ ಪ್ರಾಧ್ಯಾಪಕ ವೃತ್ತಿಯ ಜವಾಬ್ದಾರಿಗಳ ಜಂಜಾಟದಿಂದಾಗಿ ಸಾಧ್ಯವಾಗುತ್ತಿರಲಿಲ್ಲ. ಕಾಲಕಾಲಕ್ಕೆ ಬದಲಾಗುವ ಆದ್ಯತೆಗಳ ಪರ್ವ ಎಂದರೆ ಇದೇ ಏನೋ! ನನಗೆ ನನ್ನ ವೃತ್ತಿಯ ಒಲವು; ಇವಳಿಗೆ ಮಗನ ವ್ಯಾಮೋಹ. ಕಣ್ಣು ಮುಚ್ಚಿ ತೆರೆಯುವದರಲ್ಲಿ ಎಂತೆಂತಹ ಬದಲಾವಣೆಗಳು ನಮಗರಿವಿಲ್ಲದೆ ಘಟಿಸಿಬಿಡುತ್ತವೆ. ಬದಲಾವಣೆಗೆ ಬಗ್ಗಿಕೊಳ್ಳುವಗುಣ ಮೈಗೊಡಿಸಿಕೊಳ್ಳುದಿದ್ದರೆ ಒಂಟಿತನವೇ ಶಾಪವಾಗಿ ಪರಿಣಮಿಸಿಬಿಡುವ ಅಪಾಯವಿರುತ್ತದೆ. ಹಾಗಾಗಲು ಬಿಡಬಾರದು. ಎದುರಾಗುವ ಪ್ರತಿ ಸನ್ನಿವೇಶಗಳು ನನ್ನದೇ ಸೃಷ್ಟಿ ಎಂಬ ಭಾವನೆ ಬೆಳಸಿಕೊಂಡರೆ ಸಮಚಿತ್ತ ಪ್ರಬಲಗೊಳ್ಳುತ್ತದೆ. ಬೆಳೆಗ್ಗೆ ಅರ್ಧಗಂಟೆ ಮನೆಗೆಲಸದ ಹುಡುಗಿ ಬಂದುಹೋದ ಮೇಲೆ ನನ್ನದೇ ಸಾಮ್ರಾಜ್ಯ! ದೆಹಲಿಯಲ್ಲಿ ನಡೆದ ಕನ್ನಡ ವಿಶ್ವಸಾಹಿತ್ಯಸಮ್ಮೇಳನಕ್ಕೆ ಇವಳನ್ನೂ ಕರೆದುಕೊಂಡು ಕಳೆದವರ್ಷ ಹೋಗಿದ್ದೆನಾದರೂ, ನಾನು ಅವಳು ಒಟ್ಟಿಗೆ ತಿರುಗಾಡಿದ್ದು ತೀರಾ ಕಡಿಮೆ. ನಾನು ಬೆಳಗಾಗಿದ್ದು ಸಮ್ಮೇಳನದ ಕಾರ್ಯಕ್ರಮಗಳಿಗೆ ಹೊರಟರೆ ಎಲ್ಲ ಮುಗಿದು ಮನೆಗೆ ಬರುತ್ತಿದ್ದುದೆ ರಾತ್ರಿ. ನನ್ನೊಂದಿಗೆ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುಲು ಅವಳಲ್ಲಿ ಅಂತಹ ಸಾಹಿತ್ಯಾಸಕ್ತಿ ಏನೂ ಇಲ್ಲ. ಒತ್ತಾಯದಿಂದ ಕರೆದುಕೊಂಡು ಕಾರ್ಯಕ್ರಮಕ್ಕೆ ಹೋದರೆ ಮುಗ್ಗಲು ಮುಳ್ಳು ಚುಚ್ಚಿದ ಅನುಭವ ನೆನೆದು ಸುಮ್ಮನಾಗಿ ಬಿಡುತ್ತಿದ್ದೆ. ಎಫ಼್‌ಎಂ ನಲ್ಲಿ ಕಾಕತಾಳೀಯವೋ ಎಂಬಂತೆ ಗಗನವೂ ಎಲ್ಲೋ...... ಭೂಮಿಯು ಎಲ್ಲೋ...... ಒಂದೂ ಅರಿಯೇ.... ನಾ......ತೇಲಿ ಬರುತ್ತಿದ್ದಂತೆ ತುಟಿಯಂಚಲಿ ಕಿರುನಗೆ ಮೂಡಿ ತಲೆ ಕೊಡವಿಕೊಂಡೆ.
ಬದುಕಿನ ಏಕತಾನತೆ ಒಮ್ಮೊಮ್ಮೆ ಜಿಡ್ಡುಗಟ್ಟಿದ ಅಂಟುಜಾಡ್ಯದಂತೆ ಹೇವರಿಕೆ ಹುಟ್ಟಿಸುತ್ತದೆ ಬದಲಾವಣೆ ಬಯಸಿದರೂ ಈಗ ಯಾವ ಬದಲಾವಣೆ ಸಾಧ್ಯವಿಲ್ಲವೆಂಬ ಕಟುವಾಸ್ತವ ನನಗೆ ತಿಳಿದಿತ್ತು. ನಿವೃತ್ತಿಗೆ ಮುನ್ನ ಇನ್ನೂ ನಾಲ್ಕು ವರ್ಷಸೇವೆಸಲ್ಲಿಸಲು ಅವಕಾಶ ಅಷ್ಟೆ. ಆಬ್ಬಬ್ಬಾ ಎಂದರೆ ನನ್ನ ಸೇವಾವಧಿ, ಹಿರಿತನ ಪರಿಗಣಿಸಿ ನನ್ನನ್ನು ಉಪಕುಲಪತಿ ಸ್ಥಾನಕ್ಕೆ ನೇಮಕ ಮಾಡಬಹುದು. ನನಗೆ ಆ ಪಟ್ಟಬೇಕೆಂದು ಹಲ್ಲು ಗಿಂಜುತ್ತ ಬಯೋಡಾಟ ಹಿಡಿದುಕೊಂಡು ಯಾವರಾಜಕಾರಣಿಯ ಮುಂದೆಯೂ ಕೈಯೊಡ್ಡಿ ನಿಲ್ಲಲು ನನ್ನ ಅಹಂ ಅಡ್ಡಬರುತ್ತಿತ್ತು. ಬಂದರೆ ತಾನಾಗಿಯೇ ಬರಲಿ ಇಲ್ಲದಿದ್ದರೆ ಆಕಾಶಕಳಚಿ ಬೀಳುವಂತದ್ದೇನೂ ಇಲ್ಲ ಎಂಬ ಧೃಡ ನಿರ್ಣಯಕ್ಕೆ ಜೋತುಬಿದ್ದು ನಿರುಮ್ಮಳನಾಗಿದ್ದೆ.
ಯಾರು ಏನು ಮಾಡುವರೋ ನನಗೇನು ಕೇಡುಮಾಡುವರೋ
ಸತ್ಯದ ಹಾದಿಯಲಿರುನಾಗ ಧರ್ಮವೆ ರಕ್ಷಿಸುತಿರುವಾಗ ಈ ನಾಡಿಗೆ ನಾಡೇಹಿಂದಿರುವಾಗ
ಕನ್ನಡ ನನ್ನುಸಿರಾಗಿರುವಾಗ...... ಕಿವಿಗಪ್ಪಳಿಸುತ್ತಿದ್ದಂತೆ ನನ್ನಲ್ಲಿನ ಸಮಚಿತ್ತ ಪ್ರಬಲವಾಯಿತು.
ನನ್ನೊಂದಿಗೆ ಆತ್ಮೀಯತೆಯಿಂದ ಇರುವ ನನ್ನ ಸಹೋದ್ಯೋಗಿ ಪ್ರೊಫ಼ೆಸರ್ ಈಶ್ವರ್‌ಗೆ ಫ಼ೋನಾಯಿಸಿ ಈಸಂಜೆ ಇಲ್ಲೇ ಕಳಿಯೋಣ ಬಂದುಬಿಡು ಅಂತ ಕರೆಯಲೆ ಎಂದು ಯೋಚಿಸಿ ಯಾಕೋ ಬೇಡವೆನಿಸಿ ಸುಮ್ಮನಾಗಿಬಿಟ್ಟೆ. ಯಾಕೆ? ಹೇಗೆ ? ಗೊತ್ತಿಲ್ಲ. ಕೆಲ ನಿರ್ಧಾರಗಳ ಸರಿತಪ್ಪುಗಳ ತಾಕಲಾಟ ಪ್ರಶ್ನಾತೀತ. ಕೆಲವು ಪ್ರಶ್ನೆಗಳಿಗೆ ಉತ್ತರಗಳಿರುವದಿಲ್ಲ. ಇದ್ದರೂ ಹುಡುಕುವ ಗೋಜಿಗೆ ಹೋಗಿ ತಲೆಕೆಡಸಿಕೊಳ್ಳಬಾರದು.
ನಾನು ಸಂಜೆ ಇಷ್ಟಪಡುವ ನನ್ನ ಮಾಸ್ಟರ್ ಬೆಡ್‌ರೂಂಗೆ ಹೊಂದಿಕೊಂಡಿರುವ ಬಾಲ್ಕನಿ. ಸ್ಕಾಚ್‌ವಿಸ್ಕಿಗೆ ಹದವಾಗಿ ಅರ್ಧಸೋಡ ಅರ್ಧನೀರು ಬೆರೆಸಿ ಎರಡು ಐಸ್‌ಕ್ಯೂಬ್ ತೇಲಿಬಿಟ್ಟು ಮೊದಲ ಸಿಪ್ ಹೀರಿದೆ. ಒಂಟಿತನ ಸುಖವಾಗಿ ಅನುಭವಿಸೋದು ಒಂದು ಕಲೆ. ಬದುಕಿನಲ್ಲಾದ ನಾನಾ ತಿರುವುಗಳ ಯೋಚನೆ ಅಪ್ಪಳಿಸಿ ಅಪ್ಪಳಿಸಿ ನನ್ನ ಬಾಲ್ಯದ ದಿನಗಳತ್ತ ಕರೆದೊಯ್ದಿತ್ತು.
ಹಕ್ಕಿಯು ಹಾರುತಿದೆ ದೂರಕೆ ಹಕ್ಕಿಯು ಹಾರುತಿದೆ
ಹಗಲಿರುಳೆನ್ನದೆ ಕಾಲದ ಹಕ್ಕಿಯು ಹಾರುತಿದೆ......
ಅದೇ ಓಘ.....! ನಾನಂದುಕೊಳ್ಳುತ್ತಿರುವುದು ಎಫ಼್.ಎಂ. ನಲ್ಲಿ ಬರುತ್ತಿದೆಯೋ! ಅಥವಾ ಎಫ಼್. ಎಂ. ನ ತಾಳಕ್ಕೆ ನನ್ನ ಮನಸ್ಸು ಕುಣಿಯುತ್ತಿದೆಯೋ! ಇದ್ದರೂ ಇರಬಹುದು. ಯಾವುದೊ ಒಂದು ಅಂತೂ ಸುಖಾನುಭವಗಳ ನೆನಪಿನ ಸರಮಾಲೆ.
ಬಾಲ್ಯದ ನೆನಪುಗಳೇ ಹಾಗೆ ......... ವಾಸ್ತವ ಮರೆಸಿ ಹುಡುಗಾಟದ ಆ ದಿನಗಳ ಮೆಲಕು ಮುದ ನೀಡಿ ಜೀಕುವ ಮನಸ್ಸು ಜೋಕಾಲಿಯಾಡುವ ಪರಿಯೇ ಹಾಗೆ......! ಹಿಂದೊಮ್ಮೆ ಮುಂದೊಮ್ಮೆ ಹಸಿ ಹಸಿರು ಭಾವ ಜೀಕಿದಾಗ ಸುಂಯ್‌ಗುಡುವ ಗಾಳಿಯಲ್ಲಿ ಅದೆಂಥದೋ ಕಂಪು ತಂಪು ಉಸಿರು ಬಿಗಿದು ಸುಖಿಸುವ ತವಕ.
ಹುರಿದ ಅವಲಕ್ಕಿ ಗೋಡಂಬಿಗಳ ಮೆಲಕುತ್ತ ಖಾಲಿಯಾದ ಗ್ಲಾಸಿಗೆ ಮತ್ತೊಂದು ಪೆಗ್‌ಸುರಿದು ಅದೇ ಹದವಾದ ಮಿಶ್ರಣದೊಂದಿಗೆ ಬಾಲ್ಕನಿಯ ಗೋಡೆಗೆ ಆತುನಿಂತು ಒಮ್ಮೆ ಆಕಾಶದತ್ತ ನೋಡಿದೆ. ನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ ಚಂದ್ರನಿರಲಿಲ್ಲ. ನಾವಿಕನಿಲ್ಲದ ದೋಣಿಯಲ್ಲಿ ನಕ್ಷತ್ರಗಳು ತೇಲುತ್ತಿರುವಂತೆ ಭಾಸವಾಯಿತು.
ಕುಚುಕು ಕುಚುಕು ಕುಚುಕು ನೀನು ಚಡ್ಡಿದೋಸ್ತಿಕಣೋ ಕುಚುಕು...... ... ಅಲೆಅಲೆಯಾಗಿ ಕಚಗುಳಿಯಿಟ್ಟಿತು.
ಚಿನ್ನಿಕೋಲು ಆಟದಲ್ಲಿ ಎಡಗಣ್ಣು ಹುಬ್ಬಿನ ಮೇಲೆ ಬಿದ್ದ ಏಟಿನ ಕಲೆಯನ್ನೊಮ್ಮೆ ಸವರಿಕೊಂಡೆ. ಸುರಿಯುತ್ತಿದ್ದ ರಕ್ತ ಒರೆಸಿಕೊಳ್ಳುತ್ತ, ಇದಕ್ಕೆಲ್ಲ ಕಾರಣನಾದ ರೊಡ್ಡಗೈಕಾಕ್ಯಾನನ್ನು ಬೆನ್ನಟ್ಟಿದ್ದು ... .... ಅವನು ನನ್ನ ಕೈಗೆ ಸಿಗದೆ ಪರಾರಿಯಾಗಿದ್ದು. ನಾಲ್ಕುದಿನ ಇಬ್ಬರೂಚಾಳಿಠೂ..! ಅಂತ ಮುನಿಸಿಕೊಂಡು ಮಾತು ಬಿಟ್ಟಿದ್ದು ಮರೆಯಲು ಸಾಧ್ಯವಿಲ್ಲ. ಆಗಷ್ಟೆ ಎರಡನೆಕ್ಲಾಸ್ ಪಾಸಾಗಿ ಮೂರನೆ ಕ್ಲಾಸಿಗೆ ತೇರ್ಗಡೆಯಾದಾಗ ನನ್ನದೊಂದು ದೊಡ್ಡಗೆಳೆಯರ ದಂಡೆ ನಿರ್ಮಾಣವಾಗಿತ್ತು. ರೊಡ್ಡಗೈಕಾಕ್ಯಾ, ವಾಜಿ, ಸೊಟ್ಟಗಾಲ ಸೀನ್ಯಾ, ಜೋಯ್ಯರಶ್ರೀಪ್ಯಾ, ಕಿರಾಣಿಅಂಗಡಿ ಬಸ್ಯಾ, ಪೂಜಾರ ರವ್ಯಾ, ಸುಣಗಾರ ಎಲ್ಲ್ಯಾ, ಹಿಂದಿನ ಓಣಿಶ್ರೀಕ್ಯಾ, ಕುಂಬಾರ ಓಣಿಅಪ್ಪ್ಯಾ, ಕಲಾಲರ ಶಿವ್ಯಾ, ಸಿಂಪಿಗೀರ ರಾಜು, ಗಿರಣಿ ವಿಜ್ಯಾ, ಗುಂಡಿಭಾವಿ ಸಿದ್ದ್ಯಾ, ಕೆಂಪ್ಯಾ, ಗೋಪ್ಯಾ, ಒಬ್ಬರೇ ... ...! ಇಬ್ಬರೇ ... ...! ವಾನರ ಸೈನ್ಯದ ತುಕಡಿಯಂತಿತ್ತು. ಟೋಳಿ ಕಟ್ಟಿಕೊಂಡು ಸ್ಕೂಲ ಪಕ್ಕದ ಗೌಡರ ಮಾವಿನ ತೋಟಕ್ಕೆ ನುಗ್ಗಿ ಕಾಯಿ ಕದಿಯಲು ಹೆಣೆಯುವ ಪ್ಲಾನ್... ... ಓಡಲಾರದೇ ಕೈಗೆ ಸಿಕ್ಕುಬಿದ್ದು ಗೌಡರ ಆಳಿನ ಕೈಯಲ್ಲಿ ಒದೆ ಬೀಳುತ್ತಿದ್ದುದು ಯಾವಾಗಲೂ ಸೊಟ್ಟಗಾಲು ಸೀನ್ಯಾನಿಗೆ. ಕೈಚಳಕದಲ್ಲಿ ಸೀನ್ಯಾ ಯಾವಾಗಲೂ ಒಂದುಕೈ ಮುಂದೆ. ಜಾತ್ರೆಯಲ್ಲಿ ಮಾರಾಟಕ್ಕಿಟ್ಟ ಆಟಕೆ ಸಾಮಾನುಗಳನ್ನು ಎಗರಿಸಿ ನನ್ನಕೈಗೆ ರವಾಸಿಸುತ್ತಿದ್ದ ಆ ಸ್ಪೀಡ್... ...! ಅದೇ ಸ್ಪೀಡ್‌ನಲ್ಲಿ ನಾನು ಅಲ್ಲಿಂದ ಮಾಯವಾಗುತ್ತಿದ್ದ ರೀತಿ ನೆನೆಸಿಕೊಳ್ಳೊದೇ ಒಂಥರಾ ಥ್ರಿಲ್. ಕೈಲಿದ್ದ ಒಂದೆರಡು ರೂಪಾಯಿಗಳನ್ನು ಗುಳಗುಳಿ ಜೂಜೂ ಆಡಿ ಸೋತು ಬಸ್‌ಚಾರ್ಜ್‌ಗೂ ದುಡ್ಡಿಲ್ಲದೆ ಹಸಿದ ಹೊಟ್ಟೆಯಲ್ಲಿ ನಡೆದು ತಡರಾತ್ರಿ ಊರು ಸೇರಿದ ಆ ದಿನಗಳು.
ಆಡೂ ಆಟ ಆಡೂ ಹೇ ರಾಜಾ... ... ಹೇ ರಾಣಿ ... ... ಹೇ ಜೋಕರ ... ... ಎಫ಼್.ಎಂ. ನಲ್ಲಿ ಮತ್ತದೇ ಗುಂಗು.
ಬ್ರಿಟಿಷರ ಕಾಲದ ಎಲಿಜಾಬೆತ್‌ರಾಣಿ ಮುಖವಿರುವ ಒಂದೆರಡು ನಾಣ್ಯಗಳನ್ನು ನನ್ನಜ್ಜನ ಕಪಾಟಿನಿಂದ ಎಗರಿಸಿದ್ದೆ. ಅವು ಚಲಾವಣೆಯಲ್ಲಿಲ್ಲದ ನಾಣ್ಯಗಳೆಂದು ನನಗೆ ಗೊತ್ತಿತ್ತು. ಶಾಲೆ ಬಿಟ್ಟನಂತರ ಹೊಸಪೇಟೆ ಬೀದಿಯ ಮೂಲಕವೇ ನಾವು ಮನೆ ಸೇರಿತ್ತಿದ್ದುದು. ಅದೊಂದು ದಿನ ಹೀಗೆ ಶಾಲೆಬಿಟ್ಟನಂತರ ನಡೆದುಕೊಂಡು ಬರುತ್ತಿದ್ದಾಗ ಅರಳಿಕಟ್ಟೆಯ ಕೆಳಗೆ ಯಾವಾಗಲೂ ಒಬ್ಬ ಹಣ್ಣು ಹಣ್ಣು ಮುದುಕಿ ಬಜ್ಜಿ ಮಿರ್ಚಿ ಕರಿದು ಮಾರುತ್ತಿದ್ದ ಆ ಜಾಗದ ಹತ್ತಿರ ಬರುತ್ತಿದ್ದಂತೆ ಸೊಟ್ಟಸೀನ್ಯಾನ ಕೈಯಲ್ಲಿ ಆ ಹಳೆಯ ನಾಣ್ಯಗಳನ್ನು ಕೊಟ್ಟು ಬಜ್ಜಿ ಮಿರ್ಚಿ ಖರೀದಿಸಲು ಹೇಳಿದೆ. ಪೊಟ್ಟಣ ರೆಡಿಯಾದ ಕೂಡಲೇ ನನ್ನ ಕೈಗೆ ಮತ್ತು ರೊಡ್ಡಗೈ ಕಾಕ್ಯಾನ ಕೈಗೆ ಕೊಡಬೇಕೆಂದು ತಾಕೀತು ಮಾಡಿದೆ. ಪೊಟ್ಟಣ ಸಿಕ್ಕಿದ್ದೇತಡ ನಾನು ಮತ್ತು ರೊಡ್ಡಗೈ ಕಾಕ್ಯಾ ನಿಧಾನವಾಗಿ ಅಲ್ಲಿಂದ ಹೊರಡುತ್ತ ನಾಣ್ಯವನ್ನು ಕೊಡುವಂತೆ ಸಂಜ್ಞಮಾಡಿದೆ. ನಾಣ್ಯಗಳನ್ನು ಮುದುಕಿಯ ಕೈಗೆ ಕೊಟ್ಟು ಸ್ವಲ್ಪ ಜೋರಾಗಿಯೇ ಸೊಟ್ಟಗಾಲು ತಿರುವುತ್ತ ನಡೆದು ಬರುತ್ತಿದ್ದ. ನನ್ನ ಬಂದು ಕಣ್ಣು ಆಗಾಗ ಆ ಮುದುಕಿಯ ಪ್ರತಿಕ್ರಿಯೆಗೆ ತವಕಿಸುತ್ತಿತ್ತು. ಎರಡೆರಡು ಬಾರಿ ಕಣ್ಣುತಿಕ್ಕಿಕೊಂಡು ತಿರುಗಿಸಿ ತಿರುಗಿಸಿ ನಾಣ್ಯ ನೋಡಿದ ಮುದುಕಿ ಏಕಾಏಕೀ ಎದ್ದುನಿಂತಳು. ಅಪಾಯ ಸೂಚನೆ ಆಗಲೆ ನನಗೆ ದೊರಕಿತ್ತು. ನಾನು ಹಾಗು ರೊಡ್ಡಗೈ ಕಾಕ್ಯಾಓಡಲು ಶುರುವಿಟ್ಟುಕೊಂಡೆವು. ನಾವ್ಯಾಕೆ ಓಡುತ್ತಿದ್ದೇವೆಂದು ತಿಳಿಯದೆ ಸೀನ್ಯಾ ಆಚೀಚೆ ನೋಡಿದ. ಏರುಗಚ್ಚಿ ಹಾಕಿನಿಂತ ಮುದುಕಿ ಲೇ...... ಸೊಟ್ಟ...... ಬಾಡುಕೋ....... ಸವಕಲು ಆಣೆ ಕೊಟ್ಟು ಮೋಸ ಮಾಡ್ತಿಯೇನ್ಲೇ? ಅಂತ ಅಂದವಳೆ ಸೀನ್ಯಾನನ್ನು ಅಟ್ಟಿಸಿಕೊಂಡು ಬಂದಳು. ಇದ್ದುದರಲ್ಲೆ ಸ್ವಲ್ಪ ಜೋರಾಗಿ ಓಡಿದ ಸೀನ್ಯಾ ಮುದುಕಿಯ ಕೈಗೆ ಸಿಗದೆ ನಾವು ಕಾಯುತ್ತಿದ್ದ ನಮ್ಮ ಓಣಿಯ ವೆಂಕಟೇಶ ದೇವರ ಗುಡಿಯ ಕಟ್ಟೆಗೆ ಬಂದ. ಅವನಿಗೊಂದು ಶಬ್ಬಾಸಗಿರಿಕೊಟ್ಟು, ಬಜ್ಜಿ ಮಿರ್ಚಿ ತಿಂದು ಚಣ್ಣಕ್ಕೆ ಕೈ ಒರೆಸಿಕೊಂಡು ಏನೂ ನಡೆದೆ ಇಲ್ಲವೆನೋ ಎಂಬಂತೆ ಮನೆ ಸೇರಿಕೊಂಡೆವು. ಆಮೇಲೆ ಸುಮಾರು ಹತ್ತುಹದಿನೈದು ದಿನಗಳಕಾಲ ಶಾಲೆಗೆ ಹೋಗಿಬರಲು ಬೇರೆರಸ್ತೆ ಮೂಲಕ ಓಡಾಡುತ್ತಿದ್ದೆವು.
ನೋಡಿ ...... ಸ್ವಾಮಿ ನಾವಿರೋದೇ ಹೀಗೇ ...... ಮಿಂಚಿನ ಓಟದ ಶಂಕರ್‌ನಾಗ್ ನೆನಪಿಗೆ ಬಂದ.
ಮೂರನೇ ಪೆಗ್ ನಿಧಾನವಾಗಿ ಮುಗಿಸುತ್ತ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಗೆಳೆಯರ ಗುಂಪಿನ ನಾನಾ ಚೇಷ್ಟೆಗಳು ಮನದ ಪುಟದಲ್ಲಿ ತೆರೆಯಲಾರಂಭಿಸಿದ್ದವು. ಬೇಸಿಗೆಯ ರಜೆ ಬಂತೆಂದರೆ ಸಾಕು......... ಒಣಗಿ ಬಿರುಕುಬಿಟ್ಟ ಕೆರೆಯಂಗಳವೇ ನಮ್ಮ ಕ್ರಿಕೆಟ್ ಆಟದ ಮೈದಾನವಾಗುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿದಾಗ ಈಜು ಹೊಡೆಯಲು ರೊಡ್ಡಗೈಕಾಕ್ಯಾ, ಅಪ್ಪ್ಯಾ, ಶ್ರೀಕ್ಯಾ, ವಾಜಿ, ಸೀನ್ಯಾ, ಶ್ರೀಪ್ಯಾ ಎಲ್ಲರೂ ಹುರುಪಿಗೆದ್ದುಬಿಡುತ್ತಿದ್ದರು. ನನಗೆ ಈಜು ಬಾರದ ಕಾರಣ ಕೆರೆಯ ದಂಡೆಯ ಮೇಲೆ ಕುಳಿತು ಆನಂದಿಸುತ್ತಿದ್ದೆ. ಹೀಗೆ ಒಂದುದಿನ ಇವರೆಲ್ಲ ಈಜುತ್ತಿದ್ದಾಗ ಕೆರೆಕಾಯುವ ಮುದುಕ ದಂಡೆಯ ಮೇಲಿಟ್ಟಿದ್ದ ಎಲ್ಲ ಬಟ್ಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಕೋಲು ಹಿಡಿದುಕೊಂಡು ಈಜುತ್ತಿದ್ದ ಎಲ್ಲರನ್ನು ಗದರಿಸಿ ಓಡಿಸತೊಡಗಿದ. ಊರಿಗಿದ್ದ ಒಂದೇ ಒಂದು ಬಳಸುನೀರಿನ ಕೆರೆಯಲ್ಲಿ ಈಜುವದನ್ನು, ಬಟ್ಟೆ ಒಗೆಯುವದನ್ನು, ದನಗಳ ಮೈ ತೊಳೆಯುವದು ಮುಂತಾದ ಚಟುವಟಿಕೆಗಳನ್ನು ಊರಪಂಚಾಯಿತಿ ನಿಷೇಧಿಸಿ ಕೆರೆಕಾಯುವ ಈ ಮುದುಕನನ್ನು ನೇಮಿಸಿದ್ದರೂ ನನ್ನ ಗೆಳೆಯರ ಬಂಡಧೈರ್ಯ ಮೆಚ್ಚಲೇಬೇಕು. ಅಟ್ಟಿಸಿಕೊಂಡು ಬರುತ್ತಿದ್ದ ಮುದುಕನ ಹತ್ತಿರ ತಮ್ಮ ಬಟ್ಟೆ ವಾಪಸ್ಸು ಕೇಳುವದಿರಲಿ, ತಪ್ಪಿಸಿಕೊಂಡು ಮನೆ ಸೇರಿದರೆ ಸಾಕೆಂದು ಒಂದೇಉಸುರಿಗೆ ನನ್ನ ಗೆಳೆಯರೆಲ್ಲರೂ ತಮ್ಮ ತಮ್ಮ ಮನೆಗೆ ಬೆತ್ತಲೆ ಓಟ ಮಾಡಿದ್ದರು. ಊರ ಜನರಿಗೆ ಪುಗಸಟ್ಟೆ ಮನರಂಜನೆ ದೊರಕಿಸಿಕೊಟ್ಟ ಭಾಗ್ಯ ನನ್ನ ಗೆಳೆಯರಿಗೆ ಸಂದಿತ್ತು.
ಜಲಲ ಜಲಲ ಜಲಧಾರೆ...... ಜಲಲ ಜಲಲ ಜಲಧಾರೆ...... ನಮ್ಮ ತುಂಟಾಟಗಳು ಇಷ್ಟಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು. ನಮಗಿದ್ದ ಇನ್ನೂ ಒಂದು ಚಪಲ ಸಿನಿಮಾ ನೋಡುವದು. ನಮ್ಮೂರ ಟೆಂಟ್‌ನಲ್ಲಿ ಹಿಂದುಗಡೆಯಿಂದ ಕಳ್ಳತನದಲ್ಲಿ ನುಗ್ಗಿ ಕೆಲವೊಮ್ಮೆ ಸಿನಿಮಾ ನೋಡುತ್ತಿದ್ದೆವು.
ಕಪ್ಪು ಬಿಳುಪು ಚಿತ್ರಗಳ ಪರ್ವಕಾಲದ ಅಂದಿನ ಚಿತ್ರಗಳ ನಾಯಕರೆ ನಮ್ಮ ಜೀವನದ ಸ್ಪೂರ್ತಿಗಳಾಗಿದ್ದರು. ಅವರ ಹಾವಭಾವ ನಟನೆಗಳನ್ನು ಮೈಗೂಡಿಸಿಕೊಂಡು ಒಮ್ಮೊಮ್ಮೆ ಹುಚ್ಚು ಆವೇಶಕ್ಕೆ ಒಳಗಾಗಿ ಫ಼ಜೀತಿ ಪಟ್ಟಿದ್ದು ಇದೆ. ಒಮ್ಮೆ ಸಂಪತ್ತಿಗೆ ಸವಾಲ್ ಚಿತ್ರವನ್ನು ನೋಡಿ ನಾಯಕನಟ ಖಳನಾಯಕನ ಕೈಯಲ್ಲಿ ಚಾವಟಿ ಏಟು ತಿನ್ನುವ ಆ ದೃಶ್ಯನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಒಂದು ದಿನ ಮಧ್ಯಾಹ್ನ ನಮ್ಮ ದನದ ಕೊಟ್ಟಿಗೆಯಲ್ಲಿ ಸೀನ್ಯಾನನ್ನು ದನಗಳನ್ನು ಕಟ್ಟುವ ಹಗ್ಗದಿಂದ ಕಟ್ಟಿ ಬಾರುಕೋಲಿನಿಂದ ಒಟ್ಟೊಬ್ಬರಾಗಿ ಹೊಡೆಯಲು ಶುರುವಿಟ್ಟುಕೊಂಡೆವು. ಒಂದೊಂದು ಏಟಿಗೂ ಅವನು ನೋವಿನಿಂದ ಕಿರುಚಿಕೊಂಡಾಗ ಖಳನಾಯಕ ನಂತೆ ನಾವು ಗಹಗಹಿಸಿ ನಕ್ಕು ನಟಿಸುವ ಚಪಲ ತೀರಿಸಿಕೊಂಡಿದ್ದೆವು. ಏನೂ ತಪ್ಪು ಮಾಡದ ಸೀನ್ಯಾ ನಾಯಕನ ಪಾತ್ರದಲ್ಲಿ ನಿಂತು ನಮ್ಮಿಂದ ಹೊಡೆಸಿಕೊಂಡಿದ್ದ ಯಜ್ಞಪಶು ಮಾವಾಗಲೂ ಮೇಕೆನೆ...! ಹುಲಿವಾಗಲು ಸಾಧ್ಯವೇ? ನಮ್ಮ ನಟನೆಯ ಹುಚ್ಚಿನಲ್ಲಿ ಘಟನೆಯ ಗಂಭೀರತೆಯನ್ನು ಯೋಚಿಸುವ ಗೊಡವೆಗೆ ಹೋಗದೆ ಮಾಸಲಾರದ ಮಾನಸಿಕ ಆಘಾತವನ್ನು ನಾವೆಲ್ಲರೂ ಅವನಿಗೆ ಕೊಡಮಾಡಿದ್ದೆವು. ಮನೆಯಲ್ಲಿನ ಹಿರಿಯರಿಗೆಲ್ಲ ಈ ವಿಷಯ ಗೊತ್ತಾಗಿ ಛೀಮಾರಿಹಾಕಿಸಿಕೊಂಡಿದ್ದು ಆಯ್ತು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ
ಕೂಗಿದರೂ ಧ್ವನಿ ಕೇಳಲಿಲ್ಲವೇ ....... ನರಹರಿಯೇ
ಬಾಸುಂಡೆ ಏಟುತಿಂದ ಕನಕದಾಸರಿಗೆ ಶ್ರೀಕೃಷ್ಣನ ದರುಶನ ಭಾಗ್ಯ ದೊರೆತಿತ್ತಂತೆ. ಬಾಸುಂಡೆ ಏಟುತಿಂದ ಸೀನ್ಯಾ ಉಪ್ಪಿನ ಶಾಖಕೊಡಿಸಿಕೊಳ್ಳುತ್ತ ನಾಲ್ಕುದಿನ ಮಲಗಿದ್ದೆ ಬಂತು ಭಾಗ್ಯ....!
ಈ ನಮ್ಮ ಸಿನಿಮಾ ನೋಡುವ ಚಪಲ ಎಲ್ಲಿಗೆ ತಂದು ನಿಲ್ಲಿಸಿತಂದರೆ ಮುಂದಾಗುವ ರಾದ್ದಾಂತಗಳ ಊಹೆ ಮಾಡುವ ವಯಸ್ಸು ನಮ್ಮದಾಗಿರಲಿಲ್ಲ. ನಮ್ಮ ಗುಂಪಿನ ಗೆಳೆಯ ಶ್ರೀಕ್ಯಾನ ಚಿಕ್ಕಪ್ಪನೆ ಟೆಂಟಿನ ಮಾಲಿಕನಾಗಿದ್ದ ಹಾಗೂ ನಾವೆಲ್ಲ ಅವರ ಚಿಕ್ಕಪ್ಪನ ಮನೆಗೆ ಹೋದಾಗಲೆಲ್ಲ ಹೊರಗಿನ ಒಂದು ಕೋಣೆಯನ್ನು ಸಿನೆಮ ಟೆಂಟಿಗೆ ಸಂಬಂಧಪಟ್ಟ ಕೆಲಸಗಳಿಗೆ ಉಪಯೋಗಿಸುತ್ತಿದ್ದರು. ಅಲ್ಲಿ ಮ್ಯಾನೇಜರ್‌ಗಳ ಗೇಟ್‌ಕೀಪರ್‌ಗಳ, ಕಸದೊಡೆಯುವವರ ಹಾಗೂ ಪ್ರೊಜೆಕ್ಟರ್ ಆಪರೇಟರ್‌ಗಳು ಮಿಟಿಂಗುಗಳು ನಡೆಯುತ್ತಿದ್ದವು. ಆಕೊಣೆಂii ಒಂದು ಬದಿಯಲ್ಲಿ ಟಿಕೇಟ್ ಬಂಡಲುಗಳನ್ನು ಸಂಗ್ರಹಿಸಿಡುವ ಕಬ್ಬಿಣದ ಟ್ರಂಕು ಕಾಗದಪತ್ರಗಳ ಫ಼ೈಲು ಇತ್ಯಾದಿಗಳನ್ನು ಇಟ್ಟಿರುತ್ತಿದ್ದರು. ಆಯಾ ದಿನದಾಟಕ್ಕೆ ಬೇಕಾಗುವ ಟಿಕೇಟ್ ಬಂಡಲುಗಳನ್ನು ನನ್ನ ಗೆಳೆಯನ ಚಿಕ್ಕಪ್ಪ ಬುಕ್ಕಿಂಗ್ ಮ್ಯಾನೇಜರ್‌ಗೆ ಕೊಡುತ್ತಿದ್ದುದನ್ನು ನಾನು ಸಾಕಷ್ಟುಸಲ ನೋಡಿದ್ದೆ. ಟಿಕೇಟ್ ಬಂಡಲ್ ಎಗರಿಸಿದರೆ ಅಂದುಕೊಂಡಾಗಲೆಲ್ಲ ಪುಗಸಟ್ಟೆ ಸಿನಿಮಾ ನೋಡಬಹುದೆಂಬ ಖತರ್ನಾಕ್ ಐಡಿಯಾ ಹೊಳದದ್ದೆಆಗ. ಈ ಕೆಲಸಕ್ಕೆ ಶ್ರೀಕ್ಯಾ ಸರಿಯಾದ ವ್ಯಕ್ತಿ ಅಂತ ತೀರ್ಮಾನಿಸಿದ್ದೆ ರೊಡ್ಡಗೈಕಾಕ್ಯಾನಿಗೆ ಶ್ರೀಕ್ಯಾನನ್ನು ಈ ಕೆಲಸಕ್ಕೆ ಹುರುದುಂಬಿಸೊ ಕೆಲಸ ಕೊಟ್ಟು ಅವನತಲೆಗೆ ಹುಳಬಿಟ್ಟೆ. ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಿದ ಶ್ರೀಕ್ಯಾ, ಕಾಕ್ಯಾನ ಕೈಯಲ್ಲಿ ನಾಲ್ಕು ಟಿಕೇಟ್ ಬಂಡಲ್‌ಗಳನ್ನು ತಂದುಕೊಟ್ಟಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ನಾನು, ಕಾಕ್ಯಾ, ಶ್ರೀಕ್ಯಾಹಾಗು ಸೀನ್ಯಾ ಒಂದೊಂದು ಟಿಕೇಟ್ ಬಂಡಲನ್ನು ಇಟ್ಟುಕೊಳ್ಳುವದೆಂದು ನಿರ್ಣಯವಾಯಿತು.
