Monday, 27 February 2017
Monday, 20 February 2017
ದರ್ಬಾರು
ದರ್ಬಾರು
ಎತ್ತರ ನಿಲುವು, ನೀಳಕಾಯ, ಸಾದಗಪ್ಪು, ಚಿಗುರು ಮೀಸೆಯ ಯುವ ರುದ್ರೇಗೌಡ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಬಾಯಿ ಮೇಲೆ ಬೆರಳಿಟ್ಟುಕೊಂಡು ಸೆರಗಿನಲ್ಲಿ ಮುಖ ಮರೆಮಾಚಿ ಓರೆಗಣ್ಣಿನಿಂದ ನೋಡದ ಹೆಂಗಸರೇ ಇಲ್ಲ ! ಅಂತಹ ಸುಂದರ ಚೆಲುವು ಅವನದು. ಬುಲೆಟ್ ಮೋಟಾರ್‌ಸೈಕಲ್ ಏರಿ ಪಟ್.... ಪಟ್.... ಪಟ್.... ಪಟ್.... ಅಂತ ಭೋರಿಡುತ್ತಾ ಹೋಗುವಬ ಪರಿ ನೋಡಲು ಎರಡು ಕಣ್ಣು ಸಾಲದಾಗಿತ್ತು. ರಾಜೇಗೌಡರ ಏಕೈಕ ವಂಶದ ಕುಡಿ ರುದ್ರೇಗೌಡನನ್ನು ತಾಯಿ ರುದ್ರಾಣಿ ಅತೀ ಮುದ್ದಿನಿಂದಲೆ ಬೆಳಸಿದ್ದರು. ತಲೆಮಾರು ಕೂತು ತಿಂದರೂ ಕರಗದಷ್ಟು ಹೊಲ ಗದ್ದೆ ತೋಟ ಬೆಳ್ಳಿ ಬಂಗಾರ ವಂಶ ಪಾರಂಪರ್ಯದಿಂದ ಬಳುವಳಿಯಾಗಿ ಬಂದು ರುದ್ರೇಗೌಡನು ಆ ಊರಿನ ಅನಭಿಷಕ್ತ ದೊರೆಯಂತೆ ಮೆರೆಯುತ್ತಿದ್ದ.
ರುದ್ರೇಗೌಡ ಚಿಕ್ಕವನಿದ್ದಾಗ ರಾಜೇಗೌಡರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದ್ದೊಬ್ಬ ಮಗ ಓದಿ ವಿದ್ಯಾವಂತನಾಗಲಿ ಎಂದು ನಗರದಲ್ಲೊಂದು ಮನೆ ಮಾಡಿ ಊಟೋಪಚಾರಗಳಿಗೆ ಕಡಿಮೆಯಾಗದಂತೆ ಸಕಲ ಸೌಕರ್ಯಗಳನ್ನೂ ಕಲ್ಪಿಸಿದ್ದರು. ಕೂತು ನಿಂತರೆ ಆಳುಗಳ ಸಾಲೆ ಇವನ ಸೇವೆಗೆ ನಿಲ್ಲುತ್ತಿತ್ತು. ಒಟ್ಟಿನಲ್ಲಿ ಈ ರುದ್ರೇಗೌಡ ದಿನವೂ ಹಾಲು ತುಪ್ಪದಲ್ಲಿ ಕೈ ತೊಳೆಯುತ್ತಿದ್ದ. ಇಷ್ಟೆಲ್ಲ ಅನುಕೂಲಗಳಿದ್ದರೂ ಓದಿನಲ್ಲಿ ಅಷ್ಟೇನೂ ಆಸ್ಥೆ ತೋರದ ರುದ್ರೇಗೌಡ ಅಂತೂ ಇಂತು ೧೦ನೇ ಕ್ಲಾಸ್ ತೇರ್ಗಡೆಯಾದ ಆ ಗೌಡರ ವಂಶದ ಮಟ್ಟಿಗೆ ಪ್ರತಿಷ್ಠೆಯಾದರೆ, ಊರ ಮಟ್ಟಿಗೆ ದಾಖಲೆಯಾಯಿತು. ಒಲ್ಲದ ಮನಸ್ಸಿನಿಂದ ಕಾಲೇಜು ಮೆಟ್ಟಿಲೇರಿದ ರುದ್ರೇಗೌಡ ಒಂದೇ ವರ್ಷಕ್ಕೆ ಮಕಾಡೆ ಮಲಗಿ ಊರ ಕಡೆ ಮುಖ ಮಾಡಿದ್ದ. ಆತ ಡುಮಿಕಿ ಹೊಡೆದು ವಾಪಸು ಬಂದ ಎನ್ನುವುದಕ್ಕಂತ ಕಾಲೇಜು ಮಟ್ಟಿಲೇರಿದ ಊರಿನ ಏಕೈಕ ಭೂಪನೆಂದು ಮನೆ ಮಂದಿ ಎಲ್ಲ ಕೊಂಡಾಡಿದ್ದರು! ಊರಜನ ತಲೆ ಅಲ್ಲಾಡಿಸಿದ್ದರು! ಇದ್ದಒಬ್ಬ ಮಗ ಕಣ್ಣಮುಂದೆ ಇದ್ದು ಹೊಲಗದ್ದೆಗಳನ್ನು ನೋಡಿಕೊಂಡು ಇದ್ದರೆ ಅದಕ್ಕಿಂತ ಹೆಚ್ಚಿನ ಭಾಗ್ಯ ಏನಿದೆ! ಎಂಬ ಆಶಾಭಾವ ರಾಜೇಗೌಡರದಾಗಿತ್ತು.
ರಾಜೇಗೌಡರ ಒತ್ತಾಸೆಗೆ ಎಂಬಂತೆ ರುದ್ರೇಗೌಡನು ಮನೆತನದ ದಿನನಿತ್ಯದ ಆಗು ಹೋಗುಗಳಲ್ಲಿ ಆಸ್ಥೆವಹಿಸತೊಡಗಿದ. ಅದಲ್ಲದೆ ರುದ್ರೇಗೌಡನಿಗೆ ಬೇರೆ ಉತ್ತಮ ಅಯ್ಕೆಗಳಾದರೂ ಎಲ್ಲಿದ್ದವು? ಇನ್ನೇನು ಮಗ ಕೈಗೆ ಬಂದ, ಒಂದೊಂದಾಗಿ ಜವಾಬ್ದಾರಿಗಳನ್ನು ಆತನ ಹೆಗಲಿಗೆ ಹೊರಿಸಿ ವಿಶ್ರಾಂತ ಜೀವನ ನಡೆಸುವ ಯೋಜನೆ ರಾಜೇಗೌಡರದು. ಬೇಸಾಯದ ಪಟ್ಟುಗಳನ್ನು ಸಹಜವಾಗಿಯೇ ಕರಗತ ಮಾಡಿಕೊಂಡ ರುದ್ರೇಗೌಡನ ಆರಂಭದ ದಿನಗಳು ಹುರುಪಿನಿಂದ ಕೂಡಿದ್ದವು. ಮಗನ ಹುಮ್ಮಸ್ಸು ನೋಡಿ ಒಳಗೊಳಗೆ ಖುಷಿಯಾದ ರಾಜೇಗೌಡರು ನಿದಾನವಾಗಿ ಕಾರ್ಯವಿಮುಖರಾಗತೊಡಗಿದರು. ಮೊದಲೆರಡು ವರ್ಷಗಳಲ್ಲಿ ಸಮರ್ಥವಾಗಿ ಜವಾಬ್ದಾರಿ ನಿಭಯಿಸಿದ ರುದ್ರೇಗೌಡ ಅಪ್ಪ ಅಮ್ಮರ ಪ್ರೀತಿಯನ್ನು ಸುಲಭದಲ್ಲಿ ಇಮ್ಮಡಿಸಿಕೊಂಡ. ನಂಬಿಕೆ ಉಳಿಸಿಕೊಳ್ಳುವುದರಲ್ಲಿಯೂ ಆತ ಹಿಂದೆ ಬೀಳಲಿಲ್ಲ. ಊರ ಜನರೂ ಹೌದೆನ್ನುವಂತೆ ಎತ್ತರಕ್ಕೆ ಬೆಳೆದು ನಿಂತಿದ್ದ. ರಾಜೇಗೌಡರು ದಿನನಿತ್ಯ ನಡೆಸುತ್ತಿದ್ದ ನ್ಯಾಯ ಪಂಚಾಯಿತಿಗಳಲ್ಲಿ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ನ್ಯಾಯ ತೀರ್ಮಾನ ಮಾಡತೊಡಗಿದರು. ತೀರ್ಮಾನದ ವಿಷಯಗಳಲ್ಲಿ ಆಗಾಗ ಮಗನ ಅಭಿಪ್ರಾಯ ಕೇಳುವುದು, ಸರಿಯೆನ್ನಿಸಿದ ಸಲಹೆಗಳನ್ನು ತಮ್ಮ ತೀರ್ಪುಗಳಲ್ಲಿ ಸೇರಿಸಿ ಆಜ್ಞೆಮಾಡುವುದು ನಿರಂತರವಾಗಿ ನಡೆಯತೊಡಗಿತು. ಗೌಡರ ಅಂಗಳದಲ್ಲಿ ಒಂದುಸಾರಿ ಪ್ರವೇಶಿಸಿದ ತಂಟೆತಗಾದೆಗಳು ಪೋಲಿಸ್ ಠಾಣೆಗಾಗಲಿ ಅಥವಾ ಕೋರ್ಟ್ ಮೆಟ್ಟಿಲಾಗಲಿ ಏರುವಂತಿರಲಿಲ್ಲ. ಗೌಡರಿಗೆ ಗೊತ್ತಿಲ್ಲದೆ ಪೋಲಿಸ್ ಠಾಣೆಗೆ ಹೋದ ಎಷ್ಟೋ ಪ್ರಕರಣಗಳನ್ನು ಪೋಲಿಸರೇ ವಾಪಸು ಗೌಡರ ಮನೆಗೆ ಕಳಿಸಿ ಅಲ್ಲಿ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡುತ್ತಿದ್ದರು. ಇನ್ನು ಗೌಡರ ಗಮನಕ್ಕೆ ತರದೆ ಕೋರ್ಟ್ ಮೆಟ್ಟಿಲೇರಿದ ಕುಟುಂಬದವರು ಗೌಡರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಆ ಊರಿನಲ್ಲಿ ರಾಜೇಗೌಡರ ವಜನು ಆ ರೀತಿ ಇತ್ತು. ಪಂಚಾಯಿತಿ ಅಧ್ಯಕ್ಷಗಿರಿಯಿಂದ ಹಿಡಿದು ಎಮ್.ಎಲ್.ಏ., ಎಮ್.ಪಿ. ಚುನಾವಣೆಗಳಲ್ಲಿ ಗೌಡರು ಹಾಕಿದ ಗೆರೆ ದಾಟುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಗೌಡರ ಆಯ್ಕೆ ಊರಿಗೆ ಒಳ್ಳೆಯದೆಂಬ ಅಚಲ ನಂಬಿಕೆ ಜನರಲ್ಲಿತ್ತು. ಪರಿಸ್ಥಿತಿ ಹೀಗಿರುವಾಗ ಬರಬರುತ್ತಾ ರುದ್ರೇಗೌಡನ ಪ್ರಭಾವ ಹೆಚ್ಚಾಗತೊಡಗಿತು. ಜನರು ಆತನ ಮಾತುಗಳಿಗೆ ತಲೆದೂಗತೊಡಗಿದರು.
ವಯೋಸಹಜ ನಿಶ್ಶಕ್ತಿಯಿಂದ ಒಳಲುತ್ತಿದ್ದ ಗೌಡರಿಗೆ ಮಗನು ಬೆಳೆದ ರೀತಿ ತೃಪ್ತಿ ತಂದಿತ್ತು. ತಮ್ಮತ್ತ ನ್ಯಾಯಕೇಳಲು, ಸಲಹೆ ಪಡೆಯಲು ಬರುವ ಜನರನ್ನು ರಾಜೇಗೌಡರೇ ಖುದ್ದಾಗಿ ನಿಂತು ತಮ್ಮ ಮಗನ ಬಳಿಗೆ ಕಳುಹಿಸಿ ಮುಂಬರುವ ದಿನಗಳಲ್ಲಿ ಊರ ಜನರಿಗೆ ಮಾರ್ಗದರ್ಶಿಯ ಸ್ಥಾನದಲ್ಲಿ ನಿಲ್ಲಬೇಕೆಂದು ಮನದಾಳದ ಆಶಯವನ್ನು ಆದೇಶದ ರೂಪದಲ್ಲಿ ಮಗನಲ್ಲಿ ಅರುಹಿದರು. ದಿನಕಳೆದಂತೆ ರಾಜೇಗೌಡರು ದೇವಸ್ಥಾನದ ಉತ್ಸವ ಮೂರ್ತಿಯಂತೆ ಜಗಲಿಯ ಮೂಲೆಯಲ್ಲಿ ಪ್ರತಿಷ್ಠಾಪನೆಯಾದರು.
