ಅವಳಿಲ್ಲದ ಮನೆ
ಅಂಗಳದಾಗ ಲಗೋರಿ ಆಡತಿದ್ದ ನನ್ನ ಮಗ ಕಿಶೋರ ಎಡವಿ ಬಿದ್ದು ಮಣಕಾಲು ಮಂಡಿ ಕೆತಗೊಂಡು ಏಳಲಿಕ್ಕೆ ಒದ್ದಾಡತಿದ್ದಾಗ ಕಟ್ಟಿಮ್ಯಾಲ ಕೂತು ಅಕ್ಕಿ ಆರಸತಿದ್ದ ನನ್ನ ಅರ್ಧಾಂಗಿ ಸುಮಂಗಲಾ ಮರವನ್ನು ಕೆಳಗಿಟ್ಟು ಕೂತಲ್ಲೇ ಒದರಿದಳು ಲೇ, ಮಂಗ್ಯಾ, ನೆಟ್ಟಗ ಆಟಾ ಆಡೋದು ಗೊತ್ತಿಲ್ಲಾ ಹುಚ್ಚು ಪ್ಯಾಲಿ ! ಅಂದಾಕೀನ ಬಿದ್ದ ಮಗನ್ನ ಎಬ್ಬಸಲಿಕ್ಕೆ ಓಡಿದಳು. ಕಾದಂಬರಿ ಓದಿಕೋತ ಅಡ್ಡಾಗಿದ್ದ ನಾನು ಎದ್ದುಕುಳಿತು ಕಿಟಕಿ ಆಚೆ ನೋಡ್ಕೋತ ನಿಂತೆ. ಬಿದ್ದ ಅವನನ್ನ ದರದರಾ ಎಳಕೊಂಡು ಬಚ್ಚಲುಮನಿಗೆ ಹೋದಾಕೀನ ಅವನ ಕಾಲ ಗಾಯಕ್ಕೆ ನೀರ ಸುರದು, ಒರಸಿ ಮ್ಯಾಲಷ್ಟು ಪಾಂಡ್ಸ್ ಪೌಡರ್ ಮೆತ್ತಿದ್ದಳು. ಪರೀಕ್ಷಾ ಹತ್ರ ಬಂದಾವು; ಓದಿಲ್ಲಾ ಬರೀ ಇಲ್ಲ, ಬರೇ ಆಟಾ ಆಡ್ಕೋತ ಬಿದ್ದಿರಬ್ಯಾಡ ಅಂತ ಹೇಳೀಲ್ಲೇನು ನಿನಗ? ಅಂತ ಗದರತಿದ್ದಳು. ಗಾಯದ ಮ್ಯಾಲ ಬರಿ ಎಳದಂಗಾಗಿ ಸಣ್ಣಮಾರಿ ಮಾಡಿ ಅಳಕೋತ ನಿಂತ. ಲೇ, ಏನೇ ಅದು? ಯಾಕ ಅವನ ಗದರತಿ? ಆಟಾ ಆಡೋ ಮುಂದ ಇದೆಲ್ಲಾ ಇದ್ದದ್ದ. ಹುಡುಗೂರು ಲಗೋರಿ ಆಡೋದ ಬಿಟ್ಟು ನಾನು ನೀನು ಆಡಲಿಕ್ಕೆ ಆಗತದೇನು? ಹೋಗ್ಲಿ ಬಿಡ ಅಂದೆ. ರೀ ಮಾರಾಯ್ರ ನಿಮ್ಮ ಮಗನ್ನ ನೀವ ಸಂಭಾಳಸ್ರಿ. ನನಗಿನ್ನ ಆಗಂಗಿಲ್ಲ ನೋಡ್ರಿ ಮತ್ತ ಒಂದರ ದಿನಾ ನೆಟ್ಟಗೆ ಕೂತು ಓದ್ಯಾನೇನು ಇವಾ? ಕೇಳಬ್ಯಾಡ್ರಿ? ನಿಮ್ದ ಅಚ್ಛಾಬಾಳ ಆಗೇದ ಇವನ ಮ್ಯಾಲೆ. ವಹಿಸಿಕೊಂಡು ಬಂದ ಬಿಡ್ತಿರಲ್ಲ! ಇವಾ ಏನರ ಎಡವಟ್ಟಾದ್ರ ನನ್ನ ಜವಾಬ್ದಾರಿ ಅಲ್ಲ ನೋಡ್ರಿ ಮತ್ತ! ಅಂದಾಕೀನ ದುಮಗುಡಕೋತ ಅಡಗಿ ಮನಿಕಡಿ ಓಡಿದ್ಲು. ಈ ಗದ್ದಲದಾಗ ಒಲಿ ಮ್ಯಾಲ ಇಟ್ಟ ಹಾಲು ಉಕ್ಕಿ ಅರ್ಧಕ್ಕರ್ಧ ಪಾತೇಲಿ ಖಾಲಿ ಆಗಿತ್ತು. ನನ್ನ ಹೊಟ್ಟಿ ಉರಸಲಿಕ್ಕೆ ಹುಟ್ಯಾನೀವಾ ಗೊಣಗಿದ್ದು ಕೇಳಿ ಹೋಗ್ಲಿ ಬಿಡ, ಉಳದ ಹಾಲಿನ್ಯಾಗ ಚಲೊತ್ನಂಗ ಮಸಾಲಾ ಚಾ ಮಾಡು ಅಂತ ಅಲವತ್ತಗೊಂಡೆ. ನಿಮಗಂತೂ ಹೊತ್ತಿಲ್ಲ ಗೊತ್ತಿಲ್ಲ, ಸೂಟಿ ಯಾಕರ ಬರ್ತದೋ? ಹೋದಾಗ ಬಂದಾಗ ಚಾ,ಚಾ ಅಂತ ಬಡಕೊಳ್ಳಿಕತ್ತಿದ್ರ, ಉಳಿದ ಕೆಲ್ಸಾ ಅಡಗಿ ಯಾರ ಮಾಡ್ತಾರ್ರಿ? ಅಂದ್ಲು. ಲೇ, ಸುಮ್ಮಿ, ನಿನ್ನ ಕೈಯ್ಯಾಗಿನ ಚಾ, ಅದೇನ ಹೇಳ್ಲಿ, ಅಮೃತ ಕುಡದಂಗ ಇರ್‍ತದ ನೋಡು, ಮನಿ ಕೆಲ್ಸಾ ಬಗ್ಸಿ ಎಲ್ಲಾ ಇದ್ದದ್ದ, ಆಮ್ಯಾಲ ಮಾಡಿದ್ರಾತು ಎಲ್ಲಿ ಹೋಗ್ತದ ಕೆಲ್ಸಾ ಅಂದೆ. ಇದಕ್ಕೇನು ಕಡಿಮಿ ಇಲ್ಲ, ಎಲ್ಲಿ ಬಿಡ್ತೀರಿ ನಿಮ್ಮ ಚಾಳಿ ಅನ್ನೋದಕ್ಕೂ ನಾನು ಹೂಂ! ಹೂಂ! ಅಂದವನೆ ಹಿಂದಿನಿಂದ ಹೋಗಿ ಅವಳ್ನ ಬಳಸಿನಿಂತೆ. ಸುಮ್ನ ಇರ್ರಿ, ಪಡಸಾಲ್ಯಾಗ ಅವಾ ಕೂತಾನ, ನಿಮಗಂತೂ ಚೂರೂ ನಯಾ ನಾಜೂಕ ಇಲ್ಲ, ಸಣ್ಣ ಹುಡುಗೂರು ಆಡ್ದಂಗ ಆಡ್ತಿರಿ ಅಂದಾಕೀನಾ ಬಿಡಿಸ್ಕೊಳ್ಳಿಕ್ಕೆ ಒದ್ದಾಡತಿದ್ಲು, ಆದರೆ ಕೊಸರಾಟ ಹೆಚ್ಚಾದಂಗ ನಾನೂ ಪಟ್ಟ ಬಿಗೀ ಮಾಡ್ಲಿಕತ್ತೆ. ಇತ್ಲಾಗ ಬಿಡಿಸ್ಕೊಳಿಕ್ಕೂ ಆಗವಲ್ದು ಅತ್ಲಾಗ ಒದರಿಕೊಂಡೇನಂದ್ರೂ ಇಲ್ಲ. ಸೋತ ಮಾರಿ ಮಾಡಿ ವಯ್ಯಾರ ಮಾಡ್ಕೋತ ಹಿಂದ ತಿರಗಿದ್ಲು. ಅದಕ್ಕ ಕಾಯ್ತಿದ್ದ ನಾನು ಆಕಿಗೊಂದು ಮುತ್ತು ಕೊಟ್ಟಬಿಟ್ಟೆ. ಗೆದ್ದ ಸಂಭ್ರಮದಾಗ ಪಟ್ಟುಸಡಲು ಮಾಡ್ಡೆ. ಹುಲಿ ಕೈಯ್ಯಾಗೆ ಪಾರಾದ ಜಿಂಕೆ ಹಾಂಗ ಹಾರಿದಕೀನ ಸಕ್ರಿಡಬ್ಬಿ ತೊಗೊಂಡು ಕುದಿಲೀಕತ್ತಿದ್ದ ನೀರಿಗೆ ೨ ಚಮಚಾ ಸಕ್ರಿ ಸುರದ್ಲು. ಲೇ, ಸುಮ್ಮಿ, ಚಾ ಕುಡುದು ಹೀಂಗ ಒಂದ ರೌಂಡ ಪ್ಯಾಟಿಕಡೆ ಹೋಗಿ ಬರೋಣ ನಡಿ.. ನೀ ಹೆಂಗ್ಯೂ ಮುಂದಿನ ವಾರ ತವರಮನಿಗೆ ಹೋಗೋ ಪ್ಲಾನ ಇಟ್ಟಿಯಲ್ಲ. ಅಂದೆ. ಪ್ಯಾಟೀಗೆ ಕರ್‍ಕೊಂಡ ಹೋಗಿ ಏನು ಮಾಡೋರಿದ್ದೀರಿ? ನನಗೇನು ನೀವು ಸೀರಿ ಕೊಡ್ಸೋದು ಬೇಕಾಗಿಲ್ಲ. ಅತ್ತೂಕರದೂ ಔತಣಾ ಕೊಡ್ಸಿಕೊಳ್ಳಕೀನ ಅಲ್ಲನಾ. ಅಂದ್ಲು. ನನ್ನ ಮನಸಿನ್ಯಾಗ ಅಬಾಬಾಬಾಬಾ! ಈ ಹೆಂಗ್ಸೂರ ಭಂಡ ಬುದ್ದಿಗೇ ಮೆಚ್ಕೋಬೇಕು. ಏನ ಚಾಲಕತನ, ತಮಗ ಏನು ಬೇಕಾಗತದ ಅಂತ ಎಷ್ಟು ಚಂದ ಹೇಳ್ತಾರ, ಲೇ ನಿನಗ ಸೀರಿ ಕೋಡಸ್ದ ಇನ್ನ್ಯಾರ್‍ಗೆ ನಾ ಸೀರಿ ಕೊಡಸ್ಲಿ. ನನ್ನ ಮನಸಿನ್ಯಾಗ ಇದ್ದದ್ದನ್ನ ಎಷ್ಟು ಕರೆಕ್ಟ ಹೇಳ್ದಿ ನೋಡು ಅಂದೆ ನೂರು ಕ್ಯಾಂಡಲ್ ಬಲ್ಪ ಹತ್ತಿಂದಗ ಪಳಾಪಳಾ ಹೊಳಿಯೊ ಮಾರಿ ನೋಡಿ ನನ್ಗೂ ಒಳಒಳಗ ಖುಷಿ ಆತು. ಲಗೂನ ತಯಾರಾಗಿ ಬರ್‍ತೇನಿ, ಅಷ್ಟರೊಳ್ಗ ನೀವು ಚಾ ಕುಡುದ ಮುಗುಸ್ರಿ ಅಂದಾಕೀನ ತಯಾರಾಗಲಿಕ್ಕ ರೂಂ ಕಡೆ ಹೊರಟ್ಲು. ಪಡಸಾಲಿಗೆ ಚಾ ಕಪ್ಪು ಹಿಡಕೊಂಡು ಮಗನ ಹತ್ರ ಕೂತೆ. ಚಲೊತ್ನಂಗ ಓದಪಾ ಮಗನ, ಇಲ್ಲಾಂದ್ರ, ನಿಮ್ಮಮ್ಮ ಇದ್ದಾಳಲ್ಲ! ನನ್ನ ನಿನ್ನ ಇಬ್ರೂನು ಹುರುದು ಮುಕ್ಕುತಾಳ ನೋಡ ಮತ್ತ.. ಗೊತ್ತಾತಿಲ್ಲೊ? ಅಂತ ಕಣ್ಣ ಹೊಡದು ಅವನ ಬೆನ್ನ ಚಪ್ಪರಿಸಿದೆ. ಹೂಂ! ಡ್ಯಾಡಿ ಅಂತ ತಲಿ ಅಳ್ಳಾಡಿಸ್ದಾ. ನೋಡು ನಾವ ಇಲ್ಲೇ ಅರ್ಧಾ ತಾಸು ಪ್ಯಾಟಿಕಡೆ ಹೋಗಿ ಬರ್‍ತೇವಿ. ಬರೋಬ್ಬರಿ ಬಾಗಲಾ ಹಾಕ್ಕೊಂಡು ಓದ್ಕೋತ ಕೂಡು, ಗೊತ್ತಾತಿಲ್ಲೊ? ಅಂದೆ. ಅವಾ ಹೂಂಗುಟ್ಟಿ ಒಪ್ಪಿಗೆ ಕೊಟ್ಟ.
ನನ್ನ ಹೆಂಡ್ತಿ ಜತಿ ಪ್ಯಾಟಿಗೆ ಹೋಗೋದಂದ್ರ ಒಂದ ದೊಡ್ಡ ಯುದ್ಧಕ್ಕೆ ಹೋದಷ್ಟ ತಯಾರಿ ಬೇಕಾಕ್ತದ. ಒಂದೊಂದು ಅಂಗಡಿಗೆ ಹೋದಾಗೂ ಅವಳ ಜಿಕೇರಿ ಶಾಣಾತನ ನೋಡಬೇಕು! ಖರೇನ ವ್ಯಾಪಾರಾ ಮಾಡಾವಾಗಿದ್ರ ಬಿಟ್ಟ ಓಡೇ ಹೋಗ್ತಾನ! ಕಾಯಿಪಲ್ಯೆ ತರಲಿಕ್ಕೆ ಹೋದ್ರಂತೂ ಮುಗದಹೋತು. ನಾನು ನಾಕ ಮಾರ ದೂರನ ನಿಂತಿರ್ತೆನೆ. ಇವಳ ಜಿಕೇರಿಗೆ ಅವರು ಒಪ್ಪಿ ಕೊಟ್ರ ಸರಿ, ಇಲ್ಲಾಂದ್ರ ದುಮಗುಡಕೋತ ಇನ್ನೊಂದು ಅಂಗಡಿ. ಅಲ್ಲೂ ಅದ ಕತಿ ಹಿಂಗ ಒಂದ ದಿನಾ ಏನಾತಂದ್ರ ನಡದ ನಡದ ಅಕೀನೂ ಸಾಕಾಗಿದ್ಲು, ನಿಂತ ನಿಂತ ನಾನು ಸಾಕಾಗಿದ್ದೆ. ಕಾಯಪಲ್ಲ್ಯಾ ಚೀಲಾ ನನ್ನ ಕೈಯಾಗ ಕೊಟ್ಟಾಕೀನ ಎಳನೀರು ಕುಡಿಲಿಕ್ಕೆ ಹೊಂಟ್ಲು. ಅಲ್ಲೂಅದ ಜಿಕೇರಿ, ಎಲ್ಲಾಕಡೆ ದೂರ ದೂರ ನಿಲ್ಲತಿದ್ದ ನಾನು ಆಗ ಅಕಿ ಹತ್ರ ಹೋಗಿ ಲೇ, ಇವನ ಹತ್ರ ಜಿಕೇರಿ ಪಕೇರಿ ಮಾಡ್ಕೋತ ನಿಲ್ಲ ಬ್ಯಾಡ, ಕೇಳಿದಷ್ಟು ಕೊಟ್ಟು ಎಳನೀರು ಕುಡುದು ಹೋಗಣ ನಡಿ. ಅವಾ ಸಿಟ್ಟಿಗೆದ್ದು ಎಳನೀರು ಕೊಚ್ಚೋದ ಬಿಟ್ಟು ನಿನ್ನ ತಲಿ ಎಲ್ಲಾರ ಕೊಚ್ಚಿಗಿಚ್ಚಾನ ಅಂದೆ ನಾ ಹೇಳಿದ್ದು ಎಷ್ಟರ ಮಟ್ಟಿಗೆ ಅಕೀಗೆ ಅರ್ಥ ಆತೋಬಿಡ್ತೋ ನನಗಂತೂ ತಿಳಿಲಿಲ್ಲ. ಇವತ್ತಿನ ಪ್ಯಾಟಿ ಸುತ್ತಾಟ ಮುಂಚಿನ ಅನುಭವಕ್ಕಿಂತ ವಿಭಿನ್ನವಾಗೇನು ಇರಲಿಲ್ಲ. ನಾಲ್ಕಾರು ಸೀರಿ ಅಂಗಡಿ ಅಡ್ಡಾಡಿ ಒಂದು ಸಿಲ್ಕು ಸೀರಿ ತೊಗೊಳ್ಳೊ ಅಷ್ಟೊತ್ತಿಗೆ ನನಗಂತೂ ಸಾಕ ಸಾಕಾಗಿ ಹೋಗಿತ್ತು. ನಮ್ಮ ನಿಶ್ಚಿತಾರ್ಥವಾದ ಹೊಸದರಲ್ಲಿ ಆಗೊಮ್ಮೆ ಈಗೊಮ್ಮೆ ರಜಾಹಾಕಿ ಅವಳನ್ನ ಭೆಟ್ಟಿ ಮಾಡಲಿಕ್ಕೆ ಅವರ ಮನಿಗೆ ಹೋದ್ರ ನಮ್ಮ ಅತ್ತಿಮಾವನ ಸಂಭ್ರಮಾನ ನೋಡಬೇಕು. ಕೈಕಟ್ಟಿ ನಿಂತಗೊಂಡು ಉಪಚಾರ ಮಾಡೋರು, ಕೂತಕಡೆ ಅವಲಕ್ಕಿ, ಚಾ ಸರಬರಾಜು ನಡೆಯೋದು. ಉಪಚಾರ ಮುಗದ ಮ್ಯಾಲ ನೀವಿಬ್ರೂ ಮಾತಾಡ್ಕೋರ್ರಿ, ನನಗ ಅಡಗಿ ಮಾನ್ಯಾಗ ಕೆಲಸ ಅದ ಅಂತ ಅತ್ತಿ ಜಗಾ ಖಾಲಿ ಮಾಡಿದ್ರ, ಮಾವನವರು ಅಳಿಯಂದ್ರು ಒಬ್ಬ ಇದ್ದಾರ, ಬಂದ ಮಾತಾಡ್ಕೋತಾ ಕೂಡು, ನಾ ಸ್ವಲ್ಪ ಲೈಬ್ರರಿ ಕಡೆ ಹೋಗಿ ಬರ್‍ತೇನೆ. ಅಂತ ಸೂಕ್ಷ್ಮವಾಗಿ ನಮಗೆ ಏಕಾಂತ ಸೃಷ್ಠಿ ಮಾಡುತ್ತಿದ್ದರು. ಕಳ್ಳನೋಟದ ಪರದಾಟ ಕೈ ಹಿಡಿದು ಎಳೆದು ಹತ್ತರ ಸೆಳೆದುಕೊಳ್ಳವರೆಗೂ ನಡೆಯೋದು ಹುಸಿ ಮುನಿಸು ತೋರಿಸ್ತ ನನ್ನ ಹಸಿವಿ ಜಾಸ್ತಿ ಮಾಡತಿದ್ಲು ಸ್ವಲ್ಪ ತಡಕೋರಿ ಸದ್ಯ ನಿಮಗ ಉಪವಾಸನ ಗತಿ ಅಂತ ಬಿಡಿಸಿಕೊಳ್ಳಲ್ಲಿಕ್ಕೆ ಒದ್ದಾಡತಿದ್ಲು. ಮನಿವಳಗ ಕುತಗೊಂಡು ಎಷ್ಟೂ ಅಂತ ಪಿಸಗುಟ್ಟಗೋತ ಕುತಗೋಳಿಕ್ಕೆ ಆಗ್ತದ, ಅದಕ್ಕೆ ನಾನು ಪಾರ್ಕಕಡೆಗೆ ಹೋಗಿ ಸುತ್ತಾಡಿಕೊಂಡು ಬರೋಣಾ ನಡಿ ಅಂತಿದ್ದೆ. ಅಲ್ಲಿ ಹೋದ ಮ್ಯಾಲ ಮಾತಾಡಲಿಕ್ಕೆ ಏನಾರ ವಿಷಯ ಬೇಕು, ಟೈಂಪಾಸ ಮಾಡಲಿಕ್ಕೆ ಡಜನ್‌ಗಟ್ಟಲೆ ಕಿತ್ತಳಿ ಹಣ್ಣುತೊಗೊಂಡು ತಿನ್ನಕೋತ ಕುತಗೋತಿದ್ವಿ. ನೋಡಲ್ಲಿ, ಪಾರಿವಾಳ ಎಷ್ಟು ಚಂದ ಗಿಡದ ಕೊಂಬಿ ಮ್ಯಾಲ ಕೂತಾವು ಅಂತ ಹೇಳಿ, ಆಕಿ ಮ್ಯಾಲ ನೋಡಿದ್ದ ತಡ ಕಿತ್ತಳಿ ಹಣ್ಣಿನ ಸಿಪ್ಪಿ ಆಕಿ ಕಣ್ಣ ಮುಂದ ಹಿಡಿದು ಒತ್ತಿ ಕಣ್ಣೊಳಗ ಹೋದ ಸಿಪ್ಪಿಯ ರಸ ಉರಿಲಿಕ್ಕೆ ಶುರುವಾಗಿ ಕಣ್ಣ ತಿಕ್ಕೋತ ನಿಂತಾಗ, ಬಾಳ ಉರಿಲಿಕ್ಕತ್ತದ ಏನು ಅಂತ ಸಮಾಧಾನ ಮಾಡೋರಂಗ, ಎಲ್ಲಿ, ಬಾ ಇಲ್ಲಿ. ಗಾಳಿ ಊಬಿದರ ಕಡಿಮಿ ಆಗ್ತದ ಅಂತ ಅಕಿನ್ನ ಹತ್ರ ಎಳಕೊಂಡು ಉಫ್,ಉಫ್ ಅಂತ ಗಾಳಿ ಊದೋ ನಾಟಕಾ ಮಾಡತಿದ್ದೆ. ಊದೋ ನೆಪದಾಗ ತುಟಿಗೆ ತುಟಿ ಹತ್ರ ಆಗಿ ಎದಿಬಡಿತ ಇಬ್ಬರಿಗೂ ಜೋರಾಗ್ತಿತ್ತು. ಇಬ್ಬರಿಗೂ ಇದು ನಾಟಕಾ ಅಂತ ಗೊತ್ತಿದ್ದರೂ ಗೊತ್ತಿಲ್ಲದಂತ ನಟಸತಿದ್ದಿವಿ. ಅಕಿನೂ ಒಳಒಳಗೆ ಖುಷಿ ಪಡತಿದ್ಲು. ಈ ರೀತಿ ಚಲ್ಲಾಟದಾಗ ಟೈಂ ಹೋದದ್ದು ಗೊತ್ತಾಗತಿದ್ದಿಲ್ಲ. ಮನಿವಳಗ ಕಾಯ್ತಿರ್‍ತಾರೆ, ಹೋಗೋಣ ನಡೀರಿ ಅಂದಾಗ ನನಗ ಭೂಮಿಮ್ಯಾಲ ಇದ್ದದ್ದು ಅರಿವಾಗಿತ್ತು.ಈ ಕಿತ್ತಲಿಹಣ್ಣು ತಿನ್ನೊ ಸಡಗರ ಮದಿವಿ ಆಗೋತನಗ ನಡದ ಬಿಟ್ಟಿತ್ತು.
ಮಗನ ಪರೀಕ್ಷಾ ಮುಗುದು ನನ್ನಾಕೆ ತವರಿಗೆ ಹೊರಟು ನಿಂತಾಗ ನಾನು ನಾಲ್ಕುದಿನ ಇಕಿ ಜತಿಗೆ ಹೋಗಿ ಬರಬಹುದಾಗಿತ್ತು, ಅಂತ ಯೋಚಿಸಿದ್ರೂ ಕರೆಯದೆ ಹೋಗೋದು ಹ್ಯಾಂಗ? ನಾ ಬ್ಯಾರೆ ಮೊದ್ಲ ರಜಾ ಸಿಗಂಗಿಲ್ಲ, ಬರಲಿಕ್ಕೆ ಸಾಧ್ಯ ಇಲ್ಲ. ಅಂತೆಲ್ಲ ಡೈಲಾಗ್ ಬಿಟ್ಟಿದ್ದೆ. ರಜಾ ತೊಗೋಳೋದು ಏನೂ ಅಂತಾ ಕಷ್ಟ ಇದ್ದಿದ್ದಿಲ್ಲ. ಈಗ ಏಕಾಏಕಿ ಬರ್‍ತೀನಿ ಅಂತ ಹೇಳಲಿಕ್ಕೆ ಅಹಂ ಅಡ್ಡ ಬಂದು ಸುಮ್ಮನಾದೆ.
ಹೊರಡೊ ದಿನ ಇಕಿ ಮ್ಯಾನೇಜಮೆಂಟ್ ಲಕ್ಚರ್ ಬ್ಯಾರೇ ಕೇಳಬೇಕಾತು. ಅಕ್ಕಿ ಡಬ್ಬಿ ಇಲ್ಲಿ ಇಟ್ಟೇನಿ, ಕುಕ್ಕರ ಅಲ್ಲಿ ಇಟ್ಟೇನಿ, ಹಾಲು ಕಾಸಿ ಆರಿದ ಮ್ಯಾಲ ಫ್ರಿಜ್‌ನ್ಯಾಗ ಇಡ್ರಿ. ಕೆಲಸದಾಗಿ ಬಂದಾಗ ಮನಿವಳಗ ಲಕ್ಷ ಇರ್‍ಲಿ, ಇತ್ಯಾದಿ, ಇತ್ಯಾದಿ. ಕೋಲೆ ಬಸವನಂಗ ಗೋಣು ಅಳ್ಳಾಡಿಸಿ ಇಬ್ರನ್ನೂ ಬಸ್‌ನ್ಯಾಗ ಕೂಡ್ಸಿ ಟಾಟಾ ಮಾಡಿ ಮನಿಗೆ ಬಂದೆ. ಇನ್ನು ಹದಿನೈದು ದಿನದ ನನ್ನ ಬಲವಂತದ ಬ್ರಹ್ಮಚರ್ಯ ವೃತ ಹ್ಯಾಂಗ ಆಚರಿಸೋದು ಅಂತ ಯೋಚನಾ ಮಾಡಿ, ಓದಲಿಕ್ಕೆ ಬಾಕಿ ಇರೋ ಕತಿ ಪುಸ್ತಕಾ, ಕಾದಂಬರಿಗಳನ್ನು ಒಂದಕಡೆ ತಗದಿಟ್ಟೆ. ಅಡಗಿ ಮನಿಗೆ ಹೋಗಿ, ಚಾ ಮಾಡೋ ಸಲುವಾಗಿ ನೀರು ಕುದಿಲಿಕ್ಕೆ ಇಟ್ಟೆ. ಮನಿವಳಗ ಗಲಗಲ ಸೌಂಡ ಇಲ್ಲ. ಮಗನ ಉಲಕೋಚಿತನಕ್ಕೆ ಆವಾಗಾವಾಗ ಒದರಿಕೊಳ್ಳೊ ನನ್ನಾಕೆಯ ಕಲರವವಿಲ್ಲ. ಎಲ್ಲವೂ ಖಾಲಿ ಖಾಲಿಯಾದಂತೆನಿಸಿ ಅವಳಿಲ್ಲದ ಮನೆ ಬಿಕೋ ಅನ್ನಸಲಿಕ್ಕೆ ಶುರುವಾಯಿತು. ಊರು ಮುಟ್ಟಿದ ಮ್ಯಾಲ ಫೋನ್ ಮಾಡ್ತೀನಿ ಅಂತ ಹೇಳಿದ್ಲು, ಇನ್ನೂ ಫೋನ್ ಬರಲಿಲ್ಲ ಅಂತ ಯೋಚಿಸಲಿಕ್ಕತ್ತಿದೆ. ಕೈಯಲ್ಲಿ ಹಿಡಿದ ಕತಿ ಪುಸ್ತಕ ಮನಸು ಗಲಿಬಿಲಿಗೊಂಡು ಓದೋದು ಸಾಗಲೇ ಇಲ್ಲ. ಒಂದು ಜೀವ ಇನ್ನೊಂದು ಜೀವಾನ ಹಚಗೊಂಡ್ರ ಬಿಟ್ರ ಇರೋದು ಎಷ್ಟು ತ್ರಾಸು! ಇದ್ದದ್ದರಾಗ ಕಾಲ ಚಾಚಿ ಕನಸು ಕಾಣೊ ನಮಗ ಇಂಥಾ ಬಂಧನಾ..ನ ಇರಬೇಕು? ನನಸು ಮಾಡೊ ಛಲಾ ಹುಟ್ಟುಸ್ತಾವು ಎಲ್ಲಾ ನೋವು ದುಃಖಾನು ಮರಸೊ ಶಕ್ತಿ ಪ್ರೀತಿಗೆ ಮಾತ್ರ ಇರ್‍ತದ. ಅದಿಲ್ಲದ ಬದುಕು ನಿರರ್ಥಕ ಅಂತಾನ ಹೇಳ್ಬೇಕು.
ಊರು ತಲುಪಿ ಮನಿವಳಗ ಆರಾಮಾಗಿ ಎಲ್ಲಾರ ಹತ್ರ ಹರಟೆ ಹೋಡಕೋತ ಕೂತೇನಿ ಅಂತ ಆ ಕಡಿಯಿಂದ ಇಕಿ ಫೋನ್ ಬಂದ ಮ್ಯಾಲ ಸಮಾಧಾನ ಆತು. ಪ್ರೀತಿಯ ಸೆಳೆತ ಅಂದ್ರ ಇದ. ಪ್ರೀತಿಯ ಜಲ ನಿರಂತರವಾಗಿ ಹರಿದಾಗ ಮಾತ್ರ ಬಾಳಲ್ಲಿ ಹಸಿರು ಕಂಗೋಳಿಸೋದು. ನಾಲ್ಕದಿನ ಇದ್ದು ಬಂದ ಬಿಡು ಹದಿನೈದು ದಿನಗಟ್ಲೆ ಇರಲಿಕ್ಕ ಹೋಗಬ್ಯಾಡ, ಗೊತ್ತಾತಿಲ್ಲೊ ಅಂದೆ. ಯಾಕ್ರಿ, ನೆಟ್ಟಗಿದ್ದೀರೋ ಇಲ್ಲೊ, ಆರಾಮ ಹದಿನೈದು ದಿನಾ ಇದ್ದ ಬಾ ಅಂದೋರು ನೀವ, ಈಗ ನೋಡಿದ್ರ ನಾಲ್ಕ ದಿನಾ ಅಂತಿರಲ್ಲ. ಕೈ ಬಾಯಿ ಸುಟಗೊಂಡು ಅಡಿಗೆ ಮಾಡಿ ಊಟಮಾಡ್ರಿ ನಾ ಅಂದ್ರ ಏನು ಅಂತ ಗೊತ್ತಾಗ್ತದ ನಿಮಗ. ನಾ ಹದಿನೈದು ದಿನಬಿಟ್ಟ ಬರಾಕೀ, ಅಪರೂಪಕ್ಕೆ ಬಂದೇನಿ, ನಾಳೆ ಮಾತಾಡ್ತೇನಿ ಅಂದಾಕಿನ ಫೋನ್ ಕಟ್ ಮಾಡಿದ್ಲು, ಹ್ಯಾಂಗ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಪೆಚ್ಚಾದೆ. ಅಡಿಗೆಮನೆಯ ಬುಟ್ಟಿಯಲ್ಲಿದ್ದ ಕಿತ್ತಳೆಹಣ್ಣಿನಲ್ಲಿ ನನ್ನವಳ ತುಂಟತನದ ಮುಖ ಮೂಡಿ ಮಾಯವಾದಂತಾಯಿತು.
-- ಮಹೇಶ್ ಶ್ರೀ ದೇಶಪಾಂಡೆ
(ತುಷಾರಪ್ರಿಯ)
(ದಿನಾಂಕ ೧೫.೯.೨೦೧೩ ರಂದು ಕರ್ಮವೀರವಾರಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.)