ತ್ರಿಮೂರ್ತಿರೂಪಾ ದತ್ತಾತ್ರೇಯ ತ್ರಿಗುಣಾತೀತ ದತ್ತಾತ್ರೇಯ ......... ಹಾಗೂ ರಾಮನಅವತಾರ ರಘುಕುಲ ಸೋಮನ ಅವತಾರ....... ಮುಂತಾದ ಹಾಡುಗಳನ್ನು ಊರಿಗೆಲ್ಲ ಕೇಳುವಂತೆ ಸಂಜೆಯ ಆಟ ಶುರುವಾಗುವದಕ್ಕೆ ಮುಂಚೆ ಟೆಂಟಿನ ಮೈಕ್‌ನಲ್ಲಿ ಹಾಕುತ್ತಿದ್ದರು. ನಾನು ಮತ್ತು ರೊಡ್ಡಗೈ ಕಾಕ್ಯಾ ಹಾಡು ಶುರುವಾಗುವದನ್ನೆ ಕೆರೆಯ ದಂಡೆಯ ದೊಡ್ಡಬೇವಿನಮರದ ಸಂಧಿಯಿಂದ ನೋಡುತ್ತ ನಿಂತಿದ್ದೆವು. ಆಜಾಗದಿಂದ ಬಸ್‌ಸ್ಟಾಂಡ್ ಹಾಗು ಟೆಂಟನ್ನು ಸ್ಪಷ್ಟವಾಗಿನೋಡಬಹುದಾಗಿತ್ತು. ಬಸ್‌ಸ್ಟಾಂಡ್‌ನಿಂದ ಬಸ್ಸಿಳಿದು ಹೊರಬರುತ್ತಿದ್ದ ಹಳ್ಳಿಜನರ ಹತ್ತಿರ ಸೀನ್ಯಾ ಏನೋ ಮಾತನಾಡುತ್ತಿರುವಂತೆ ನಮಗೆ ಕಾಣುತ್ತಿತ್ತು. ಹಾಡು ಶುರುವಾದ ಮೇಲೆ ಬುಕಿಂಗ್‌ಕೌಂಟರ್ ತೆರೆಯುತ್ತಿದುದು ವಾಡಿಕೆ. ಹೇಗೂ ಇನ್ನೂ ಹಾಡು ಶುರುವಾಗಿಲ್ಲ. ಹಾಡು ಶುರುವಾಗುವ ಹೊತ್ತಿಗೆ ಟೆಂಟ್ ಹತ್ತಿರ ನಾವೆಲ್ಲರೂ ಸೇರುವದೆಂದು ಮೊದಲೆ ಮಾತನಾಡಿಕೊಂಡಿದ್ದೆವು. ಟಿಕೆಟ್ ಕೊಳ್ಳುವ ಜನರು ಒಬ್ಬೊಬ್ಬರಾಗಿ ಒಳಹೋದನಂತರ ನಾವು ಅವರ ಜೊತೆ ಸೇರಿ ಒಳಹೋಗುವ ವ್ಯವಸ್ಥಿತ ಯೋಜನೆ ನಮ್ಮದಾಗಿತ್ತು. ಆದರೆ ನನಗೆ ಮತ್ತು ಕಾಕ್ಯಾನ ಅರಿವಿಗೆ ಬರದ ವಿದ್ಯಮಾನಗಳು ಬಸ್‌ಸ್ಟಾಂಡ್‌ನ ಮುಂದೆ ಜರಗುತ್ತಿದ್ದವು.
ಹಾಡು ಆರಂಭಕ್ಕೆ ಇನ್ನೂ ಸುಮಾರು ಹೊತ್ತು ಇತ್ತು. ಅಷ್ಟರಲ್ಲಿ ಟೆಂಟ್‌ನ ಬುಕ್ಕಿಂಗ್ ಮ್ಯಾನೇಜರ ಸೀನ್ಯಾನನ್ನು ಬಸ್‌ಸ್ಟಾಂಡ್‌ನ ಹೊರಭಾಗದಲ್ಲಿ ತಡೆದುನಿಲ್ಲಿಸಿ ಏನೋ ಮಾತನಾಡುತ್ತಿದ್ದಂತೆ ಕಾಣುತ್ತಿತ್ತು. ಒಂದೆರಡು ನಿಮಿಷಗಳಲ್ಲಿ ಸೀನ್ಯಾನನ್ನು ದರ ದರ ಎಳೆದುಕೊಂಡು ಮ್ಯಾನೇಜರ್ ಟೆಂಟ್‌ನತ್ತ ನಡೆಯತೊಡಗಿದ. ಎಲ್ಲೋ ಎಡವಟ್ಟಾಗಿರಬೇಕೆಂದು ನಾನು ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ಇಬ್ಬರಿಗೂ ಅಪಾಯದ ಗಂಟೆ ಒಮ್ಮೆಲೆ ಬಾರಿಸಿದಂತಾಗಿ ಮನೆಸೇರಿಕೊಳ್ಳುವದು ಉಳಿದಿರುವ ಒಂದೇ ಮಾರ್ಗವೆಂದು ತಿಳಿದು ಮನೆಯತ್ತ ಹೆಜ್ಜೆಹಾಕಿದೆವು.
ಒಂದುತಾಸಿನ ನಂತರ ನಮ್ಮ ಮನೆಯ ಆಳು ಬಂದು ನಿಮ್ಮ ಗೆಳ್ಯಾನ್ನ ಸಿನಿಮಾದ ರೀಲು ಬಿಡೊ ರೂಂನ್ಯಾಗೆ ಕೂಡಿಹಾಕ್ಯಾರಂತ ಅಂತ ಹೇಳಿದ. ನಾನು ಯಾರು? ಯಾಕ? ಏನಾತು? ಅಂತ ಬಡಬಡಿಸಿದೆ. ಅದಕ್ಕವನು ಟಿಕೆಟ್‌ಬುಕ್ ಕದ್ದಾನಂತ, ಅದರೀ ..... ಎದುರುಮನಿ ಸೊಟ್ಟಸೀನಪ್ಪ, ಹಳ್ಳಿಜನರಿಗೆ ಅರ್ಧರೇಟಿನಂಗ ಮರ್‍ಯಾನಂತ ಅಂತ ಹೇಳಿದ.
ಹಾಡು ಶುರುವಾಗುವದಕ್ಕೆ ಮುಂಚೆಯ ಟೆಂಟಿನತ್ತ ಜನ ಬರಲಾರಂಭಿಸಿದ್ದು ಟಿಕೆಟ್ ತೋರಿಸಿ ಒಳಗೆ ಹೋಗಲು ಕೇಳುತ್ತಿದ್ದರು. ಕೌಂಟರ್ ಶುರುಮಾಡದ ಮ್ಯಾನೇಜರ್‌ಗೆ ಆಶ್ಚರ್ಯ ಉಂಟುಮಾಡಿತ್ತು. ಹಳ್ಳಿಜನರನ್ನು ಕೇಳಲಾಗಿ, ಸೊಟ್ಟೆಗಾಲಿನ ಹುಡುಗನೊಬ್ಬ ನಮಗೆ ಈ ಟಿಕೇಟ್‌ನ್ನು ರಿಯಾಯಿತಿ ದರದಲ್ಲಿ ಕೊಟ್ಟಿದ್ದಾಗಿಯೂ ಹಾಗೂ ಟೆಂಟ್‌ನವರು ಹಬ್ಬದ ಪ್ರಯುಕ್ತ ವಿಶೇಷ ರಿಬೇಟ್ ಇಟ್ಟಿದ್ದಾರೆಂದು ಜನರನ್ನು ನಂಬಿಸಿ ಮಾರಾಟಮಾಡಿದ್ದ. ಕದ್ದ ಪುಗಸಟ್ಟೆ ಟಿಕೆಟ್‌ಗೆ ರಿಬೇಟ್ ಬೇರೆ ಕೇಡು.....! ವ್ಯವಸ್ಥಿತವಾಗಿ ಹೆಣೆದ ಪ್ಲಾನೊಂದು ಸೀನ್ಯಾನ ದಡ್ಡತನದಿಂದಾಗಿ ಮಣ್ಣುಪಾಲಾಗಿತ್ತು.
ಮುಂದುವಾಗುವ ವಿಚಾರಣೆ ಸುಳಿವು ಹಾಗೂ ಆದರಿಂದ ಪಾರಾಗುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಯೋಚಿಸಿ ಕಾಕ್ಯಾನ ಮನೆಗೆ ಓಡಿದೆ ನಡೆದಿರುವ ರಾದ್ದಾಂತವನ್ನು ಒಂದೇ ಉಸಿರಿಗೆ ಅವನಿಗೆ ಒದರಿದೆ. ಟಿಕೇಟ್ ಬಂಡಲ್ ನಮ್ಮ ಹತ್ತಿರ ಇರುವದು ಸುರಕ್ಷಿತವಲ್ಲ ಮತ್ತು ಈ ಹಗರಣದಲ್ಲಿ ನಾವು ಶಾಮಿಲಾಗಿದ್ದೇವೆಂದು ಸೀನ್ಯಾ ಬಾಯಿಬಿಡುವದಕ್ಕೂ ಮೊದಲು ಶ್ರೀಕ್ಯಾನ ಕೈಗೆ ನಮ್ಮಲ್ಲಿದ್ದ ಟಿಕೆಟ್ ಬಂಡಲ್‌ಗಳನ್ನು ಏನೋ ಸಬೂಬು ಹೇಳಿ ವರ್ಗಾಯಿಸಿ ಸುಮ್ಮನಾಗಿಬಿಟ್ಟೆವು. ಶ್ರೀಕ್ಯಾನಿಗೆ ಬಸ್‌ಸ್ಟಾಂಡ್ ಹಾಗೂ ಟೆಂಟ್‌ನಲ್ಲಿ ನಡೆದ ಸಂಗತಿಗಳು ಇನ್ನೂಗೊತ್ತಾಗಿರಲಿಲ್ಲ. ರಾತ್ರಿ ಒಂಬತ್ತರ ಸುಮಾರು ಸೀನ್ಯಾ, ಟೆಂಟ್‌ಮ್ಯಾನೇಜರ್, ಮಾಲಿಕರು, ಶ್ರೀಕ್ಯಾ, ಸೀನ್ಯಾ ಹಾಗೂ ಅವನ ಅಪ್ಪ ಎಲ್ಲರು ವಿಚಾರಣೆಗೆ ಹಾಜರಾಗಿ ನಮ್ಮಪ್ಪನ ಬರುವಿಗಾಗಿ ಮನೆಯ ಪಡಸಾಲೆಯಲ್ಲಿ ಸೇರಿದ್ದರು. ಊರಿಗೆಲ್ಲ ಧರ್ಮನಿರ್ಣಯ ಹೇಳುವನಮ್ಮಪ್ಪನ ಮುಂದೆ ನಾವು ಅಪರಾಧಿಸ್ಥಾನದಲ್ಲಿ ನಿಂತು ವಿಚಾರಣೆ ಎದುರಿಸುವ ದೃಶ್ಯ ನೆನಪಿಕೊಂಡು ಒಂದುಕ್ಷಣ ಗಾಭರಿಯಾಯಿತು. ನಾನು ಹಾಗೂ ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು. ಸಂದೇಶ ಸ್ಪಷ್ಟವಾಗಿತ್ತು. ಸೀನ್ಯಾ ಕೊಡುವ ಹೇಳಿಕೆಯಮೇಲೆ ನಮ್ಮಿಬ್ಬರ ಹಣೆಬರಹ ನಿಂತಿದೆಯೆಂದು.
ವಿಚಾರಣೆ ಆರಂಭವಾದಾಗ ನಮಗೆಲ್ಲ ದಿಗಿಲು ಎಲ್ಲಿ ಹೆಸರುಗಳು ಬಹಿರಂಗಗೊಂಡು ಮರ್ಯಾದೆ ಮೂರುಕಾಸಾಗುವ ಹೊತ್ತು ದೂರವಿಲ್ಲವೆಂದು ಬೆವತು ಹಸಿಯಾದ ಮುಖವನ್ನು ಕೈಯಿಂದ ಬರೆಸಿಕೊಳ್ಳುತ್ತ ಚಣ್ಣಕ್ಕ ತಿಕ್ಕಿಕೊಳ್ಳುತ್ತಿದ್ದೆವು. ನಾವು ಮಾಡಿದ್ದ ಘನಂದಾರಿ ಕೆಲಸಕ್ಕೆ ಮರ್ಯಾದೆ ಬೇರೇ ಕೇಡು!
ವಿಚಾರಣೆ ವೇಳೆ ಎಲ್ಲ ತಪ್ಪುಗಳನ್ನು ಸೊಟ್ಟಸೀನ್ಯಾ ತನ್ನಮೇಲೆ ಹಾಕಿಕೊಂಡು ಎಲ್ಲರ ಹತ್ತಿರ ತಾರಾಮಾರಾ ಬಯ್ಯಿಸಿಕೊಂಡ. ನಮ್ಮ ಹೆಸರುಗಳು ಹೊರಬರದ್ದರಿಂದ ಮನಸ್ಸು ನಿರಾಳವಾಗಿತ್ತು. ಆದರೆ ಸೀನ್ಯಾ ನಮ್ಮಗಳ ಹೆದರಿಕೆಗೆ ನಮ್ಮ ಹೆಸರುಗಳನ್ನು ಬಾಯಿಬಿಡಲಿಲ್ಲವೋ? ಅಥವಾ ಇನ್ನೇನಾದರೂ ಕಾರಣವಿದೆಯೋ? ಎಂಬುದು ಅರ್ಥವಾಗಲಿಲ್ಲ. ಮಾರನೆದಿನ ಶಾಲೆಗೆ ಹೊರಡುವ ಸಮಯದಲ್ಲಿ ನಾನು ಸೀನ್ಯಾನನ್ನು ಕೇಳಿದೆ, ನಮಗ ಹೆದರಿ ಎಲ್ಲಾ ತಪ್ಪು ನಿನ್ನಮ್ಯಾಲೆ ಹಕ್ಕೊಂಡಿ ಹೌದಲ್ಲೋ? ಅಂದೆ. ಅದಕ್ಕ್‌ವನು ಸುಮ್ಮನೆ ನಕ್ಕು, ದೋಸ್ತಾ, ಅದಕಲ್ಲೋ......... ನಿಮ್ಮೆಲ್ಲಾರ ಹೆಸರು ಹೇಳಿದ್ರ ನಮ್ಮ ಗೆಳ್ತನ ಮೂರಾಬಟ್ಟಿ ಯಾಕ್ತಿತ್ತು. ಅದ್ಯಾವ ದೊಡ್ಡ ವಿಷ್ಯಾ ಬಿಡೋ ಅಂದು ಬಿಟ್ಟಿದ್ದ. ಅದಕ್ಕೆ ನಾನು, ಅಲ್ಲಲೇ, ಸೀನ್ಯಾ ನೀ ತಣ್ಣಗ ಇದ್ದಿದ್ರ ಯಾರಿಗೂ ಗೊತ್ತಿಲ್ಲದಂಗ ವರ್ಷಾನುಗಟ್ಟಲೆ ಪುಗಸಟ್ಟೆ ಸಿನೆಮಾ ನೋಡುತ್ತಿದ್ವಲ್ಲೋ.....! ಎಲ್ಲಾ ಹಾಳಮಾಡಿಬಿಟ್ಟೆಲ್ಲೊ. ಅಂದೆ. ಅದಕ್ಕವನು ಚುಟ್ಟಾ ಸೇದಲಿಕ್ಕೆ ಸ್ವಲ್ಪ ರೊಕ್ಕಾ ಮಾಡಿಕೊಂಡ್ರಾತು ಅಂತ ಹಂಗ ಮಾಡ್ದೆ ಅಂದಿದ್ದ.
ಚುಟ್ಟಾ ಸೇದುವ ಸೀನ್ಯಾನ ಹುಕಿಗೆ ನಮ್ಮ ಸಿನಿಮಾ ನೋಡುವ ಚಪಲಕ್ಕೆ ಕಲ್ಲುಬಿದ್ದ...... ಪೆಚ್ಚಾಗಿದ್ದ...... ಎಲ್ಲ ಈಗ ಸುಮಧುರ ನೆನಪುಗಳು. ಗೆಳೆತನ ಮುರಿದು ಬೀಳ್ತದೆ ಅಂತ ಸುಳ್ಳು ಅಪಾದನೆಗಳನ್ನು ತನ್ನ ಮೇಲೆ ಹಾಕಿಕೊಂಡು ಗೆಳೆತನ ಉಳಿಸಿಕೊಂಡ ಅವನನ್ನು ನಾವು ಆಗ ಅರ್ಥ ಮಾಡಿಕೊಳ್ಳಲೇಇಲ್ಲ. ಚಿಕ್ಕಂದಿನಲ್ಲಿ ಪೋಲಿಯೋ ಪೀಡಿತನಾಗಿ ಒಂದುಕಾಲು ಸ್ವಾಧೀನ ಕಳೆದುಕೊಂಡಿದ್ದ ಈ ಗೆಳೆಯ ಈಗ್ಗೆ ೪-೫ ವರ್ಷಗಳ ಕೆಳಗೆ ವಾಸಿಯಾಗದ ಯಾವದೋ ಕಾಯಿಲೆಯಿಂದ ತೀರಕೊಂಡ ವಿಚಾರ ತಿಳಿಯಿತು. ಸುದ್ದಿ ತಿಳಿದಾಗ ಯಾವರೀತಿ ಪ್ರತಿಕ್ರಯಿಸಿಬೇಕೆಂದು ತಿಳಿಯದೆ ಮೌನಕ್ಕೆ ಶರಣಾಗಿದ್ದೆ. ಕಾಲಚಕ್ರದ ಸುಳಿ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ತರಹ ಸುತ್ತುತ್ತಿತ್ತು. ಒಬ್ಬ ಪ್ರೈಮರಿ ಸ್ಕೂಲ ಹೆಡ್‌ಮಾಸ್ಟರ್, ಇನ್ನೊಬ್ಬ ಇಂಜನಿಯರ್, ಮತ್ತೊಬ್ಬ ಮೆಡಿಕಲ್ ರೆಪ್ರಜೆಂಟೇಟಿವ್ ಆಗಿ ಬೇರೆಬೇರೆ ಊರುಗಳಿಗೆ ಹೊರಟುಹೋದರು. ಇನ್ನು ಕೆಲವರು ಹೊಲಗದ್ದೆ, ಕಿರಾಣ ಅಂಗಡಿ, ದಲಾಲಿ ಅಂಗಡಿ, ಚಾ ಅಂಗಡಿ ಅಂತ ಊರಲ್ಲೇ ಉಳಿದರು. ಮತ್ತೊಬ್ಬ ಗೆಳೆಯ ಬೆಳಗಾಗುವದರೊಳಗೆ ಕಾವಿತೊಟ್ಟು ರುದ್ರಾಕ್ಷಿಸರ ಕೈಯಲ್ಲಿ ಹಿಡಿದು ಓಂ ನಮಃ ಶಿವಾಯ ಮಂತ್ರ ಪಠಿಸುತ್ತ ಮಠಾಧಿಪತಿಯಾಗಿದ್ದ. ಬದುಕಿನಲ್ಲಿ ಶಿಸ್ತು ಅಳವಡಿಕೊಳ್ಳದ ಹಾಗೂ ಬದುಕನ್ನು ಸೀರಿಯಸ್ ಆಗಿ ತಗೆದುಕೊಳ್ಳದ ಒಬ್ಬನೆ ಒಬ್ಬ ಎಂದರೆ ಅವನು ಸೀನ್ಯಾ. ಅರ್ಧಂಬರ್ಧ ಕಲಿತು ಊರಲ್ಲೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವನನ್ನು ತಿದ್ದಲು ನಾವು ಆಗಾಗ ಪ್ರಯತ್ನಿಸಿದ್ದೆವು. ಬಲಿತಮರ ಬಗ್ಗಿತೇ? ಧ್ಯೇಯಗಳನ್ನು ಇಟ್ಟುಕೊಳ್ಳದ ಗೊತ್ತುಗುರಿಇಲ್ಲದ ಅಡ್ನಾಡಿ ಜೀವನ ಅವನದಾಗಿತ್ತು. ಆದರೆ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದುಕಡೆ ಮರುಕವಿತ್ತು. ಅಯ್ಯೋ ಸುಖದ ಬದುಕು ಕೊನೆಗೂ ನೋಡಲೇ ಇಲ್ಲ ಅಂತ ಕನಿಕರಿಸುತ್ತ ಆತನ ಆತ್ಮಕ್ಕೆ ಶಾಂತಿ ಕೋರುವದೊಂದೆ ಈಗ ಉಳಿದಿರುವ ಮಾರ್ಗ. ಕೆಲವರ ಕಣ್ಣುಗಳು ಜೀವನದ ಎಲ್ಲತರಹದ ಬಣ್ಣಗಳನ್ನು ನೋಡೋದೇ ಇಲ್ಲ. ಕೆಲವರು ನೋಡುವ ಶಕ್ತಿ ಇದ್ದರೂ ಕಣ್ಣುಮುಚ್ಚಿಕೊಂಡಿರುತ್ತಾರೆ. ಇದೆಂಥ ಜೀವನದ ವೈಚಿತ್ರ್ಯ!
ಊಟಮಾಡಿ ಕೈತೊಳಿದಾಗ ಎಫ಼್.ಎಂ. ನಲ್ಲಿ ಕೊನೆಯ ಗೀತೆ ಪ್ರಸಾರವಾಗುತ್ತಿತ್ತು.
ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ
ಕೊನೆಹೇಗೋ ಅರಿಯಲಾರೆ, ಮರೆಯಾಗಿ ಹೋಗಲಾರೆ
ಮಸುಕು ಮಸುಕಾದ ನೆನಪುಗಳು ಮಂಪರಿನಲ್ಲಿ ತೇಲುತ್ತಾ ಗಾಢನಿದ್ರೆಗೆ ಜಾರಿದ್ದು ಗೊತ್ತಾಗಲೇಇಲ್ಲ.
-- ಮಹೇಶ. ಶ್ರೀ. ದೇಶಪಾಂಡೆ
(ತುಷಾರಪ್ರಿಯ)
(ದಿನಾಂಕ ೨೧.೦೪.೨೦೧೩ ರಂದು ಕರ್ಮವೀರವಾರಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.)