ದಿನದಿಂದ ದಿನಕ್ಕೆ ರುದ್ರೇಗೌಡನ ವರ್ಚಸ್ಸು ಮತ್ತು ಆರ್ಭಟ ಬೆಳಿಯುತ್ತಲೇ ಹೋಯಿತು. ಜನರೂ ಕೂಡ ಇದನ್ನು ಸಹಿಸಿದ್ದರು ಹಾಗೂ ಸಮ್ಮತಿಸಿದ್ದರು ಎಂಬುದು ಆಶ್ಚರ್ಯವಾದರೂ ನಿಜವಾಗಿತ್ತು. ರಾಜೇಗೌಡರಿಗಿದ್ದ ಜನಪ್ರಿಯತೆಯಿಂದ ರುದ್ರೇಗೌಡನನ್ನು ಜನರು ಒಪ್ಪಿಕೊಳ್ಳುವಂತೆ ಮಾಡಿತ್ತು. ಆ ಊರಿನ ಪ್ರತಿಯೊಂದು ಆಗುಹೋಗುಗಳಿಗೆ ರುದ್ರೇಗೌಡನ ಅಣತಿಯಿಲ್ಲದೆ ನೆರವೇರುವಂತಿರಲಿಲ್ಲ. ನಾಮಕರಣ, ಮದುವೆ, ಆಸ್ತಿ ಪಾಸ್ತಿ ವ್ಯಾಜ್ಯಗಳು, ಗಂಡಹೆಂಡಿರ ಜಗಳ, ಅಣ್ಣತಮ್ಮಂದಿರ ಹೊಡದಾಟ, ಸಾವು ಹೀಗೆ ಎಲ್ಲಾ ವಿಷಯಗಳಲ್ಲಿ ರುದ್ರೇಗೌಡನ ಉಪಸ್ಥಿತಿ ಒಂದು ಅವಿಭಾಜ್ಯ ಅಂಗವಾಗಿ ಹೊಯಿತು. ಈ ರೀತಿಯ ಅನಿವಾರ್ಯತೆಯ ಲಕ್ಷ್ಮಣರೇಖೆಯನ್ನು ಜನರು ತಮ್ಮ ಮೇಲೆ ತಾವೇ ಎಳೆದುಕೊಂಡರು. ಜನರು ತೋರಿಸುತ್ತಿದ್ದ ಪ್ರೀತಿಯನ್ನು ರುದ್ರೇಗೌಡ ತಲೆಗೇರಿಸಿಕೊಂಡು ಅಹಂಕಾರದಿಂದ ಮೆರೆಯತೊಡಗಿದ. ರುದ್ರೇಗೌಡ ಒಳಗೊಳಗೆ ಬದಲಾಗತೊಡಗಿದ. ರುದ್ರೇಗೌಡನ ಹುಚ್ಚಾಟಗಳಿಗೆ ಜಯಕಾರ ಹಾಕುವ ಒಂದು ಪಟಾಲಂ ಗ್ಯಾಂಗ್ ತಯಾರಾಯಿತು. ಶಾನುಭೋಗರ ಸೀನಪ್ಪ, ಕಬ್ಬೇರಪ್ಪ, ಮುನುಸಿ ಹಾಗೂ ಬಮ್ಮಿಗಟ್ಟಿ ಎಂಬ ದುಷ್ಟ ಚತುಷ್ಟಯರು ರುದ್ರೇಗೌಡನ ದರ್ಬಾರಿಗೆ ಬಹುಪರಾಕ್ ಹೇಳುತ್ತಾ ಕೋಟೆಯಂತೆ ಸುತ್ತುವರೆದರು. ಆಸ್ತಿ ಪಾಸ್ತಿಯ ಜಗಳಗಳು ತೀರ್ಮಾನವಾಗಬೇಕಾದರೆ ರುದ್ರೇಗೌಡನಿಗೂ ಒಂದಷ್ಟುಪಾಲು ಹಣದ ರೂಪದಲ್ಲಿ ಕಾಣಿಕೆ ಒಪ್ಪಿಸುವ ಅಲಿಖಿತ ಕಾನೂನು ಜಾರಿಗೆ ತರುವಲ್ಲಿ ಈ ಪಟಾಲಂ ಗ್ಯಾಂಗ್ ಯಶಸ್ವಿಯಾಯಿತು.
ರಾಜೇಗೌಡರಿಗಿದ್ದ ವರ್ಚಸ್ಸು ಜನರು ಪೋಲಿಸ್ ಠಾಣೆಗೆ ಹೋಗದಂತೆ ತಡೆದದ್ದು ಈ ಪಟಾಲಂ ಗ್ಯಾಂಗ್‌ಗೆ ವರವಾಗಿ ಪರಿಣಮಿಸಿತ್ತು. ವಿಧಿ ಇಲ್ಲದೆ ರುದ್ರೇಗೌಡನಿಗೆ ಶರಣಾಗುವ ಪರಿಸ್ಥಿತಿ ಊರ ಜನರಿಗೆ ಉಂಟಾಯಿತು. ಇಷ್ಟೆಲ್ಲಾ ನಡೆದರೂ ಏನೂ ಗೊತ್ತಿಲ್ಲದಂತೆ ರುದ್ರೇಗೌಡ ನಟಿಸುತ್ತಿದ್ದ. ಗಂಡಹೆಂಡಿರ ಜಗಳ ಗೌಡರ ಅಂಗಳಕ್ಕೆ ಬಂದರೆ ಅಲ್ಲಿಗೆ ಆ ಕುಟುಂಬದ ಕಥೆ ಮುಗಿದಂತಯೇ!
ಹೀಗೊಂದು ದಿನ ರುದ್ರೇಗೌಡನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಪ್ಪ ಮತ್ತು ಆತನ ಹೆಂಡತಿ ಶಾಂತಿ ತೀರಾ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಸಂಜೆಹೊತ್ತು ಗೌಡರ ಆಂಗಳಕ್ಕೆ ಬಂದು ನಿಂತರು. ಗಂಡ ಕುಡಿದುಬಂದು ಹೊಡೆಯುತ್ತಾನೆ ಎಂದು ಹೆಂಡತಿ ಆರೋಪಿಸಿದರೆ, ಹೆಂಡತಿ ಸಮಯಕ್ಕೆ ಸರಿಯಾಗಿ ಅಡಿಗೆ ಮಾಡಲಿಲ್ಲ ಎಂಬುದು ಗಂಡನ ಪ್ರತ್ಯಾರೋಪವಾಗಿತ್ತು. ಇಬ್ಬರ ಅಹವಾಲುಗಳನ್ನು ಕೇಳಿಸಿಕೊಂಡ ರುದ್ರೇಗೌಡ ಫರ್ಮಾನು ಹೊರಡಿಸಿದ. ಗಂಡನಿಗೆ ಬುದ್ದಿ ಹೇಳಿ ತಿದ್ದುವ ಕೆಲಸ ತನಗೆ ಬಿಡುವಂತೆ ಹೇಳಿ ಬಾಕಿ ಉಳಿದಿರುವ ತೋಟದ ಕೆಲಸಗಳನ್ನು ಮುಗಿಸುವಂತೆ ಶಾಂತಿಗೆ ಆಜ್ಞಾಪಿಸಿದ. ಅತ್ತ ಅವಳು ಹೋದ ತಕ್ಷಣ ಎಲ್ಲಪ್ಪನ ಕೈಗೆ ಇಪ್ಪತ್ತು ರೂಪಾಯಿ ಇಟ್ಟು ಯಾವದಾದರೂ ಢಾಬಾದಲ್ಲಿ ಹೆಂಡ ಕುಡಿದು ಊಟಮಾಡಿ ಮನೆಗೆ ಹೋಗುವಂತೆ ಹೇಳಿದ. ಏನೂ ಅರಿಯದ ಎಲ್ಲಪ್ಪ ರುದ್ರೇಗೌಡನಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಹೋದ. ರಾತ್ರಿಯಿಡಿ ಶಾಂತಿ ರುದ್ರೇಗೌಡನ ಸ್ವತ್ತಾಗುವಂತೆ ಆ ಪಟಾಲಂ ಗ್ಯಾಂಗ್ ಆಗಲೇ ಬಲೆ ಹೆಣೆದುಬಿಟ್ಟಿತ್ತು. ಗಂಡನಿಂದ ಸಿಗದ ಸುಖ ರುದ್ರೇಗೌಡ ತೀರಿಸಿದ್ದ. ಆದನ್ನೆ ರೂಢಿಸಿಕೊಂಡ ಅವಳು ರುದ್ರೇಗೌಡನ ಸಾಂಗತ್ಯ ಬೇಕೆಂದಾಗಲೆಲ್ಲ ಗಂಡನ ಜೊತೆ ಜಗಳ ತೆಗೆಯುವುದು ಗಂಡ ಹೆಂಡದಂಗಡಿ ಕಡೆ ಹೊರಡುವುದು. ಅವಳು ಗೌಡರ ತೆಕ್ಕೆಯಲ್ಲಿ ಕಿಲಕಿಲನೆ ನಕ್ಕು ಹೊರಳಾಡುವುದು ನಿತ್ಯದ ಕರ್ಮವಾಗಿಹೋಯಿತು.
ಮಗನ ಈ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಜೇಗೌಡರು ಮನಸ್ಸಿನಲ್ಲಿಯೆ ತೋಳಲಾಡತೊಡಗಿದರು. ಇವನನ್ನು ಹೀಗೆ ಬಿಟ್ಟರೆ ತಾನು ಕೆಡುವುದಲ್ಲದೆ ಆಸ್ತಿಯನ್ನೂ ಹಾಳುಮಾಡಿ ಮನೆತನದ ಮರ್ಯಾದೆಯನ್ನು ರಸ್ತೆಗೆ ತರುವುದಲ್ಲಿ ಸಂಶಯವೇ ಇಲ್ಲ ಎಂದು ಒಂದು ನಿರ್ಧಾರಕ್ಕೆ ಬಂದರು. ಅವನಿಗೆ ಮದುವೆ ಮಾಡಿಸಿದರೆ ಈ ಹುಚ್ಚಾಟಗಳಿಗೆ ಕಡಿವಾಣ ಹಾಕಬಹುದೆಂದು ಯೋಚಿಸಿ ಕೈಮೀರುವ ಮುಂಚೆ ಅದೊಂದು ಜವಾಬ್ದಾರಿಯಿಂದ ಮುಕ್ತರಾಗಬೇಕೆಂದು ನಿರ್ಧರಿಸಿದರು. ಪಕ್ಕದೂರಿನ ಸಾಹುಕಾರ ಚನ್ನೇಗೌಡರ ಮಗಳು ಸುಜಾತಾಳನ್ನು ಮನೆಸೊಸೆಯನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಾಂಬೂಲ ಅದಲು ಬದಲು ಮಾಡುವ ಶಾಸ್ತ್ರವೂ ಮುಗಿಯಿತು. ರಾಜೇಗೌಡರ ಅಂತಸ್ತಿಗೆ ತಕ್ಕಂತೆ ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಿಕೊಡುವುದರಲ್ಲಿ ಸಾಹುಕಾರ ಚನ್ನೇಗೌಡರು ಹಿಂದೆ ಬೀಳಲಿಲ್ಲ. ವಿಜ್ರಂಭಣೆಯಿಂದ ನಡೆದ ಮದುವೆಯಲ್ಲಿ ಎರಡೂ ಊರಿನ ಜನ ಎರಡು ದಿನ ಒಲೆಗೆ ಬೆಂಕಿ ಇಡಲಿಲ್ಲ.
ಮದುವೆಯಾಗಿ ಒಂದೆರಡು ತಿಂಗಳು ಸುಮ್ಮನಿದ್ದ ರುದ್ರೇಗೌಡ ತನ್ನ ಮೊದಲಿನ ಚಾಳಿಯನ್ನು ಮತ್ತೆ ಶುರು ಮಾಡಿಕೊಂಡ. ಸಾಲದ್ದಕ್ಕೆ ಜಮೀನಿನ ಉಸ್ತುವಾರಿಗೆಂದು ಜೀಪೊಂದನ್ನು ಖರೀದಿಸಿದ. ಆದರೆ ಆ ಜೀಪನ್ನು ಜಮೀನಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಿದ್ದು ಅಷ್ಟರಲ್ಲೇ ಇತ್ತು. ಮೂವತ್ತು ಮೈಲಿ ದೂರದ ಶಹರಿಗೆ ಹೋಗಿ ವಿದೇಶಿ ಸಿಗರೇಟ್‌ಪ್ಯಾಕ್ ತರಲಿಕ್ಕಂದೇ ಮೀಸಲಾಗಿಹೋಯ್ತು. ಹೊಲದ ಕೆಲಸಕ್ಕೆಂದು ಟ್ರಾಕ್ಟರ್ ಡ್ರೈವರಾಗಿದ್ದ ಚನ್ನಪ್ಪ ಮೇಲಿಂದ ಮೇಲೆ ಜೀಪಿನಲ್ಲಿ ಶಹರಕ್ಕೆ ಹೋಗಿ ಸಿಗರೇಟು ಪ್ಯಾಕ್ ತರುವದಕ್ಕೆಂದು ಖಾಯಂ ಆಗಿಬಿಟ್ಟ. ಈ ರೀತಿಯ ಅಂದಾದುಂದಿನ ದರ್ಬಾರು ಎಷ್ಟು ದಿನ ಅಂತಾ ನಡೆದೀತು ! ಸಿಗರೇಟಿನ ಸಾಲ ತೀರಿಸಲು ಎಂಟು ಎಕರೆ ಹೊಲ ಕಂಡವರ ಪಾಲಾಯಿತು. ಎಲ್ಲದ್ದಕ್ಕೂ ಬಂದು ಕೊನೆ ಅಂತ ಒಂದು ಇರಲೇಬೇಕು ಅಲ್ಲವೇ! ಅದು ಹಾಗೆ ನಡೆಯಿತು. ಜಮೀನು ಉಸ್ತುವಾರಿ ಕಡಿಮೆಯಾದಂತೆ ಇಳುವರಿಯೂ ಕಡಿಮೆಯಾಯಿತು. ಕಳ್ಳತನಗಳು ಹೆಚ್ಚಾದವು. ಒಂದು ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ಗೌಡರ ಕುಟುಂಬ ಬರಬರುತ್ತ ಮುಳ್ಳಿನ ಹಾಸಿಗೆಯನ್ನು ಮೈಮೇಲೆ ಎಳೆದುಕೊಳ್ಳಲಾರಂಭಿಸಿತು. ಕಷ್ಟಗಳು ಬಂದರೆ ಸಾಲುಸಾಲಾಗಿ ಬಂದೆರಗುತ್ತವೆ ಎಂಬಂತೆ ಭೂಸುಧಾರಣಾ ಕಾಯ್ದೆ ಜಾರಿಯಾಗಿ ಗಾಯದ ಮೇಲೆ ಬರೆ ಎಳೆದಂತೆ ಮುಕ್ಕಾಲು ಪಾಲು ಜಮೀನು ಊಳುವವರ ಪಾಲಾದವು. ದಿನಬೆಳಗಾದರೆ ತಹಶೀಲ್ದಾರ ಕಚೇರಿ, ನಾಡಕಚೇರಿ, ಟ್ರಿಬ್ಯುನಲ್ಲು, ವಕೀಲರೊಂದಿಗೆ ಏಗಾಡುವುದಲ್ಲಿ ಅಳಿದುಳಿದ ಅಲ್ಪ ಸಂಪತ್ತು ಕರಗಲಾರಂಭಿಸಿತು. ಏಟಿನ ಮೇಲೆ ಏಟುಗಳು ಬೀಳುತ್ತಿದ್ದರೂ ರುದ್ರೇಗೌಡ ಮಾತ್ರ ತನ್ನ ದೌಲತ್ತನ್ನೇನು ಕಡಿಮೆ ಮಾಡಿಕೊಳ್ಳಲಿಲ್ಲ. ಇದರ ಮುಂದಿನ ಪರಿಣಾಮ ಗೌಡರ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿತು. ಕೊಟ್ಟಸಾಲ ಹಿಂದಿರುಗಿಸುವುದಿರಲಿ, ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡುವುದು ದುಸ್ತರವಾಗತೊಡಗಿತು. ಗೌಡರ ಮನೆತನ ವರ್ಚಸ್ಸಿನ ತಿಳುವಳಿಕೆಯಿಂದ ಆರಂಭದಲ್ಲಿ ಸಾಲಗಾರರು ಮೃದುವಾಗೇ ಇದ್ದರು. ಆದರೆ ಸಾಲದ ಹೊರೆ ಏರುತ್ತ ಹೋದಂತೆ ಸಾಲಗಾರರ ಸಹನೆಯ ಕಟ್ಟೆ ಒಡೆಯಿತು. ಒಂದು ಕಾಲದಲ್ಲಿ ಗೌಡರ ಅಂಗಳ ನ್ಯಾಯ ತೀರ್ಮಾನದ ಬೀಡಾಗಿತ್ತು. ಆದರೆ ಅದೇ ಅಂಗಳದಲ್ಲಿ ಸಾಲಗಾರರು ಬಂದು ರುದ್ರೇಗೌಡನ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದರು. ನ್ಯಾಯ ಹೇಳುತ್ತಿದ್ದ ದೊರೆ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲುವಂತಾಗಿದ್ದು ವಿಧಿ ವಿಪರ್ಯಾಸವೇ ಸರಿ! ಇದನ್ನೆಲ್ಲ ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ ರಾಜೇಗೌಡರ ಮನಸ್ಸು ಮುದಡಿಹೋಗಿತ್ತು. ಹೃದಯ ಹಿಡಿ ಮಾಡಿಕೊಂಡು ಸಾಲಗಾರರಲ್ಲಿ ವಾಯಿದೆ ಕೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ರಾಜನಂತೆ ಮೆರೆದ ರಾಜೇಗೌಡರು ಮಗನ ಹುಚ್ಚಾಟಗಳಿಂದ ಕುಬ್ಜರಾಗಿ ಹೋಗಿದ್ದರು.
ರುದ್ರೇಗೌಡನ ಉಪಟಳದಿಂದ ಬೇಸತ್ತ ಸುಜಾತ ಒಂದುದಿನ ಹೇಳದೇ ಕೇಳದೇ ತವರು ಮನೆ ಸೇರಿದಳು. ಬೀಗರಾದ ಸಾಹುಕಾರ ಚೆನ್ನೇಗೌಡರ ಮುಂದೆ ರಾಜೇಗೌಡರ ಮಾನ ಏನಾಗಿರಬೇಡ! ಇನ್ನೂ ಕುಗ್ಗಿಹೋದರು. ಒಂದು ಕಾಲದಲ್ಲಿ ಊರಿಗೇ ಬುದ್ದಿ ಹೇಳುತ್ತಿದ್ದ ರಾಜೇಗೌಡರಿಗೆ ಅವರ ಬೀಗರಿಂದ ಉಪದೇಶ ಕೇಳುವ ಕೆಟ್ಟ ಪರಿಸ್ಥಿತಿ ಎದುರಾಯಿತು. ಅತಿಯಾದ ಮುದ್ದಿನಿಂದ ಬೆಳೆದ ರುದ್ರೇಗೌಡನಿಗೆ ಕಿವಿ ಹಿಂಡಿ ಬುದ್ದಿ ಕಲಿಸುವ ಕಾಲ ಅದಾಗಲೇ ಮಿಂಚಿ ಹೋಗಿತ್ತು. ರಾಜೇಗೌಡರ ಮಾನಕ್ಕೆ ಅದೇ ಮುಳುವಾಯಿತು.
ಇಷ್ಟೆಲ್ಲ ಅನಾಹುತಗಳ ನಡೆದರೂ ರುದ್ರೇಗೌಡನ ಅಹಂಕಾರವೇನೂ ತಗ್ಗಲಿಲ್ಲ. ಆಗಾಗ ತೋಟದ ಮನೆಗೆ ಬಂದು ಹೋಗುತ್ತಿದ್ದ ಶಾಂತಿ ಖಾಯಂ ಅಲ್ಲಿಯೇ ಟಿಕಾಣಿ ಹೂಡಿದಳು. ದೇವದಾಸನಾಗಿದ್ದ ಸಿದ್ದಪ್ಪ ಕಣ್ಣಿದ್ದು ಕುರುಡನಾಗಿಬಿಟ್ಟ. ಕಾಮದ ಅಮಲಿನಲ್ಲಿ ತೇಲುತ್ತಿದ್ದ ರುದ್ರೇಗೌಡ ಶಾಂತಿಯ ತಾಳಕ್ಕೆ ಕುಣಿಯತೊಡಗಿದ. ಮನೆಯಲ್ಲಿದ್ದ ಒಡವೆಗಳು ಶಾಂತಿಯ ಕೊರಳಲ್ಲಿ ರಾರಾಜಿಸಿತೊಡಗಿದವು. ರುದ್ರೇಗೌಡನ ಸ್ಥಿತಿ ತೂತುಬಿದ್ದ ಹಡಗಿನಂತಾಗಿತ್ತು. ಶಾಂತಿಯ ಒತ್ತಾಸೆಗೆ ತೋಟ, ತೋಟದ ಮನೆ ಸಮೇತ ರಾತ್ರೊರಾತ್ರಿ ಬರೆದುಕೊಟ್ಟು ಹಗಲು ಹೊತ್ತು ದಿಕ್ಕಾಪಾಲಾಗಿಹೋದ. ರುದ್ರೇಗೌಡನ ಕಾಮಕ್ಕೆ ಚಿಗುರೊಡೆದ ಪಿಂಡಕ್ಕೆ ಶಾಂತಿ ದಿಕ್ಕಾಗಿ ನಿಂತಳು.
ರುದ್ರೇಗೌಡನ ದರ್ಬಾರು ಇಷ್ಟಕ್ಕೆ ನಿಲ್ಲಲಿಲ್ಲ. ದೂರದ ಬೆಂಗಳೂರಿಗೆ ಆಗಾಗ್ಗೆ ಈ ಪಟಾಲಂ ಗ್ಯಾಂಗ್ ಜತೆಗೂಡಿ ಕುದುರೆಜೂಜು ಆಡುವುದನ್ನು ಕಲಿತ. ಮೋಜ ಮಸ್ತಿ ಮಾಡುವುದನ್ನೆ ದಿನಚರಿಯಾಗಿಸಿಕೊಂಡ ದುದ್ರೇಗೌಡ ಅತಿಯಾದ ಕುಡಿತಕ್ಕೆ ಅಂಟಿಕೊಂಡ. ಕೂತು ತಿಂದರೆ ಕುಡಿಕೆಹೊನ್ನು ಸಾಲದು ಎಂಬಂತೆ ಅದಾಗಲೆ ತಳಕಂಡಿದ್ದ ಗೌಡರಮನೆಯ ಸಂಪತ್ತು ಪಾತಾಳ ಗರಡಿ ಹಾಕಿ ಹುಡುಕಿದರೂ ಒಂದು ದಮ್ಮಡಿಯೂ ಸಿಗದ ಸ್ಥಿತಿಗೆ ತಲುಪಿತ್ತು.
ಆಪ್ಪನ ಪ್ರೀತಿಯನ್ನು ಅದಾಗಲೇ ಕಳೆದುಕೊಂಡಿದ್ದ ದುದ್ರೇಗೌಡನಿಗೆ ಸಾಂತ್ವನ ಹೇಳಲು ಪಕ್ಕದಲ್ಲಿ ಹೆಂಡತಿಯೂ ಇಲ್ಲವಾಗಿದ್ದಳು. ಶಾಂತಿಯ ಸಾಂಗತ್ಯ ಕೊನೆವರೆಗಿನ ಸುಖವೆಂಬ ಭ್ರಮ ಅದಾಗಲೆ ಕಳಚಿಬಿದ್ದಿತ್ತು. ಹುತ್ತದ ಬಾಯಿಗೆ ಕೈಯಿಟ್ಟು ಹಾವು ಕಡಿಸಿಕೊಂಡ ಪರಿಸ್ಥಿತಿ ರುದ್ರೇಗೌಡನದಾಗಿತ್ತು. ಮಾನಸಿಕವಾಗಿ ಕುಗ್ಗಿಹೋಗಿದ್ದ ರುದ್ರೇಗೌಡನ ದೇಹದ ಅರೋಗ್ಯವೂ ಕ್ಷೀಣಿಸಿತೊಡಗಿತು. ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದ ರುದ್ರೇಗೌಡನನ್ನು ಇದೇ ಪಟಾಲಂ ಗ್ಯಾಂಗ್ ಶಹರದ ಆಸ್ಪತ್ರೆಗೆ ದಾಖಲು ಮಾಡಿದರು. ವಿಧವಿಧದ ಪರೀಕ್ಷೆಗಳನಂತರ ಬಂದ ಫಲಿತಾಂಶ ಘೋರವಾಗಿತ್ತು. ವಾಸಿಯಾಗದ ಕಾಯಿಲೆಯಿಂದ ಆತ ಬಳಲುತ್ತಿದ್ದ. ಕೊನೆಹಂತದ ಕರಳು ಕ್ಯಾನ್ಸರ್ ಆತನಿಗೆ ಅಂಟಿಕೊಂಡಿತ್ತು. ಹೆಚ್ಚುದಿನ ಬದುಕಲಾರ ಎಂದು ಆತನನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ತಂಡ ಘೊಷಿಸಿಬಿಟ್ಟಿತ್ತು. ಕೊನೆಗೊಂದು ದಿನ ಆ ವಿಷಘಳಿಗೆ ಬಂದೇಬಿಟ್ಟಿತ್ತು. ಯಾವ ಚಿಕಿತ್ಸೆಗೂ ಸ್ಪಂದಿಸದ ರುದ್ರೇಗೌಡನ ಪ್ರಾಣಪಕ್ಷಿ ಹಾರಿಹೋಗಿತ್ತು. ರುದ್ರೇಗೌಡನ ದರ್ಬಾರು ದುರಂತದ ಅಂತ್ಯ ಕಂಡಿತ್ತು.
ಚಿತೆಗೆ ಬೆಂಕಿ ಇಟ್ಟ ರಾಜೇಗೌಡರಿಗೆ ಚಿಂತಿಸುವುದಕ್ಕೆ ಏನೂ ಉಳಿದಿರಲಿಲ್ಲ. ಚಿತೆಯ ಮುಂದೆ ಕುಸಿದುಕುಳಿತ ಅವರ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು. ಯಾವಾಗಲೋ ಬತ್ತಿಹೋಗಿದ್ದ ಕಣ್ಣೀರ ಹನಿಗಳು ಈಗ ಎಲ್ಲಿಂದ ಉದಿರ್‍ಯಾವು! ಉರಿಯುತ್ತಿದ್ದ ಚಿತೆಯ ಆಚೆ ದಿಗಂತದಲ್ಲಿ ಮುಳುಗುತ್ತಿದ್ದ ಕೆಂಪುಸೂರ್ಯನಲ್ಲಿ ರುದ್ರೇಗೌಡ ಮುಖ ಕಂಡಂತಾಯಿತವರಿಗೆ! ಗಂಡು ದಿಕ್ಕಿಲ್ಲದ ಮನೆಯ ನೆನೆದ ರಾಜೇಗೌಡರಿಗೆ ಇದ್ದೊಬ್ಬ ಮಗನೂ ದೂರಾಗಿ ಭರಿಸಲಾಗದ ದುಃಖ ಕೊಟ್ಟು ದೂರಾಗಿ ಹೋದ. ಆಗ ಸುರಿದ ಒಂದೆರಡು ಮಳೆಹನಿಗಳು ರಾಜೇಗೌಡರ ತಾಪಕ್ಕೆ ಸುರಿದ ತಣ್ಣೀರೇನೋ ಅನ್ನಿಸುವ ಮಟ್ಟಗೆ ಭಾಸವಾಯಿತು.
ರುದ್ರೇಗೌಡನ ದೌರ್ಜನ್ಯಕ್ಕೆ ನಲುಗಿದ ಕುಟುಂಬಗಳು ಹಿಡಿಶಾಪ ಹಾಕಿ ಖುಷಿಪಟ್ಟರೆ, ರಾಜೇಗೌಡರ ದುರ್ವಿಧಿಗೆ ಮಲ್ಮಲ ಮರುಗಿದ ಜನರಿಗೂ ಬರವೇನೂ ಇರಲಿಲ್ಲ. ಮಾಡಿದ ಕರ್ಮಗಳಿಗೆ ಸ್ವರ್ಗ ನರಕ ನೋಡಲು ಇನ್ನೊಂದು ಜನ್ಮ ಬೇಕಾಗಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತ ಚದುರತೊಡಗಿದರು. ಹೆಚ್ಚಿದ ಚಿತೆಯ ಜ್ವಾಲೆ ಮುಳುಗುತ್ತಿದ್ದ ಸೂರ್ಯನನ್ನೆ ನುಂಗುವಂತೆ ಕಂಡಿತ್ತು. ಒಂಟಿಯಾದ ರಾಜೇಗೌಡರನ್ನು ಸಂತೈಸಲು ಯಾರೂ ಪಕ್ಕದಲ್ಲಿರಲಿಲ್ಲ. ಅವರವರ ದುಃಖಗಳನ್ನು ಅವರೇ ಅನುಭವಿಸಬೇಕು.
-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ
Friday, 17 February 2017
ನಮ್ಮ ನಗರ
ನಮ್ಮ ನಗರ
ನೋಡುಬಾ ನಮ್ಮೂರ ಸೊಬಗ
ಕೈಬೀಸಿ ಕರೆಯುತ್ತಿದೆ
ಬಿದ್ದೀರಾ ಬಲು ಜೋಕೆ
ನಮ್ಮೂರ ರಸ್ತೆಯಿದು ಗುಂಡಿಗಳ ಸಾಮ್ರಾಜ್ಯ
ಉಸಿರು ಉಸಿರಿಗೂ ಮೂಗಡರಿ
ಉಸಿರು ನಿಂತೀತು ಜೋಕೆ
ಕಿವಿ-ಮೂಗು ಮುಚ್ಚಿದರೆ ಲೇಸು........||
ಮೇಲು ಸೇತುವೆ ಕೆಳ ಸೇತುವೆ
ಮೆಟ್ರೋ ಮ್ಯಾಜಿಕ್ ಬಾಕ್ಸ್‌ಗಳ ಜುಗಲ್ ಬಂದಿ
ಆದರೂ ತಪ್ಪಲಿಲ್ಲ ಜನ ಸಂದಣಿ ಕಿರಿಕಿರಿ .......
ಸಾಲು ಸಾಲು ಮರಗಳು ಸೋತು ಮಲಗಿವೆ
ಗಬ್ಬು ನಾರುತಿದೆ ತಿಪ್ಪೆಗಳ ಸಾಮ್ರಾಜ್ಯ
ವಿಧಿಯಿಲ್ಲ ಕಣ್ಣು ತೆರೆದಿಡಲೇಬೇಕು ||
ನೋಡುಬಾ ನಮ್ಮೂರ ಸೊಬಗ
ಕೈಬೀಸಿ ಕರೆಯುತ್ತಿದೆ
ಜೀವಗಳಿಗಿಲ್ಲಿ ಬೆಲೆಯಿಲ್ಲ
ಬಿದ್ದರೆ ಏಳಿಸುವುವವರಿಲ್ಲ
ಸತ್ತರೋ .......! ಕೇಳುವವರೇಇಲ್ಲ......!
ದುಡ್ಡಿದ್ದವನೇ ದೊಡ್ಡಪ್ಪ...... ದುಡ್ಡಿಲ್ಲದವನು ದಡ್ಡನಪ್ಪ
ಹೆಜ್ಜೆ ಹೆಜ್ಜೆಗೂ ಕುರುಡು ಕಾಂಚಾಣದ ಕುಣಿತ
ಕನಸೊಂದ ಕಾಣಲು ಮನೆಯೊಂದ ಕಟ್ಟಲು
ನೆಮ್ಮದಿಯು ಮಾತ್ರ ಮರೀಚಿಕೆ.......!
ಕೈಬೀಸಿ ಕರೆಯುತ್ತಿದೆ..... ಕೈಬೀಸಿ ಕರೆಯುತ್ತಿದೆ
ನೋಡುಬಾ ನಮ್ಮೂರ ಸೊಬಗ!
**__**__**
--ಮಹೇಶ್ ದೇಶಪಾಂಡೆ
ತುಷಾರಪ್ರಿಯ
Friday, 10 February 2017
Monday, 6 February 2017
ಅತೃಪ್ತ ಆತ್ಮಗಳ ಸುತ್ತ
ಅತೃಪ್ತ ಆತ್ಮಗಳ ಸುತ್ತ
ನಮ್ಮ ಸುತ್ತಮುತ್ತ ಎಷ್ಟೊಂದು ಚಿತ್ರ ವಿಚಿತ್ರ ಜನಗಳಿರುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ನನಗಾದ ಒಂದು ಚಿಕ್ಕ ಅನುಭವ ಈ ಲೇಖನೆಗೆ ಪ್ರೇರಣೆಯಾಯಿತು. ಪ್ರೆರೇಪಿಸಿದ ಆ ಒಂದು ಅತೃಪ್ತ ಆತ್ಮಕ್ಕೆ ನನ್ನದೊಂದು ಹೃದಯಪೂರ್ವಕ ಸಲಾಮ್!
ಕೆಲವರು ಟೀಕೆ ಮಾಡುವುದು ಹಾಗೂ ಕೊಂಕು ನುಡಿಯುವುದನ್ನೇ ತಮ್ಮ ತಲೆಗೇರಿಸಿಕೊಂಡು ತಾವು ಇತರರನ್ನು ತಿದ್ದುವುದಕ್ಕಾಗಿಯೇ ಹುಟ್ಟಿರುವ ಹಾಗೆ ಭ್ರಮಿಸುತ್ತಾರೆ. ಯಾವುದಾದರೊಂದು ವಿಷಯವನ್ನು ಕೈಗೆತ್ತಿಕೊಂಡು ನಕಾರಾತ್ಮಕವಾಗಿ ಮಾತನಾಡುತ್ತಾ ಇತರರ ತೇಜೋವಧೆ ಮಾಡುವುದೇ ಇವರ ನಿತ್ಯ ಕಾಯಕ. ಈ ರೀತಿ ಟೀಕೆ ಮಾಡುವುದರಿಂದ ಹಾಗೂ ಕೊಂಕು ನುಡಿಯುವದರಿಂದ ಅವರಿಗೆ ಅತಿಯಾದ ವಿಕೃತ ಆನಂದ ದೊರೆಯುತ್ತದೆ. ಇಂತವರು ನಿಜವಾಗಿಯು ಕೀಳರಿಮೆಯಿಂದ ಬಳಲುತ್ತಿರುತ್ತಾರೆ. ಅಸೂಯೆ ಇವರ ಮುಖ್ಯ ಅಸ್ತ್ರ ಹಾಗೂ ದೌರ್ಬಲ್ಯ ಕೂಡ. ಇತರರ ಏಳಿಗೆಯನ್ನು ಇವರು ಸಹಿಸಲಾರರು. ಹಾಗೂ ಇತರರು ಏರಿದ ಎತ್ತರಕ್ಕೆ ಏರಲೂ ಆಗದೆ ಚಡಪಡಿಸುತ್ತಾರೆ. ಇದು ಅವರ ಜನ್ಮಕ್ಕೆ ಅಂಟಿದ ಜಾಡ್ಯವೆಂದರೂ ತಪ್ಪಾಗಲಾರದು. ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿಯ ಜಾತಿಗೆ ಸೇರಿದವರಿವರು. ಇಂತವರನ್ನು ಅತೃಪ್ತ ಆತ್ಮಗಳ ಸಾಲಿಗೆ ಸೇರಿಸಬಹುದು. ಈ ಅತೃಪ್ತ ಆತ್ಮಗಳಿಗೆ ಏಳು ಸಮುದ್ರಗಳ ನೀರು ಕುಡಿಸಿದರೂ ದಾಹ ಇಂಗಲಾರದು. ಇತರರ ಸಾಧನೆಗಳನ್ನು ಇವರು ಹೊಗಳುವ ಜಾಯಮಾನಕ್ಕೆ ಸೇರಿದವರಲ್ಲ. ಅಯ್ಯೇ ! ಹಾಗೇನಾದರೂ ಹೊಗಳಿದರೆ ಇವರ ಘನತೆಗೆ ಕುಂದು ಅಲ್ಲವೆ!? ಕಾಲೆಳೆಯುವದು ಇವರ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುತ್ತಾರೆ.
ಈಗ ನೇರವಾಗಿ ವಿಷಯ ಪ್ರಸ್ತಾಪಕ್ಕೆ ಬರೋಣ. ಅತೃಪ್ತ ಆತ್ಮಗಳಲ್ಲಿ ಒಂದು ಬಿನ್ನಹ. ಸುಕ್ಕಾಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು ಜೀವನದಲ್ಲಿ ನೀವೂ ಏನನ್ನಾದರೂ ಸಾಧಿಸಿ ತೋರಿಸಿ. ಸಾಧನೆಯಲ್ಲಿ ಸಿಗುವ ಆನಂದವೇ ಬೇರೆ. ಟೀಕಿಸಿದರೆ ಸಿಗುವ ಸಂತೋಷ ಯಾವುದು? ಸಾಧನೆಗೆ ಸಿಗುವ ಆನಂದದ ಮಜಾ ಯಾವುದು? ಎಂಬ ಅಂತರವನ್ನು ನೀವೇ ಸ್ವಾನುಭವಿಸುತ್ತೀರಿ. ಅಂತಹದೊಂದು ಆನಂದಾನುಭವಕ್ಕೆ ಇಂದೇ ಪೀಠಿಕೆ ಹಾಕಿ. ಯಾರು ಏನೇನು ಮಡ್ತಾಇದ್ದಾರೆ ಹೇಗೆ ಯಾಕೆ ಇತ್ಯಾದಿ ಅನಾವಶ್ಯಕ ವಿವರಗಳಿಂದ ದೂರ ಇದ್ದಷ್ಟೂ ಒತ್ತಡ ಕಡಿಮೆಯಾಗಿ ಸುಖ ಹೆಚ್ಚುತ್ತದೆಂದು ತಿಳಿದವರು ಹೇಳುತ್ತಾರೆ.
ಟೀಕಿಸುವ ಹಾಗೂ ಕೊಂಕು ನುಡಿಗಳ ಪಾತಾಳದಿಂದ ಮೇಲೆದ್ದು ಬನ್ನಿ. ಒಂದು ಸಾರಿ ಈ ಜಗತ್ತನ್ನು ತೆರೆದ ಕಣ್ಣೂಗಳಿಮ್ದ ನೋಡಿ. ಆಗ ನಿಮಗೇ ತಿಳಿಯುತ್ತದೆ. ನೀವೆಷ್ಟು ಕುಬ್ಜರೆಂದು! ಪಾತಾಳದಲ್ಲಿ ಕಾಲ ಹರಣ ಮಾಡಿದ್ದು ಸಾಕು. ಇತರರ ಏಳಿಗೆಗೆ ಅಸೂಯೆಪಟ್ಟಿದ್ದೂ ಸಾಕು. ಇನ್ನಾದರೂ ಜೀವನದಲ್ಲಿ ಏನನ್ನಾದರೂ ಸಾಧಿಸಿ ಸುತ್ತಲಿನ ಜನ ಬಾಯಿಗೆ ಬೆರಳಿಟ್ಟುಕೊಂಡು ನಿಬ್ಬೆರಗಾಗಿ ನೋಡುವಂತೆ ಪುಟಿದೇಳಿ. ಸಾಧನೆಯಲ್ಲಿನ ಸುಖ ಕುಳಿತು ಟೀಕಿಸುವರಲ್ಲಿ ಇಲ್ಲವೆಂದು ನಿಮಗೆ ಮನವರಿಕೆ ಯಾದಲ್ಲಿ ಕೊಂಕುಮಾತನಾಡುವ ಡೊಂಕು ಮನಸಿನ ಅತೃಪ್ತ ಆತ್ಮಗಳಿಗಾಗಿಯೇ ಬರೆದ ಈ ಲೇಖನ ಸಾರ್ಥಕ ವಾದಂತೆ ಎಂದು ನನ್ನ ಅನಿಸಿಕೆ.
ಇನ್ನಾದರೂ ಟೀಕಿಸುವ ದಟ್ಟಡವಿಯಿಂದ ಹೊರಬಂದು ಸಾಧನೆಯ ಪಥ ಕಂಡುಕೊಳ್ಳಿ. ಏನಾದರೊಂದು ಸಾಧಿಸಿದಾಗ ಮಾತ್ರ ಇತರರನ್ನು ಟೀಕಿಸುವ ಹಕ್ಕು ನಿಮ್ಮದಾಗುತ್ತದೆ. ಸಕಾರಾತ್ಮಕ ಟೀಕೆಗಳು ಸರ್ವಕಾಲಕ್ಕೂ ಸ್ವಾಗತಾರ್ಹ ಮತ್ತು ಸ್ವೀಕಾರಾರ್ಹ. ಇಂತಹ ಟೀಕೆಗಳು ಆಶೀರ್ವಾದ ಹಾಗೂ ಶುಭಹಾರೈಕೆಗಳ ಸಾಲಿಗೆ ಸೇರುತ್ತವೆ. ಇಲ್ಲವಾದಲ್ಲಿ ನಾಯಿ ಬೊಗಳಿದರೆ ಸ್ವರ್ಗದಲ್ಲಿ ಭೂಕಂಪವಾದೀತೆ ? ಎಂಬ ನಾಣ್ಣುಡಿಗೆ ನೀವೇ ಮೂಕ ಸಾಕ್ಷಿಯಾಗುತ್ತೀರಿ. ಆಯ್ಕೆ ನಿಮಗೆ ಬಿಟ್ಟ ವಿಚಾರ.
ಏನಂತೀರಿ!?
ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ
Friday, 3 February 2017
ವಸಂತಗೀತೆ
ವಸಂತಗೀತೆ
ಮಾಮರದ ಕೋಗಿಲೆ
ನಾವಾಗಿ ಹಾರೋಣ
ಜೋಡಿ ಹಕ್ಕಿಗಳಂತೆ ಮರದಿಂದ ಮರಕೆ
ಬಾನಲ್ಲಿ ತೇಲಾಡಿ
ವಸಂತ ಕಾಲದ ಸುಳಿಗಾಳಿಯಲಿ
ಪ್ರೀತಿಸುವ ಬಾ ನಲ್ಲೆ......ಭೋರ್ಗರೆವ ಕಡಲಾಗಿ
ಅಲೆ ಅಲೆಗಳ ಕಲರವದಂತೆ
ಬಯಲು ಒಡಲಿನ ಬಿಸಿಯಪ್ಪುಗೆಯೋ.........!
ಭಾವ ಬಂಧಿಯ ಸುಳಿ ಸೆಳೆತವೋ .........!
ನಿನ್ನೊಲವ ಸಖನಾಗಿ....... ನಲುಮೆಯ ಹಿತವಾಗಿ
ಜೀವದ ಗೆಳತಿಯಾಗಿ .......
ಜೀವನದ ಸಂಗಾತಿಯಾಗಿ........
ಬಾಳ ಪಯಣದ ಹಾದಿ
ಸುಖದ ಸೆಲೆಯಾಗಲಿ
ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ
Subscribe to:
Comments (Atom)







