ಆಧುನಿಕತೆ-ಆ ದಿನಗಳು
ಆಧುನಿಕತೆಯಲ್ಲಿ ನಾವೆಲ್ಲ ಮುಳುಗಿ ಹೋಗಿದ್ದೇವೆ, ಕೊಚ್ಚಿ ಹೋಗಿದ್ದೇವೆ ಅಂತ ಅನ್ನಿಸುತ್ತಿಲ್ಲವೆ! ಪರೀಕ್ಷೆಯ ಫಲಿತಾಂಶಗಳು ಪೇಪರ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಆ ಕಾಲದ ಕುತೂಹಲ ಖುಷಿಯನ್ನು ಇಂದು ನಾವು ಅನುಭವಿಸುತ್ತಿಲ್ಲ. ಬೆಳಿಗ್ಗೆ ಬರುವ ಪೇಪರಿಗೆ ರಾತ್ರಿಯೆಲ್ಲ ನಿದ್ದೆಗೆಟ್ಟು, ಪೇಪರ ಹಂಚುವ ಹುಡುಗನ ಬರುವಿಗಾಗಿ ಕಾಯ್ದು ಫಲಿತಾಂಶ ನೋಡುವ ತವಕ ಇಂದು ಇಲ್ಲವೇ ಇಲ್ಲ! ತೋರುಬೆರಳ ತುದಿಯಲ್ಲಿ ಜಗತ್ತನ್ನೆ ನೋಡುವ ಟ್ಯಾಬ್‌ಗಳು, ಟಚ್ ಸ್ಕ್ರೀನ್ ಫೋನ್‌ಗಳು, ಸ್ಮಾರ್ಟ್ ಫೋನುಗಳು ಆ ಖುಷಿಯನ್ನೆಲ್ಲ ಕಸಿದುಕೊಂಡುಬಿಟ್ಟಿವೆ. ಇಂದಿನ ಪೀಳಿಗೆಗೆ ಕುತೂಹಲ, ತವಕ ಎಂಬ ಶಬ್ದಗಳ ಅರ್ಥವೂ ಗೊತ್ತಿಲ್ಲ! ಅನುಭವಿಸಿ ತಿಳಿದುಕೊಳ್ಳುವ ಅವಕಾಶವೂ ಇಲ್ಲ! ಅದೇ ರೀತಿ ಮದುವೆ ಗುರ್ತಾಗಿರುವ ಹುಡುಗ ಹುಡುಗಿಯರು ಪತ್ರದ ನಿರೀಕ್ಷೆಯಲ್ಲಿ ಪೋಸ್ಟ್‌ಮ್ಯಾನ್ ಬರುವ ಹೊತ್ತಿಗೆ ಸರಿಯಾಗಿ ಗೇಟ ಮುಂದೆ ಬಿಸಿಲಲ್ಲಿ ಕಾಯುತ್ತ ನಿಲ್ಲುವ ಕಾಲವೊಂದಿತ್ತು! ಈಗೇನಿದ್ದರು ವಾಟ್ಸಫ್, ಈ-ಮೇಲ್, ಫೇಸ್‌ಬುಕ್, ಚಾಟಿಂಗ್ ಅಂತ ಧಿಡೀರ ದೋಸೆ ಮುಗುಚಿದ ಹಾಗೆ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಎಲ್ಲವೂ ಖತಂ! ಆ ಕಾಲದಲ್ಲಿ ಪತ್ರ ಹುಡುಕಿಕೊಂಡು ಫೋಸ್ಟಾಫೀಸಿಗೆ ಬೆಳಗಾನ್ ಬೆಳಗ್ಗೆ ಎದ್ದು ಪೋಸ್ಟ್‌ಮ್ಯಾನ್ ಮುಖ ನೋಡುತ್ತ ಕುಳಿತು ಬಿಡುತ್ತಿದ್ದ ಮಜಾ ಈಗೆಲ್ಲಿದೆ! ನಮಗೇನಾದರೂ ಪತ್ರ ಬಂದಿದ್ದರೆ ಅವನ ಒಂದು ತುಂಟ ನಗೆಗೆ ನಮ್ಮ ಮೈ ರೋಮಾಂಚನಗೊಳ್ಳುತ್ತಿತ್ತು - ಖುಷಿಯನ್ನು ಹಂಚಿಕೊಂಡ ಧನ್ಯತಾಭಾವ ಇಬ್ಬರಲ್ಲೂ. ಈಗೇನಿದ್ದರೂ ನಿಮ್ಮ ಖುಷಿಯನ್ನು ನಿಮ್ಮ ಕೈಯಲ್ಲಿರುವ ಚಿಕ್ಕ ಮೂಕ ಪೆಟ್ಟಿಗೆಯೊಂದಿಗೆ ಹಂಚಿಕೊಳ್ಳಬೇಕು. ಏನೆಲ್ಲ ಬದಲಾವಣೆ ಅಲ್ಲವೆ!
ಹೊಸ ಬಟ್ಟೆಗಳನ್ನು ತೆಗೆದುಕೊಳ್ಳಬೇಕಾದರೆ ಯುಗಾದಿ, ದೀಪಾವಳಿ, ಗಣೇಶನ ಹಬ್ಬ ಅಂತ ಕಾಯಬೇಕಾಗಿತ್ತು. ಹಿರಿಯರು ಆಯ್ದ ಬಟ್ಟೆಗಳು, ಒಂದೇ ಥಾನಿನಲ್ಲಿ ಅಣ್ಣ ತಮ್ಮ, ಅಕ್ಕ ತಂಗಿಯರಿಗೆ ಹೊಲಿಸುತ್ತಿದ್ದರು. ಬೆಳೆಯುವ ಮಕ್ಕಳು ಅಂತ ಒಂದೆರಡು ಇಂಚು ಜಾಸ್ತಿಯೇ ಇಡಿಸಿ ಹೊಲಿಸುತ್ತಿದ್ದರು. ಧೊಗಲೆ ಧೊಗಲೆ ಅಂಗಿ, ಫ್ರಾಕುಗಳನ್ನು ತೊಟ್ಟು ಕುಣಿದಾಡುತ್ತಿದ್ದ ಆ ದಿನಗಳು ಮಾಯವಾಗಿ ಹೋಗಿವೆ. ಈಗೇನಿದ್ದರು ರೆಡಿಮೇಡ್ ಕಾಲ. ಜೇಬು ತುಂಬಾ ದುಡ್ಡು ಒಂದೆರಡು ಗಂಟೆಗಳ ಶಾಫಿಂಗ್‌ನಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಹಬ್ಬ ಹರಿದಿನಗಳಿಗಾಗಿ ಕಾಯುವ ಗೋಜು ಈಗಿಲ್ಲ. ಮನಸ್ಸಿಗೆ ಬಂದ ತಕ್ಷಣ ಎಲ್ಲವೂ ನೆರವೇರಿಬಿಡುವ ಕಾಲದಲ್ಲಿ ನಾವಿದ್ದೇವೆ. ಕಾಯ್ದು ಅನುಭವಿಸುವ ಸುಖದಲ್ಲಿರುವ ಮಜಾ ದಿಢೀರನೆ ಅಂದುಕೊಂಡಾಕ್ಷಣ ಅಂದುಕೊಂಡಿದ್ದೆಲ್ಲ ಸಿಗುವ ಈ ಕಾಲದಲ್ಲಿ ಎಲ್ಲವೂ ಸಪ್ಪೆ ಸಪ್ಪೆ!
ಏನಂತೀರಿ......................!?
-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ




