Thursday, 29 June 2017

ಪ್ರೀತಿ



ಪ್ರೀತಿ


ಪ್ರೀತಿ ಹೃದಯಾಂತರಾಳದ ಒಸಗೆ
ಪ್ರೀತಿಗೇಕೆ ಅನುಕಂಪದ ಛಾಪ
ಪ್ರೀತಿ ಮನಸುಗಳ ಸಲಿಗೆ
ಪ್ರೀತಿಗೇಕೆ ಮರುಕದ ಲೇಪ
ಪ್ರೀತಿ ಆತ್ಮಗಳ ಬೆಸುಗೆ
ಪ್ರೀತಿಗೇಕೆ ಭವ ಬಂಧನದ ಕೂಪ

-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Tuesday, 13 June 2017

ಮೂಕ



ಮೂಕ


ಮಾತು ಬಾರದೆ ಮೂಕನಾದೆ ನಾನು ಇಂದು
ನಿನ್ನ ಪ್ರೀತಿಯ ಆಳಕಂಡು
ನಾನಿಂದು ಅದರೊಳು ಮಿಂದು
ಆನಂದದಿ ತೇಲಾಡಿ ಎಂದೆಂದು
ಉಡುಗದಿರಲಿ ಪ್ರೀತಿ ಇನ್ನೆಂದು
ಬತ್ತದಿರಲಿ ಓಲುಮೆ ಎಂದೆಂದು
ಅನವರತ ಸಲುಹು ನನ್ನ ನಿನ್ನೆದೆಯ ಮಂದಿರದಿ
ಚ್ಯುತಿ ಬಾರದಿರಲಿ ಮಧುರ ಪ್ರೀತಿಗೆ ಇನ್ನೆಂದೂ

-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Wednesday, 31 May 2017

ಆಧುನಿಕತೆ-ಆ ದಿನಗಳು


ಆಧುನಿಕತೆ-ಆ ದಿನಗಳು


ಆಧುನಿಕತೆಯಲ್ಲಿ ನಾವೆಲ್ಲ ಮುಳುಗಿ ಹೋಗಿದ್ದೇವೆ, ಕೊಚ್ಚಿ ಹೋಗಿದ್ದೇವೆ ಅಂತ ಅನ್ನಿಸುತ್ತಿಲ್ಲವೆ!  ಪರೀಕ್ಷೆಯ ಫಲಿತಾಂಶಗಳು ಪೇಪರ್‌ನಲ್ಲಿ ಪ್ರಕಟಗೊಳ್ಳುತ್ತಿದ್ದ ಆ ಕಾಲದ ಕುತೂಹಲ ಖುಷಿಯನ್ನು ಇಂದು ನಾವು ಅನುಭವಿಸುತ್ತಿಲ್ಲ.  ಬೆಳಿಗ್ಗೆ ಬರುವ ಪೇಪರಿಗೆ ರಾತ್ರಿಯೆಲ್ಲ ನಿದ್ದೆಗೆಟ್ಟು, ಪೇಪರ ಹಂಚುವ ಹುಡುಗನ ಬರುವಿಗಾಗಿ ಕಾಯ್ದು ಫಲಿತಾಂಶ ನೋಡುವ ತವಕ ಇಂದು ಇಲ್ಲವೇ ಇಲ್ಲ!  ತೋರುಬೆರಳ ತುದಿಯಲ್ಲಿ ಜಗತ್ತನ್ನೆ ನೋಡುವ ಟ್ಯಾಬ್‌ಗಳು, ಟಚ್ ಸ್ಕ್ರೀನ್ ಫೋನ್‌ಗಳು, ಸ್ಮಾರ್ಟ್ ಫೋನುಗಳು ಆ ಖುಷಿಯನ್ನೆಲ್ಲ ಕಸಿದುಕೊಂಡುಬಿಟ್ಟಿವೆ.  ಇಂದಿನ ಪೀಳಿಗೆಗೆ ಕುತೂಹಲ, ತವಕ ಎಂಬ ಶಬ್ದಗಳ ಅರ್ಥವೂ ಗೊತ್ತಿಲ್ಲ!  ಅನುಭವಿಸಿ ತಿಳಿದುಕೊಳ್ಳುವ ಅವಕಾಶವೂ ಇಲ್ಲ!  ಅದೇ ರೀತಿ ಮದುವೆ ಗುರ್ತಾಗಿರುವ ಹುಡುಗ ಹುಡುಗಿಯರು ಪತ್ರದ ನಿರೀಕ್ಷೆಯಲ್ಲಿ ಪೋಸ್ಟ್‌ಮ್ಯಾನ್ ಬರುವ ಹೊತ್ತಿಗೆ ಸರಿಯಾಗಿ ಗೇಟ ಮುಂದೆ ಬಿಸಿಲಲ್ಲಿ ಕಾಯುತ್ತ ನಿಲ್ಲುವ ಕಾಲವೊಂದಿತ್ತು!  ಈಗೇನಿದ್ದರು ವಾಟ್ಸಫ್, ಈ-ಮೇಲ್, ಫೇಸ್‌ಬುಕ್, ಚಾಟಿಂಗ್ ಅಂತ ಧಿಡೀರ ದೋಸೆ ಮುಗುಚಿದ ಹಾಗೆ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಎಲ್ಲವೂ ಖತಂ!  ಆ ಕಾಲದಲ್ಲಿ ಪತ್ರ ಹುಡುಕಿಕೊಂಡು ಫೋಸ್ಟಾಫೀಸಿಗೆ ಬೆಳಗಾನ್ ಬೆಳಗ್ಗೆ ಎದ್ದು ಪೋಸ್ಟ್‌ಮ್ಯಾನ್ ಮುಖ ನೋಡುತ್ತ ಕುಳಿತು ಬಿಡುತ್ತಿದ್ದ ಮಜಾ ಈಗೆಲ್ಲಿದೆ!  ನಮಗೇನಾದರೂ ಪತ್ರ ಬಂದಿದ್ದರೆ ಅವನ ಒಂದು ತುಂಟ ನಗೆಗೆ ನಮ್ಮ ಮೈ ರೋಮಾಂಚನಗೊಳ್ಳುತ್ತಿತ್ತು - ಖುಷಿಯನ್ನು ಹಂಚಿಕೊಂಡ ಧನ್ಯತಾಭಾವ ಇಬ್ಬರಲ್ಲೂ. ಈಗೇನಿದ್ದರೂ ನಿಮ್ಮ ಖುಷಿಯನ್ನು ನಿಮ್ಮ ಕೈಯಲ್ಲಿರುವ ಚಿಕ್ಕ ಮೂಕ ಪೆಟ್ಟಿಗೆಯೊಂದಿಗೆ ಹಂಚಿಕೊಳ್ಳಬೇಕು.  ಏನೆಲ್ಲ ಬದಲಾವಣೆ ಅಲ್ಲವೆ!

ಹೊಸ ಬಟ್ಟೆಗಳನ್ನು ತೆಗೆದುಕೊಳ್ಳಬೇಕಾದರೆ ಯುಗಾದಿ, ದೀಪಾವಳಿ, ಗಣೇಶನ ಹಬ್ಬ ಅಂತ ಕಾಯಬೇಕಾಗಿತ್ತು.  ಹಿರಿಯರು ಆಯ್ದ ಬಟ್ಟೆಗಳು, ಒಂದೇ ಥಾನಿನಲ್ಲಿ ಅಣ್ಣ ತಮ್ಮ, ಅಕ್ಕ ತಂಗಿಯರಿಗೆ ಹೊಲಿಸುತ್ತಿದ್ದರು.  ಬೆಳೆಯುವ ಮಕ್ಕಳು ಅಂತ ಒಂದೆರಡು ಇಂಚು ಜಾಸ್ತಿಯೇ ಇಡಿಸಿ ಹೊಲಿಸುತ್ತಿದ್ದರು.  ಧೊಗಲೆ ಧೊಗಲೆ ಅಂಗಿ, ಫ್ರಾಕುಗಳನ್ನು ತೊಟ್ಟು ಕುಣಿದಾಡುತ್ತಿದ್ದ ಆ ದಿನಗಳು ಮಾಯವಾಗಿ ಹೋಗಿವೆ.  ಈಗೇನಿದ್ದರು ರೆಡಿಮೇಡ್ ಕಾಲ.  ಜೇಬು ತುಂಬಾ ದುಡ್ಡು ಒಂದೆರಡು ಗಂಟೆಗಳ ಶಾಫಿಂಗ್‌ನಲ್ಲಿ ಎಲ್ಲವೂ ಮುಗಿದು ಹೋಗುತ್ತದೆ.  ಹಬ್ಬ ಹರಿದಿನಗಳಿಗಾಗಿ ಕಾಯುವ ಗೋಜು ಈಗಿಲ್ಲ.  ಮನಸ್ಸಿಗೆ ಬಂದ ತಕ್ಷಣ ಎಲ್ಲವೂ ನೆರವೇರಿಬಿಡುವ ಕಾಲದಲ್ಲಿ ನಾವಿದ್ದೇವೆ.  ಕಾಯ್ದು ಅನುಭವಿಸುವ ಸುಖದಲ್ಲಿರುವ ಮಜಾ ದಿಢೀರನೆ ಅಂದುಕೊಂಡಾಕ್ಷಣ ಅಂದುಕೊಂಡಿದ್ದೆಲ್ಲ ಸಿಗುವ ಈ ಕಾಲದಲ್ಲಿ ಎಲ್ಲವೂ ಸಪ್ಪೆ ಸಪ್ಪೆ!

ಏನಂತೀರಿ......................!?


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 29 May 2017

ತಿಜೋರಿ



ತಿಜೋರಿ


ಮನದ ತಿಜೋರಿಗೆ ಕಾಣದ ಸರಪಳಿ
ತೀರದ ಬಯಕೆಯ ಬಿಗಿದು ಜಡಿದ ಕೀಲಿ
ಭಾವ ಬಂಗಾರ ಇದರೊಳು ಇಲ್ಲ........
ಬೆಳ್ಳಿತೇರು ಹುಡುಕಿದರಿಲ್ಲಿ ಇಲ್ಲ ........
ನಗನಾಣ್ಯ ವಜ್ರಗಳ ಸುಳಿವಿಲ್ಲಿ ಇಲ್ಲ ........
ಅತ್ತ ಮುತ್ತುಗಳ ರಾಶಿಯೇ  ಎಲ್ಲ ........
ಹುಡುಕಿ ಹೆಕ್ಕಿದ ಒಲವಿನ ಕೀಲಿಕೈ........
ತಡಕಾಡಿ ತೆರೆದಾಗ ಪ್ರೀತಿಯ ಭೋರ್ಗರೆತ........
ಮಿಡಿದ ಹೃದಯಗಳ ಸುಳಿಯ ಸೆಳೆತ........
ಈಜಿ ನಲಿದಾಡಿದ ಮನಗಳ ಮಿಳಿತ........
ದಣಿದು ಸೋತು ದಡದೆದೆಗೆ ಒರಗುವ ತುಡಿತ ........
ಏನೀ ಸೆಳೆತ ........... ಏನೀ ಮಿಳಿತ ........
ಮರೆಯಲಾರದ ತುಡಿತ ........
ನಿಲ್ಲಲಾರದ ಹೃದಯ ಬಡಿತ !!!!





-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ -- ( 56 )

Monday, 8 May 2017

ಗಮನ ಸೆಳೆಯುವ ಪ್ರವೃತ್ತಿ ಒಂದು ಮನೋವೈಕಲ್ಯ



ಗಮನ ಸೆಳೆಯುವ ಪ್ರವೃತ್ತಿ ಒಂದು ಮನೋವೈಕಲ್ಯ

(Attention Seeking Syndrome)


ಗಮನ ಸೆಳೆಯುವ ಪ್ರವೃತ್ತಿಯನ್ನು ಎಲ್ಲ ವಯೋಮಾನದವರಲ್ಲಿ ಕಾಣಬಹುದು.  ಲಿಂಗಬೇಧವಿಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳುವ ಮನೋವೈಕಲ್ಯತೆ ಬಗ್ಗೆ ಒಂದಷ್ಟು ಚರ್ಚಿಸೋಣ.

ಒಬ್ಬ ವ್ಯಕ್ತಿ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದಾನೆ ಎಂದು ಭಾವಿಸತೊಡಗಿದರೆ ಗಮನ ಸೆಳೆಯುವ ಪ್ರವೃತ್ತಿಗೆ ಇಳಿಯುತ್ತಾನೆ.  ಈ ಮನೋವೈಕಲ್ಯ ಚಿಕ್ಕ ಮಕ್ಕಳಲ್ಲಿ ಸರ್ವೇ ಸಾಮಾನ್ಯ.  ತಂದೆ ತಾಯಂದಿರು ಮಗುವಿನ ಬಗ್ಗೆ ತೋರಿಸುವ ನಿರ್ಲಕ್ಷತನ ಮತ್ತು ಉದಾಸೀನ ಭಾವದಿಂದ ನಡೆಸಿಕೊಳ್ಳುವ ಒಂದು ಸಣ್ಣ ಸುಳಿವು ಕೂಡ ಮಗುವಿನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.  ಪೋಷಕರ ಗಮನ ಸೆಳೆಯಲು ನಾನಾ ತರಹದ ಕೃತ್ಯಕ್ಕೆ ಇಳಿಯುತ್ತದೆ.  ವಿನಾಕಾರಣ ರಚ್ಚೆ ತೆಗೆಯುವುದು, ಬೇಕುಬೇಕೆಂತಲೆ ಬಿದ್ದು ಗಾಯಮಾಡಿಕೊಳ್ಳುವುದು, ಮೈಮೇಲಿನ ಬಟ್ಟೆ ಹರಿದುಕೊಳ್ಳುವಂತೆ ವರ್ತಿಸುವುದು, ಹೀಗೆ ಆ ಸಮಯಕ್ಕೆ ತೋಚಿದ ಏನಾದರೂ ಕೃತ್ಯ ಮಾಡಿ ಗಮನ ಸೆಳೆಯಲು ಪ್ರಯತ್ನಿಸುತ್ತದೆ.  ತೀರಾ ನಿರ್ಲಕ್ಷಕ್ಕೆ ಒಳಗಾಗಿದ್ದೇನೆ ಅಂತ ಮಗುವಿಗೆ ಅನ್ನಿಸತೊಡಗಿದರೆ ಗಮನ ಸೆಳೆಯುವ ಈ ಪ್ರವೃತ್ತಿ ಪ್ರಾಣ ಘಾತುಕವೂ ಆಗಿಬಿಡಬಹುದು.

ಇನ್ನು ವಯಸ್ಕರಲ್ಲಿ ಈ ತರಹದ ಪ್ರವೃತ್ತಿ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತವೆ.  ಕೆಲವರು ಹೊಸಬಟ್ಟೆ, ವಾಚು, ಚಪ್ಪಲಿ ಆಭರಣಗಳನ್ನು ಧರಿಸಿ ಇತರರು ಗಮನಿಸಲಿ ಎಂದು ಹಾತೊರೆಯುತ್ತಾರೆ.  ನಾನಾರಿಗೂ ಕಡಿಮೆ ಇಲ್ಲ ಎಂದು ಅಹಂ ತೋರಿಸುವ ವಿಧಾನ!  ಯಾರೂ ಗಮನಿಸದಿದ್ದರೆ, ಗಮನಿಸಿಯೂ ಗಮನಿಸದಂತೆ ಇದ್ದರೆ ಖಿನ್ನತೆಗೆ ಒಳಗಾಗುತ್ತಾರೆ.

ಕೆಲಸ ಮಾಡುವ ತಾಣಗಳಲ್ಲಿ ಸಹೋದ್ಯೋಗಿಗಳು ಕೂಡ ಈ ತರಹದ ಗಮನ ಸೆಳೆಯುವ ಪ್ರವೃತ್ತಿಯಿಂದ ಹೊರತಾಗಿಲ್ಲ.  ಮೇಲಾಧಿಕಾರಿಗಳಿಂದ ಪಕ್ಕದಲ್ಲಿರುವ ಸಹೋದ್ಯೋಗಿ ಶಹಭಾಷಗಿರಿ ಪಡೆದರೆ ಕೆಲವರಿಗೆ ಸಹನೆಯಾಗುವುದಿಲ್ಲ.  ವಿನಾಕಾರಣ ಆ ಸಹೋದ್ಯೋಗಿಯ ಬಗ್ಗೆ ದ್ವೇಷ ಹಾಗೂ ಮತ್ಸರದ ಭಾವನೆ ಬೆಳೆಸಿಕೊಳ್ಳುತ್ತಾರೆ.  ಅವನಿಗಿಂತ ತಾನು ಉತ್ತಮ ಕೆಲಸಗಾರ ಎಂದು ಬಿಂಬಿಸಲು ಹೋಗಿ ನಗೆಪಾಟಲಿಗೆ ಎಷ್ಟೋ ಬಾರಿ ಈಡಾಗುತ್ತಾರೆ.  ತಮ್ಮ ಸಾಮರ್ಥ್ಯದ ಮಿತಿಯ ಅರಿವಿದ್ದರೂ ಕೈಲಾಗದ್ದನ್ನು ಸಾಧಿಸುವ ಛಲ ತೋರಿಸಿ ಗಮನ ಸೆಳೆಯುತ್ತಾರೆ.  ಹಿಡಿದ ಕೆಲಸ ಆಗದಿದ್ದಾಗ ಕೈಕೈ ಹಿಸುಕಿಕೊಳ್ಳುತ್ತಾರೆ.  ಕುಂಟು ನೆಪಗಳನ್ನು ಹುಡುಕಿ ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡುತ್ತಾರೆ.  ಮೇಲಾಧಿಕಾರಿಗಳ ಛೀಮಾರಿಗೆ ಇನ್ನೂ ಕುಗ್ಗಿ ಹೋಗುತ್ತಾರೆ.

ಗಮನ ಸೆಳೆಯುವ ಪ್ರವೃತ್ತಿ ಸಮಾಜದ ಎಲ್ಲ ವರ್ಗದ, ರಂಗದ ಜನರಲ್ಲಿ ಕಂಡು ಬರುತ್ತದೆ.  ಒಬ್ಬ ರಾಜಕಾರಣಿ ತನ್ನ ಸುತ್ತ ಯಾವಾಗಲೂ ಭಟ್ಟಂಗಿಗಳ ಗುಂಪು ಕಟ್ಟಿಕೊಂಡು ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ  ಸುಖಿಸುತ್ತಾನೆ.  ಆದರೆ, ಪಕ್ಕದಲ್ಲಿ ಜನರೇ ಇಲ್ಲದೆ ಹೋದಲ್ಲಿ ಹುಚ್ಚು ಹಿಡಿದವನಂತೆ ವರ್ತಿಸುತ್ತಾನೆ.  ಥಳಕು ಬಳುಕಿನ ಫ್ಯಾಶನ್ ಲೋಕ, ಸಿನಿಮಾ ಜಗತ್ತು ಇದಕ್ಕೆ ಹೊರತಾಗಿಲ್ಲ.  ಒಬ್ಬ ನಟ ಅಥವಾ ನಟಿ ಸಾಧನೆಯ ಉತ್ತುಂಗಕ್ಕೇರಿದಾಗ ಸ್ವರ್ಗ ಮೂರೇ ಗೇಣು ಎಂಬ ಅಹಂ ಬೆಳೆಸಿಕೊಳ್ಳುತ್ತಾರೆ.  ತಮ್ಮ ಸುತ್ತಲೂ ಕಾಲ್ಪನಿಕ ಗೋಡೆ ನಿರ್ಮಿಸಿಕೊಂಡು ಜನಸಾಮಾನ್ಯರಿಗಿಂತ ತಾನು ಭಿನ್ನ, ತಾನೊಂದು ನಿಲುಕದ ನಕ್ಷತ್ರ ಎಂದು ಬಿಂಬಿಸುವ ಭ್ರಮೆಗೆ ಸಿಲುಕುತ್ತಾರೆ.  ಏರಿದ ಎತ್ತರ ನಿಭಾಯಿಸುವಲ್ಲಿ ಎಷ್ಟೋ ವ್ಯಕ್ತಿಗಳು ಸೋತು ಬಿಡುತ್ತಾರೆ.  ಸೋತು ಕೆಳಗಿಳಿದಾಗ ಜಗತ್ತೇ ಮುಳಿಗಿದಂತೆ ಭ್ರಮನಿರಸನಗೊಳ್ಳುತ್ತಾರೆ.  ತಮ್ಮ ಸೋಲಿಗೆ ಅವರಿವರಿಗೆ ಬೆರಳು ತೋರಿಸುತ್ತ ಇನ್ನೂ ಪಾತಾಳಕ್ಕಿಳಿದು ಬಿಡುತ್ತಾರೆ.  ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯೆಂಬ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತಾರೆ.  ಮಾಯಾ ಪ್ರಪಂಚದ ಮೋಡಿಗೆ ಒಳಗಾಗಿ ನಿಜಜೀವನದ ಸತ್ಯಗಳನ್ನು ಅರಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ.  ಸಾಮರ್ಥ್ಯಕ್ಕೆ ಮೀರಿದ ಕೆಲಸಕ್ಕೆ ಕೈ ಹಾಕದೆ ಇತಿಮಿತಿಯಲ್ಲಿದ್ದರೆ ಬದುಕುವ ದಾರಿ ಸುಗಮವಾಗುತ್ತದೆ.  
ಯೋಗಿ ಪಡೆದದ್ದು ಯೋಗಿಗೆ - ಜೋಗಿ ಪಡೆದದ್ದು ಜೋಗಿಗೆ, ಎಂಬ ಸತ್ಯವನ್ನು ಅರಿತರೆ ಮನಸ್ಸು ಸ್ಥಿಮಿತದಲ್ಲಿರುತ್ತದೆ.  ಕೆಲವು ಕಟುಸತ್ಯಗಳು ಅರಗಿಸಿಕೊಳ್ಳಲು ಕಷ್ಟವಾದರೂ, ಅರಗಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದರೆ ಮಾನಸಿಕ ಸಧೃಡತೆ ತನ್ನಿಂದ ತಾನೆ ರೂಪಗೊಳ್ಳುತ್ತದೆ.

ಏನಂತೀರಿ..........!?

-- ಮಹೇಶ ಶ್ರೀ. ದೇಶಪಾಂಡೆ

ತುಷಾರಪ್ರಿಯ 

Thursday, 4 May 2017

ಏನಂತೀರಿ..................!



ದೊಡ್ಡ ಆಸ್ಪತ್ರೆಗಳ ಸಣ್ಣತನಗಳು




ವೈದ್ಯೋ ನಾರಾಯಣೋ ಹರಿಃ

              ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರಿಗೆ ಒಂದು ವಿಶಿಷ್ಠ ಸ್ಥಾನವಿದೆ.  ತಂತ್ರ ಜ್ಞಾನಿಗಳು, ವಕೀಲರು ಹಾಗೂ ಇತರೇ ವೃತ್ತಿ ಪರರಿಗಿಂತ ವೈದ್ಯರನ್ನು ಪೂಜ್ಯ ಸ್ಥಾನದಲ್ಲಿಟ್ಟು ಗೌರವದಿಂದ ಕಾಣುವ ಸಂಪ್ರದಾಯ ಅನುಗಾಲದಿಂದಲೂ ನಡೆಯುತ್ತಿದೆ.  ವೈದ್ಯಕೀಯ ವೃತ್ತಿಯಲ್ಲಿರುವವರು ಜೀವ ಉಳಿಸುವ ನಿಟ್ಟಿನಲ್ಲಿ ಮಾತ್ರ ಯೋಚಿಸಬೇಕು ಮತ್ತು ಹಾಗೆಯೇ ನಡೆದುಕೊಳ್ಳಬೇಕು ಎಂಬುದು ನೈತಿಕ ಸಿದ್ಧಾಂತ.  ಹಾಗಂತ ಅವರು ವೈದ್ಯಕೀಯ ವೃತ್ತಿ ಸೇರುವಾಗ ಆ ರೀತಿಯ ಪ್ರಮಾಣವಚನ ಕೂಡ ತೆಗೆದುಕೊಂಡಿರುತ್ತಾರೆ.  ಆದರೆ ಇತ್ತೀಚಿಗೆ ನನಗಾದ ಅನುಭವ ನನ್ನಲ್ಲಿ ಜಿಜ್ಞಾಸೆ ಹುಟ್ಟಿಸಿದೆ. 

                ಹೊಸ ಹೊಸ ವಿಜ್ಞಾನದ ಅವಿಷ್ಕಾರಗಳು ವೈದ್ಯಕೀಯ ರಂಗದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.  ಈಗ್ಗೆ ೪೦-೫೦ ವರ್ಷಗಳ ಹಿಂದೆ ಅಸ್ತಮಾ/ಕ್ಷಯದಂತ ರೋಗಗಳಿಗೆ ಸೂಕ್ತ ಔಷಧಿಯು ಇರಲಿಲ್ಲ.  ಕಣ್ಣು ಕಿವಿಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರಕದೆ ಎಷ್ಟೋ ಜನ ಕಣ್ಣು ಕಿವಿಗಳನ್ನು ಕಳೆದುಕೊಂಡ ಉದಾಹರಣೆಗಳು ಇವೆ.  ಈಗ ಅದಕ್ಕೆಲ್ಲ ಕೈಗೆಟುವ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ.  ಮುಂದೊಂದು ದಿನ ಕ್ಯಾನ್ಸರ್, ಏಡ್ಸ್‌ನಂತ ಮಾರಕ ವ್ಯಾಧಿಗಳನ್ನು ಗುಣಪಡಿಸುವ ಔಷಧಿ ದೊರಕುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ, ಇರಲಿ.

                 ಆದರೆ ಈಗ ನಮ್ಮ ದೇಶದಲ್ಲಿರುವ ಬಹುತೇಕ ದೊಡ್ಡ ದೊಡ್ಡ ಆಸ್ಪತ್ರ್ರೆಗಳಲ್ಲಿ ನಡೆಯುತ್ತಿರುವುದೇ ಬೇರೆ!  ಹಾಗಂತ ನಾನು ಎಲ್ಲಾ ಆಸ್ಪತ್ರೆಗಳು ಆ ರೀತಿ ನಡೆದುಕೊಳ್ಳುತ್ತಿವೆ ಅಂತ ಹೇಳಲಾರೆ. ಬಹುಪಾಲು ಆಸ್ಪತ್ರೆಗಳು ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ವ್ಯಾಪಾರದ ಸರಕನ್ನಾಗಿಸಿಕೊಂಡು ರೋಗಿಗಳನ್ನು ಗಿರಾಕಿಗಳಂತೆ ನಡೆಸಿಕೊಳ್ಳುತ್ತಿವೆ.  ಸಮಾಜಸೇವೆಯ ಮುಖವಾಡ ಹೊತ್ತು ಇಂಥ ದೊಡ್ಡ ಆಸ್ಪತ್ರೆ ತೆರೆಯುವವರಿಂದ ಎಂಥ ಸೇವೆ ನಿರೀಕ್ಷಿಸಲು ಸಾಧ್ಯ! 

                      ಈಗ್ಗೆ ಕೆಲ ತಿಂಗಳ ಹಿಂದೆ ನನ್ನ ಬಂಧವೊಬ್ಬರು ಹೃದಯ ಸಂಬಂಧಿ ಸಮಸ್ಯೆಗೊಳಗಾಗಿ ಆತುರಾತುರವಾಗಿ ತಮ್ಮ ಊರಿನಿಂದ ಹೊರಟು ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗೆ ದಾಖಲಾಗಿ ತುರ್ತುಚಿಕಿತ್ಸೆಗೆ ಒಳಪಡಬೇಕಾಗಿತ್ತು. ಸುಮಾರು ೪೦೦ ಕಿಲೋಮೀಟರ ಪ್ರಯಾಸಕರ ಪ್ರಯಾಣದ ನಂತರ ಆಸ್ಪತ್ರೆಯ ಸ್ವಾಗತಕಾರರಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ಅವರು ವರ್ತಿಸಿದ ರೀತಿ ನಿಜಕ್ಕೂ ಖಂಡನಾರ್ಹ.  ಈ ಬಗ್ಗೆ ಸಂಬಂಧಪಟ್ಟ ವೈದ್ಯದಲ್ಲಿ ಆ ಊರಿನ ವೈದ್ಯರು ಮೊದಲೇ ಚರ್ಚಿಸಿ ಎಲ್ಲವನ್ನು ವಿವರಿಸಲಾಗಿತ್ತು.  ಆದರೆ ರೋಗಿಯ ಚಿಕಿತ್ಸೆಯಬಗ್ಗೆ ತುರ್ತುಕಾಳಜಿ ವಹಿಸದೇ ಇಲ್ಲಸಲ್ಲದ ಪ್ರಶ್ನೆಗಳಿಗೆ ಉತ್ತರಿಸಿ ಕಾಲಹರಣವಾಗುವಂತೆ ಮಾಡಿ ಅವರ ತಾಳ್ಮೆ ಪರೀಕ್ಷಿಸಿದರು.  ಕೈಗೆಟುವ ದರದಲ್ಲಿ ವಾರ್ಡ್ ರೂಂಗಳು ಲಭ್ಯವಿದ್ದರೂ ಇಲ್ಲವೆಂದು ಹೇಳುವುದು, ರೋಗದ ತೀವ್ರತೆಯನ್ನು ಅಭ್ಯಸಿಸುವ ಇವರು ಹೆಚ್ಚುದರವಿರುವ ವಾರ್ಡ್‌ರೂಂ ಖಾಲಿ ಇದೆ ಎಂದು ಹೇಳಿ ಸ್ವಯಂ ಪ್ರೇರಣೆಯಿಂದ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ಒಮ್ಮೆ ನೀವು ಹೆಚ್ಚಿನ ದರದ ವಾರ್ಡ್‌ರೂಂ ಆರಿಸಿಕೊಂಡಮೇಲೆ ಮರುದಿನ ಕಡಿಮೆ ದರದ ರೂಂಗಳು ಇದ್ದರೂ ನೀವು ಅಲ್ಲಿಗೆ ಆಮೇಲೆ ಸ್ಥಳಾಂತರಗೊಂಡರೂ ಮೊದಲು ನಿಗದಿಪಡಿದ ದರವನ್ನು ಕೊಡಲೇಬೇಕೆಂಬ ನಿಯಮವಿದೆಯಂದು ನಿಮ್ಮ ಬಾಯಿಕಟ್ಟಿಹಾಕುತ್ತಾರೆ. ಚಿಕಿತ್ಸೆಗೊಳಪಡಬೇಕಾದ ರೋಗಿಯು ವೈದ್ಯಕೀಯ ಜೀವವಿಮೆ ಹೊಂದಿದ್ದಲ್ಲಿ ಅವರ ವರ್ತನೆಯಲ್ಲಿ ಒಂದು ತರಹದ ಮಿಂಚಿನ ಸಂಚಲನವಾಗುತ್ತದೆ.  ಮುಂದೆ ನಡೆಯುವ ಎಲ್ಲ ಘಟನೆಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ.  ರೋಗದ ಚಿಕಿತ್ಸೆಗೆ ತಗಲುವ ವೆಚ್ಚ ಮತ್ತು ವಿಮಾಹಣದ ಲೆಕ್ಕಾಚಾರಮಾಡಿ ನೀವು ಬಿಡುಗಡೆಯಾಗುವ ದಿನದವರೆಗೂ  ವಿಮಾಹಣ ಸರಿದೂಗಿಸಿ ಬಿಡುತ್ತಾರೆ. ದಿನಕ್ಕೊಂದು ಟೆಸ್ಟ್, ಸ್ಕ್ಯಾನಿಂಗ್ ಅದು ಇದು ಅಂತ ಶಸ್ತ್ರಚಿಕಿತ್ಸೆಗೆ ಒಳಪಡುವ ಮೊದಲು ಮಾಡುವ ಎಲ್ಲ ವಿಧಾನಗಳನ್ನು ವಿಧಿವತ್ತಾಗಿ ಮುಗಿಸುತ್ತಾರೆ. ಅವಶ್ಯಕತೆ ಇರಲಿ ಬಿಡಲಿ ಎಲ್ಲ ತರಹದ ರಿಪೋರ್ಟ್‌ಗಳನ್ನು ತರಿಸಿಕೊಳ್ಳುತ್ತಾರೆ. ಒಂದಕ್ಕೆರಡು ಪಟ್ಟು ಶುಲ್ಕ ತೆರುವ  ಅನಿವಾರ್ಯತೆ ಉದ್ಭವಿಸುತ್ತದೆ.    ಆದರೆ  ಬಹುಪಾಲು ಪರೀಕ್ಷೆಗಳು ಅನಾವಶ್ಯಕವಾಗಿದ್ದರೂ ಪರೀಕ್ಷೆಗೆ ಒಳಪಡುವ ಸಂಧಿಗ್ಧತೆ ತಂದೊಡ್ಡುತ್ತಾರೆ. ಪೂರ್ವಪರೀಕ್ಷೆ ಫಲಿತಾಂಶಗಳನ್ನು ಪರಿಶೀಲನೆ ಮಾಡದೆ ಚಿಕಿತ್ಸೆಯ ನಿರ್ಧಾರ ಕಠಿಣವಾಗುತ್ತದೆಂದು ಹೆದರಿಸುತ್ತಾರೆ.  ಭಾವನಾತ್ಮಕವಾಗಿ ನಿಮ್ಮನ್ನು ಕಟ್ಟಿಹಾಕುತ್ತಾರೆ.

             ಇನ್ನು ಕೆಲ ವಿಮಾಕಂಪನಿಗಳುಕೂಡ ವ್ಯಕ್ತಿಗಳ ಪಾಲಿಸಿ ಮಾಡಿಸುವ ಮುನ್ನ ಎಷ್ಟೋ ವಿಷಯಗಳನ್ನು ಮುಚ್ಚಿಡುತ್ತಾರೆ. ವ್ಯಕ್ತಿ ಕಂತುಗಳನ್ನು ಕಟ್ಟಲು ಶುರುಮಾಡಿದ ಹಾಗೆ ಈ ವಿಮಾ ಏಜೆಂಟ್‌ಗಳು ಕಮಿಷನ್ ಪಡೆಯಲು ಆರಂಭಿಸುತ್ತಾರೆ.  ಅವಶ್ಯಕತೆ ಬಿದ್ದಾಗ ಕುಂಟು ನೆಪಗಳನ್ನು ಒಡ್ಡಿ ವಿಮಾಕಂಪನಿಗಳು ನಿಮ್ಮ ಮನವಿಯನ್ನು ತಿರಸ್ಕರಿಸಿ ಪರಿಸ್ಥಿತಿ ಇನ್ನೂ ಗಂಭೀರವಾಗುವಂತೆ ಮಾಡುತ್ತಾರೆ.  ಆಸ್ಪತ್ರೆಯಿಂದ ಬಿಡುಗಡೆಗೆ ಅವರಿವರ ಕೈಕಾಲು ಹಿಡಿದು ಹಣ ಹೊಂದಿಸಬೇಕಾದ ಪರಿಸ್ಥಿತಿಯನ್ನು ಎಷ್ಟೋ ರೋಗಿಗಳು ಅನುಭವಿಸಿದ್ದಾರೆ.  ಈಗಲೂ ಅನುಭವಿಸುತ್ತಿದ್ದಾರೆ.  ವಿಮಾ ಮಾಡಿಸುವಾಗ ಇರುವ ಆಸಕ್ತಿ ವಿಮಾಹಣ ಬಿಡುಗಡೆ ಸಮಯದಲ್ಲಿ ಇವರಲ್ಲಿ ಇರುವುದೇ ಇಲ್ಲ!

             ಈ ತರಹದ ಹಗಲು ದರೋಡೆಯನ್ನು ಖಂಡಿತವಾಗಿಯೂ ಪ್ರತಿಯೊಬ್ಬರು ವಿರೋಧಿಸಬೇಕು. ಒಬ್ಬ ರೋಗಿಯನ್ನು ಗಿರಾಕಿಯ ತರಹ ವ್ಯಾಪಾರಿ ದೃಷ್ಟಿಯಲ್ಲಿ ನಡೆಸಿಕೊಳ್ಳವುದು ನಿಲ್ಲಬೇಕು.  ಸ್ವಚ್ಚಭಾರತ ಕನಸಿನ ಜೊತೆಗೆ ಸ್ವಸ್ಥಭಾರತ ಕನಸೂ ನನಸಾಗುವತ್ತ ನಾವು ನೀವು ಚಿಂತಿಸಬೇಕಲ್ಲವೇ?

ಏನಂತೀರಿ..................!  

     -- ಮಹೇಶ್ ಶ್ರೀ. ದೇಶಪಾಂಡೆ 
       ತುಷಾರಪ್ರಿಯ




Friday, 28 April 2017

ಸಂತೆ


ಸಂತೆ


ಜೋಳಿಗೆ ಹಿಡಿದ ಮಧುರ ಜೀವನದ ಸಂತೆ
ಕಳೆದು ಹೋಯಿತು ಕಹಿಯ ಜೀವನದ ಕಂತೆ
ಬಿಕರಿಗಿಟ್ಟ ಸಾಮಾನು......ಮಾನಗಳು.....
ಬಿಕರಿಯಾಗದೆ ಉಳಿದ ಮನಗಳು......
ಕಾಲ ವರ್ಷಾಧಾರೆಯಲಿ ತೇಲಿದ ಮನ ಮಾನಗಳು
ಉಳಿದು ಹೋದವೋ.......ಮಾನಗಳು?
ಅಳಿದು ಹೋದವೋ.......ಮನಗಳು?
ಇದಕುತ್ತರ ಗೊತ್ತೇ ......ಮಾನ ಬಿಕರಿಗಿಟ್ಟ ಮಾನವಂತರೇ?
ಮುಂದೇನಾಯಿತು ಗೊತ್ತೇ........ಮನವಂತರೇ?
ಕದಡಿ ಹೋದವು ಪ್ರತಿಷ್ಠೆ ಮಾನಗಳು
ಮುದುಡಿ ಹೋದವು ಕೋಮಲ ಮನಗಳು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Wednesday, 26 April 2017

ವಿಕೃತ ಕುತೂಹಲ


ವಿಕೃತ ಕುತೂಹಲ



ಇದೇನಿದು ವಿಕೃತ ಕುತೂಹಲ!  ವಿಕೃತ ಕಾಮ, ವಿಕೃತ ಪ್ರೇಮ ಅಂತ ಕೇಳಿಗೊತ್ತು ಅಂತ ಕೇಳಿಯೇ ಕೇಳುತ್ತೀರೆಂದು ಗೊತ್ತು.   ಅದರಂತೆ ಕುತೂಹಲ ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೆ.  ಒಂದು ಒಳ್ಳೆಯ ವಿಷಯದ ಬಗ್ಗೆ ಕುತೂಹಲ ಇಟ್ಟುಕೊಂಡು ಆ ನಿಟ್ಟಿನಲ್ಲಿ ನಮ್ಮ ವಿಷಯ ಸಂಗ್ರಹವಿದ್ದಲ್ಲಿ ಅದು ಸಕಾರಾತ್ಮಕ ಬೆಳವಣಿಗೆ.  ಅದೇ ಕೆಟ್ಟ ವಿಷಯಗಳಿಗೆ, ಸಂಬಂಧ ಪಡದ ವಿಷಯಗಳಿಗೆ ಕುತೂಹಲ ಬೆಳೆಸಿಕೊಂಡರೆ ಅದು ನಕಾರಾತ್ಮಕ ಬೆಳವಣಿಗೆ.  ಇದನ್ನೆ ವಿಕೃತ ಕುತೂಹಲ ಅಂತ ಕರೆದರೆ ತಪ್ಪೇನು!  ನಮ್ಮ ದಿನನಿತ್ಯದ ಆಗು ಹೋಗುಗಳಲ್ಲಿ ಇಂಥ ವಿಕೃತ ಕುತೂಹಲಿಗಳನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ.  ಇಂಥವರು ನಿಮ್ಮ ಸಮೀಪದ ಸಂಬಂಧಿಗಳೂ ಆಗಿರಬಹುದು, ಮಿತ್ರರೂ ಆಗಿರಬಹುದು, ಸಹೋದ್ಯೋಗಿಗಳಾಗಿರಬಹುದು ಅಥವಾ ಅಕ್ಕಪಕ್ಕದ ಮನೆಯವರೂ ಆಗಿರಬಹುದು.  ಇವರ ಒಂದಂಶದ ಕಾರ್ಯಕ್ರಮ - ಇತರರ ಬಗ್ಗೆ ಇನಿಲ್ಲದ ಕುತೂಹಲ ಬೆಳೆಸಿಕೊಂಡು, ಸಂಬಂಧವಿರಲಿ ಬಿಡಲಿ ಅವರ ಬಗ್ಗೆ ಮಾಹಿತಿ ಕಲೆ ಹಾಕುವುದು.  ಕಲೆ ಹಾಕಿದ ಮಾಹಿತಿಗಳನ್ನು ಇಂಥಹುದೆ ವಿಕೃತ ಮನಸ್ಥಿತಿಯವರ ಜೊತೆ ವಿನಿಮಯ ಮಾಡಿಕೊಂಡು ಚಪಲ ತೀರಿಸಿಕೊಳ್ಳುತ್ತಾರೆ.  ವಿಕೃತ ಮನಸ್ಥಿತಿಯವರು ಸಿಗದೆ ಹೋದರೆ ಅವರೇನು ತಲೆ ಕೆಡಿಸಿಕೊಳ್ಳುವುದಿಲ್ಲ.  ಎದುರಿಗೆ ಸಿಕ್ಕಿದವರನ್ನೆ ಮಾತಿಗೆಳೆದು ಅವರ ತಲೆ ಕೆಡಿಸಿ ಚಟ ತೀರಿಸಿಕೊಳ್ಳುತ್ತಾರೆ.  ಅವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದರು ಸರಿಯೇ. .. . . ಇನ್ನೊಬ್ಬರ ತಟ್ಟೆಯ ನೊಣದ ಬಗ್ಗೆ ಇವರಿಗೆ ಇನ್ನಿಲ್ಲದ ಮಹಾನ್ ಕುತೂಹಲ.  ಇತರರ ಕುಂದು ಕೊರತೆಗಳನ್ನು ಎತ್ತಿ ಆಡುವುದರಲ್ಲಿ ಇವರು ನಿಸ್ಸೀಮರು.  ಒಂದು ವೇಳೆ ನೀವು ಅವರ ಮುಂದೆ ಎಡವಿ ಬಿದ್ದರೆ, ನಿಮ್ಮ ಕತೆ ಮುಗಿದಂತೆಯೆ!  ಬಿದ್ದವರ ಏಳಿಸುವ ಗೋಜಿಗೆ ಇವರು ಹೋಗುವುದೇ ಇಲ್ಲ.  ಬಿದ್ದವನು ಈ ರಸ್ತೆಯಲ್ಲೆ ಯಾಕೆ ಬಂದ?  ಅದೇ ಕಲ್ಲಿಗೆ ಯಾಕೆ ಎಡವಿದ?  ಬೇರೆ ರಸ್ತೆ ಇರಲಿಲ್ಲವೇ?  ಇತ್ಯಾದಿ ಇತ್ಯಾದಿ ಚರ್ಚೆಮಾಡಿ ಎಡವಿ ಬಿದ್ದವನು ಶಾಶ್ವತವಾಗಿ ಬಿದ್ದಲ್ಲಿಯೆ ಮಲಗಿ ಬಿಡುವಂತೆ ವರ್ತಿಸಿಬಿಡುತ್ತಾರೆ.

ನನ್ನಲ್ಲಿರುವುದು ಅವನಲ್ಲಿ ಇಲ್ಲ ಎಂದೋ ನನ್ನಲ್ಲಿ ಇಲ್ಲದಿರುವುದು ಅವನಲ್ಲಿಯೂ ಇಲ್ಲ ಎಂದೋ ಸುಖಿಸುವ ವಿಕೃತ ಕುತೂಹಲಿಗಳವರು.  ಇವರನ್ನು ವಿಕೃತ ತೃಪ್ತರೂ ಅಂತ ಕೂಡ ಕರೆಯಬಹುದು.  ಇದೊಂದು ವಿಚಿತ್ರವಾದ ಮನೋವಿಕಾರವೇ ಸರಿ!  ಅವರ ಯೋಗ್ಯತೆಗಳ ಬಗ್ಗೆ ಅರಿವಿದ್ದರೂ ಇತರರ ಯೋಗ್ಯತೆಗಳ ಬಗ್ಗೆ ವೇದಾಂತ ಭಾಷಣ ಬಿಗಿಯುತ್ತಾರೆ.  ಇವರ ಸಾಧನೆ ಶೂನ್ಯವಾದರೂ ಇತರರ ಸಾಧನೆಗಳ ಜೊತೆ ಆ ಶೂನ್ಯವನ್ನು ಸೇರಿಸಿ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.  ಅಂಕಿಯ ಎಡಕ್ಕಿರುವ ಶೂನ್ಯವನ್ನು ಬಲಕ್ಕಿದೆ ಎಂಬ ಭ್ರಮೆಯಲ್ಲಿ ಬೀಗುತ್ತಾರೆ.  ತಾವು ಬೇರೆಯವರಿಂದ ಉಪಕೃತಗೊಳ್ಳುವುದಕ್ಕೆ ಹುಟ್ಟಿರುವ ಹಾಗೇ ವರ್ತಿಸುತ್ತಾರೆ. ಅದು ಅವರ ಹಕ್ಕೆಂದು ಪ್ರತಿಪಾದಿಸುವ ಮಟ್ಟಿಗೆ 
ಭಂಢತನ ಮೆರೆಯುತ್ತಾರೆ.  ನಾಚಿಕೆಗೆಟ್ಟ ಜೀವನ!  ಹಾಗೆ ಬದುಕುವುದೆ ಅವರ ವಿಶೇಷತೆ!

ಇತರರ ಬ್ಯಾಂಕ್ ಬ್ಯಾಲನ್ಸ್, ಕಾರು, ಬಂಗಲೆ, ಸಂಬಳ, ವಯಸ್ಸು, ಮದುವೆ, ಮಕ್ಕಳು ಹೀಗೆ ಒಂದಿಲ್ಲೊಂದು ವಿಷಯ ಇವರ ಹರಕು ಬಾಯಿಗೆ ಆಹಾರವಾಗುತ್ತವೆ.  ಇಂಥ ವ್ಯಕ್ತಿಗಳು ನಮ್ಮ ಜೀವನದಲ್ಲಿ ನುಸುಳದಂತೆ ಎಚ್ಚರ ವಹಿಸಬೇಕು.  ಸಂಬಂಧ ಕಡಿದುಕೊಳ್ಳುವುದು ಒಮ್ಮೊಮ್ಮೆ ಅಸಾಧ್ಯ.  ಅಂಥ ಸಂದರ್ಭಗಳಲ್ಲಿ ಸಾಕಷ್ಟು ಅಂತರ ಕಾಯ್ದು ಕೊಂಡರೆ ಮನಸ್ಸಿನ ನೆಮ್ಮದಿ ಹಾಳಾಗಲಾರದು.

ಇಂಥವರು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಂಟಕಪ್ರಾಯರೇ ಹೊರತು, ಸಂಕಟ ನಿವಾರಕರಂತೂ ಅಲ್ಲವೇ ಅಲ್ಲ.  ನಾವು ನೀವೂ ಸಂಕಟ ನಿವಾರಕರಾಗದಿದ್ದರೂ ಚಿಂತೆಯಿಲ್ಲ, ಕಂಟಕಪ್ರಾಯರಾಗುವುದು ಬೇಡವೇ ಬೇಡ.

ಏನಂತೀರಿ. . . . . . . .!?

-- ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ


Tuesday, 18 April 2017

ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸ್ಥಿತಿ ಬಂದೊದಗಿದೆ ಎಂದಾದರೆ ಎಲ್ಲೋ ಎಡವಟ್ಟಾಗಿದೆ ಎಂದೇ ಅರ್ಥ.  ನನ್ನನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ ದ್ವಂದ್ವಗಳು ಆರಂಭವಾದರೆ ಅಲ್ಲಿಗೆ ಬಿರುಕು ಸೃಷ್ಠಿಯಾಗುತ್ತ ಹೋಗುತ್ತದೆ.  ಬಿರುಕು ದೊಡ್ಡದಾಗುತ್ತ ಕಂದಕವಾಗುವವರೆಗೂ ನಾವು ಬಿಟ್ಟಿದ್ದೇ ಆದರೆ ಆ ಕಂದಕದಲ್ಲಿ ನಮಗೆ ಗೊತ್ತಿಲ್ಲದೇ ನಾವೇ ಬೀಳುವ ಪರಿಸ್ಥಿತಿ ಉಂಟಾಗುತ್ತದೆ.  ಹಾಗಾಗಬಾರದು ಎಂದರೆ ಬಿರುಕು ಬಿಟ್ಟಾಗಲೇ ಅದನ್ನು ಮುಚ್ಚುವ ಕಾರ್ಯಕ್ಕೆ ಸಿದ್ದರಾಗಬೇಕು.  ನಾವು ಒಬ್ಬರನ್ನೊಬ್ಬರು ಕ್ಷಮಿಸುತ್ತೇವೆ ಎಂದಾದರೆ, ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೇ ಅಂತ 'ಎಮ್ಮಾ ಗೋಲ್ಡಮ್ಯಾನ್' ಎಂಬಾತ ಹೇಳುತ್ತಾನೆ.  ನನ್ನನ್ನು ಬೇರೆಯವರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಕರುಬುವುದಕ್ಕೆ ಮೊದಲು ನಾನು ಬೇರೆಯವರಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ.  ನಮಗೆ ನಾವೇ ಮೊದಲು ಅರ್ಥವಾಗಬೇಕು.  ಹಾಗಾದಾಗ ಮಾತ್ರ ನಾವು ಬೇರೆಯವರಿಗೆ ಅರ್ಥವಾಗಲು ಸಾಧ್ಯ.  ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದೂ ಸಾಧ್ಯ.  ನನ್ನನ್ನು ಬೇರೆಯವರು ಇದೇ ರೀತಿ ಅರ್ಥಮಾಡಿಕೊಳ್ಳಲಿ ಅಂತ ಅಭಿಪ್ರಾಯ ಹೇರುವುದು ಮೂರ್ಖತನದ ಪರಮಾವಧಿಯಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಾಗುವ ದಾರಿ ಎಷ್ಟು ಸುಲಭದ್ದೋ ಅಷ್ಟೆ ಜಟಿಲವೂ ಕೂಡ.  ಒಂದು ಬಲೂನಿಗೆ ಎಷ್ಟು ಬೇಕೋ ಅಷ್ಟೆ ಗಾಳಿ ತುಂಬಿದರೆ ಬಲೂನು ಒಡೆಯುವುದಿಲ್ಲ.  ಗಾಳಿಯಲ್ಲಿ ತೇಲಾಡುತ್ತ ಮನಸ್ಸಿಗೆ ಮುದ ನೀಡುತ್ತದೆ.  ಅದೇ ಬಲೂನಿಗೆ ಜಾಸ್ತಿ ಗಾಳಿ ತುಂಬಿದರೆ ತೇಲಾಡುವ ಬದಲು ಒಡೆದು ಹೋಗುತ್ತದೆ.  ತೇಲಾಡಬೇಕೋ! ಒಡೆದುಹೋಗಬೇಕೋ!  ಎಂಬ ನಿರ್ಧಾರ ನಾವು ಬೇರೆಯವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದರ ಮೇಲೆ ನಿಂತಿರುತ್ತದೆ.  ಹಾಗೇಯೇ ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳುವುದು ನಾವು ತೆಗೆದುಕೊಳ್ಳುವ ನಿಲುವುಗಳ ಮೇಲೆ ನಿರ್ಧಾರವಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೆಂದರೆ ಅರ್ಥಮಾಡಿಕೊಂಡವರ ಗೆಲುವು, ಅರ್ಥಮಾಡಿಕೊಳ್ಳಲಾಗದವರ ಸೋಲು ಅಂತ ಅರ್ಥ ಅಲ್ಲ.  ಒಬ್ಬರ ಗೆಲುವಿಗೆ ಇನ್ನೊಬ್ಬರ ಸೋಲು ಹೇಗೆ ಕಾರಣವೋ ಅದೇ ರೀತಿ ಒಬ್ಬರ ಸೋಲಿಗೆ ಇನ್ನೊಬ್ಬರ ಗೆಲುವೂ ಕಾರಣ.  ಆದರೆ ಸೋಲು ಗೆಲುವುಗಳ ತಕ್ಕಡಿಯಲ್ಲಿ ಒಬ್ಬರನೊಬ್ಬರು ಅರ್ಥೈಸಿಕೊಳ್ಳುವುದನ್ನು ತೂಗಿ ನಿರ್ಣಯಿಸಲಾಗದು.  ಅದು ತೀರ ಭಾವನಾತ್ಮಕವಾದ ಸೂಕ್ಷ್ಮ ಸಂಬಂಧಗಳಿಗೆ ಮುಡಿಪಿಟ್ಟ ವಿಷಯ.  ಏನೇ ಹೇಳಿ ಅರ್ಥೈಸಿಕೊಳ್ಳುವ ವಿಧಾನ ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗುವ ಪ್ರಕ್ರಿಯೆ.  ಇಂದು ಸರಿಯೆನಿಸಿದ ವಿಷಯ ನಾಳೆ ತಪ್ಪಾಗಿ ಕಾಣಬಹುದು.  ಇಂದು ಮಾಡಿದ ತಪ್ಪು ನಾಳಿನ ಸರಿ ನಿರ್ಣಯಕ್ಕೆ ಸೋಪಾನವೂ ಆದೀತು!  ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಅಲೆಗಳಗುಂಟ ಈಜಿದರೆ ಯಶಸ್ಸು ನಮ್ಮದಾಗುತ್ತದೆ.  ಅಲೆಗಳ ವಿರುದ್ಧ ಈಜುವ ಸಾಹಸಕ್ಕಿಳಿದರೆ ದಡ ಸೇರಲಾಗದೆ ಮುಳುಗುವ ಆತಂಕ ಇದ್ದೇ ಇರುತ್ತದೆ.

ನಾನಾರಿಗೆ ಅರ್ಥವಾಗಿದ್ದೇನೆ?  ನಾನು ಬೇರೆಯವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ? ಎಂಬುದನ್ನು ಪರಾಮರ್ಶೆಗೆ ನಮ್ಮನ್ನು ನಾವೇ ತೆರೆದಿಟ್ಟುಕೊಳ್ಳಬೇಕು.  ಕೊನೆಗೊಂದು ಮಾತು ಅಗಾಧವಾದ ಕ್ಷಮಾಗುಣ ಹೊಂದಿದವರು ಇತರರಿಗಿಂತ ಎತ್ತರದಲ್ಲಿ ನಿಲ್ಲುತ್ತಾರೆ.  ಅಂಥ ಸಾಲಿಗೆ ಸೇರುವ ಪ್ರಯತ್ನ ನಮ್ಮಿಂದಲೇ ಯಾಕೆ ಪ್ರಾರಂಭವಾಗಬಾರದು!

ಏನಂತೀರಿ........!? 
-- ಮಹೇಶ್ ಶ್ರೀ ದೇಶಪಾಂಡೆ
           (ತುಷಾರ ಪ್ರಿಯ)

Monday, 10 April 2017

ಗಮ್ಮತ್ತು


ಗಮ್ಮತ್ತು


ಸೋತು ಗೆಲ್ಲುವ ಗತ್ತು
ಗೆದ್ದು ಸೋಲುವ ಗಮ್ಮತ್ತು
ಪ್ರೀತಿ ಕಲಹದಲಿ ಇದಕಿಲ್ಲ ಕಿಮ್ಮತ್ತು
ಸ್ಥಿರವಾಗಿ ಉಳಿಯೋದು ನಿಯತ್ತು


-- ಮಹೇಶ ಶ್ರೀ. ದೇಶಪಾಂಡೆ

Saturday, 8 April 2017

ನಕ್ಕುಬಿಡು


ನಕ್ಕುಬಿಡು


ನೀನೊಮ್ಮೆ ನಕ್ಕುಬಿಡು
ಗೆಳತಿ..... ನೀನೊಮ್ಮೆ ನಕ್ಕುಬಿಡು
ಆಚೀಚೆ ನೋಡದೆ ನೀನೊಮ್ಮೆ ನಕ್ಕುಬಿಡು
ಅರಳು ಮಲ್ಲಿಗೆ ಹುರಿದು ನಕ್ಕುಬಿಡು
ಸೂಜಿ ಮಲ್ಲಿಗೆ ಸೂರಿ ನಕ್ಕುಬಿಡು
ಸಂಪಿಗೆ ಕಂಪುಸೂಸಿ ನಕ್ಕುಬಿಡು
ನನ್ನೆದೆಗೆ ತಂಪೆರೆದು ನಕ್ಕುಬಿಡು
ನೀನೊಮ್ಮೆ ನಕ್ಕುಬಿಡು
ನನ್ನುಸಿರ ಇಂಪಾಗಿ ನಕ್ಕುಬಿಡು
ನನ್ನುಸಿರು ಬಸಿದು ಕುಸಿಯುವ ಮೊದಲು
ಗೆಳತಿ..... ನೀನೊಮ್ಮೆ ನಕ್ಕುಬಿಡು
ನಾನತ್ತು ಹೊತ್ತಿ ಉರಿಯುವ ಮೊದಲು
ನೀನೊಮ್ಮೆ ನಕ್ಕುಬಿಡು
ಗೆಳತಿ..... ನೀನೊಮ್ಮೆ ನಕ್ಕುಬಿಡು
ನನ್ನೆದೆಯ ತಾಳಕೆ ಕುಣಿದುಬಿಡು
ನಕ್ಕುಬಿಡು.... 
ಕುಣಿದುಬಿಡು..... 
ನಕ್ಕುಬಿಡು......

--ಮಹೇಶ ಶ್ರೀ. ದೇಶಪಾಂಡೆ


Thursday, 6 April 2017

ಜೇಡರ ಹುಳು


ಜೇಡರ ಹುಳು


ಅಳುಕದಿರು ಮನವೆ,
ಅಸಹಾಯಕತೆ ಮೆಟ್ಟಿ ಎದೆಯುಬ್ಬಿಸುವ ಹೊತ್ತು
ಅಳುಕದಿರು ಮನವೆ,
ನೋವಿನ ಸರಳು ಕಳಚಿ ನಲಿಯುವ ಹೊತ್ತು
ಅಳುಕದಿರು ಮನವೆ,
ಅತ್ತುಸುಸ್ತಾಗಿ ಆನಂದಬಾಷ್ಪ ಸುರಿಸುವ ಹೊತ್ತು
ಅಳುಕದಿರು ಮನವೆ,
ದಿಟಹೂರಣ ಬಯಲಾಗಿ ಸುಳ್ಳುಹರಣದ ಹೊತ್ತು
ಅಳುಕದಿರು ಮನವೆ,
ಅಣುಕಣವೂ ಬಣ್ಣದ ರಂಗೋಲಿಯಾಗುವ ಹೊತ್ತು
ಅಳುಕದಿರು ಮನವೆ,
ಮಂಜು ಕರಗಿ ಕಿರಣ ಸೂಸುವ ಹೊತ್ತು
ಅಳುಕದಿರು ಮನವೆ,
ಹೆಣೆದ ಬಲೆಯ ಒಡೆಯ ನೀ ಜೇಡರಹುಳುವಾಗೋ ಹೊತ್ತು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

**__**__**

Tuesday, 4 April 2017

ಸಣ್ಣ ಖುಷಿಗಳ ಕಣಜ



ಸಣ್ಣ ಖುಷಿಗಳ ಕಣಜ


ಒಮ್ಮೊಮ್ಮೆ ಚಿಕ್ಕ ಚಿಕ್ಕ ಸಂಗತಿಗಳು ಎಷ್ಟೊಂದು ಖುಷಿ ಕೊಡುತ್ತವೆ ಅನ್ನೋದಕ್ಕೆ ನಿನ್ನೆ ನಡೆದ ಘಟನೆ ನನ್ನ ಮನಸ್ಸಿನಲ್ಲಿ ಇನ್ನೂ ಮರುಕಳಿಸುತ್ತಲೇ ಇದೆ.  ಬಹಳ ದಿನಗಳ ನಂತರ ಶಾಪಿಂಗ್‌ಗೆ ಅಂತ ಮನೆಗೆ ಬಂದ ಮಗಳು ನನ್ನನ್ನು ಹೊರಡಿಸಿದ್ದಳು.  ಶಾಪಿಂಗ್  ಅಂದ್ರೆ ನನಗೆ ಅಷ್ಟಕ್ಕಷ್ಟೆ!.  ನನಗಂತೂ ಅದು ಬಲು ಬೋರಿನ ವಿಷಯ.  ಒಲ್ಲದ ಮನಸ್ಸಿನಿಂದಲೆ ತಯಾರಾಗಿ ಹತ್ತಿರದ ಶಾಪಿಂಗ್‌ಮಾಲ್  ಒಂದಕ್ಕೆ ನಿನ್ನೆ ಸಾಯಂಕಾಲ ಹೋಗಿದ್ವಿ. ನನ್ನಾಕೆಗೆ ವಿಂಡೋ  ಶಾಪಿಂಗ್ ಅಂದ್ರೆ ಎಲ್ಲಿಲ್ಲದ ಹುರುಪು.  ಹೋದ ಅರ್ಧ ಗಂಟೆಯಲ್ಲಿ ನನಗಾಗಿ ೨-೩ ಶರ್ಟ್‌ಗಳನ್ನು ತೆಗೆದುಕೊಂಡಿದ್ದೂ ಆಯಿತು.  ಇನ್ನು ಅವರ ಸರದಿ.  ಅದು ಅಷ್ಟುಬೇಗ ಸುಲಭಕ್ಕೆ ಮುಗಿಯುವಂಥಾದ್ದಲ್ಲ  ಎಂಬುದು ನನಗೆ ಗುತ್ತು.

ಯಥಾ ಪ್ರಕಾರ ನಾನು ಅದು ಇದು ನೋಡುತ್ತ ನನ್ನ ಪಾಡಿಗೆ ನಾನು ಸಮಯ ಕಳೆಯುತ್ತಾ ಓಡಾಡುತ್ತಿದ್ದೆ. ಓಡಾಡಿ ಓಡಾಡಿ ಬೇಸರವಾದಾಗಲೆಲ್ಲ ಒಂದೆಡೆ ನಿಂತು ಎಸ್ಕಲೇಟರ್‌ನಲ್ಲಿ ಮೇಲೆ ಬರುವವರ - ಕೆಳಗೆ ಇಳಿಯುವವರ ನೋಡುತ್ತ ನಿಂತಿದ್ದೆ.    ನಿಂತು ನಿಂತು ಸಾಕಾಗಿ ನನ್ನ ಮಗಳಿಗೆ ಫೋನಾಯಿಸಿದೆ. 'ಇನ್ನೂ ಎಷ್ಟೊತ್ತು? ಆ ಕಡೆಯಿಂದ ಅಷ್ಟೇ ತ್ವರಿತವಾಗಿ ಬಿಲ್ಲಿಂಗ್ ಕೌಂಟರ್‌ನಲ್ಲಿ ನಿಂತಿದ್ದೇವೆ ನಾನು 'ಓಕೆ' ಅಂದು ಫೋನ್‌ಕಟ್ ಮಾಡಿದೆ.



ಸರಿ ಇನ್ನೇನು ಮಾಡುವುದು ಅಂದುಕೊಳ್ಳುತ್ತ ಮತ್ತೆ ಅದೇ ಎಸ್ಕಲೇಟರ್ ನತ್ತ ಕತ್ತು ತಿರುಗಿಸಿದೆ.  ಹಿಂದಿನಿಂದ ಧ್ವನಿ ಕೇಳಿಸಿತು 'ಹಲೋ ಅಂಕಲ್!' ತಿರುಗಿ ನೋಡಿದರೆ ಇಬ್ಬರು ಕಾಲೇಜು ಓದುವ ಹುಡುಗಿಯರು ಅಂತ ಕಾಣುತ್ತೆ, ಕೈಯಲ್ಲಿ ಒಂದು ಕುರ್ತಾ ಹಿಡಿದುಕೊಂಡು ನಿಂತಿದ್ದರು.  ನಾನು ಪ್ರಶ್ನಾರ್ಥಕವಾಗಿ ಅವರತ್ತ ನೋಡಿದೆ. ಆಗ ಅವರಲ್ಲಿ ಒಂದು ಹುಡುಗಿ, ನಮ್ಮ ಅಪ್ಪನೂ ನಿಮ್ಮಥರಾನೆ ಎತ್ತರ ಇದ್ದಾರೆ, ನಿಮ್ಮದೇ ಮೈಕಟ್ಟು.  ಅವರಿಗೊಂದು ಕುರ್ತಾ ತೆಗೆದುಕೊಳ್ಳಬೇಕು.  ನಮ್ಮ ಜೊತೆ ಅವರು ಬಂದಿಲ್ಲ. ಈ ಕುರ್ತಾ ಟ್ರೈ ಮಾಡ್ತಿರಾ? ಅಂತ ಕೇಳಿದಾಗ ನನಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತೋಚಲಿಲ್ಲ.  ಈ ಹುಡುಗಿಯರು ಅವರ ಅಪ್ಪನ ಹುಟ್ಟುಹಬ್ಬಕ್ಕೋ ಅಥವಾ ಇನ್ಯಾವುದೋ ಸಂದರ್ಭಕ್ಕೆ ಆಶ್ಚರ್ಯ ಗೊಳಿಸಲೋ ಅಂತ ಇರಬೇಕು!  ನಾನು ಮರುಮಾತನಾಡದೆ ಅವರ ಕೈಯಲ್ಲಿನ ಕುರ್ತಾ ತೆಗೆದುಕೊಂಡು ಭುಜದ ಅಳತೆ ನೋಡುವಂತೆ ಹೇಳಿದೆ.  ಸರಿಯಾಗಿ ಇದೆ ಎಂದು ಅವರು ಹೇಳಿದಾಗ ಇದೇ ಸೈಜಿನ ಕುರ್ತಾ ತೆಗೆದುಕೊಳ್ಳುವಂತೆ ಹೇಳಿದೆ. ಅಲ್ಲೇ ನಿಂತಿದ್ದ ಸೇಲ್ಸ್ ಬಾಯ್‌ಗೂ ನಾನು ಹೇಳಿರುವ ಸೈಜು ಸರಿಯಾಗಿದೆಯೋ ಎಂದು ಖಾತ್ರಿ ಮಾಡಿಕೊಂಡೆ.  'ಸರಿ' ಅಂತ ಹೇಳಿದ ಆ ಹುಡುಗಿಯರು ನನ್ನತ್ತ  ಧನ್ಯತಾ ಭಾವದಿಂದ ನೋಡಿದರು.  ನಸುನಕ್ಕ ನಾನು ಅವರತ್ತ  ಕೈಬೀಸುವದಕ್ಕೂ ನನ್ನ ಮಗಳ ಫೋನ್ ಬಂತು 'ಪಪ್ಪಾ, ನಾವು ಗ್ರೌಂಡ್ ಫ್ಲೋರ್‌ನಲ್ಲಿ ಕಾಯುತ್ತಿದ್ದೇವೆ .. ಬಾ' ಅಂತ. 

ಮೊದಲ ಮಹಡಿಯ ಎಸ್ಕಲೇಟರ್ ಇಳಿಯುತ್ತ ಯೋಚಿಸ ತೊಡಗಿದೆ ಶಾಪಿಂಗ್‌ಗೂ ನನಗೂ ಆಗದ ಸಮಾಚಾರ ಆದರೆ ಇವತ್ತಿನ ಶಾಪಿಂಗ್ ಬೇರೆಯದೇ ಆದ ಅನುಭವ ನೀಡಿತ್ತು.  ನಾನು ಬೇರೆಯವರ ಖುಷಿಗೆ ಆ ಸಂದರ್ಭಕ್ಕೆ ಕಾರಣವಾಗಿದ್ದು ನನಗೆ ಗೊತ್ತಿಲ್ಲದಂತೆ ನನ್ನನು ಉಲ್ಲಸಿತನಾಗಿಸಿತ್ತು.  ನಾನು ಖುಷಿಪಡದ ಜಾಗದಲ್ಲಿ ಬೇರೇಯವರಿಗೆ ಆ ಖುಷಿಯನ್ನು ಹಂಚಿದ್ದು ನಿಜವಾಗಿಯೂ ನನ್ನಲ್ಲೂ ಧನ್ಯತಾಭಾವ ಮೂಡಿಸಿತ್ತು.  ಅದೇ ಅಲ್ಲವೇ!  ಚಿಕ್ಕ ಚಿಕ್ಕ ವಿಷಯಗಳಲ್ಲಿ ಎಷ್ಟೊಂದು ಸಂತೋಷಕರ ತಿಷಯಗಳನ್ನು ಹೆಕ್ಕಿ ತೆಗೆಯಬಹುದು.  ಇಂಥ ಸಣ್ಣ ಸಣ್ಣ ಖುಷಿಗಳು ನಮ್ಮಲ್ಲಿ ಸಕಾರಾತ್ಮಕ ಯೋಚನೆಗಳು ಮೂಡುವಂತೆ ಮಾಡಿ ಜೀವನೋತ್ಸಾಹ ಇಮ್ಮಡಿಸುವಲ್ಲಿ ಸಂಶಯವೇ ಇಲ್ಲ.  ನಿಮಗೂ ಇಂಥ ಅನುಭವಾಗಿದ್ದಲ್ಲಿ ನನ್ನ ಅನಿಸಿಕೆಯೂ ಸಾರ್ಥಕ.

ಏನಂತೀರಿ .........! ಮಹೇಶ ಶ್ರೀ. ದೇಶಪಾಂಡೆ
   ತುಷಾರಪ್ರಿಯ

Monday, 27 March 2017

ಅವಳಿಲ್ಲದ ಮನೆ


ಅವಳಿಲ್ಲದ ಮನೆ

                      ಅಂಗಳದಾಗ ಲಗೋರಿ ಆಡತಿದ್ದ ನನ್ನ ಮಗ ಕಿಶೋರ ಎಡವಿ ಬಿದ್ದು ಮಣಕಾಲು ಮಂಡಿ ಕೆತಗೊಂಡು ಏಳಲಿಕ್ಕೆ ಒದ್ದಾಡತಿದ್ದಾಗ ಕಟ್ಟಿಮ್ಯಾಲ ಕೂತು ಅಕ್ಕಿ ಆರಸತಿದ್ದ ನನ್ನ ಅರ್ಧಾಂಗಿ ಸುಮಂಗಲಾ ಮರವನ್ನು ಕೆಳಗಿಟ್ಟು ಕೂತಲ್ಲೇ ಒದರಿದಳು  ಲೇ, ಮಂಗ್ಯಾ, ನೆಟ್ಟಗ  ಆಟಾ ಆಡೋದು ಗೊತ್ತಿಲ್ಲಾ ಹುಚ್ಚು ಪ್ಯಾಲಿ ! ಅಂದಾಕೀನ ಬಿದ್ದ ಮಗನ್ನ ಎಬ್ಬಸಲಿಕ್ಕೆ ಓಡಿದಳು. ಕಾದಂಬರಿ ಓದಿಕೋತ ಅಡ್ಡಾಗಿದ್ದ ನಾನು ಎದ್ದುಕುಳಿತು ಕಿಟಕಿ ಆಚೆ ನೋಡ್ಕೋತ ನಿಂತೆ. ಬಿದ್ದ ಅವನನ್ನ ದರದರಾ ಎಳಕೊಂಡು ಬಚ್ಚಲುಮನಿಗೆ ಹೋದಾಕೀನ ಅವನ ಕಾಲ ಗಾಯಕ್ಕೆ ನೀರ ಸುರದು, ಒರಸಿ ಮ್ಯಾಲಷ್ಟು ಪಾಂಡ್ಸ್ ಪೌಡರ್ ಮೆತ್ತಿದ್ದಳು.  ಪರೀಕ್ಷಾ ಹತ್ರ ಬಂದಾವು; ಓದಿಲ್ಲಾ ಬರೀ ಇಲ್ಲ, ಬರೇ ಆಟಾ ಆಡ್ಕೋತ ಬಿದ್ದಿರಬ್ಯಾಡ ಅಂತ ಹೇಳೀಲ್ಲೇನು ನಿನಗ? ಅಂತ ಗದರತಿದ್ದಳು. ಗಾಯದ ಮ್ಯಾಲ ಬರಿ ಎಳದಂಗಾಗಿ ಸಣ್ಣಮಾರಿ ಮಾಡಿ ಅಳಕೋತ ನಿಂತ.  ಲೇ, ಏನೇ ಅದು? ಯಾಕ ಅವನ ಗದರತಿ? ಆಟಾ ಆಡೋ ಮುಂದ ಇದೆಲ್ಲಾ ಇದ್ದದ್ದ. ಹುಡುಗೂರು ಲಗೋರಿ ಆಡೋದ ಬಿಟ್ಟು ನಾನು ನೀನು ಆಡಲಿಕ್ಕೆ ಆಗತದೇನು? ಹೋಗ್ಲಿ ಬಿಡ ಅಂದೆ. ರೀ ಮಾರಾಯ್ರ ನಿಮ್ಮ ಮಗನ್ನ ನೀವ ಸಂಭಾಳಸ್ರಿ. ನನಗಿನ್ನ ಆಗಂಗಿಲ್ಲ ನೋಡ್ರಿ ಮತ್ತ ಒಂದರ ದಿನಾ ನೆಟ್ಟಗೆ ಕೂತು ಓದ್ಯಾನೇನು ಇವಾ? ಕೇಳಬ್ಯಾಡ್ರಿ? ನಿಮ್ದ ಅಚ್ಛಾಬಾಳ ಆಗೇದ ಇವನ ಮ್ಯಾಲೆ. ವಹಿಸಿಕೊಂಡು ಬಂದ ಬಿಡ್ತಿರಲ್ಲ! ಇವಾ ಏನರ ಎಡವಟ್ಟಾದ್ರ ನನ್ನ ಜವಾಬ್ದಾರಿ ಅಲ್ಲ ನೋಡ್ರಿ ಮತ್ತ! ಅಂದಾಕೀನ ದುಮಗುಡಕೋತ ಅಡಗಿ ಮನಿಕಡಿ ಓಡಿದ್ಲು. ಈ ಗದ್ದಲದಾಗ ಒಲಿ ಮ್ಯಾಲ ಇಟ್ಟ ಹಾಲು ಉಕ್ಕಿ ಅರ್ಧಕ್ಕರ್ಧ ಪಾತೇಲಿ ಖಾಲಿ ಆಗಿತ್ತು.  ನನ್ನ ಹೊಟ್ಟಿ ಉರಸಲಿಕ್ಕೆ ಹುಟ್ಯಾನೀವಾ ಗೊಣಗಿದ್ದು ಕೇಳಿ  ಹೋಗ್ಲಿ ಬಿಡ, ಉಳದ ಹಾಲಿನ್ಯಾಗ ಚಲೊತ್ನಂಗ ಮಸಾಲಾ ಚಾ ಮಾಡು ಅಂತ ಅಲವತ್ತಗೊಂಡೆ.  ನಿಮಗಂತೂ ಹೊತ್ತಿಲ್ಲ ಗೊತ್ತಿಲ್ಲ, ಸೂಟಿ ಯಾಕರ ಬರ್ತದೋ? ಹೋದಾಗ ಬಂದಾಗ ಚಾ,ಚಾ ಅಂತ ಬಡಕೊಳ್ಳಿಕತ್ತಿದ್ರ, ಉಳಿದ ಕೆಲ್ಸಾ ಅಡಗಿ ಯಾರ ಮಾಡ್ತಾರ್ರಿ? ಅಂದ್ಲು.  ಲೇ, ಸುಮ್ಮಿ, ನಿನ್ನ ಕೈಯ್ಯಾಗಿನ ಚಾ, ಅದೇನ ಹೇಳ್ಲಿ, ಅಮೃತ ಕುಡದಂಗ ಇರ್‍ತದ ನೋಡು, ಮನಿ ಕೆಲ್ಸಾ ಬಗ್ಸಿ ಎಲ್ಲಾ ಇದ್ದದ್ದ, ಆಮ್ಯಾಲ ಮಾಡಿದ್ರಾತು ಎಲ್ಲಿ ಹೋಗ್ತದ ಕೆಲ್ಸಾ ಅಂದೆ.   ಇದಕ್ಕೇನು ಕಡಿಮಿ ಇಲ್ಲ, ಎಲ್ಲಿ ಬಿಡ್ತೀರಿ ನಿಮ್ಮ ಚಾಳಿ ಅನ್ನೋದಕ್ಕೂ ನಾನು  ಹೂಂ! ಹೂಂ! ಅಂದವನೆ ಹಿಂದಿನಿಂದ ಹೋಗಿ ಅವಳ್ನ ಬಳಸಿನಿಂತೆ. ಸುಮ್ನ ಇರ್ರಿ, ಪಡಸಾಲ್ಯಾಗ ಅವಾ ಕೂತಾನ, ನಿಮಗಂತೂ ಚೂರೂ ನಯಾ ನಾಜೂಕ ಇಲ್ಲ, ಸಣ್ಣ ಹುಡುಗೂರು ಆಡ್ದಂಗ ಆಡ್ತಿರಿ ಅಂದಾಕೀನಾ ಬಿಡಿಸ್ಕೊಳ್ಳಿಕ್ಕೆ ಒದ್ದಾಡತಿದ್ಲು, ಆದರೆ ಕೊಸರಾಟ ಹೆಚ್ಚಾದಂಗ ನಾನೂ ಪಟ್ಟ ಬಿಗೀ ಮಾಡ್ಲಿಕತ್ತೆ. ಇತ್ಲಾಗ  ಬಿಡಿಸ್ಕೊಳಿಕ್ಕೂ ಆಗವಲ್ದು ಅತ್ಲಾಗ ಒದರಿಕೊಂಡೇನಂದ್ರೂ ಇಲ್ಲ. ಸೋತ ಮಾರಿ ಮಾಡಿ ವಯ್ಯಾರ ಮಾಡ್ಕೋತ ಹಿಂದ ತಿರಗಿದ್ಲು.  ಅದಕ್ಕ ಕಾಯ್ತಿದ್ದ ನಾನು ಆಕಿಗೊಂದು ಮುತ್ತು ಕೊಟ್ಟಬಿಟ್ಟೆ. ಗೆದ್ದ ಸಂಭ್ರಮದಾಗ ಪಟ್ಟುಸಡಲು ಮಾಡ್ಡೆ. ಹುಲಿ ಕೈಯ್ಯಾಗೆ ಪಾರಾದ ಜಿಂಕೆ ಹಾಂಗ ಹಾರಿದಕೀನ  ಸಕ್ರಿಡಬ್ಬಿ ತೊಗೊಂಡು ಕುದಿಲೀಕತ್ತಿದ್ದ ನೀರಿಗೆ ೨ ಚಮಚಾ ಸಕ್ರಿ ಸುರದ್ಲು.  ಲೇ, ಸುಮ್ಮಿ, ಚಾ ಕುಡುದು ಹೀಂಗ ಒಂದ ರೌಂಡ ಪ್ಯಾಟಿಕಡೆ ಹೋಗಿ ಬರೋಣ ನಡಿ.. ನೀ ಹೆಂಗ್ಯೂ ಮುಂದಿನ ವಾರ ತವರಮನಿಗೆ ಹೋಗೋ ಪ್ಲಾನ ಇಟ್ಟಿಯಲ್ಲ. ಅಂದೆ.  ಪ್ಯಾಟೀಗೆ ಕರ್‍ಕೊಂಡ ಹೋಗಿ ಏನು ಮಾಡೋರಿದ್ದೀರಿ? ನನಗೇನು ನೀವು ಸೀರಿ ಕೊಡ್ಸೋದು ಬೇಕಾಗಿಲ್ಲ. ಅತ್ತೂಕರದೂ ಔತಣಾ ಕೊಡ್ಸಿಕೊಳ್ಳಕೀನ ಅಲ್ಲನಾ. ಅಂದ್ಲು. ನನ್ನ ಮನಸಿನ್ಯಾಗ ಅಬಾಬಾಬಾಬಾ! ಈ ಹೆಂಗ್ಸೂರ ಭಂಡ ಬುದ್ದಿಗೇ ಮೆಚ್ಕೋಬೇಕು. ಏನ ಚಾಲಕತನ, ತಮಗ  ಏನು ಬೇಕಾಗತದ ಅಂತ ಎಷ್ಟು ಚಂದ ಹೇಳ್ತಾರ, ಲೇ ನಿನಗ ಸೀರಿ ಕೋಡಸ್ದ ಇನ್ನ್ಯಾರ್‍ಗೆ ನಾ ಸೀರಿ ಕೊಡಸ್ಲಿ. ನನ್ನ  ಮನಸಿನ್ಯಾಗ ಇದ್ದದ್ದನ್ನ ಎಷ್ಟು ಕರೆಕ್ಟ ಹೇಳ್ದಿ ನೋಡು ಅಂದೆ ನೂರು ಕ್ಯಾಂಡಲ್ ಬಲ್ಪ ಹತ್ತಿಂದಗ ಪಳಾಪಳಾ ಹೊಳಿಯೊ ಮಾರಿ ನೋಡಿ ನನ್ಗೂ ಒಳ‌ಒಳಗ ಖುಷಿ ಆತು. ಲಗೂನ ತಯಾರಾಗಿ ಬರ್‍ತೇನಿ, ಅಷ್ಟರೊಳ್ಗ ನೀವು ಚಾ ಕುಡುದ ಮುಗುಸ್ರಿ ಅಂದಾಕೀನ ತಯಾರಾಗಲಿಕ್ಕ ರೂಂ ಕಡೆ ಹೊರಟ್ಲು. ಪಡಸಾಲಿಗೆ ಚಾ ಕಪ್ಪು ಹಿಡಕೊಂಡು ಮಗನ ಹತ್ರ ಕೂತೆ.  ಚಲೊತ್ನಂಗ ಓದಪಾ ಮಗನ, ಇಲ್ಲಾಂದ್ರ, ನಿಮ್ಮಮ್ಮ ಇದ್ದಾಳಲ್ಲ! ನನ್ನ ನಿನ್ನ ಇಬ್ರೂನು ಹುರುದು ಮುಕ್ಕುತಾಳ ನೋಡ ಮತ್ತ.. ಗೊತ್ತಾತಿಲ್ಲೊ? ಅಂತ ಕಣ್ಣ ಹೊಡದು ಅವನ ಬೆನ್ನ ಚಪ್ಪರಿಸಿದೆ.  ಹೂಂ! ಡ್ಯಾಡಿ ಅಂತ ತಲಿ ಅಳ್ಳಾಡಿಸ್ದಾ.  ನೋಡು ನಾವ ಇಲ್ಲೇ ಅರ್ಧಾ ತಾಸು ಪ್ಯಾಟಿಕಡೆ ಹೋಗಿ ಬರ್‍ತೇವಿ. ಬರೋಬ್ಬರಿ ಬಾಗಲಾ ಹಾಕ್ಕೊಂಡು ಓದ್ಕೋತ ಕೂಡು, ಗೊತ್ತಾತಿಲ್ಲೊ? ಅಂದೆ. ಅವಾ ಹೂಂಗುಟ್ಟಿ ಒಪ್ಪಿಗೆ ಕೊಟ್ಟ. 


                             ನನ್ನ ಹೆಂಡ್ತಿ ಜತಿ ಪ್ಯಾಟಿಗೆ ಹೋಗೋದಂದ್ರ ಒಂದ ದೊಡ್ಡ ಯುದ್ಧಕ್ಕೆ ಹೋದಷ್ಟ ತಯಾರಿ ಬೇಕಾಕ್ತದ. ಒಂದೊಂದು ಅಂಗಡಿಗೆ ಹೋದಾಗೂ ಅವಳ ಜಿಕೇರಿ ಶಾಣಾತನ ನೋಡಬೇಕು! ಖರೇನ ವ್ಯಾಪಾರಾ ಮಾಡಾವಾಗಿದ್ರ ಬಿಟ್ಟ ಓಡೇ ಹೋಗ್ತಾನ! ಕಾಯಿಪಲ್ಯೆ ತರಲಿಕ್ಕೆ ಹೋದ್ರಂತೂ ಮುಗದಹೋತು. ನಾನು ನಾಕ ಮಾರ ದೂರನ ನಿಂತಿರ್ತೆನೆ. ಇವಳ ಜಿಕೇರಿಗೆ ಅವರು ಒಪ್ಪಿ ಕೊಟ್ರ ಸರಿ, ಇಲ್ಲಾಂದ್ರ ದುಮಗುಡಕೋತ ಇನ್ನೊಂದು ಅಂಗಡಿ. ಅಲ್ಲೂ ಅದ ಕತಿ ಹಿಂಗ ಒಂದ ದಿನಾ ಏನಾತಂದ್ರ ನಡದ ನಡದ ಅಕೀನೂ ಸಾಕಾಗಿದ್ಲು, ನಿಂತ ನಿಂತ ನಾನು ಸಾಕಾಗಿದ್ದೆ. ಕಾಯಪಲ್ಲ್ಯಾ ಚೀಲಾ ನನ್ನ ಕೈಯಾಗ ಕೊಟ್ಟಾಕೀನ ಎಳನೀರು ಕುಡಿಲಿಕ್ಕೆ ಹೊಂಟ್ಲು. ಅಲ್ಲೂ‌ಅದ ಜಿಕೇರಿ, ಎಲ್ಲಾಕಡೆ ದೂರ ದೂರ ನಿಲ್ಲತಿದ್ದ ನಾನು ಆಗ ಅಕಿ ಹತ್ರ ಹೋಗಿ  ಲೇ, ಇವನ ಹತ್ರ ಜಿಕೇರಿ ಪಕೇರಿ ಮಾಡ್ಕೋತ ನಿಲ್ಲ ಬ್ಯಾಡ, ಕೇಳಿದಷ್ಟು ಕೊಟ್ಟು ಎಳನೀರು ಕುಡುದು ಹೋಗಣ ನಡಿ. ಅವಾ ಸಿಟ್ಟಿಗೆದ್ದು ಎಳನೀರು ಕೊಚ್ಚೋದ ಬಿಟ್ಟು ನಿನ್ನ ತಲಿ ಎಲ್ಲಾರ ಕೊಚ್ಚಿಗಿಚ್ಚಾನ ಅಂದೆ ನಾ ಹೇಳಿದ್ದು ಎಷ್ಟರ ಮಟ್ಟಿಗೆ ಅಕೀಗೆ ಅರ್ಥ ಆತೋಬಿಡ್ತೋ ನನಗಂತೂ ತಿಳಿಲಿಲ್ಲ. ಇವತ್ತಿನ ಪ್ಯಾಟಿ ಸುತ್ತಾಟ ಮುಂಚಿನ ಅನುಭವಕ್ಕಿಂತ ವಿಭಿನ್ನವಾಗೇನು ಇರಲಿಲ್ಲ. ನಾಲ್ಕಾರು ಸೀರಿ ಅಂಗಡಿ ಅಡ್ಡಾಡಿ ಒಂದು ಸಿಲ್ಕು ಸೀರಿ ತೊಗೊಳ್ಳೊ ಅಷ್ಟೊತ್ತಿಗೆ ನನಗಂತೂ ಸಾಕ ಸಾಕಾಗಿ ಹೋಗಿತ್ತು. ನಮ್ಮ ನಿಶ್ಚಿತಾರ್ಥವಾದ ಹೊಸದರಲ್ಲಿ ಆಗೊಮ್ಮೆ ಈಗೊಮ್ಮೆ ರಜಾಹಾಕಿ ಅವಳನ್ನ ಭೆಟ್ಟಿ ಮಾಡಲಿಕ್ಕೆ ಅವರ ಮನಿಗೆ ಹೋದ್ರ ನಮ್ಮ ಅತ್ತಿಮಾವನ ಸಂಭ್ರಮಾನ ನೋಡಬೇಕು. ಕೈಕಟ್ಟಿ ನಿಂತಗೊಂಡು ಉಪಚಾರ ಮಾಡೋರು, ಕೂತಕಡೆ ಅವಲಕ್ಕಿ, ಚಾ ಸರಬರಾಜು ನಡೆಯೋದು. ಉಪಚಾರ ಮುಗದ ಮ್ಯಾಲ ನೀವಿಬ್ರೂ ಮಾತಾಡ್ಕೋರ್ರಿ, ನನಗ ಅಡಗಿ ಮಾನ್ಯಾಗ ಕೆಲಸ ಅದ ಅಂತ ಅತ್ತಿ ಜಗಾ ಖಾಲಿ ಮಾಡಿದ್ರ, ಮಾವನವರು  ಅಳಿಯಂದ್ರು ಒಬ್ಬ ಇದ್ದಾರ, ಬಂದ ಮಾತಾಡ್ಕೋತಾ ಕೂಡು, ನಾ ಸ್ವಲ್ಪ ಲೈಬ್ರರಿ ಕಡೆ ಹೋಗಿ ಬರ್‍ತೇನೆ. ಅಂತ ಸೂಕ್ಷ್ಮವಾಗಿ ನಮಗೆ ಏಕಾಂತ ಸೃಷ್ಠಿ ಮಾಡುತ್ತಿದ್ದರು. ಕಳ್ಳನೋಟದ ಪರದಾಟ ಕೈ ಹಿಡಿದು ಎಳೆದು ಹತ್ತರ ಸೆಳೆದುಕೊಳ್ಳವರೆಗೂ ನಡೆಯೋದು ಹುಸಿ ಮುನಿಸು ತೋರಿಸ್ತ ನನ್ನ ಹಸಿವಿ ಜಾಸ್ತಿ ಮಾಡತಿದ್ಲು  ಸ್ವಲ್ಪ ತಡಕೋರಿ ಸದ್ಯ ನಿಮಗ ಉಪವಾಸನ ಗತಿ ಅಂತ ಬಿಡಿಸಿಕೊಳ್ಳಲ್ಲಿಕ್ಕೆ ಒದ್ದಾಡತಿದ್ಲು. ಮನಿವಳಗ ಕುತಗೊಂಡು ಎಷ್ಟೂ ಅಂತ ಪಿಸಗುಟ್ಟಗೋತ ಕುತಗೋಳಿಕ್ಕೆ ಆಗ್ತದ, ಅದಕ್ಕೆ  ನಾನು ಪಾರ್ಕಕಡೆಗೆ ಹೋಗಿ ಸುತ್ತಾಡಿಕೊಂಡು ಬರೋಣಾ ನಡಿ ಅಂತಿದ್ದೆ. ಅಲ್ಲಿ ಹೋದ ಮ್ಯಾಲ ಮಾತಾಡಲಿಕ್ಕೆ ಏನಾರ ವಿಷಯ ಬೇಕು, ಟೈಂಪಾಸ ಮಾಡಲಿಕ್ಕೆ ಡಜನ್‌ಗಟ್ಟಲೆ ಕಿತ್ತಳಿ ಹಣ್ಣುತೊಗೊಂಡು ತಿನ್ನಕೋತ ಕುತಗೋತಿದ್ವಿ. ನೋಡಲ್ಲಿ, ಪಾರಿವಾಳ ಎಷ್ಟು ಚಂದ ಗಿಡದ ಕೊಂಬಿ ಮ್ಯಾಲ ಕೂತಾವು  ಅಂತ ಹೇಳಿ,  ಆಕಿ ಮ್ಯಾಲ ನೋಡಿದ್ದ ತಡ ಕಿತ್ತಳಿ ಹಣ್ಣಿನ ಸಿಪ್ಪಿ ಆಕಿ ಕಣ್ಣ ಮುಂದ ಹಿಡಿದು ಒತ್ತಿ ಕಣ್ಣೊಳಗ ಹೋದ ಸಿಪ್ಪಿಯ ರಸ ಉರಿಲಿಕ್ಕೆ ಶುರುವಾಗಿ ಕಣ್ಣ ತಿಕ್ಕೋತ ನಿಂತಾಗ, ಬಾಳ ಉರಿಲಿಕ್ಕತ್ತದ ಏನು ಅಂತ ಸಮಾಧಾನ ಮಾಡೋರಂಗ,  ಎಲ್ಲಿ, ಬಾ ಇಲ್ಲಿ. ಗಾಳಿ ಊಬಿದರ ಕಡಿಮಿ ಆಗ್ತದ ಅಂತ ಅಕಿನ್ನ ಹತ್ರ ಎಳಕೊಂಡು ಉಫ್,ಉಫ್ ಅಂತ ಗಾಳಿ ಊದೋ ನಾಟಕಾ ಮಾಡತಿದ್ದೆ. ಊದೋ ನೆಪದಾಗ ತುಟಿಗೆ ತುಟಿ ಹತ್ರ ಆಗಿ ಎದಿಬಡಿತ ಇಬ್ಬರಿಗೂ ಜೋರಾಗ್ತಿತ್ತು. ಇಬ್ಬರಿಗೂ ಇದು ನಾಟಕಾ ಅಂತ ಗೊತ್ತಿದ್ದರೂ ಗೊತ್ತಿಲ್ಲದಂತ ನಟಸತಿದ್ದಿವಿ. ಅಕಿನೂ ಒಳ‌ಒಳಗೆ ಖುಷಿ ಪಡತಿದ್ಲು. ಈ ರೀತಿ ಚಲ್ಲಾಟದಾಗ ಟೈಂ ಹೋದದ್ದು ಗೊತ್ತಾಗತಿದ್ದಿಲ್ಲ.  ಮನಿವಳಗ ಕಾಯ್ತಿರ್‍ತಾರೆ, ಹೋಗೋಣ ನಡೀರಿ ಅಂದಾಗ ನನಗ ಭೂಮಿಮ್ಯಾಲ ಇದ್ದದ್ದು ಅರಿವಾಗಿತ್ತು.ಈ ಕಿತ್ತಲಿಹಣ್ಣು ತಿನ್ನೊ ಸಡಗರ ಮದಿವಿ ಆಗೋತನಗ ನಡದ ಬಿಟ್ಟಿತ್ತು. 
ಮಗನ ಪರೀಕ್ಷಾ ಮುಗುದು ನನ್ನಾಕೆ ತವರಿಗೆ ಹೊರಟು ನಿಂತಾಗ ನಾನು ನಾಲ್ಕುದಿನ ಇಕಿ ಜತಿಗೆ ಹೋಗಿ ಬರಬಹುದಾಗಿತ್ತು, ಅಂತ ಯೋಚಿಸಿದ್ರೂ ಕರೆಯದೆ ಹೋಗೋದು ಹ್ಯಾಂಗ? ನಾ ಬ್ಯಾರೆ ಮೊದ್ಲ ರಜಾ ಸಿಗಂಗಿಲ್ಲ, ಬರಲಿಕ್ಕೆ ಸಾಧ್ಯ ಇಲ್ಲ. ಅಂತೆಲ್ಲ ಡೈಲಾಗ್ ಬಿಟ್ಟಿದ್ದೆ. ರಜಾ ತೊಗೋಳೋದು ಏನೂ ಅಂತಾ ಕಷ್ಟ ಇದ್ದಿದ್ದಿಲ್ಲ. ಈಗ ಏಕಾ‌ಏಕಿ ಬರ್‍ತೀನಿ ಅಂತ ಹೇಳಲಿಕ್ಕೆ ಅಹಂ ಅಡ್ಡ ಬಂದು ಸುಮ್ಮನಾದೆ. 

                  ಹೊರಡೊ ದಿನ ಇಕಿ ಮ್ಯಾನೇಜಮೆಂಟ್ ಲಕ್ಚರ್ ಬ್ಯಾರೇ ಕೇಳಬೇಕಾತು. ಅಕ್ಕಿ ಡಬ್ಬಿ ಇಲ್ಲಿ ಇಟ್ಟೇನಿ, ಕುಕ್ಕರ ಅಲ್ಲಿ ಇಟ್ಟೇನಿ, ಹಾಲು ಕಾಸಿ ಆರಿದ ಮ್ಯಾಲ ಫ್ರಿಜ್‌ನ್ಯಾಗ ಇಡ್ರಿ. ಕೆಲಸದಾಗಿ ಬಂದಾಗ ಮನಿವಳಗ ಲಕ್ಷ ಇರ್‍ಲಿ, ಇತ್ಯಾದಿ, ಇತ್ಯಾದಿ. ಕೋಲೆ ಬಸವನಂಗ ಗೋಣು ಅಳ್ಳಾಡಿಸಿ ಇಬ್ರನ್ನೂ ಬಸ್‌ನ್ಯಾಗ ಕೂಡ್ಸಿ ಟಾಟಾ ಮಾಡಿ ಮನಿಗೆ ಬಂದೆ. ಇನ್ನು ಹದಿನೈದು ದಿನದ ನನ್ನ ಬಲವಂತದ ಬ್ರಹ್ಮಚರ್ಯ ವೃತ ಹ್ಯಾಂಗ ಆಚರಿಸೋದು ಅಂತ ಯೋಚನಾ ಮಾಡಿ, ಓದಲಿಕ್ಕೆ ಬಾಕಿ ಇರೋ ಕತಿ ಪುಸ್ತಕಾ, ಕಾದಂಬರಿಗಳನ್ನು ಒಂದಕಡೆ ತಗದಿಟ್ಟೆ. ಅಡಗಿ ಮನಿಗೆ ಹೋಗಿ, ಚಾ ಮಾಡೋ ಸಲುವಾಗಿ ನೀರು ಕುದಿಲಿಕ್ಕೆ ಇಟ್ಟೆ. ಮನಿವಳಗ ಗಲಗಲ ಸೌಂಡ ಇಲ್ಲ. ಮಗನ ಉಲಕೋಚಿತನಕ್ಕೆ ಆವಾಗಾವಾಗ ಒದರಿಕೊಳ್ಳೊ ನನ್ನಾಕೆಯ ಕಲರವವಿಲ್ಲ. ಎಲ್ಲವೂ ಖಾಲಿ ಖಾಲಿಯಾದಂತೆನಿಸಿ ಅವಳಿಲ್ಲದ ಮನೆ ಬಿಕೋ ಅನ್ನಸಲಿಕ್ಕೆ ಶುರುವಾಯಿತು. ಊರು ಮುಟ್ಟಿದ ಮ್ಯಾಲ ಫೋನ್ ಮಾಡ್ತೀನಿ ಅಂತ ಹೇಳಿದ್ಲು, ಇನ್ನೂ ಫೋನ್ ಬರಲಿಲ್ಲ ಅಂತ ಯೋಚಿಸಲಿಕ್ಕತ್ತಿದೆ. ಕೈಯಲ್ಲಿ ಹಿಡಿದ ಕತಿ ಪುಸ್ತಕ ಮನಸು ಗಲಿಬಿಲಿಗೊಂಡು ಓದೋದು ಸಾಗಲೇ ಇಲ್ಲ. ಒಂದು ಜೀವ ಇನ್ನೊಂದು ಜೀವಾನ ಹಚಗೊಂಡ್ರ ಬಿಟ್ರ ಇರೋದು ಎಷ್ಟು ತ್ರಾಸು! ಇದ್ದದ್ದರಾಗ ಕಾಲ ಚಾಚಿ ಕನಸು ಕಾಣೊ ನಮಗ ಇಂಥಾ ಬಂಧನಾ..ನ  ಇರಬೇಕು? ನನಸು ಮಾಡೊ ಛಲಾ ಹುಟ್ಟುಸ್ತಾವು ಎಲ್ಲಾ ನೋವು ದುಃಖಾನು ಮರಸೊ ಶಕ್ತಿ ಪ್ರೀತಿಗೆ ಮಾತ್ರ ಇರ್‍ತದ. ಅದಿಲ್ಲದ ಬದುಕು ನಿರರ್ಥಕ ಅಂತಾನ ಹೇಳ್ಬೇಕು. 

                          ಊರು ತಲುಪಿ ಮನಿವಳಗ ಆರಾಮಾಗಿ ಎಲ್ಲಾರ ಹತ್ರ ಹರಟೆ ಹೋಡಕೋತ ಕೂತೇನಿ ಅಂತ ಆ ಕಡಿಯಿಂದ ಇಕಿ ಫೋನ್ ಬಂದ ಮ್ಯಾಲ ಸಮಾಧಾನ ಆತು. ಪ್ರೀತಿಯ ಸೆಳೆತ ಅಂದ್ರ ಇದ. ಪ್ರೀತಿಯ ಜಲ ನಿರಂತರವಾಗಿ ಹರಿದಾಗ ಮಾತ್ರ ಬಾಳಲ್ಲಿ ಹಸಿರು ಕಂಗೋಳಿಸೋದು. ನಾಲ್ಕದಿನ ಇದ್ದು ಬಂದ ಬಿಡು ಹದಿನೈದು ದಿನಗಟ್ಲೆ ಇರಲಿಕ್ಕ ಹೋಗಬ್ಯಾಡ, ಗೊತ್ತಾತಿಲ್ಲೊ ಅಂದೆ.  ಯಾಕ್ರಿ, ನೆಟ್ಟಗಿದ್ದೀರೋ ಇಲ್ಲೊ, ಆರಾಮ ಹದಿನೈದು ದಿನಾ ಇದ್ದ ಬಾ ಅಂದೋರು ನೀವ, ಈಗ ನೋಡಿದ್ರ ನಾಲ್ಕ ದಿನಾ ಅಂತಿರಲ್ಲ. ಕೈ ಬಾಯಿ ಸುಟಗೊಂಡು ಅಡಿಗೆ ಮಾಡಿ ಊಟಮಾಡ್ರಿ ನಾ ಅಂದ್ರ ಏನು ಅಂತ ಗೊತ್ತಾಗ್ತದ ನಿಮಗ. ನಾ ಹದಿನೈದು ದಿನಬಿಟ್ಟ ಬರಾಕೀ, ಅಪರೂಪಕ್ಕೆ ಬಂದೇನಿ, ನಾಳೆ ಮಾತಾಡ್ತೇನಿ ಅಂದಾಕಿನ ಫೋನ್ ಕಟ್ ಮಾಡಿದ್ಲು, ಹ್ಯಾಂಗ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಪೆಚ್ಚಾದೆ.  ಅಡಿಗೆಮನೆಯ ಬುಟ್ಟಿಯಲ್ಲಿದ್ದ ಕಿತ್ತಳೆಹಣ್ಣಿನಲ್ಲಿ ನನ್ನವಳ ತುಂಟತನದ ಮುಖ ಮೂಡಿ ಮಾಯವಾದಂತಾಯಿತು.                                               
-- ಮಹೇಶ್ ಶ್ರೀ ದೇಶಪಾಂಡೆ   
(ತುಷಾರಪ್ರಿಯ)

(ದಿನಾಂಕ ೧೫.೯.೨೦೧೩ ರಂದು ಕರ್ಮವೀರವಾರಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.) 

Monday, 20 March 2017

ಒಂಟಿ


ಒಂಟಿ


ಹುಚ್ಚು ಮನಸಿನ ಹೊಳೆಯಲಿ 
ನಾವೆ ನಡೆಸುವ ನಾವಿಕ ನೀನು
ಆಸೆಕನಸುಗಳು ಗರಿಗೆದರಿ 
ಜೊತೆಗೂಡಿದ ಗೆಳೆಯ ನೀನು
ಪರಿತಪಿಸಿದ ಮನಕೆ ಸಾಂತ್ವನ 
ನೀಡಿದ ಸೊಗಸುಗಾರ ನೀನು
ಕಥೆ ಹೇಳಿ ಲಾಲಿ ಹಾಡಿದ 
ಮೋಡಿಗಾರ ನೀನು
ಬಿರುಗಾಳಿ ಮಳೆಗೆ ತತ್ತರಿಸಿ ದೋಣಿ
ಮರೆತ ಮೈಮನ ಕಣ್‌ಬಿಟ್ಟಾಗ 
ಕರಗಿಹೋದ ಕನಸುಗಾರ ನೀನು
ದಡ ಸೇರಲು ತವಕಿಸಿ ತಡಬಡಿಸಿದೆ ನಾನು
ನಿರಾಸೆ ಮಡುವಲಿ ತೇಲುತ ಬಡಬಡಿಸಿದೆ ನಾನು
ದಿಕ್ಕುತೋಚದೆ ಚಡಪಡಿಸಿದೆ.... ಈ ಕ್ಷಣ ನಾನು
ಕೈಚಾಚಿ ನಿಂತೆ ಅಭಯಹಸ್ತ ನೆರವಕೋರಿ ನಾನು
ಹಾತೊರೆದು ಹಾತೊರೆದು 
ಕೊನೆಗೂ... ಒಂಟಿಯಾದೆ ನಾನು.


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Tuesday, 14 March 2017

ಕೆಂಪು ಸಂಜೆ


ಕೆಂಪು ಸಂಜೆ


ರಕ್ತರಂಜಿತ ಮೋಡ ಮುಸುಕಿದ ರವಿಯೇ......
ರತ್ನಾಕರ ಒಡಲ ಸೇರಲು ತವಕಿಸಿದ ಭಾಸ್ಕರನೇ.......
ಮೋಡ ಸರಿಯುವ ಮೊದಲು ಯೋಚಿಸು.....
ಒಡಲು ಸೇರುವ ಮೊದಲು ಇನ್ನೊಮ್ಮೆ ಯೋಚಿಸು.....
ನೇಪಥ್ಯಕೆ ಜಾರುವ ಮೊದಲು ಮುಗದೊಮ್ಮೆ ಯೋಚಿಸು......
ಸಂಜೆಯ ಕೆಂಪು ಕರಗುವ ಮುನ್ನ......
ತಂಗಾಳಿಯ ಕಂಪು ಪಸರಿಸಿ......
ಚಂದ್ರ ತಾರೆಯರ ಇರುಳರಜನಿಗೆ ನಾಂದಿಯಾಗುವ ಮೊದಲು....
ಮತ್ತೊಂದು ಬೆಳಗಿಗೆ ಗಳಿಗೆ ನೇಮಿಸುವ ಮೊದಲು......
ಚಿರಕಾಲ ನೆನಪಲಿ ಉಳಿಯಲಿ ಈ ಸಂಜೆಯ ಕೆಂಪು

**__**__**
-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Friday, 10 March 2017

ಪ್ರೀತಿಯ ಸಾಲ


ಪ್ರೀತಿಯ ಸಾಲ


ಪನ್ನೀರ ಒಲವ ಧಾರೆ ಚಿಮ್ಮಿಸಿ 
ತೀರಿಸಲೆ ನಿನ್ನೀಪ್ರೀತಿಯ ಸಾಲ?
ಜೇನು ಸುಧೆಯ ಸುರಿಸಿ 
ತೀರಿಸಲೆ ನಿನ್ನೀಪ್ರೀತಿಯ ಸಾಲ ?
ಕ್ಷೀರ ಸಾಗರ ಹರಿಸಿ 
ತೀರಿಸಲೆ ನಿನ್ನೀಪ್ರೀತಿಯ ಸಾಲ ?
ಸಾಲು ಸಾಲು ದೇವರಿಗೆ ಹರಕೆ ಹೊತ್ತು 
ತೀರಿಸಲೆ ನಿನ್ನೀಪ್ರೀತಿಯ ಸಾಲ?
ಸಂತೈಸಿ ಮುದನೀಡಿ 
ತೀರಿಸಲೆ ನಿನ್ನೀಪ್ರೀತಿಯ ಸಾಲ ?
ಕೋಡಿ ಕಣ್ಣೀರು ಹರಿಸಿದರೆ 
ತೀರೀತೆ ನಿನ್ನೀಪ್ರೀತಿಯ ಸಾಲ ?
ತೀರಿಸುವ ಪರಿ ಅರಿಯದೆ 
ಮುಳುಗಿದೆ ನಿನ್ನೀಪ್ರೀತಿಯ ಸಾಲದಲಿ 



--ಮಹೇಶ. ಶ್ರೀ. ದೇಶಪಾಂಡೆ
ತುಷಾರಪ್ರಿಯ 

Tuesday, 7 March 2017

ಮನದನ್ನೆಗೊಂದು ನಿವೇದನೆ


ಮನದನ್ನೆಗೊಂದು ನಿವೇದನೆ


       ಹದಿಹರೆಯದ ಜೋಡಿಗಳ ಕುಡಿನೋಟದ ಚಲ್ಲಾಟ, ತುಟಿಯಂಚಿನ ನಸುನಗು, ಹುಸಿಕೋಪದ ಹುಚ್ಚಾಟ, ತುಡಿತಕ್ಕೆ ಮಿಡಿಯುವ ಹೃದಯ, ಒಲವಿಗೆ ಪರಿತಪಿಸಿ ಹೊಯ್ದಾಡುವ ಮನಗಳು........ಆಹಾ! ಎಂಥಾ ಮಧುರ ಕಲ್ಪನೆ, ಆಹಾ! ಎಂಥಾ ಸುಂದರ ಕನಸು, ಆಹಾ! ಎಂಥಾ ರೋಮಾಂಚಕ ಕ್ಷಣವದು........ಇನ್ನು ಕಾಯುವ ಹಾಗಿಲ್ಲ, ನಿರ್ಧರಿಸಿಯಾಗಿದೆ. ಆ ಒಂದು ಸಮಯ ಬಂದಾಗಿದೆ. ನನ್ನಲ್ಲಿ ಪಕ್ಷಗೊಂಡಿರುವ ಬೇಗುದಿಯನ್ನು ನಿವೇದಿಸಿಕೊಳ್ಳಲು ಇದಕ್ಕಿಂತ ಸರಿಯಾದ ಸಂದರ್ಭ ಮತ್ತೆ ಕೂಡಿಬರಲಾರದು. ಹಾಗಂದುಕೊಂಡಿದ್ದೆ ತಡ ಎದೆಬಡಿತ ಇಮ್ಮಡಿಯಾಯಿತು. ಒಂದೇ ಸಲ ನೂರಾರು ರೈಲುಗಳು ಎದೆಯಲ್ಲಿ ಓಡಾಡಿದ ಅನುಭವ. ಕೆಂಪುಗುಲಾಬಿ ಹೂವನ್ನು ಹಿಡಿದು ನಾನು ಮಜನು ಆದೆ. ನಸುನಾಚಿ ಕೆಂಪಾದ ನನ್ನ ಲೈಲಾ ಕೆಂಪುಕೆನ್ನೆಯ ಒಡತಿಯಾದಳು. ಕಣ್ಣಿಗೆ ಕಣ್ಣು ಸೇರಿಸಲಾರದೆ ಓಡಿ ಹೊರಟಳು. ನಾನು ಅವಳ ಹಿಂದೆ ಓಡಿ ಅವಳ ಕೈಹಿಡಿದೋ, ಜಡೆ ಎಳೆದೋ ನಿಲ್ಲಿಸಿ ಅವಳಲ್ಲಿ ಮನೆಮಾಡಿದ್ದ ಆ ನಾಚಿಕೆಯನ್ನು ನನ್ನ ಕಣ್ಣು ತುಂಬಿಕೊಳ್ಳುವದಕ್ಕಾಗಿ ಹಪಹಪಿಸಿದೆ. ಪ್ರೀತಿಯ ಸೆಳೆತವೇ ಅಂಥಾದ್ದು. ಪ್ರೀತಿಯನಶೆ ಅಂಥಾದ್ದು. 

ಪ್ರೀತಿ, ಪ್ರೇಮಗಳ ಸೆಳೆತ ಒತ್ತಟ್ಟಿಗಿರಲಿ, ಪ್ರಜ್ಞೆ ಇಟ್ಟುಕೊಂಡು ಜೀವನ ನಡೆಸುವ ಸವಾಲು ಈಗ ನನ್ನ ಮುಂದಿರುವ ವಾಸ್ತವ. ಇನ್ನು, ಈ ಪ್ರೀತಿ ಅನುರಾಗಗಳ ಉಳಿವಿಗೆ ಹೋರಾಟದ  ಬದುಕು ನಡೆಸಲೇಬೇಕು. ಸಾರ್ಥಕ ಹೋರಾಟಗಳ ಬದುಕು ಸಾಧನೆಗಳ ಸಾಗರವಾಗಬೇಕು. ಆ ಸಾಗರದ ಅಧಿಪತಿ ನಾನಾಗಬೇಕು. ಆಗಲೇ ಈ ಮನದ ನಿವೇದನೆಗೆ ಅರ್ಥಸಿಕ್ಕು ಗುಲಾಬಿಯ ಕಂಪು ನಶೆಯಲ್ಲಿ ಕೊನೆಗೊಂಡು, ಪ್ರಜ್ಞೆಯ ಎಚ್ಚರಿಕೆ ಗಂಟೆ ಬಾರಿಸಿ, ಸಾಧನೆಯಲ್ಲಿ ಕೊನೆಗೊಂಡಾಗ ಸಾರ್ಥಕತೆಯ ಭಾವದ ಹೊನಲು ಹರಿಯಲು ಸಾಧ್ಯವಾದೀತು. ಹೃದಯ ಕದ್ದ ಚೋರ ನಾನೆಂದು ತಿಳಿದಿದ್ದೆ ಆದರೆ ಮನಸು ಗೆದ್ದ ಪೋರಿ ಅವಳಾಗಿದ್ದಳು. ನೋಟಗಳು ಒಂದಾಗಿ ತುಟಿಗೆ ತುಟಿ ಹತ್ತಿರವಾಗಿ ಹೃದಯಬಡಿತ ಏರತೋಡಗಿತು......... ಕಿವಿಗಪ್ಪಳಿಸಿದ ಗಡಿಯಾರದ ಅಲಾರ್ಮ ಸದ್ದಿಗೆ ಬೆಚ್ಚಿಬಿದ್ದು ಕಣ್ಣು ಬಿಟ್ಟಾಗ ಅಡುಗೆಮನೆಯಿಂದ ಆಕಾಶವಾಣಿಯಾಯಿತು. ಏಳ್ತಿರೋ ಹೇಗೆ? ಮಕ್ಕಳನ್ನು ಸ್ಕೂಲಿಗೆ ಬಿಟ್ಟು ನೀವು ರೆಡಿಯಾಗಿ ಆಫೀಸಿಗೆ ಹೋಗೋದ್ಯಾವಾಗ? 'ಛೇ......! ಹಾಳಾದ  ಅಲಾರ್ಮ, ಸರಿಯಾದ ಸಮಯಕ್ಕೆ ಬಡಕೊಳ್ತು' ಅಂತ ಗೊಣಗುತ್ತ, ಲೇ......! ಕಾಫಿ ಕೊಡು ಎನ್ನುತ್ತ ಅಡುಗೆ ಮನೆಯತ್ತ ಹೆಜ್ಜೆಹಾಕಿದೆ. 


-- ಮಹೇಶ್ ಶ್ರೀ ದೇಶಪಾಂಡೆ
ತುಷಾರಪ್ರಿಯ

Friday, 3 March 2017

ನಕ್ಷತ್ರ


ನಕ್ಷತ್ರ


ನಾನೊಂದು ಮಿನುಗುವ ನಕ್ಷತ್ರ
ಪ್ರಖರ ಪ್ರಕಾಶದಿ ಪ್ರಜ್ವಲಿಸುವ ನಕ್ಷತ್ರ
ಕಾಲನ ಕಾಲ್ತುಳಿತಕ್ಕೆ ಕಂಗೆಟ್ಟ ನಕ್ಷತ್ರ
ಕಾಂತಿಯು ಕಂದದಿರಲು ಕರಬುವ ನಕ್ಷತ್ರ
ನಾನಾಗಲಾರೆ 
ಕಾಂತಿಹೀನ ಕಪ್ಪು ರಂಧ್ರದ ನಕ್ಷತ್ರ
ನಾನಾಗಲಾರೆ 
ಕಿರಣಗಳ ಕಬಳಿಸೋ ನಕ್ಷತ್ರ
ನಾನೆಂದೂ ಮಿನುಗುವ ನಕ್ಷತ್ರ


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ 

Wednesday, 1 March 2017

ಪ್ರೀತಿಯ ಕಡಲು


ಪ್ರೀತಿಯ ಕಡಲು


ನೀನೊಂದು ಪ್ರೀತಿಯ ಕಡಲು
ಅಮೃತ ಸಿಂಚನ ಸಂಜೀವಿನಿ ಒಡಲು
ಹೊಂಬೆಳಕ ಕಿರಣ ಹರಿದ ಹೊನಲು
ನನಗೊದಗಿದ ಸೌಭಾಗ್ಯ ಅದರೊಳು ಈಜಲು
ಬದುಕಿಗೆ ಒಂದರ್ಥ ಸಾರ್ಥಕ್ಯ ತಂದ ಮಜಲು
ಈಜಿದಷ್ಟೂ ದೂರ ..... ದಡ ಸೇರಲಾರದ ಗೋಜಲು
ನಾನಲ್ಲೆ ಇರಬಯಸಿದ ಪ್ರೀತಿಯ ಕಡಲು


--ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 27 February 2017

ಸುನಾಮಿ


ಸುನಾಮಿ

ನಿನ್ನೊಲವ ನೆನಪಿಗೆ ಸಿಲುಕಿದೆ ಸುಂಟರಗಾಳಿಯಾಗಿ
ನಿನ್ನೊಲವ ಮಾತು ಮಾರ್ದನಿಸಿ ಕುಳಿರ್ಗಾಳಿಯಾಗಿ
ನಿನ್ನೊಲವ ಕಂಪು ಪಸರಿಸಿ ತಂಗಾಳಿಯಾಗಿ
ನಿನ್ನ ಪೌರ್ಣಿಮೆಯ ಚಂದಿರನ ಸೆಳೆತ ಅಲೆಭರತವಾಗಿ
ನಿನ್ನ ಪ್ರೀತಿಯ ಕಂಪನದ ಹಿತ ಬದಲಾಗದಿರಲಿ ಸುನಾಮಿಯಾಗಿ
ನಿನ್ನ ಪ್ರೇಮದ ಜಹಜಿನಲಿ ಪಯಣಿಸುವ ಸ್ನೇಹಿತನಾಗಿ



--ಮಹೇಶ ಶ್ರೀ. ದೇಶಪಾಂಡೆ

ತುಷಾರಪ್ರಿಯ

Monday, 20 February 2017

ದರ್ಬಾರು


ದರ್ಬಾರು


ಎತ್ತರ ನಿಲುವು, ನೀಳಕಾಯ, ಸಾದಗಪ್ಪು, ಚಿಗುರು ಮೀಸೆಯ ಯುವ ರುದ್ರೇಗೌಡ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಬಾಯಿ ಮೇಲೆ ಬೆರಳಿಟ್ಟುಕೊಂಡು ಸೆರಗಿನಲ್ಲಿ ಮುಖ ಮರೆಮಾಚಿ  ಓರೆಗಣ್ಣಿನಿಂದ ನೋಡದ ಹೆಂಗಸರೇ ಇಲ್ಲ ! ಅಂತಹ ಸುಂದರ ಚೆಲುವು ಅವನದು. ಬುಲೆಟ್ ಮೋಟಾರ್‌ಸೈಕಲ್ ಏರಿ ಪಟ್.... ಪಟ್.... ಪಟ್.... ಪಟ್.... ಅಂತ ಭೋರಿಡುತ್ತಾ ಹೋಗುವಬ ಪರಿ ನೋಡಲು ಎರಡು ಕಣ್ಣು ಸಾಲದಾಗಿತ್ತು.  ರಾಜೇಗೌಡರ ಏಕೈಕ ವಂಶದ ಕುಡಿ ರುದ್ರೇಗೌಡನನ್ನು ತಾಯಿ ರುದ್ರಾಣಿ ಅತೀ ಮುದ್ದಿನಿಂದಲೆ ಬೆಳಸಿದ್ದರು.  ತಲೆಮಾರು ಕೂತು ತಿಂದರೂ ಕರಗದಷ್ಟು ಹೊಲ ಗದ್ದೆ ತೋಟ ಬೆಳ್ಳಿ ಬಂಗಾರ ವಂಶ ಪಾರಂಪರ್ಯದಿಂದ ಬಳುವಳಿಯಾಗಿ ಬಂದು ರುದ್ರೇಗೌಡನು ಆ ಊರಿನ ಅನಭಿಷಕ್ತ ದೊರೆಯಂತೆ ಮೆರೆಯುತ್ತಿದ್ದ. 

ರುದ್ರೇಗೌಡ ಚಿಕ್ಕವನಿದ್ದಾಗ ರಾಜೇಗೌಡರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.  ಇದ್ದೊಬ್ಬ ಮಗ ಓದಿ ವಿದ್ಯಾವಂತನಾಗಲಿ ಎಂದು ನಗರದಲ್ಲೊಂದು ಮನೆ ಮಾಡಿ ಊಟೋಪಚಾರಗಳಿಗೆ ಕಡಿಮೆಯಾಗದಂತೆ ಸಕಲ ಸೌಕರ್ಯಗಳನ್ನೂ ಕಲ್ಪಿಸಿದ್ದರು.  ಕೂತು ನಿಂತರೆ ಆಳುಗಳ ಸಾಲೆ ಇವನ ಸೇವೆಗೆ ನಿಲ್ಲುತ್ತಿತ್ತು.  ಒಟ್ಟಿನಲ್ಲಿ ಈ ರುದ್ರೇಗೌಡ ದಿನವೂ ಹಾಲು ತುಪ್ಪದಲ್ಲಿ ಕೈ ತೊಳೆಯುತ್ತಿದ್ದ.  ಇಷ್ಟೆಲ್ಲ ಅನುಕೂಲಗಳಿದ್ದರೂ ಓದಿನಲ್ಲಿ ಅಷ್ಟೇನೂ ಆಸ್ಥೆ ತೋರದ ರುದ್ರೇಗೌಡ ಅಂತೂ ಇಂತು ೧೦ನೇ ಕ್ಲಾಸ್ ತೇರ್ಗಡೆಯಾದ ಆ ಗೌಡರ ವಂಶದ ಮಟ್ಟಿಗೆ ಪ್ರತಿಷ್ಠೆಯಾದರೆ, ಊರ ಮಟ್ಟಿಗೆ ದಾಖಲೆಯಾಯಿತು.  ಒಲ್ಲದ ಮನಸ್ಸಿನಿಂದ ಕಾಲೇಜು ಮೆಟ್ಟಿಲೇರಿದ ರುದ್ರೇಗೌಡ ಒಂದೇ ವರ್ಷಕ್ಕೆ ಮಕಾಡೆ ಮಲಗಿ ಊರ ಕಡೆ ಮುಖ ಮಾಡಿದ್ದ.  ಆತ ಡುಮಿಕಿ ಹೊಡೆದು ವಾಪಸು ಬಂದ ಎನ್ನುವುದಕ್ಕಂತ ಕಾಲೇಜು ಮಟ್ಟಿಲೇರಿದ ಊರಿನ ಏಕೈಕ ಭೂಪನೆಂದು ಮನೆ ಮಂದಿ ಎಲ್ಲ ಕೊಂಡಾಡಿದ್ದರು!  ಊರಜನ ತಲೆ ಅಲ್ಲಾಡಿಸಿದ್ದರು! ಇದ್ದ‌ಒಬ್ಬ ಮಗ ಕಣ್ಣಮುಂದೆ ಇದ್ದು ಹೊಲಗದ್ದೆಗಳನ್ನು ನೋಡಿಕೊಂಡು ಇದ್ದರೆ ಅದಕ್ಕಿಂತ ಹೆಚ್ಚಿನ ಭಾಗ್ಯ ಏನಿದೆ! ಎಂಬ ಆಶಾಭಾವ ರಾಜೇಗೌಡರದಾಗಿತ್ತು. 

ರಾಜೇಗೌಡರ ಒತ್ತಾಸೆಗೆ ಎಂಬಂತೆ ರುದ್ರೇಗೌಡನು ಮನೆತನದ ದಿನನಿತ್ಯದ ಆಗು ಹೋಗುಗಳಲ್ಲಿ ಆಸ್ಥೆವಹಿಸತೊಡಗಿದ.   ಅದಲ್ಲದೆ ರುದ್ರೇಗೌಡನಿಗೆ ಬೇರೆ ಉತ್ತಮ ಅಯ್ಕೆಗಳಾದರೂ ಎಲ್ಲಿದ್ದವು? ಇನ್ನೇನು ಮಗ ಕೈಗೆ ಬಂದ, ಒಂದೊಂದಾಗಿ ಜವಾಬ್ದಾರಿಗಳನ್ನು ಆತನ ಹೆಗಲಿಗೆ ಹೊರಿಸಿ ವಿಶ್ರಾಂತ ಜೀವನ ನಡೆಸುವ ಯೋಜನೆ ರಾಜೇಗೌಡರದು.  ಬೇಸಾಯದ ಪಟ್ಟುಗಳನ್ನು ಸಹಜವಾಗಿಯೇ ಕರಗತ ಮಾಡಿಕೊಂಡ ರುದ್ರೇಗೌಡನ ಆರಂಭದ ದಿನಗಳು ಹುರುಪಿನಿಂದ ಕೂಡಿದ್ದವು.  ಮಗನ ಹುಮ್ಮಸ್ಸು ನೋಡಿ ಒಳಗೊಳಗೆ ಖುಷಿಯಾದ ರಾಜೇಗೌಡರು ನಿದಾನವಾಗಿ ಕಾರ್ಯವಿಮುಖರಾಗತೊಡಗಿದರು. ಮೊದಲೆರಡು ವರ್ಷಗಳಲ್ಲಿ ಸಮರ್ಥವಾಗಿ ಜವಾಬ್ದಾರಿ ನಿಭಯಿಸಿದ ರುದ್ರೇಗೌಡ ಅಪ್ಪ ಅಮ್ಮರ ಪ್ರೀತಿಯನ್ನು ಸುಲಭದಲ್ಲಿ ಇಮ್ಮಡಿಸಿಕೊಂಡ.  ನಂಬಿಕೆ ಉಳಿಸಿಕೊಳ್ಳುವುದರಲ್ಲಿಯೂ ಆತ ಹಿಂದೆ ಬೀಳಲಿಲ್ಲ.  ಊರ ಜನರೂ ಹೌದೆನ್ನುವಂತೆ ಎತ್ತರಕ್ಕೆ ಬೆಳೆದು ನಿಂತಿದ್ದ.  ರಾಜೇಗೌಡರು ದಿನನಿತ್ಯ ನಡೆಸುತ್ತಿದ್ದ ನ್ಯಾಯ ಪಂಚಾಯಿತಿಗಳಲ್ಲಿ ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ನ್ಯಾಯ ತೀರ್ಮಾನ ಮಾಡತೊಡಗಿದರು.  ತೀರ್ಮಾನದ ವಿಷಯಗಳಲ್ಲಿ ಆಗಾಗ ಮಗನ ಅಭಿಪ್ರಾಯ ಕೇಳುವುದು, ಸರಿಯೆನ್ನಿಸಿದ ಸಲಹೆಗಳನ್ನು ತಮ್ಮ ತೀರ್ಪುಗಳಲ್ಲಿ ಸೇರಿಸಿ ಆಜ್ಞೆಮಾಡುವುದು ನಿರಂತರವಾಗಿ ನಡೆಯತೊಡಗಿತು. ಗೌಡರ ಅಂಗಳದಲ್ಲಿ ಒಂದುಸಾರಿ ಪ್ರವೇಶಿಸಿದ ತಂಟೆತಗಾದೆಗಳು ಪೋಲಿಸ್ ಠಾಣೆಗಾಗಲಿ ಅಥವಾ ಕೋರ್ಟ್ ಮೆಟ್ಟಿಲಾಗಲಿ ಏರುವಂತಿರಲಿಲ್ಲ.  ಗೌಡರಿಗೆ ಗೊತ್ತಿಲ್ಲದೆ ಪೋಲಿಸ್ ಠಾಣೆಗೆ ಹೋದ ಎಷ್ಟೋ ಪ್ರಕರಣಗಳನ್ನು ಪೋಲಿಸರೇ ವಾಪಸು ಗೌಡರ ಮನೆಗೆ ಕಳಿಸಿ ಅಲ್ಲಿ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡುತ್ತಿದ್ದರು.  ಇನ್ನು ಗೌಡರ ಗಮನಕ್ಕೆ ತರದೆ ಕೋರ್ಟ್ ಮೆಟ್ಟಿಲೇರಿದ ಕುಟುಂಬದವರು ಗೌಡರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಆ ಊರಿನಲ್ಲಿ ರಾಜೇಗೌಡರ ವಜನು ಆ ರೀತಿ ಇತ್ತು.  ಪಂಚಾಯಿತಿ ಅಧ್ಯಕ್ಷಗಿರಿಯಿಂದ ಹಿಡಿದು ಎಮ್.ಎಲ್.ಏ., ಎಮ್.ಪಿ. ಚುನಾವಣೆಗಳಲ್ಲಿ ಗೌಡರು ಹಾಕಿದ ಗೆರೆ ದಾಟುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ.  ಗೌಡರ ಆಯ್ಕೆ ಊರಿಗೆ ಒಳ್ಳೆಯದೆಂಬ ಅಚಲ ನಂಬಿಕೆ ಜನರಲ್ಲಿತ್ತು.  ಪರಿಸ್ಥಿತಿ ಹೀಗಿರುವಾಗ ಬರಬರುತ್ತಾ ರುದ್ರೇಗೌಡನ ಪ್ರಭಾವ ಹೆಚ್ಚಾಗತೊಡಗಿತು.  ಜನರು ಆತನ ಮಾತುಗಳಿಗೆ ತಲೆದೂಗತೊಡಗಿದರು. 


ವಯೋಸಹಜ ನಿಶ್ಶಕ್ತಿಯಿಂದ ಒಳಲುತ್ತಿದ್ದ ಗೌಡರಿಗೆ ಮಗನು ಬೆಳೆದ ರೀತಿ ತೃಪ್ತಿ ತಂದಿತ್ತು. ತಮ್ಮತ್ತ ನ್ಯಾಯಕೇಳಲು, ಸಲಹೆ ಪಡೆಯಲು ಬರುವ ಜನರನ್ನು ರಾಜೇಗೌಡರೇ ಖುದ್ದಾಗಿ ನಿಂತು ತಮ್ಮ ಮಗನ ಬಳಿಗೆ ಕಳುಹಿಸಿ ಮುಂಬರುವ ದಿನಗಳಲ್ಲಿ ಊರ ಜನರಿಗೆ ಮಾರ್ಗದರ್ಶಿಯ ಸ್ಥಾನದಲ್ಲಿ ನಿಲ್ಲಬೇಕೆಂದು ಮನದಾಳದ ಆಶಯವನ್ನು ಆದೇಶದ ರೂಪದಲ್ಲಿ ಮಗನಲ್ಲಿ ಅರುಹಿದರು.  ದಿನಕಳೆದಂತೆ ರಾಜೇಗೌಡರು ದೇವಸ್ಥಾನದ ಉತ್ಸವ ಮೂರ್ತಿಯಂತೆ ಜಗಲಿಯ ಮೂಲೆಯಲ್ಲಿ ಪ್ರತಿಷ್ಠಾಪನೆಯಾದರು.

ದಿನದಿಂದ ದಿನಕ್ಕೆ ರುದ್ರೇಗೌಡನ ವರ್ಚಸ್ಸು ಮತ್ತು ಆರ್ಭಟ ಬೆಳಿಯುತ್ತಲೇ ಹೋಯಿತು. ಜನರೂ ಕೂಡ ಇದನ್ನು ಸಹಿಸಿದ್ದರು ಹಾಗೂ ಸಮ್ಮತಿಸಿದ್ದರು ಎಂಬುದು ಆಶ್ಚರ್ಯವಾದರೂ  ನಿಜವಾಗಿತ್ತು.  ರಾಜೇಗೌಡರಿಗಿದ್ದ ಜನಪ್ರಿಯತೆಯಿಂದ ರುದ್ರೇಗೌಡನನ್ನು ಜನರು ಒಪ್ಪಿಕೊಳ್ಳುವಂತೆ ಮಾಡಿತ್ತು.  ಆ ಊರಿನ ಪ್ರತಿಯೊಂದು ಆಗುಹೋಗುಗಳಿಗೆ ರುದ್ರೇಗೌಡನ ಅಣತಿಯಿಲ್ಲದೆ ನೆರವೇರುವಂತಿರಲಿಲ್ಲ.  ನಾಮಕರಣ, ಮದುವೆ,  ಆಸ್ತಿ ಪಾಸ್ತಿ ವ್ಯಾಜ್ಯಗಳು, ಗಂಡಹೆಂಡಿರ ಜಗಳ, ಅಣ್ಣತಮ್ಮಂದಿರ ಹೊಡದಾಟ, ಸಾವು ಹೀಗೆ ಎಲ್ಲಾ ವಿಷಯಗಳಲ್ಲಿ ರುದ್ರೇಗೌಡನ ಉಪಸ್ಥಿತಿ ಒಂದು ಅವಿಭಾಜ್ಯ ಅಂಗವಾಗಿ ಹೊಯಿತು.  ಈ ರೀತಿಯ ಅನಿವಾರ್ಯತೆಯ ಲಕ್ಷ್ಮಣರೇಖೆಯನ್ನು ಜನರು ತಮ್ಮ ಮೇಲೆ ತಾವೇ ಎಳೆದುಕೊಂಡರು.  ಜನರು ತೋರಿಸುತ್ತಿದ್ದ ಪ್ರೀತಿಯನ್ನು ರುದ್ರೇಗೌಡ ತಲೆಗೇರಿಸಿಕೊಂಡು ಅಹಂಕಾರದಿಂದ ಮೆರೆಯತೊಡಗಿದ.  ರುದ್ರೇಗೌಡ ಒಳಗೊಳಗೆ ಬದಲಾಗತೊಡಗಿದ.  ರುದ್ರೇಗೌಡನ ಹುಚ್ಚಾಟಗಳಿಗೆ ಜಯಕಾರ ಹಾಕುವ ಒಂದು ಪಟಾಲಂ ಗ್ಯಾಂಗ್ ತಯಾರಾಯಿತು.  ಶಾನುಭೋಗರ ಸೀನಪ್ಪ, ಕಬ್ಬೇರಪ್ಪ, ಮುನುಸಿ ಹಾಗೂ ಬಮ್ಮಿಗಟ್ಟಿ ಎಂಬ ದುಷ್ಟ ಚತುಷ್ಟಯರು ರುದ್ರೇಗೌಡನ ದರ್ಬಾರಿಗೆ ಬಹುಪರಾಕ್ ಹೇಳುತ್ತಾ ಕೋಟೆಯಂತೆ ಸುತ್ತುವರೆದರು.  ಆಸ್ತಿ ಪಾಸ್ತಿಯ ಜಗಳಗಳು ತೀರ್ಮಾನವಾಗಬೇಕಾದರೆ ರುದ್ರೇಗೌಡನಿಗೂ ಒಂದಷ್ಟುಪಾಲು ಹಣದ ರೂಪದಲ್ಲಿ  ಕಾಣಿಕೆ ಒಪ್ಪಿಸುವ ಅಲಿಖಿತ ಕಾನೂನು ಜಾರಿಗೆ ತರುವಲ್ಲಿ ಈ ಪಟಾಲಂ ಗ್ಯಾಂಗ್ ಯಶಸ್ವಿಯಾಯಿತು.
ರಾಜೇಗೌಡರಿಗಿದ್ದ ವರ್ಚಸ್ಸು ಜನರು ಪೋಲಿಸ್ ಠಾಣೆಗೆ ಹೋಗದಂತೆ ತಡೆದದ್ದು ಈ ಪಟಾಲಂ ಗ್ಯಾಂಗ್‌ಗೆ ವರವಾಗಿ  ಪರಿಣಮಿಸಿತ್ತು.  ವಿಧಿ ಇಲ್ಲದೆ ರುದ್ರೇಗೌಡನಿಗೆ ಶರಣಾಗುವ ಪರಿಸ್ಥಿತಿ ಊರ ಜನರಿಗೆ ಉಂಟಾಯಿತು.  ಇಷ್ಟೆಲ್ಲಾ ನಡೆದರೂ ಏನೂ ಗೊತ್ತಿಲ್ಲದಂತೆ ರುದ್ರೇಗೌಡ ನಟಿಸುತ್ತಿದ್ದ.  ಗಂಡಹೆಂಡಿರ ಜಗಳ ಗೌಡರ ಅಂಗಳಕ್ಕೆ ಬಂದರೆ ಅಲ್ಲಿಗೆ ಆ ಕುಟುಂಬದ ಕಥೆ ಮುಗಿದಂತಯೇ!  


ಹೀಗೊಂದು ದಿನ ರುದ್ರೇಗೌಡನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಪ್ಪ ಮತ್ತು ಆತನ ಹೆಂಡತಿ ಶಾಂತಿ ತೀರಾ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು  ಸಂಜೆಹೊತ್ತು ಗೌಡರ ಆಂಗಳಕ್ಕೆ ಬಂದು ನಿಂತರು. ಗಂಡ ಕುಡಿದುಬಂದು ಹೊಡೆಯುತ್ತಾನೆ ಎಂದು ಹೆಂಡತಿ ಆರೋಪಿಸಿದರೆ, ಹೆಂಡತಿ ಸಮಯಕ್ಕೆ ಸರಿಯಾಗಿ ಅಡಿಗೆ ಮಾಡಲಿಲ್ಲ ಎಂಬುದು ಗಂಡನ ಪ್ರತ್ಯಾರೋಪವಾಗಿತ್ತು.  ಇಬ್ಬರ ಅಹವಾಲುಗಳನ್ನು ಕೇಳಿಸಿಕೊಂಡ ರುದ್ರೇಗೌಡ ಫರ್ಮಾನು ಹೊರಡಿಸಿದ. ಗಂಡನಿಗೆ ಬುದ್ದಿ ಹೇಳಿ ತಿದ್ದುವ ಕೆಲಸ ತನಗೆ ಬಿಡುವಂತೆ ಹೇಳಿ ಬಾಕಿ ಉಳಿದಿರುವ ತೋಟದ ಕೆಲಸಗಳನ್ನು ಮುಗಿಸುವಂತೆ ಶಾಂತಿಗೆ ಆಜ್ಞಾಪಿಸಿದ.  ಅತ್ತ ಅವಳು ಹೋದ ತಕ್ಷಣ ಎಲ್ಲಪ್ಪನ ಕೈಗೆ ಇಪ್ಪತ್ತು ರೂಪಾಯಿ ಇಟ್ಟು ಯಾವದಾದರೂ ಢಾಬಾದಲ್ಲಿ ಹೆಂಡ ಕುಡಿದು ಊಟಮಾಡಿ ಮನೆಗೆ ಹೋಗುವಂತೆ ಹೇಳಿದ.  ಏನೂ ಅರಿಯದ ಎಲ್ಲಪ್ಪ ರುದ್ರೇಗೌಡನಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಹೋದ.  ರಾತ್ರಿಯಿಡಿ ಶಾಂತಿ ರುದ್ರೇಗೌಡನ ಸ್ವತ್ತಾಗುವಂತೆ ಆ ಪಟಾಲಂ ಗ್ಯಾಂಗ್ ಆಗಲೇ ಬಲೆ ಹೆಣೆದುಬಿಟ್ಟಿತ್ತು.  ಗಂಡನಿಂದ ಸಿಗದ ಸುಖ ರುದ್ರೇಗೌಡ ತೀರಿಸಿದ್ದ. ಆದನ್ನೆ ರೂಢಿಸಿಕೊಂಡ ಅವಳು ರುದ್ರೇಗೌಡನ ಸಾಂಗತ್ಯ ಬೇಕೆಂದಾಗಲೆಲ್ಲ ಗಂಡನ ಜೊತೆ ಜಗಳ ತೆಗೆಯುವುದು ಗಂಡ ಹೆಂಡದಂಗಡಿ ಕಡೆ ಹೊರಡುವುದು.  ಅವಳು ಗೌಡರ ತೆಕ್ಕೆಯಲ್ಲಿ ಕಿಲಕಿಲನೆ ನಕ್ಕು ಹೊರಳಾಡುವುದು ನಿತ್ಯದ ಕರ್ಮವಾಗಿಹೋಯಿತು.

ಮಗನ ಈ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ರಾಜೇಗೌಡರು ಮನಸ್ಸಿನಲ್ಲಿಯೆ ತೋಳಲಾಡತೊಡಗಿದರು. ಇವನನ್ನು ಹೀಗೆ ಬಿಟ್ಟರೆ ತಾನು ಕೆಡುವುದಲ್ಲದೆ ಆಸ್ತಿಯನ್ನೂ ಹಾಳುಮಾಡಿ ಮನೆತನದ ಮರ್ಯಾದೆಯನ್ನು ರಸ್ತೆಗೆ ತರುವುದಲ್ಲಿ ಸಂಶಯವೇ ಇಲ್ಲ ಎಂದು ಒಂದು ನಿರ್ಧಾರಕ್ಕೆ ಬಂದರು.  ಅವನಿಗೆ ಮದುವೆ ಮಾಡಿಸಿದರೆ ಈ ಹುಚ್ಚಾಟಗಳಿಗೆ ಕಡಿವಾಣ ಹಾಕಬಹುದೆಂದು ಯೋಚಿಸಿ ಕೈಮೀರುವ ಮುಂಚೆ ಅದೊಂದು ಜವಾಬ್ದಾರಿಯಿಂದ ಮುಕ್ತರಾಗಬೇಕೆಂದು ನಿರ್ಧರಿಸಿದರು. ಪಕ್ಕದೂರಿನ ಸಾಹುಕಾರ ಚನ್ನೇಗೌಡರ  ಮಗಳು ಸುಜಾತಾಳನ್ನು ಮನೆಸೊಸೆಯನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಾಂಬೂಲ ಅದಲು ಬದಲು ಮಾಡುವ ಶಾಸ್ತ್ರವೂ ಮುಗಿಯಿತು.  ರಾಜೇಗೌಡರ ಅಂತಸ್ತಿಗೆ ತಕ್ಕಂತೆ ಮದುವೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಿಕೊಡುವುದರಲ್ಲಿ ಸಾಹುಕಾರ ಚನ್ನೇಗೌಡರು ಹಿಂದೆ ಬೀಳಲಿಲ್ಲ. ವಿಜ್ರಂಭಣೆಯಿಂದ ನಡೆದ ಮದುವೆಯಲ್ಲಿ ಎರಡೂ ಊರಿನ ಜನ ಎರಡು ದಿನ ಒಲೆಗೆ ಬೆಂಕಿ ಇಡಲಿಲ್ಲ. 

ಮದುವೆಯಾಗಿ ಒಂದೆರಡು ತಿಂಗಳು ಸುಮ್ಮನಿದ್ದ ರುದ್ರೇಗೌಡ ತನ್ನ ಮೊದಲಿನ ಚಾಳಿಯನ್ನು ಮತ್ತೆ ಶುರು ಮಾಡಿಕೊಂಡ.  ಸಾಲದ್ದಕ್ಕೆ ಜಮೀನಿನ ಉಸ್ತುವಾರಿಗೆಂದು ಜೀಪೊಂದನ್ನು ಖರೀದಿಸಿದ.  ಆದರೆ ಆ ಜೀಪನ್ನು ಜಮೀನಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಿದ್ದು ಅಷ್ಟರಲ್ಲೇ ಇತ್ತು.  ಮೂವತ್ತು ಮೈಲಿ ದೂರದ ಶಹರಿಗೆ ಹೋಗಿ ವಿದೇಶಿ ಸಿಗರೇಟ್‌ಪ್ಯಾಕ್ ತರಲಿಕ್ಕಂದೇ ಮೀಸಲಾಗಿಹೋಯ್ತು.  ಹೊಲದ ಕೆಲಸಕ್ಕೆಂದು ಟ್ರಾಕ್ಟರ್ ಡ್ರೈವರಾಗಿದ್ದ ಚನ್ನಪ್ಪ ಮೇಲಿಂದ ಮೇಲೆ ಜೀಪಿನಲ್ಲಿ ಶಹರಕ್ಕೆ ಹೋಗಿ ಸಿಗರೇಟು ಪ್ಯಾಕ್ ತರುವದಕ್ಕೆಂದು ಖಾಯಂ ಆಗಿಬಿಟ್ಟ.  ಈ ರೀತಿಯ ಅಂದಾದುಂದಿನ ದರ್ಬಾರು ಎಷ್ಟು ದಿನ ಅಂತಾ ನಡೆದೀತು ! ಸಿಗರೇಟಿನ ಸಾಲ ತೀರಿಸಲು ಎಂಟು ಎಕರೆ ಹೊಲ ಕಂಡವರ ಪಾಲಾಯಿತು.  ಎಲ್ಲದ್ದಕ್ಕೂ ಬಂದು ಕೊನೆ ಅಂತ ಒಂದು ಇರಲೇಬೇಕು ಅಲ್ಲವೇ! ಅದು ಹಾಗೆ ನಡೆಯಿತು.  ಜಮೀನು ಉಸ್ತುವಾರಿ ಕಡಿಮೆಯಾದಂತೆ ಇಳುವರಿಯೂ ಕಡಿಮೆಯಾಯಿತು.  ಕಳ್ಳತನಗಳು ಹೆಚ್ಚಾದವು.  ಒಂದು ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದ ಗೌಡರ ಕುಟುಂಬ ಬರಬರುತ್ತ ಮುಳ್ಳಿನ ಹಾಸಿಗೆಯನ್ನು ಮೈಮೇಲೆ ಎಳೆದುಕೊಳ್ಳಲಾರಂಭಿಸಿತು.  ಕಷ್ಟಗಳು ಬಂದರೆ ಸಾಲುಸಾಲಾಗಿ ಬಂದೆರಗುತ್ತವೆ ಎಂಬಂತೆ ಭೂಸುಧಾರಣಾ ಕಾಯ್ದೆ ಜಾರಿಯಾಗಿ ಗಾಯದ ಮೇಲೆ ಬರೆ ಎಳೆದಂತೆ ಮುಕ್ಕಾಲು ಪಾಲು ಜಮೀನು ಊಳುವವರ ಪಾಲಾದವು.  ದಿನಬೆಳಗಾದರೆ ತಹಶೀಲ್ದಾರ ಕಚೇರಿ, ನಾಡಕಚೇರಿ, ಟ್ರಿಬ್ಯುನಲ್ಲು, ವಕೀಲರೊಂದಿಗೆ ಏಗಾಡುವುದಲ್ಲಿ ಅಳಿದುಳಿದ ಅಲ್ಪ ಸಂಪತ್ತು ಕರಗಲಾರಂಭಿಸಿತು.  ಏಟಿನ ಮೇಲೆ ಏಟುಗಳು ಬೀಳುತ್ತಿದ್ದರೂ ರುದ್ರೇಗೌಡ ಮಾತ್ರ ತನ್ನ ದೌಲತ್ತನ್ನೇನು ಕಡಿಮೆ ಮಾಡಿಕೊಳ್ಳಲಿಲ್ಲ.  ಇದರ ಮುಂದಿನ ಪರಿಣಾಮ ಗೌಡರ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿತು.  ಕೊಟ್ಟಸಾಲ ಹಿಂದಿರುಗಿಸುವುದಿರಲಿ, ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡುವುದು ದುಸ್ತರವಾಗತೊಡಗಿತು. ಗೌಡರ ಮನೆತನ ವರ್ಚಸ್ಸಿನ ತಿಳುವಳಿಕೆಯಿಂದ ಆರಂಭದಲ್ಲಿ ಸಾಲಗಾರರು ಮೃದುವಾಗೇ ಇದ್ದರು.  ಆದರೆ ಸಾಲದ ಹೊರೆ ಏರುತ್ತ ಹೋದಂತೆ ಸಾಲಗಾರರ ಸಹನೆಯ ಕಟ್ಟೆ ಒಡೆಯಿತು.  ಒಂದು ಕಾಲದಲ್ಲಿ ಗೌಡರ ಅಂಗಳ ನ್ಯಾಯ ತೀರ್ಮಾನದ ಬೀಡಾಗಿತ್ತು.  ಆದರೆ ಅದೇ ಅಂಗಳದಲ್ಲಿ ಸಾಲಗಾರರು ಬಂದು ರುದ್ರೇಗೌಡನ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದರು.  ನ್ಯಾಯ ಹೇಳುತ್ತಿದ್ದ ದೊರೆ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲುವಂತಾಗಿದ್ದು ವಿಧಿ ವಿಪರ್ಯಾಸವೇ ಸರಿ! ಇದನ್ನೆಲ್ಲ ಮೂಕ ಪ್ರೇಕ್ಷಕನಂತೆ ನೋಡುತ್ತಿದ್ದ ರಾಜೇಗೌಡರ ಮನಸ್ಸು ಮುದಡಿಹೋಗಿತ್ತು. ಹೃದಯ ಹಿಡಿ ಮಾಡಿಕೊಂಡು ಸಾಲಗಾರರಲ್ಲಿ ವಾಯಿದೆ ಕೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.  ರಾಜನಂತೆ ಮೆರೆದ ರಾಜೇಗೌಡರು ಮಗನ ಹುಚ್ಚಾಟಗಳಿಂದ ಕುಬ್ಜರಾಗಿ ಹೋಗಿದ್ದರು.

ರುದ್ರೇಗೌಡನ ಉಪಟಳದಿಂದ ಬೇಸತ್ತ ಸುಜಾತ ಒಂದುದಿನ ಹೇಳದೇ ಕೇಳದೇ ತವರು ಮನೆ ಸೇರಿದಳು.  ಬೀಗರಾದ ಸಾಹುಕಾರ ಚೆನ್ನೇಗೌಡರ ಮುಂದೆ ರಾಜೇಗೌಡರ ಮಾನ ಏನಾಗಿರಬೇಡ!  ಇನ್ನೂ ಕುಗ್ಗಿಹೋದರು. ಒಂದು ಕಾಲದಲ್ಲಿ ಊರಿಗೇ ಬುದ್ದಿ ಹೇಳುತ್ತಿದ್ದ ರಾಜೇಗೌಡರಿಗೆ ಅವರ ಬೀಗರಿಂದ ಉಪದೇಶ ಕೇಳುವ ಕೆಟ್ಟ ಪರಿಸ್ಥಿತಿ ಎದುರಾಯಿತು.  ಅತಿಯಾದ ಮುದ್ದಿನಿಂದ ಬೆಳೆದ ರುದ್ರೇಗೌಡನಿಗೆ ಕಿವಿ ಹಿಂಡಿ ಬುದ್ದಿ ಕಲಿಸುವ ಕಾಲ ಅದಾಗಲೇ ಮಿಂಚಿ ಹೋಗಿತ್ತು. ರಾಜೇಗೌಡರ ಮಾನಕ್ಕೆ ಅದೇ ಮುಳುವಾಯಿತು.

ಇಷ್ಟೆಲ್ಲ ಅನಾಹುತಗಳ ನಡೆದರೂ ರುದ್ರೇಗೌಡನ ಅಹಂಕಾರವೇನೂ ತಗ್ಗಲಿಲ್ಲ. ಆಗಾಗ ತೋಟದ ಮನೆಗೆ ಬಂದು ಹೋಗುತ್ತಿದ್ದ ಶಾಂತಿ ಖಾಯಂ ಅಲ್ಲಿಯೇ ಟಿಕಾಣಿ ಹೂಡಿದಳು.  ದೇವದಾಸನಾಗಿದ್ದ ಸಿದ್ದಪ್ಪ ಕಣ್ಣಿದ್ದು ಕುರುಡನಾಗಿಬಿಟ್ಟ. ಕಾಮದ ಅಮಲಿನಲ್ಲಿ ತೇಲುತ್ತಿದ್ದ ರುದ್ರೇಗೌಡ ಶಾಂತಿಯ ತಾಳಕ್ಕೆ ಕುಣಿಯತೊಡಗಿದ.  ಮನೆಯಲ್ಲಿದ್ದ ಒಡವೆಗಳು ಶಾಂತಿಯ ಕೊರಳಲ್ಲಿ ರಾರಾಜಿಸಿತೊಡಗಿದವು.  ರುದ್ರೇಗೌಡನ ಸ್ಥಿತಿ ತೂತುಬಿದ್ದ ಹಡಗಿನಂತಾಗಿತ್ತು.  ಶಾಂತಿಯ ಒತ್ತಾಸೆಗೆ ತೋಟ, ತೋಟದ ಮನೆ ಸಮೇತ ರಾತ್ರೊರಾತ್ರಿ ಬರೆದುಕೊಟ್ಟು ಹಗಲು ಹೊತ್ತು ದಿಕ್ಕಾಪಾಲಾಗಿಹೋದ. ರುದ್ರೇಗೌಡನ ಕಾಮಕ್ಕೆ ಚಿಗುರೊಡೆದ ಪಿಂಡಕ್ಕೆ ಶಾಂತಿ ದಿಕ್ಕಾಗಿ ನಿಂತಳು.


ರುದ್ರೇಗೌಡನ ದರ್ಬಾರು ಇಷ್ಟಕ್ಕೆ ನಿಲ್ಲಲಿಲ್ಲ.  ದೂರದ ಬೆಂಗಳೂರಿಗೆ ಆಗಾಗ್ಗೆ  ಈ ಪಟಾಲಂ ಗ್ಯಾಂಗ್ ಜತೆಗೂಡಿ ಕುದುರೆಜೂಜು ಆಡುವುದನ್ನು ಕಲಿತ.  ಮೋಜ ಮಸ್ತಿ ಮಾಡುವುದನ್ನೆ  ದಿನಚರಿಯಾಗಿಸಿಕೊಂಡ ದುದ್ರೇಗೌಡ ಅತಿಯಾದ ಕುಡಿತಕ್ಕೆ ಅಂಟಿಕೊಂಡ.  ಕೂತು ತಿಂದರೆ ಕುಡಿಕೆಹೊನ್ನು ಸಾಲದು ಎಂಬಂತೆ ಅದಾಗಲೆ ತಳಕಂಡಿದ್ದ ಗೌಡರಮನೆಯ ಸಂಪತ್ತು ಪಾತಾಳ ಗರಡಿ ಹಾಕಿ ಹುಡುಕಿದರೂ ಒಂದು ದಮ್ಮಡಿಯೂ ಸಿಗದ ಸ್ಥಿತಿಗೆ ತಲುಪಿತ್ತು. 

ಆಪ್ಪನ ಪ್ರೀತಿಯನ್ನು ಅದಾಗಲೇ ಕಳೆದುಕೊಂಡಿದ್ದ ದುದ್ರೇಗೌಡನಿಗೆ ಸಾಂತ್ವನ ಹೇಳಲು ಪಕ್ಕದಲ್ಲಿ ಹೆಂಡತಿಯೂ ಇಲ್ಲವಾಗಿದ್ದಳು.  ಶಾಂತಿಯ ಸಾಂಗತ್ಯ ಕೊನೆವರೆಗಿನ ಸುಖವೆಂಬ ಭ್ರಮ ಅದಾಗಲೆ ಕಳಚಿಬಿದ್ದಿತ್ತು. ಹುತ್ತದ ಬಾಯಿಗೆ ಕೈಯಿಟ್ಟು ಹಾವು ಕಡಿಸಿಕೊಂಡ ಪರಿಸ್ಥಿತಿ ರುದ್ರೇಗೌಡನದಾಗಿತ್ತು.  ಮಾನಸಿಕವಾಗಿ ಕುಗ್ಗಿಹೋಗಿದ್ದ ರುದ್ರೇಗೌಡನ ದೇಹದ ಅರೋಗ್ಯವೂ ಕ್ಷೀಣಿಸಿತೊಡಗಿತು.  ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದ ರುದ್ರೇಗೌಡನನ್ನು ಇದೇ ಪಟಾಲಂ ಗ್ಯಾಂಗ್ ಶಹರದ ಆಸ್ಪತ್ರೆಗೆ ದಾಖಲು ಮಾಡಿದರು.  ವಿಧವಿಧದ ಪರೀಕ್ಷೆಗಳನಂತರ ಬಂದ ಫಲಿತಾಂಶ ಘೋರವಾಗಿತ್ತು. ವಾಸಿಯಾಗದ ಕಾಯಿಲೆಯಿಂದ ಆತ ಬಳಲುತ್ತಿದ್ದ.  ಕೊನೆಹಂತದ ಕರಳು ಕ್ಯಾನ್ಸರ್ ಆತನಿಗೆ ಅಂಟಿಕೊಂಡಿತ್ತು.  ಹೆಚ್ಚುದಿನ ಬದುಕಲಾರ ಎಂದು ಆತನನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ತಂಡ ಘೊಷಿಸಿಬಿಟ್ಟಿತ್ತು.  ಕೊನೆಗೊಂದು ದಿನ ಆ ವಿಷಘಳಿಗೆ ಬಂದೇಬಿಟ್ಟಿತ್ತು.  ಯಾವ ಚಿಕಿತ್ಸೆಗೂ ಸ್ಪಂದಿಸದ ರುದ್ರೇಗೌಡನ ಪ್ರಾಣಪಕ್ಷಿ ಹಾರಿಹೋಗಿತ್ತು.  ರುದ್ರೇಗೌಡನ ದರ್ಬಾರು ದುರಂತದ ಅಂತ್ಯ ಕಂಡಿತ್ತು.

ಚಿತೆಗೆ ಬೆಂಕಿ ಇಟ್ಟ ರಾಜೇಗೌಡರಿಗೆ ಚಿಂತಿಸುವುದಕ್ಕೆ ಏನೂ ಉಳಿದಿರಲಿಲ್ಲ.  ಚಿತೆಯ ಮುಂದೆ ಕುಸಿದುಕುಳಿತ ಅವರ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು.  ಯಾವಾಗಲೋ ಬತ್ತಿಹೋಗಿದ್ದ ಕಣ್ಣೀರ ಹನಿಗಳು ಈಗ ಎಲ್ಲಿಂದ ಉದಿರ್‍ಯಾವು! ಉರಿಯುತ್ತಿದ್ದ ಚಿತೆಯ ಆಚೆ ದಿಗಂತದಲ್ಲಿ ಮುಳುಗುತ್ತಿದ್ದ ಕೆಂಪುಸೂರ್ಯನಲ್ಲಿ ರುದ್ರೇಗೌಡ ಮುಖ ಕಂಡಂತಾಯಿತವರಿಗೆ! ಗಂಡು ದಿಕ್ಕಿಲ್ಲದ ಮನೆಯ ನೆನೆದ ರಾಜೇಗೌಡರಿಗೆ ಇದ್ದೊಬ್ಬ ಮಗನೂ ದೂರಾಗಿ ಭರಿಸಲಾಗದ ದುಃಖ ಕೊಟ್ಟು ದೂರಾಗಿ ಹೋದ. ಆಗ ಸುರಿದ ಒಂದೆರಡು ಮಳೆಹನಿಗಳು ರಾಜೇಗೌಡರ ತಾಪಕ್ಕೆ ಸುರಿದ ತಣ್ಣೀರೇನೋ ಅನ್ನಿಸುವ ಮಟ್ಟಗೆ ಭಾಸವಾಯಿತು.

ರುದ್ರೇಗೌಡನ ದೌರ್ಜನ್ಯಕ್ಕೆ ನಲುಗಿದ ಕುಟುಂಬಗಳು ಹಿಡಿಶಾಪ ಹಾಕಿ ಖುಷಿಪಟ್ಟರೆ, ರಾಜೇಗೌಡರ ದುರ್ವಿಧಿಗೆ ಮಲ್ಮಲ ಮರುಗಿದ ಜನರಿಗೂ ಬರವೇನೂ ಇರಲಿಲ್ಲ.  ಮಾಡಿದ ಕರ್ಮಗಳಿಗೆ ಸ್ವರ್ಗ ನರಕ ನೋಡಲು ಇನ್ನೊಂದು ಜನ್ಮ ಬೇಕಾಗಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತ ಚದುರತೊಡಗಿದರು.  ಹೆಚ್ಚಿದ ಚಿತೆಯ ಜ್ವಾಲೆ ಮುಳುಗುತ್ತಿದ್ದ ಸೂರ್ಯನನ್ನೆ ನುಂಗುವಂತೆ ಕಂಡಿತ್ತು.  ಒಂಟಿಯಾದ ರಾಜೇಗೌಡರನ್ನು ಸಂತೈಸಲು ಯಾರೂ ಪಕ್ಕದಲ್ಲಿರಲಿಲ್ಲ.  ಅವರವರ ದುಃಖಗಳನ್ನು ಅವರೇ ಅನುಭವಿಸಬೇಕು.


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ



Friday, 17 February 2017

ನಮ್ಮ ನಗರ


ನಮ್ಮ ನಗರ


ನೋಡುಬಾ ನಮ್ಮೂರ ಸೊಬಗ
ಕೈಬೀಸಿ ಕರೆಯುತ್ತಿದೆ
ಬಿದ್ದೀರಾ ಬಲು ಜೋಕೆ
ನಮ್ಮೂರ ರಸ್ತೆಯಿದು ಗುಂಡಿಗಳ ಸಾಮ್ರಾಜ್ಯ
ಉಸಿರು ಉಸಿರಿಗೂ ಮೂಗಡರಿ
ಉಸಿರು ನಿಂತೀತು ಜೋಕೆ
ಕಿವಿ-ಮೂಗು ಮುಚ್ಚಿದರೆ ಲೇಸು........||
ಮೇಲು ಸೇತುವೆ ಕೆಳ ಸೇತುವೆ
ಮೆಟ್ರೋ ಮ್ಯಾಜಿಕ್ ಬಾಕ್ಸ್‌ಗಳ ಜುಗಲ್ ಬಂದಿ
ಆದರೂ ತಪ್ಪಲಿಲ್ಲ ಜನ ಸಂದಣಿ ಕಿರಿಕಿರಿ .......
ಸಾಲು ಸಾಲು ಮರಗಳು ಸೋತು ಮಲಗಿವೆ 
ಗಬ್ಬು ನಾರುತಿದೆ ತಿಪ್ಪೆಗಳ ಸಾಮ್ರಾಜ್ಯ
ವಿಧಿಯಿಲ್ಲ ಕಣ್ಣು ತೆರೆದಿಡಲೇಬೇಕು ||
ನೋಡುಬಾ ನಮ್ಮೂರ ಸೊಬಗ
ಕೈಬೀಸಿ ಕರೆಯುತ್ತಿದೆ
ಜೀವಗಳಿಗಿಲ್ಲಿ ಬೆಲೆಯಿಲ್ಲ
ಬಿದ್ದರೆ ಏಳಿಸುವುವವರಿಲ್ಲ
ಸತ್ತರೋ .......! ಕೇಳುವವರೇ‌ಇಲ್ಲ......!
ದುಡ್ಡಿದ್ದವನೇ ದೊಡ್ಡಪ್ಪ...... ದುಡ್ಡಿಲ್ಲದವನು ದಡ್ಡನಪ್ಪ
ಹೆಜ್ಜೆ ಹೆಜ್ಜೆಗೂ ಕುರುಡು ಕಾಂಚಾಣದ ಕುಣಿತ
ಕನಸೊಂದ ಕಾಣಲು ಮನೆಯೊಂದ ಕಟ್ಟಲು
ನೆಮ್ಮದಿಯು ಮಾತ್ರ ಮರೀಚಿಕೆ.......!
ಕೈಬೀಸಿ ಕರೆಯುತ್ತಿದೆ..... ಕೈಬೀಸಿ ಕರೆಯುತ್ತಿದೆ
ನೋಡುಬಾ ನಮ್ಮೂರ ಸೊಬಗ!

**__**__**

--ಮಹೇಶ್ ದೇಶಪಾಂಡೆ
ತುಷಾರಪ್ರಿಯ

Friday, 10 February 2017

ಅನುಬಂಧ


ಅನುಬಂಧ


ಕಣ್ಣು ಕಣ್ಣುಗಳ ಸಲಿಗೆಯಲಿ
ಮೂಡಿದ ಪ್ರೇಮ...... ಮಿಡಿದ ಕಂಪನ.......
ಹೃದಯಗಳ ಸ್ಪಂದನ
ನಾನು ನಿನ್ನವನೇ ........ ನೀನು ನನ್ನವಳೇ.......
ನಿನ್ನಂತರಾಳದ ನೋವೆಲ್ಲ ನೀಗಿಸಿ ನಗಿಸುವಾಸೆ 
ಗುಳಿಕೆನ್ನೆಗಳ ಗಾಳದಲಿ ಬೀಳುವಾಸೆ
ಈ ಜಗದ ಸುಖ ನಿನ್ನಡಿಗೆ ಮುಡಿಪಾಗಿಸುವಾಸೆ
ಇದು ಜನ್ಮ ಜನ್ಮದ ಅನುಬಂಧವೆಂದು ಸಾರುವಾಸೆ 

*****

-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Monday, 6 February 2017

ಅತೃಪ್ತ ಆತ್ಮಗಳ ಸುತ್ತ

ಅತೃಪ್ತ ಆತ್ಮಗಳ ಸುತ್ತ


          ನಮ್ಮ ಸುತ್ತಮುತ್ತ ಎಷ್ಟೊಂದು ಚಿತ್ರ ವಿಚಿತ್ರ ಜನಗಳಿರುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ನನಗಾದ ಒಂದು ಚಿಕ್ಕ ಅನುಭವ ಈ ಲೇಖನೆಗೆ ಪ್ರೇರಣೆಯಾಯಿತು.  ಪ್ರೆರೇಪಿಸಿದ ಆ ಒಂದು ಅತೃಪ್ತ ಆತ್ಮಕ್ಕೆ  ನನ್ನದೊಂದು ಹೃದಯಪೂರ್ವಕ ಸಲಾಮ್! 

            ಕೆಲವರು ಟೀಕೆ ಮಾಡುವುದು ಹಾಗೂ ಕೊಂಕು ನುಡಿಯುವುದನ್ನೇ ತಮ್ಮ ತಲೆಗೇರಿಸಿಕೊಂಡು ತಾವು ಇತರರನ್ನು ತಿದ್ದುವುದಕ್ಕಾಗಿಯೇ ಹುಟ್ಟಿರುವ ಹಾಗೆ ಭ್ರಮಿಸುತ್ತಾರೆ.  ಯಾವುದಾದರೊಂದು ವಿಷಯವನ್ನು ಕೈಗೆತ್ತಿಕೊಂಡು ನಕಾರಾತ್ಮಕವಾಗಿ ಮಾತನಾಡುತ್ತಾ ಇತರರ ತೇಜೋವಧೆ ಮಾಡುವುದೇ ಇವರ ನಿತ್ಯ ಕಾಯಕ.  ಈ ರೀತಿ ಟೀಕೆ ಮಾಡುವುದರಿಂದ ಹಾಗೂ ಕೊಂಕು ನುಡಿಯುವದರಿಂದ ಅವರಿಗೆ ಅತಿಯಾದ ವಿಕೃತ ಆನಂದ ದೊರೆಯುತ್ತದೆ.  ಇಂತವರು ನಿಜವಾಗಿಯು ಕೀಳರಿಮೆಯಿಂದ ಬಳಲುತ್ತಿರುತ್ತಾರೆ.  ಅಸೂಯೆ ಇವರ ಮುಖ್ಯ ಅಸ್ತ್ರ ಹಾಗೂ ದೌರ್ಬಲ್ಯ ಕೂಡ.  ಇತರರ ಏಳಿಗೆಯನ್ನು ಇವರು ಸಹಿಸಲಾರರು.  ಹಾಗೂ ಇತರರು ಏರಿದ ಎತ್ತರಕ್ಕೆ ಏರಲೂ ಆಗದೆ ಚಡಪಡಿಸುತ್ತಾರೆ.  ಇದು ಅವರ ಜನ್ಮಕ್ಕೆ ಅಂಟಿದ ಜಾಡ್ಯವೆಂದರೂ ತಪ್ಪಾಗಲಾರದು.  ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿಯ ಜಾತಿಗೆ ಸೇರಿದವರಿವರು.  ಇಂತವರನ್ನು ಅತೃಪ್ತ ಆತ್ಮಗಳ ಸಾಲಿಗೆ ಸೇರಿಸಬಹುದು.  ಈ ಅತೃಪ್ತ ಆತ್ಮಗಳಿಗೆ  ಏಳು ಸಮುದ್ರಗಳ ನೀರು ಕುಡಿಸಿದರೂ ದಾಹ ಇಂಗಲಾರದು. ಇತರರ ಸಾಧನೆಗಳನ್ನು ಇವರು ಹೊಗಳುವ ಜಾಯಮಾನಕ್ಕೆ ಸೇರಿದವರಲ್ಲ.   ಅಯ್ಯೇ ! ಹಾಗೇನಾದರೂ ಹೊಗಳಿದರೆ ಇವರ ಘನತೆಗೆ ಕುಂದು ಅಲ್ಲವೆ!? ಕಾಲೆಳೆಯುವದು ಇವರ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುತ್ತಾರೆ.

       ಈಗ ನೇರವಾಗಿ ವಿಷಯ ಪ್ರಸ್ತಾಪಕ್ಕೆ ಬರೋಣ.  ಅತೃಪ್ತ ಆತ್ಮಗಳಲ್ಲಿ ಒಂದು ಬಿನ್ನಹ.  ಸುಕ್ಕಾಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು  ಜೀವನದಲ್ಲಿ ನೀವೂ ಏನನ್ನಾದರೂ ಸಾಧಿಸಿ ತೋರಿಸಿ.  ಸಾಧನೆಯಲ್ಲಿ ಸಿಗುವ ಆನಂದವೇ ಬೇರೆ.  ಟೀಕಿಸಿದರೆ ಸಿಗುವ ಸಂತೋಷ ಯಾವುದು? ಸಾಧನೆಗೆ ಸಿಗುವ ಆನಂದದ ಮಜಾ ಯಾವುದು? ಎಂಬ ಅಂತರವನ್ನು ನೀವೇ ಸ್ವಾನುಭವಿಸುತ್ತೀರಿ.  ಅಂತಹದೊಂದು ಆನಂದಾನುಭವಕ್ಕೆ ಇಂದೇ ಪೀಠಿಕೆ ಹಾಕಿ.  ಯಾರು ಏನೇನು ಮಡ್ತಾ‌ಇದ್ದಾರೆ ಹೇಗೆ ಯಾಕೆ ಇತ್ಯಾದಿ ಅನಾವಶ್ಯಕ ವಿವರಗಳಿಂದ ದೂರ ಇದ್ದಷ್ಟೂ ಒತ್ತಡ ಕಡಿಮೆಯಾಗಿ ಸುಖ ಹೆಚ್ಚುತ್ತದೆಂದು ತಿಳಿದವರು ಹೇಳುತ್ತಾರೆ. 

             ಟೀಕಿಸುವ ಹಾಗೂ ಕೊಂಕು ನುಡಿಗಳ ಪಾತಾಳದಿಂದ ಮೇಲೆದ್ದು ಬನ್ನಿ.  ಒಂದು ಸಾರಿ ಈ ಜಗತ್ತನ್ನು ತೆರೆದ ಕಣ್ಣೂಗಳಿಮ್ದ ನೋಡಿ.  ಆಗ ನಿಮಗೇ ತಿಳಿಯುತ್ತದೆ.  ನೀವೆಷ್ಟು ಕುಬ್ಜರೆಂದು!  ಪಾತಾಳದಲ್ಲಿ ಕಾಲ ಹರಣ ಮಾಡಿದ್ದು ಸಾಕು. ಇತರರ ಏಳಿಗೆಗೆ ಅಸೂಯೆಪಟ್ಟಿದ್ದೂ ಸಾಕು. ಇನ್ನಾದರೂ ಜೀವನದಲ್ಲಿ ಏನನ್ನಾದರೂ ಸಾಧಿಸಿ ಸುತ್ತಲಿನ ಜನ ಬಾಯಿಗೆ ಬೆರಳಿಟ್ಟುಕೊಂಡು ನಿಬ್ಬೆರಗಾಗಿ ನೋಡುವಂತೆ ಪುಟಿದೇಳಿ.  ಸಾಧನೆಯಲ್ಲಿನ ಸುಖ ಕುಳಿತು ಟೀಕಿಸುವರಲ್ಲಿ ಇಲ್ಲವೆಂದು ನಿಮಗೆ ಮನವರಿಕೆ ಯಾದಲ್ಲಿ ಕೊಂಕುಮಾತನಾಡುವ ಡೊಂಕು ಮನಸಿನ ಅತೃಪ್ತ ಆತ್ಮಗಳಿಗಾಗಿಯೇ ಬರೆದ ಈ ಲೇಖನ ಸಾರ್ಥಕ ವಾದಂತೆ ಎಂದು ನನ್ನ ಅನಿಸಿಕೆ. 
     
           ಇನ್ನಾದರೂ ಟೀಕಿಸುವ ದಟ್ಟಡವಿಯಿಂದ ಹೊರಬಂದು ಸಾಧನೆಯ ಪಥ ಕಂಡುಕೊಳ್ಳಿ.  ಏನಾದರೊಂದು ಸಾಧಿಸಿದಾಗ ಮಾತ್ರ ಇತರರನ್ನು ಟೀಕಿಸುವ ಹಕ್ಕು ನಿಮ್ಮದಾಗುತ್ತದೆ.  ಸಕಾರಾತ್ಮಕ ಟೀಕೆಗಳು ಸರ್ವಕಾಲಕ್ಕೂ ಸ್ವಾಗತಾರ್ಹ  ಮತ್ತು ಸ್ವೀಕಾರಾರ್ಹ.  ಇಂತಹ ಟೀಕೆಗಳು ಆಶೀರ್ವಾದ ಹಾಗೂ ಶುಭಹಾರೈಕೆಗಳ ಸಾಲಿಗೆ ಸೇರುತ್ತವೆ.  ಇಲ್ಲವಾದಲ್ಲಿ ನಾಯಿ ಬೊಗಳಿದರೆ ಸ್ವರ್ಗದಲ್ಲಿ ಭೂಕಂಪವಾದೀತೆ ? ಎಂಬ ನಾಣ್ಣುಡಿಗೆ ನೀವೇ ಮೂಕ ಸಾಕ್ಷಿಯಾಗುತ್ತೀರಿ. ಆಯ್ಕೆ ನಿಮಗೆ ಬಿಟ್ಟ ವಿಚಾರ. 
 
 ಏನಂತೀರಿ!?

ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Friday, 3 February 2017

ವಸಂತಗೀತೆ


ವಸಂತಗೀತೆ 



ಮಾಮರದ ಕೋಗಿಲೆ
ನಾವಾಗಿ ಹಾರೋಣ
ಜೋಡಿ ಹಕ್ಕಿಗಳಂತೆ ಮರದಿಂದ ಮರಕೆ 
ಬಾನಲ್ಲಿ ತೇಲಾಡಿ
ವಸಂತ ಕಾಲದ ಸುಳಿಗಾಳಿಯಲಿ 
ಪ್ರೀತಿಸುವ ಬಾ ನಲ್ಲೆ......ಭೋರ್ಗರೆವ ಕಡಲಾಗಿ
ಅಲೆ ಅಲೆಗಳ ಕಲರವದಂತೆ
ಬಯಲು ಒಡಲಿನ ಬಿಸಿಯಪ್ಪುಗೆಯೋ.........!
ಭಾವ ಬಂಧಿಯ ಸುಳಿ ಸೆಳೆತವೋ .........!
ನಿನ್ನೊಲವ ಸಖನಾಗಿ....... ನಲುಮೆಯ ಹಿತವಾಗಿ
ಜೀವದ ಗೆಳತಿಯಾಗಿ .......
ಜೀವನದ ಸಂಗಾತಿಯಾಗಿ........
ಬಾಳ ಪಯಣದ ಹಾದಿ 
ಸುಖದ ಸೆಲೆಯಾಗಲಿ   


ಮಹೇಶ ಶ್ರೀ. ದೇಶಪಾಂಡೆ
        ತುಷಾರಪ್ರಿಯ

Tuesday, 31 January 2017

ಕಾಲಚಕ್ರ

ಕಾಲಚಕ್ರ


  ಇಳಿಸಂಜೆಯ ತಂಪುಗಾಳಿ ಕಿಟಿಕಿಯನ್ಮು ತೂರಿ ಪರದೆ ತೇಲಿಸುತ್ತ ಸುಳಿದಾಡಿದ ಆ ಹೊತ್ತಿನಲ್ಲೆ ಮಗ್ಗಲು ಬದಲಿಸಿ ತಿರುಗಿದೆ. ಎಫ಼್.ಎಂ ಚಾನೆಲ್‌ನಲ್ಲಿ ಸಣ್ಣಗೆ ಕೇಳಿಬರುತ್ತಿದ್ದ, ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾಹೋಯ್ದ..... ....., ಕನಸಿನಲ್ಲಿ ಕೇಳಿಸಿದಂತಾಗಿ ಎಲ್ಲಿ ಬೆಳಗಾಗುವವರೆಗೂ ಮಲಗಿಬಿಟ್ಟೆನೋ ಅಂತ ಥಟ್ಟಿನೆ ಕಣ್ಣುಬಿಟ್ಟೆ.  ರಜಾದಿನದ ಆಲಸ್ಯ ಮೈಮನಸ್ಸಿಗೆ ಆವರಿಸಿ ಏಳಲಾರದೆ ಹಾಗೇ ಸ್ವಲ್ಪಹೊತ್ತು ಹೊರಳಾಡಿ 'ಇದು ಬೆಳಗಲ್ಲ' ಮನಸ್ಸಿನಲ್ಲೇ ಮಾತಾಡಿಕೊಂಡೆ.  ಸಂಜೆಯ ಮಬ್ಬು ನಿಧಾನವಾಗಿ ಕವಿಯಲಾರಂಭಿಸಿತ್ತು. ಅತ್ತ ಸೂರ್ಯ ಪಡುವಣದಂಚಿಗೆ ಮರೆಯಾಗುವ ತಯಾರಿ ನಡೆಸಿದ್ದ.  ಮಬ್ಬು ಕವಿಯುವ ಆ ಸುಂದರ ಬದಲಾವಣೆ ಪ್ರಕ್ರಿಯೆ ಬಗ್ಗೆ ಯೋಚಿಸುತ್ತ ಇನ್ನೊಂದು ಸಣ್ಣ ಜೋಂಪು.  ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ, ವಾರಪೂರ್ತಿ ಪಾಠಮಾಡಿ, ದೂರದರ್ಶನ ಸಂವಾದ ಕಾರ್ಯಕ್ರಮಗಳು, ಅಂತರ್ ವಿಶ್ವವಿದ್ಯಾಲಯದ ಚರ್ಚಾಕೂಟಗಳ ನಿರೂಪಣೆಯ ನಿರ್ವಹಣೆ .........ಹೀಗೆ ಹಲವು ಹತ್ತಾರು ಬಿಡುವಿಲ್ಲದ ವೇಳಾಪಟ್ಟಿಯಿಂದ ಸುಸ್ತಾಗಿದ್ದನಾನು ಈ ದಿನ ಪೂರ್ತಿ ಮನೆಯಲ್ಲೇ ಸಮಯ ಕಳೆಯಬೇಕೆಂದು ನಿರ್ಧರಿಸಿದ್ದೆ.

ನನ್ನ ಬದುಕಿನಲ್ಲಾದ ನಾನಾ ತಿರುವುಗಳ ಬಗ್ಗೆ ಯೋಚಿಸುತ್ತ ಮೈಮರಿದು ಎದ್ದುಕುಳಿತೆ.  ಎಲ್ಲೋ ಹುಬ್ಬಳಿಯ ಹತ್ತಿರದ ಕುಗ್ರಾಮದಿಂದ ಹೊರಟ ನನ್ನ ಬದುಕಿನ ಬಂಡಿ ಇಂದು ಕನ್ನಡ ವಿಷಯ ಬೋಧಿಸುವ ಪ್ರೊಫ಼ೇಸರ್‌ಗಿರಿಯ ಪದವಿಕೊಟ್ಟು ಜ್ಞಾನಗಂಗೋತ್ರಿ ವಿಶ್ವವಿದ್ಯಾಲಯದ ಬಾಗಿಲವರೆಗೂ ತಲುಪಿದ್ದು ನನ್ನ ಮಟ್ಟಿಗೆ ಸಾಧಾರಣ ವಿಷಯವಾಗಿರಲಿಲ್ಲ.

  ಮುದ ನೀಡುವ ನೂರಾರು ವಿಷಯಗಳನ್ನು ಕಾಲಗರ್ಭದಿಂದ ಹೆಕ್ಕಿತೆಗೆದಾಗ ಒಂದೊಂದು ಪುಟದ ಒಂದೊಂದು ಬಣ್ಣ ಮನಸ್ಸಿನಲ್ಲಿ ಮೂಡುವ ಸಪ್ತವರ್ಣದ ಸಂಪುಟವಾಗುತ್ತದೆ.  ಒಂಟಿತನ ನನಗೇನೂ ಹೊಸತಲ್ಲ.  ದೆಹಲಿಯ ಸಾಫ಼್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ನನ್ನ ಮಗನ ಹತ್ತಿರ ಅಂದುಕೊಂಡಾಗಲೆಲ್ಲ ನನ್ನವಳು ಹೊರಟುನಿಂತುಬಿಡುತ್ತಿದ್ದಳು.  ಹೋದಾಗಲೆಲ್ಲ ಹತ್ತು ಹದಿನೈದು ದಿನಗಳವಾಸ್ತವ್ಯ.  ಮೊನ್ನೆ ಹೊರಟುನಿಂತಾಗಲೂ ಅಷ್ಟೆ, ನಾನೂ ಅವಳ ಜೊತೆ ಹೊರಡಬೇಕೆಂದು ಅವಳು ಹಂಬಲಿಸುತ್ತಿದ್ದರೂ, ಈ ಪ್ರಾಧ್ಯಾಪಕ ವೃತ್ತಿಯ ಜವಾಬ್ದಾರಿಗಳ ಜಂಜಾಟದಿಂದಾಗಿ ಸಾಧ್ಯವಾಗುತ್ತಿರಲಿಲ್ಲ.  ಕಾಲಕಾಲಕ್ಕೆ ಬದಲಾಗುವ ಆದ್ಯತೆಗಳ ಪರ್ವ ಎಂದರೆ ಇದೇ ಏನೋ!  ನನಗೆ ನನ್ನ ವೃತ್ತಿಯ ಒಲವು; ಇವಳಿಗೆ ಮಗನ ವ್ಯಾಮೋಹ.  ಕಣ್ಣು ಮುಚ್ಚಿ ತೆರೆಯುವದರಲ್ಲಿ ಎಂತೆಂತಹ ಬದಲಾವಣೆಗಳು ನಮಗರಿವಿಲ್ಲದೆ ಘಟಿಸಿಬಿಡುತ್ತವೆ.  ಬದಲಾವಣೆಗೆ ಬಗ್ಗಿಕೊಳ್ಳುವಗುಣ ಮೈಗೊಡಿಸಿಕೊಳ್ಳುದಿದ್ದರೆ ಒಂಟಿತನವೇ ಶಾಪವಾಗಿ ಪರಿಣಮಿಸಿಬಿಡುವ ಅಪಾಯವಿರುತ್ತದೆ.  ಹಾಗಾಗಲು ಬಿಡಬಾರದು.  ಎದುರಾಗುವ ಪ್ರತಿ ಸನ್ನಿವೇಶಗಳು ನನ್ನದೇ ಸೃಷ್ಟಿ ಎಂಬ ಭಾವನೆ ಬೆಳಸಿಕೊಂಡರೆ ಸಮಚಿತ್ತ ಪ್ರಬಲಗೊಳ್ಳುತ್ತದೆ.  ಬೆಳೆಗ್ಗೆ ಅರ್ಧಗಂಟೆ ಮನೆಗೆಲಸದ ಹುಡುಗಿ ಬಂದುಹೋದ ಮೇಲೆ ನನ್ನದೇ ಸಾಮ್ರಾಜ್ಯ!  ದೆಹಲಿಯಲ್ಲಿ ನಡೆದ ಕನ್ನಡ ವಿಶ್ವಸಾಹಿತ್ಯಸಮ್ಮೇಳನಕ್ಕೆ ಇವಳನ್ನೂ ಕರೆದುಕೊಂಡು ಕಳೆದವರ್ಷ ಹೋಗಿದ್ದೆನಾದರೂ, ನಾನು ಅವಳು ಒಟ್ಟಿಗೆ ತಿರುಗಾಡಿದ್ದು ತೀರಾ ಕಡಿಮೆ.  ನಾನು ಬೆಳಗಾಗಿದ್ದು ಸಮ್ಮೇಳನದ ಕಾರ್ಯಕ್ರಮಗಳಿಗೆ ಹೊರಟರೆ ಎಲ್ಲ ಮುಗಿದು ಮನೆಗೆ ಬರುತ್ತಿದ್ದುದೆ ರಾತ್ರಿ.  ನನ್ನೊಂದಿಗೆ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುಲು ಅವಳಲ್ಲಿ ಅಂತಹ ಸಾಹಿತ್ಯಾಸಕ್ತಿ ಏನೂ ಇಲ್ಲ.  ಒತ್ತಾಯದಿಂದ  ಕರೆದುಕೊಂಡು ಕಾರ್ಯಕ್ರಮಕ್ಕೆ ಹೋದರೆ ಮುಗ್ಗಲು ಮುಳ್ಳು ಚುಚ್ಚಿದ ಅನುಭವ ನೆನೆದು ಸುಮ್ಮನಾಗಿ ಬಿಡುತ್ತಿದ್ದೆ.  ಎಫ಼್‌ಎಂ ನಲ್ಲಿ ಕಾಕತಾಳೀಯವೋ ಎಂಬಂತೆ ಗಗನವೂ ಎಲ್ಲೋ......  ಭೂಮಿಯು ಎಲ್ಲೋ...... ಒಂದೂ ಅರಿಯೇ.... ನಾ......ತೇಲಿ ಬರುತ್ತಿದ್ದಂತೆ ತುಟಿಯಂಚಲಿ ಕಿರುನಗೆ ಮೂಡಿ ತಲೆ ಕೊಡವಿಕೊಂಡೆ.

ಬದುಕಿನ ಏಕತಾನತೆ ಒಮ್ಮೊಮ್ಮೆ ಜಿಡ್ಡುಗಟ್ಟಿದ ಅಂಟುಜಾಡ್ಯದಂತೆ ಹೇವರಿಕೆ ಹುಟ್ಟಿಸುತ್ತದೆ ಬದಲಾವಣೆ ಬಯಸಿದರೂ ಈಗ ಯಾವ ಬದಲಾವಣೆ ಸಾಧ್ಯವಿಲ್ಲವೆಂಬ ಕಟುವಾಸ್ತವ ನನಗೆ ತಿಳಿದಿತ್ತು.  ನಿವೃತ್ತಿಗೆ ಮುನ್ನ ಇನ್ನೂ ನಾಲ್ಕು ವರ್ಷಸೇವೆಸಲ್ಲಿಸಲು ಅವಕಾಶ ಅಷ್ಟೆ.  ಆಬ್ಬಬ್ಬಾ ಎಂದರೆ ನನ್ನ ಸೇವಾವಧಿ, ಹಿರಿತನ ಪರಿಗಣಿಸಿ ನನ್ನನ್ನು ಉಪಕುಲಪತಿ ಸ್ಥಾನಕ್ಕೆ ನೇಮಕ ಮಾಡಬಹುದು.  ನನಗೆ ಆ ಪಟ್ಟಬೇಕೆಂದು ಹಲ್ಲು ಗಿಂಜುತ್ತ ಬಯೋಡಾಟ ಹಿಡಿದುಕೊಂಡು ಯಾವರಾಜಕಾರಣಿಯ ಮುಂದೆಯೂ ಕೈಯೊಡ್ಡಿ ನಿಲ್ಲಲು ನನ್ನ ಅಹಂ ಅಡ್ಡಬರುತ್ತಿತ್ತು.  ಬಂದರೆ ತಾನಾಗಿಯೇ ಬರಲಿ ಇಲ್ಲದಿದ್ದರೆ ಆಕಾಶಕಳಚಿ ಬೀಳುವಂತದ್ದೇನೂ ಇಲ್ಲ ಎಂಬ ಧೃಡ ನಿರ್ಣಯಕ್ಕೆ ಜೋತುಬಿದ್ದು ನಿರುಮ್ಮಳನಾಗಿದ್ದೆ.  
ಯಾರು ಏನು ಮಾಡುವರೋ ನನಗೇನು  ಕೇಡುಮಾಡುವರೋ 
ಸತ್ಯದ ಹಾದಿಯಲಿರುನಾಗ  ಧರ್ಮವೆ ರಕ್ಷಿಸುತಿರುವಾಗ ಈ ನಾಡಿಗೆ ನಾಡೇಹಿಂದಿರುವಾಗ  
ಕನ್ನಡ ನನ್ನುಸಿರಾಗಿರುವಾಗ...... ಕಿವಿಗಪ್ಪಳಿಸುತ್ತಿದ್ದಂತೆ ನನ್ನಲ್ಲಿನ ಸಮಚಿತ್ತ ಪ್ರಬಲವಾಯಿತು. 

ನನ್ನೊಂದಿಗೆ ಆತ್ಮೀಯತೆಯಿಂದ ಇರುವ ನನ್ನ ಸಹೋದ್ಯೋಗಿ ಪ್ರೊಫ಼ೆಸರ್ ಈಶ್ವರ್‌ಗೆ ಫ಼ೋನಾಯಿಸಿ ಈಸಂಜೆ ಇಲ್ಲೇ ಕಳಿಯೋಣ ಬಂದುಬಿಡು ಅಂತ ಕರೆಯಲೆ ಎಂದು ಯೋಚಿಸಿ ಯಾಕೋ ಬೇಡವೆನಿಸಿ ಸುಮ್ಮನಾಗಿಬಿಟ್ಟೆ.  ಯಾಕೆ? ಹೇಗೆ ? ಗೊತ್ತಿಲ್ಲ.  ಕೆಲ ನಿರ್ಧಾರಗಳ ಸರಿತಪ್ಪುಗಳ ತಾಕಲಾಟ ಪ್ರಶ್ನಾತೀತ.  ಕೆಲವು ಪ್ರಶ್ನೆಗಳಿಗೆ ಉತ್ತರಗಳಿರುವದಿಲ್ಲ.  ಇದ್ದರೂ ಹುಡುಕುವ ಗೋಜಿಗೆ ಹೋಗಿ ತಲೆಕೆಡಸಿಕೊಳ್ಳಬಾರದು.

ನಾನು ಸಂಜೆ ಇಷ್ಟಪಡುವ ನನ್ನ ಮಾಸ್ಟರ್ ಬೆಡ್‌ರೂಂಗೆ ಹೊಂದಿಕೊಂಡಿರುವ ಬಾಲ್ಕನಿ.  ಸ್ಕಾಚ್‌ವಿಸ್ಕಿಗೆ ಹದವಾಗಿ ಅರ್ಧಸೋಡ ಅರ್ಧನೀರು ಬೆರೆಸಿ ಎರಡು ಐಸ್‌ಕ್ಯೂಬ್ ತೇಲಿಬಿಟ್ಟು ಮೊದಲ ಸಿಪ್ ಹೀರಿದೆ.  ಒಂಟಿತನ ಸುಖವಾಗಿ ಅನುಭವಿಸೋದು ಒಂದು ಕಲೆ.  ಬದುಕಿನಲ್ಲಾದ ನಾನಾ ತಿರುವುಗಳ ಯೋಚನೆ ಅಪ್ಪಳಿಸಿ ಅಪ್ಪಳಿಸಿ ನನ್ನ ಬಾಲ್ಯದ ದಿನಗಳತ್ತ ಕರೆದೊಯ್ದಿತ್ತು.  
ಹಕ್ಕಿಯು ಹಾರುತಿದೆ ದೂರಕೆ ಹಕ್ಕಿಯು ಹಾರುತಿದೆ 
ಹಗಲಿರುಳೆನ್ನದೆ ಕಾಲದ ಹಕ್ಕಿಯು ಹಾರುತಿದೆ......
ಅದೇ ಓಘ.....! ನಾನಂದುಕೊಳ್ಳುತ್ತಿರುವುದು ಎಫ಼್.ಎಂ. ನಲ್ಲಿ ಬರುತ್ತಿದೆಯೋ! ಅಥವಾ ಎಫ಼್. ಎಂ. ನ ತಾಳಕ್ಕೆ ನನ್ನ ಮನಸ್ಸು ಕುಣಿಯುತ್ತಿದೆಯೋ!   ಇದ್ದರೂ ಇರಬಹುದು.  ಯಾವುದೊ ಒಂದು ಅಂತೂ ಸುಖಾನುಭವಗಳ ನೆನಪಿನ ಸರಮಾಲೆ.  

ಬಾಲ್ಯದ ನೆನಪುಗಳೇ ಹಾಗೆ ......... ವಾಸ್ತವ ಮರೆಸಿ ಹುಡುಗಾಟದ ಆ ದಿನಗಳ ಮೆಲಕು ಮುದ ನೀಡಿ ಜೀಕುವ ಮನಸ್ಸು ಜೋಕಾಲಿಯಾಡುವ ಪರಿಯೇ ಹಾಗೆ......!  ಹಿಂದೊಮ್ಮೆ ಮುಂದೊಮ್ಮೆ ಹಸಿ ಹಸಿರು ಭಾವ ಜೀಕಿದಾಗ ಸುಂಯ್‌ಗುಡುವ ಗಾಳಿಯಲ್ಲಿ ಅದೆಂಥದೋ ಕಂಪು ತಂಪು ಉಸಿರು ಬಿಗಿದು ಸುಖಿಸುವ ತವಕ.  

ಹುರಿದ ಅವಲಕ್ಕಿ ಗೋಡಂಬಿಗಳ ಮೆಲಕುತ್ತ ಖಾಲಿಯಾದ ಗ್ಲಾಸಿಗೆ ಮತ್ತೊಂದು ಪೆಗ್‌ಸುರಿದು ಅದೇ ಹದವಾದ ಮಿಶ್ರಣದೊಂದಿಗೆ ಬಾಲ್ಕನಿಯ ಗೋಡೆಗೆ ಆತುನಿಂತು ಒಮ್ಮೆ ಆಕಾಶದತ್ತ ನೋಡಿದೆ.  ನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ ಚಂದ್ರನಿರಲಿಲ್ಲ.  ನಾವಿಕನಿಲ್ಲದ ದೋಣಿಯಲ್ಲಿ ನಕ್ಷತ್ರಗಳು ತೇಲುತ್ತಿರುವಂತೆ ಭಾಸವಾಯಿತು.

ಕುಚುಕು ಕುಚುಕು ಕುಚುಕು ನೀನು ಚಡ್ಡಿದೋಸ್ತಿಕಣೋ ಕುಚುಕು...... ... ಅಲೆ‌ಅಲೆಯಾಗಿ ಕಚಗುಳಿಯಿಟ್ಟಿತು.

ಚಿನ್ನಿಕೋಲು ಆಟದಲ್ಲಿ ಎಡಗಣ್ಣು ಹುಬ್ಬಿನ ಮೇಲೆ ಬಿದ್ದ ಏಟಿನ ಕಲೆಯನ್ನೊಮ್ಮೆ ಸವರಿಕೊಂಡೆ.  ಸುರಿಯುತ್ತಿದ್ದ ರಕ್ತ ಒರೆಸಿಕೊಳ್ಳುತ್ತ, ಇದಕ್ಕೆಲ್ಲ ಕಾರಣನಾದ ರೊಡ್ಡಗೈಕಾಕ್ಯಾನನ್ನು ಬೆನ್ನಟ್ಟಿದ್ದು ... .... ಅವನು ನನ್ನ ಕೈಗೆ ಸಿಗದೆ ಪರಾರಿಯಾಗಿದ್ದು.  ನಾಲ್ಕುದಿನ ಇಬ್ಬರೂಚಾಳಿಠೂ..!  ಅಂತ ಮುನಿಸಿಕೊಂಡು ಮಾತು ಬಿಟ್ಟಿದ್ದು ಮರೆಯಲು ಸಾಧ್ಯವಿಲ್ಲ.  ಆಗಷ್ಟೆ ಎರಡನೆಕ್ಲಾಸ್ ಪಾಸಾಗಿ ಮೂರನೆ ಕ್ಲಾಸಿಗೆ ತೇರ್ಗಡೆಯಾದಾಗ ನನ್ನದೊಂದು ದೊಡ್ಡಗೆಳೆಯರ ದಂಡೆ ನಿರ್ಮಾಣವಾಗಿತ್ತು.  ರೊಡ್ಡಗೈಕಾಕ್ಯಾ, ವಾಜಿ, ಸೊಟ್ಟಗಾಲ ಸೀನ್ಯಾ, ಜೋಯ್ಯರಶ್ರೀಪ್ಯಾ, ಕಿರಾಣಿ‌ಅಂಗಡಿ ಬಸ್ಯಾ, ಪೂಜಾರ ರವ್ಯಾ, ಸುಣಗಾರ ಎಲ್ಲ್ಯಾ, ಹಿಂದಿನ ಓಣಿಶ್ರೀಕ್ಯಾ, ಕುಂಬಾರ ಓಣಿ‌ಅಪ್ಪ್ಯಾ, ಕಲಾಲರ ಶಿವ್ಯಾ, ಸಿಂಪಿಗೀರ ರಾಜು, ಗಿರಣಿ ವಿಜ್ಯಾ, ಗುಂಡಿಭಾವಿ ಸಿದ್ದ್ಯಾ, ಕೆಂಪ್ಯಾ, ಗೋಪ್ಯಾ, ಒಬ್ಬರೇ ... ...! ಇಬ್ಬರೇ ... ...! ವಾನರ ಸೈನ್ಯದ ತುಕಡಿಯಂತಿತ್ತು.  ಟೋಳಿ ಕಟ್ಟಿಕೊಂಡು ಸ್ಕೂಲ ಪಕ್ಕದ ಗೌಡರ ಮಾವಿನ ತೋಟಕ್ಕೆ ನುಗ್ಗಿ ಕಾಯಿ ಕದಿಯಲು ಹೆಣೆಯುವ ಪ್ಲಾನ್... ... ಓಡಲಾರದೇ ಕೈಗೆ ಸಿಕ್ಕುಬಿದ್ದು ಗೌಡರ ಆಳಿನ ಕೈಯಲ್ಲಿ ಒದೆ ಬೀಳುತ್ತಿದ್ದುದು ಯಾವಾಗಲೂ ಸೊಟ್ಟಗಾಲು ಸೀನ್ಯಾನಿಗೆ.  ಕೈಚಳಕದಲ್ಲಿ ಸೀನ್ಯಾ ಯಾವಾಗಲೂ ಒಂದುಕೈ ಮುಂದೆ.  ಜಾತ್ರೆಯಲ್ಲಿ ಮಾರಾಟಕ್ಕಿಟ್ಟ ಆಟಕೆ ಸಾಮಾನುಗಳನ್ನು ಎಗರಿಸಿ ನನ್ನಕೈಗೆ ರವಾಸಿಸುತ್ತಿದ್ದ ಆ ಸ್ಪೀಡ್... ...! ಅದೇ ಸ್ಪೀಡ್‌ನಲ್ಲಿ ನಾನು ಅಲ್ಲಿಂದ ಮಾಯವಾಗುತ್ತಿದ್ದ ರೀತಿ ನೆನೆಸಿಕೊಳ್ಳೊದೇ ಒಂಥರಾ ಥ್ರಿಲ್.  ಕೈಲಿದ್ದ ಒಂದೆರಡು ರೂಪಾಯಿಗಳನ್ನು ಗುಳಗುಳಿ ಜೂಜೂ ಆಡಿ ಸೋತು ಬಸ್‌ಚಾರ್ಜ್‌ಗೂ ದುಡ್ಡಿಲ್ಲದೆ ಹಸಿದ ಹೊಟ್ಟೆಯಲ್ಲಿ ನಡೆದು ತಡರಾತ್ರಿ ಊರು ಸೇರಿದ  ಆ ದಿನಗಳು.  

ಆಡೂ ಆಟ ಆಡೂ ಹೇ ರಾಜಾ... ... ಹೇ ರಾಣಿ ... ... ಹೇ ಜೋಕರ ... ... ಎಫ಼್.ಎಂ. ನಲ್ಲಿ ಮತ್ತದೇ ಗುಂಗು.

ಬ್ರಿಟಿಷರ ಕಾಲದ ಎಲಿಜಾಬೆತ್‌ರಾಣಿ ಮುಖವಿರುವ ಒಂದೆರಡು ನಾಣ್ಯಗಳನ್ನು ನನ್ನಜ್ಜನ ಕಪಾಟಿನಿಂದ ಎಗರಿಸಿದ್ದೆ.  ಅವು ಚಲಾವಣೆಯಲ್ಲಿಲ್ಲದ ನಾಣ್ಯಗಳೆಂದು ನನಗೆ ಗೊತ್ತಿತ್ತು.  ಶಾಲೆ ಬಿಟ್ಟನಂತರ ಹೊಸಪೇಟೆ ಬೀದಿಯ ಮೂಲಕವೇ ನಾವು ಮನೆ ಸೇರಿತ್ತಿದ್ದುದು.  ಅದೊಂದು ದಿನ ಹೀಗೆ ಶಾಲೆಬಿಟ್ಟನಂತರ ನಡೆದುಕೊಂಡು ಬರುತ್ತಿದ್ದಾಗ ಅರಳಿಕಟ್ಟೆಯ ಕೆಳಗೆ ಯಾವಾಗಲೂ ಒಬ್ಬ ಹಣ್ಣು ಹಣ್ಣು ಮುದುಕಿ ಬಜ್ಜಿ ಮಿರ್ಚಿ ಕರಿದು ಮಾರುತ್ತಿದ್ದ ಆ ಜಾಗದ ಹತ್ತಿರ ಬರುತ್ತಿದ್ದಂತೆ ಸೊಟ್ಟಸೀನ್ಯಾನ ಕೈಯಲ್ಲಿ ಆ ಹಳೆಯ ನಾಣ್ಯಗಳನ್ನು ಕೊಟ್ಟು ಬಜ್ಜಿ ಮಿರ್ಚಿ ಖರೀದಿಸಲು ಹೇಳಿದೆ.  ಪೊಟ್ಟಣ ರೆಡಿಯಾದ ಕೂಡಲೇ ನನ್ನ ಕೈಗೆ ಮತ್ತು ರೊಡ್ಡಗೈ ಕಾಕ್ಯಾನ ಕೈಗೆ ಕೊಡಬೇಕೆಂದು ತಾಕೀತು ಮಾಡಿದೆ.  ಪೊಟ್ಟಣ ಸಿಕ್ಕಿದ್ದೇತಡ ನಾನು ಮತ್ತು ರೊಡ್ಡಗೈ ಕಾಕ್ಯಾ ನಿಧಾನವಾಗಿ ಅಲ್ಲಿಂದ ಹೊರಡುತ್ತ ನಾಣ್ಯವನ್ನು ಕೊಡುವಂತೆ ಸಂಜ್ಞಮಾಡಿದೆ.  ನಾಣ್ಯಗಳನ್ನು ಮುದುಕಿಯ ಕೈಗೆ ಕೊಟ್ಟು ಸ್ವಲ್ಪ ಜೋರಾಗಿಯೇ ಸೊಟ್ಟಗಾಲು ತಿರುವುತ್ತ ನಡೆದು ಬರುತ್ತಿದ್ದ.  ನನ್ನ ಬಂದು ಕಣ್ಣು ಆಗಾಗ ಆ ಮುದುಕಿಯ ಪ್ರತಿಕ್ರಿಯೆಗೆ ತವಕಿಸುತ್ತಿತ್ತು.  ಎರಡೆರಡು ಬಾರಿ ಕಣ್ಣುತಿಕ್ಕಿಕೊಂಡು ತಿರುಗಿಸಿ ತಿರುಗಿಸಿ ನಾಣ್ಯ ನೋಡಿದ ಮುದುಕಿ ಏಕಾ‌ಏಕೀ ಎದ್ದುನಿಂತಳು.  ಅಪಾಯ ಸೂಚನೆ ಆಗಲೆ ನನಗೆ ದೊರಕಿತ್ತು.  ನಾನು ಹಾಗು ರೊಡ್ಡಗೈ ಕಾಕ್ಯಾ‌ಓಡಲು ಶುರುವಿಟ್ಟುಕೊಂಡೆವು.  ನಾವ್ಯಾಕೆ ಓಡುತ್ತಿದ್ದೇವೆಂದು ತಿಳಿಯದೆ ಸೀನ್ಯಾ ಆಚೀಚೆ ನೋಡಿದ.  ಏರುಗಚ್ಚಿ ಹಾಕಿನಿಂತ ಮುದುಕಿ ಲೇ...... ಸೊಟ್ಟ...... ಬಾಡುಕೋ....... ಸವಕಲು ಆಣೆ ಕೊಟ್ಟು ಮೋಸ ಮಾಡ್ತಿಯೇನ್ಲೇ? ಅಂತ ಅಂದವಳೆ ಸೀನ್ಯಾನನ್ನು ಅಟ್ಟಿಸಿಕೊಂಡು ಬಂದಳು.  ಇದ್ದುದರಲ್ಲೆ ಸ್ವಲ್ಪ ಜೋರಾಗಿ ಓಡಿದ ಸೀನ್ಯಾ ಮುದುಕಿಯ ಕೈಗೆ ಸಿಗದೆ ನಾವು ಕಾಯುತ್ತಿದ್ದ ನಮ್ಮ ಓಣಿಯ ವೆಂಕಟೇಶ ದೇವರ ಗುಡಿಯ ಕಟ್ಟೆಗೆ ಬಂದ.  ಅವನಿಗೊಂದು ಶಬ್ಬಾಸಗಿರಿಕೊಟ್ಟು, ಬಜ್ಜಿ ಮಿರ್ಚಿ ತಿಂದು ಚಣ್ಣಕ್ಕೆ ಕೈ ಒರೆಸಿಕೊಂಡು ಏನೂ ನಡೆದೆ ಇಲ್ಲವೆನೋ ಎಂಬಂತೆ ಮನೆ ಸೇರಿಕೊಂಡೆವು.  ಆಮೇಲೆ ಸುಮಾರು ಹತ್ತುಹದಿನೈದು ದಿನಗಳಕಾಲ ಶಾಲೆಗೆ ಹೋಗಿಬರಲು ಬೇರೆರಸ್ತೆ ಮೂಲಕ ಓಡಾಡುತ್ತಿದ್ದೆವು.

ನೋಡಿ ...... ಸ್ವಾಮಿ ನಾವಿರೋದೇ ಹೀಗೇ ...... ಮಿಂಚಿನ ಓಟದ ಶಂಕರ್‌ನಾಗ್ ನೆನಪಿಗೆ ಬಂದ.
ಮೂರನೇ ಪೆಗ್ ನಿಧಾನವಾಗಿ ಮುಗಿಸುತ್ತ ಸಮಯ ಸರಿದದ್ದೆ ಗೊತ್ತಾಗಲಿಲ್ಲ.  ಗೆಳೆಯರ ಗುಂಪಿನ ನಾನಾ ಚೇಷ್ಟೆಗಳು ಮನದ ಪುಟದಲ್ಲಿ ತೆರೆಯಲಾರಂಭಿಸಿದ್ದವು.  ಬೇಸಿಗೆಯ ರಜೆ ಬಂತೆಂದರೆ ಸಾಕು......... ಒಣಗಿ ಬಿರುಕುಬಿಟ್ಟ ಕೆರೆಯಂಗಳವೇ ನಮ್ಮ ಕ್ರಿಕೆಟ್ ಆಟದ ಮೈದಾನವಾಗುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿದಾಗ ಈಜು ಹೊಡೆಯಲು ರೊಡ್ಡಗೈಕಾಕ್ಯಾ, ಅಪ್ಪ್ಯಾ, ಶ್ರೀಕ್ಯಾ, ವಾಜಿ, ಸೀನ್ಯಾ, ಶ್ರೀಪ್ಯಾ ಎಲ್ಲರೂ ಹುರುಪಿಗೆದ್ದುಬಿಡುತ್ತಿದ್ದರು.  ನನಗೆ ಈಜು ಬಾರದ ಕಾರಣ ಕೆರೆಯ ದಂಡೆಯ ಮೇಲೆ ಕುಳಿತು ಆನಂದಿಸುತ್ತಿದ್ದೆ.  ಹೀಗೆ ಒಂದುದಿನ ಇವರೆಲ್ಲ ಈಜುತ್ತಿದ್ದಾಗ ಕೆರೆಕಾಯುವ ಮುದುಕ ದಂಡೆಯ ಮೇಲಿಟ್ಟಿದ್ದ ಎಲ್ಲ ಬಟ್ಟೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಕೋಲು ಹಿಡಿದುಕೊಂಡು ಈಜುತ್ತಿದ್ದ ಎಲ್ಲರನ್ನು ಗದರಿಸಿ ಓಡಿಸತೊಡಗಿದ.  ಊರಿಗಿದ್ದ ಒಂದೇ ಒಂದು ಬಳಸುನೀರಿನ ಕೆರೆಯಲ್ಲಿ ಈಜುವದನ್ನು, ಬಟ್ಟೆ ಒಗೆಯುವದನ್ನು, ದನಗಳ ಮೈ ತೊಳೆಯುವದು ಮುಂತಾದ ಚಟುವಟಿಕೆಗಳನ್ನು ಊರಪಂಚಾಯಿತಿ ನಿಷೇಧಿಸಿ ಕೆರೆಕಾಯುವ ಈ ಮುದುಕನನ್ನು ನೇಮಿಸಿದ್ದರೂ ನನ್ನ ಗೆಳೆಯರ ಬಂಡಧೈರ್ಯ ಮೆಚ್ಚಲೇಬೇಕು.  ಅಟ್ಟಿಸಿಕೊಂಡು ಬರುತ್ತಿದ್ದ ಮುದುಕನ ಹತ್ತಿರ ತಮ್ಮ ಬಟ್ಟೆ ವಾಪಸ್ಸು ಕೇಳುವದಿರಲಿ, ತಪ್ಪಿಸಿಕೊಂಡು ಮನೆ ಸೇರಿದರೆ ಸಾಕೆಂದು ಒಂದೇ‌ಉಸುರಿಗೆ ನನ್ನ ಗೆಳೆಯರೆಲ್ಲರೂ ತಮ್ಮ ತಮ್ಮ ಮನೆಗೆ ಬೆತ್ತಲೆ ಓಟ ಮಾಡಿದ್ದರು.  ಊರ ಜನರಿಗೆ ಪುಗಸಟ್ಟೆ ಮನರಂಜನೆ ದೊರಕಿಸಿಕೊಟ್ಟ ಭಾಗ್ಯ ನನ್ನ ಗೆಳೆಯರಿಗೆ ಸಂದಿತ್ತು.

ಜಲಲ ಜಲಲ ಜಲಧಾರೆ...... ಜಲಲ ಜಲಲ ಜಲಧಾರೆ...... ನಮ್ಮ ತುಂಟಾಟಗಳು ಇಷ್ಟಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು.  ನಮಗಿದ್ದ ಇನ್ನೂ ಒಂದು ಚಪಲ ಸಿನಿಮಾ ನೋಡುವದು.  ನಮ್ಮೂರ ಟೆಂಟ್‌ನಲ್ಲಿ ಹಿಂದುಗಡೆಯಿಂದ ಕಳ್ಳತನದಲ್ಲಿ ನುಗ್ಗಿ ಕೆಲವೊಮ್ಮೆ ಸಿನಿಮಾ ನೋಡುತ್ತಿದ್ದೆವು.  

ಕಪ್ಪು ಬಿಳುಪು ಚಿತ್ರಗಳ ಪರ್ವಕಾಲದ ಅಂದಿನ ಚಿತ್ರಗಳ ನಾಯಕರೆ ನಮ್ಮ ಜೀವನದ ಸ್ಪೂರ್ತಿಗಳಾಗಿದ್ದರು. ಅವರ ಹಾವಭಾವ ನಟನೆಗಳನ್ನು  ಮೈಗೂಡಿಸಿಕೊಂಡು ಒಮ್ಮೊಮ್ಮೆ ಹುಚ್ಚು ಆವೇಶಕ್ಕೆ ಒಳಗಾಗಿ ಫ಼ಜೀತಿ ಪಟ್ಟಿದ್ದು ಇದೆ.  ಒಮ್ಮೆ ಸಂಪತ್ತಿಗೆ ಸವಾಲ್ ಚಿತ್ರವನ್ನು ನೋಡಿ ನಾಯಕನಟ ಖಳನಾಯಕನ ಕೈಯಲ್ಲಿ ಚಾವಟಿ ಏಟು ತಿನ್ನುವ ಆ ದೃಶ್ಯನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿತ್ತು.  ಒಂದು ದಿನ ಮಧ್ಯಾಹ್ನ ನಮ್ಮ ದನದ ಕೊಟ್ಟಿಗೆಯಲ್ಲಿ ಸೀನ್ಯಾನನ್ನು ದನಗಳನ್ನು ಕಟ್ಟುವ ಹಗ್ಗದಿಂದ ಕಟ್ಟಿ ಬಾರುಕೋಲಿನಿಂದ ಒಟ್ಟೊಬ್ಬರಾಗಿ ಹೊಡೆಯಲು ಶುರುವಿಟ್ಟುಕೊಂಡೆವು.  ಒಂದೊಂದು ಏಟಿಗೂ ಅವನು ನೋವಿನಿಂದ ಕಿರುಚಿಕೊಂಡಾಗ ಖಳನಾಯಕ ನಂತೆ ನಾವು ಗಹಗಹಿಸಿ ನಕ್ಕು ನಟಿಸುವ ಚಪಲ ತೀರಿಸಿಕೊಂಡಿದ್ದೆವು.  ಏನೂ ತಪ್ಪು ಮಾಡದ ಸೀನ್ಯಾ ನಾಯಕನ ಪಾತ್ರದಲ್ಲಿ ನಿಂತು ನಮ್ಮಿಂದ ಹೊಡೆಸಿಕೊಂಡಿದ್ದ ಯಜ್ಞಪಶು ಮಾವಾಗಲೂ ಮೇಕೆನೆ...! ಹುಲಿವಾಗಲು ಸಾಧ್ಯವೇ?  ನಮ್ಮ ನಟನೆಯ ಹುಚ್ಚಿನಲ್ಲಿ ಘಟನೆಯ ಗಂಭೀರತೆಯನ್ನು ಯೋಚಿಸುವ ಗೊಡವೆಗೆ ಹೋಗದೆ ಮಾಸಲಾರದ ಮಾನಸಿಕ ಆಘಾತವನ್ನು ನಾವೆಲ್ಲರೂ ಅವನಿಗೆ ಕೊಡಮಾಡಿದ್ದೆವು.  ಮನೆಯಲ್ಲಿನ ಹಿರಿಯರಿಗೆಲ್ಲ ಈ ವಿಷಯ ಗೊತ್ತಾಗಿ ಛೀಮಾರಿಹಾಕಿಸಿಕೊಂಡಿದ್ದು ಆಯ್ತು 
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ
ಕೂಗಿದರೂ ಧ್ವನಿ ಕೇಳಲಿಲ್ಲವೇ ....... ನರಹರಿಯೇ
ಬಾಸುಂಡೆ ಏಟುತಿಂದ ಕನಕದಾಸರಿಗೆ ಶ್ರೀಕೃಷ್ಣನ ದರುಶನ ಭಾಗ್ಯ ದೊರೆತಿತ್ತಂತೆ.  ಬಾಸುಂಡೆ ಏಟುತಿಂದ ಸೀನ್ಯಾ ಉಪ್ಪಿನ ಶಾಖಕೊಡಿಸಿಕೊಳ್ಳುತ್ತ ನಾಲ್ಕುದಿನ ಮಲಗಿದ್ದೆ ಬಂತು ಭಾಗ್ಯ....!

ಈ ನಮ್ಮ ಸಿನಿಮಾ ನೋಡುವ ಚಪಲ ಎಲ್ಲಿಗೆ ತಂದು ನಿಲ್ಲಿಸಿತಂದರೆ ಮುಂದಾಗುವ ರಾದ್ದಾಂತಗಳ ಊಹೆ ಮಾಡುವ ವಯಸ್ಸು ನಮ್ಮದಾಗಿರಲಿಲ್ಲ.  ನಮ್ಮ ಗುಂಪಿನ ಗೆಳೆಯ ಶ್ರೀಕ್ಯಾನ ಚಿಕ್ಕಪ್ಪನೆ ಟೆಂಟಿನ ಮಾಲಿಕನಾಗಿದ್ದ ಹಾಗೂ ನಾವೆಲ್ಲ ಅವರ ಚಿಕ್ಕಪ್ಪನ ಮನೆಗೆ ಹೋದಾಗಲೆಲ್ಲ ಹೊರಗಿನ ಒಂದು ಕೋಣೆಯನ್ನು ಸಿನೆಮ ಟೆಂಟಿಗೆ ಸಂಬಂಧಪಟ್ಟ ಕೆಲಸಗಳಿಗೆ ಉಪಯೋಗಿಸುತ್ತಿದ್ದರು.  ಅಲ್ಲಿ ಮ್ಯಾನೇಜರ್‌ಗಳ ಗೇಟ್‌ಕೀಪರ್‌ಗಳ, ಕಸದೊಡೆಯುವವರ ಹಾಗೂ ಪ್ರೊಜೆಕ್ಟರ್ ಆಪರೇಟರ್‌ಗಳು ಮಿಟಿಂಗುಗಳು ನಡೆಯುತ್ತಿದ್ದವು.  ಆಕೊಣೆಂii ಒಂದು ಬದಿಯಲ್ಲಿ ಟಿಕೇಟ್ ಬಂಡಲುಗಳನ್ನು ಸಂಗ್ರಹಿಸಿಡುವ ಕಬ್ಬಿಣದ ಟ್ರಂಕು ಕಾಗದಪತ್ರಗಳ ಫ಼ೈಲು ಇತ್ಯಾದಿಗಳನ್ನು ಇಟ್ಟಿರುತ್ತಿದ್ದರು.   ಆಯಾ ದಿನದಾಟಕ್ಕೆ ಬೇಕಾಗುವ ಟಿಕೇಟ್ ಬಂಡಲುಗಳನ್ನು ನನ್ನ ಗೆಳೆಯನ ಚಿಕ್ಕಪ್ಪ ಬುಕ್ಕಿಂಗ್ ಮ್ಯಾನೇಜರ್‌ಗೆ ಕೊಡುತ್ತಿದ್ದುದನ್ನು ನಾನು ಸಾಕಷ್ಟುಸಲ ನೋಡಿದ್ದೆ.  ಟಿಕೇಟ್ ಬಂಡಲ್ ಎಗರಿಸಿದರೆ ಅಂದುಕೊಂಡಾಗಲೆಲ್ಲ ಪುಗಸಟ್ಟೆ ಸಿನಿಮಾ ನೋಡಬಹುದೆಂಬ ಖತರ್ನಾಕ್ ಐಡಿಯಾ ಹೊಳದದ್ದೆ‌ಆಗ.   ಈ ಕೆಲಸಕ್ಕೆ ಶ್ರೀಕ್ಯಾ ಸರಿಯಾದ ವ್ಯಕ್ತಿ ಅಂತ ತೀರ್ಮಾನಿಸಿದ್ದೆ ರೊಡ್ಡಗೈಕಾಕ್ಯಾನಿಗೆ ಶ್ರೀಕ್ಯಾನನ್ನು ಈ ಕೆಲಸಕ್ಕೆ ಹುರುದುಂಬಿಸೊ ಕೆಲಸ ಕೊಟ್ಟು ಅವನತಲೆಗೆ ಹುಳಬಿಟ್ಟೆ.  ಅಚ್ಚುಕಟ್ಟಾಗಿ ಕೆಲಸ ನಿಭಾಯಿಸಿದ ಶ್ರೀಕ್ಯಾ, ಕಾಕ್ಯಾನ ಕೈಯಲ್ಲಿ ನಾಲ್ಕು ಟಿಕೇಟ್ ಬಂಡಲ್‌ಗಳನ್ನು ತಂದುಕೊಟ್ಟಾಗ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ.  ನಾನು, ಕಾಕ್ಯಾ, ಶ್ರೀಕ್ಯಾಹಾಗು ಸೀನ್ಯಾ ಒಂದೊಂದು ಟಿಕೇಟ್ ಬಂಡಲನ್ನು ಇಟ್ಟುಕೊಳ್ಳುವದೆಂದು ನಿರ್ಣಯವಾಯಿತು.  

ತ್ರಿಮೂರ್ತಿರೂಪಾ ದತ್ತಾತ್ರೇಯ ತ್ರಿಗುಣಾತೀತ ದತ್ತಾತ್ರೇಯ ......... ಹಾಗೂ ರಾಮನ‌ಅವತಾರ ರಘುಕುಲ ಸೋಮನ ಅವತಾರ.......  ಮುಂತಾದ ಹಾಡುಗಳನ್ನು ಊರಿಗೆಲ್ಲ ಕೇಳುವಂತೆ ಸಂಜೆಯ ಆಟ ಶುರುವಾಗುವದಕ್ಕೆ ಮುಂಚೆ ಟೆಂಟಿನ ಮೈಕ್‌ನಲ್ಲಿ ಹಾಕುತ್ತಿದ್ದರು.  ನಾನು ಮತ್ತು ರೊಡ್ಡಗೈ ಕಾಕ್ಯಾ ಹಾಡು ಶುರುವಾಗುವದನ್ನೆ ಕೆರೆಯ ದಂಡೆಯ ದೊಡ್ಡಬೇವಿನಮರದ ಸಂಧಿಯಿಂದ ನೋಡುತ್ತ ನಿಂತಿದ್ದೆವು.  ಆಜಾಗದಿಂದ ಬಸ್‌ಸ್ಟಾಂಡ್ ಹಾಗು ಟೆಂಟನ್ನು ಸ್ಪಷ್ಟವಾಗಿನೋಡಬಹುದಾಗಿತ್ತು.  ಬಸ್‌ಸ್ಟಾಂಡ್‌ನಿಂದ ಬಸ್ಸಿಳಿದು ಹೊರಬರುತ್ತಿದ್ದ ಹಳ್ಳಿಜನರ ಹತ್ತಿರ ಸೀನ್ಯಾ ಏನೋ ಮಾತನಾಡುತ್ತಿರುವಂತೆ  ನಮಗೆ ಕಾಣುತ್ತಿತ್ತು. ಹಾಡು ಶುರುವಾದ ಮೇಲೆ ಬುಕಿಂಗ್‌ಕೌಂಟರ್ ತೆರೆಯುತ್ತಿದುದು ವಾಡಿಕೆ. ಹೇಗೂ ಇನ್ನೂ ಹಾಡು ಶುರುವಾಗಿಲ್ಲ.  ಹಾಡು ಶುರುವಾಗುವ ಹೊತ್ತಿಗೆ ಟೆಂಟ್ ಹತ್ತಿರ ನಾವೆಲ್ಲರೂ ಸೇರುವದೆಂದು ಮೊದಲೆ ಮಾತನಾಡಿಕೊಂಡಿದ್ದೆವು. ಟಿಕೆಟ್ ಕೊಳ್ಳುವ ಜನರು ಒಬ್ಬೊಬ್ಬರಾಗಿ ಒಳಹೋದನಂತರ ನಾವು ಅವರ ಜೊತೆ ಸೇರಿ ಒಳಹೋಗುವ ವ್ಯವಸ್ಥಿತ ಯೋಜನೆ ನಮ್ಮದಾಗಿತ್ತು.  ಆದರೆ ನನಗೆ ಮತ್ತು ಕಾಕ್ಯಾನ ಅರಿವಿಗೆ ಬರದ ವಿದ್ಯಮಾನಗಳು ಬಸ್‌ಸ್ಟಾಂಡ್‌ನ ಮುಂದೆ ಜರಗುತ್ತಿದ್ದವು.  

ಹಾಡು ಆರಂಭಕ್ಕೆ ಇನ್ನೂ ಸುಮಾರು ಹೊತ್ತು ಇತ್ತು.  ಅಷ್ಟರಲ್ಲಿ ಟೆಂಟ್‌ನ ಬುಕ್ಕಿಂಗ್ ಮ್ಯಾನೇಜರ ಸೀನ್ಯಾನನ್ನು ಬಸ್‌ಸ್ಟಾಂಡ್‌ನ ಹೊರಭಾಗದಲ್ಲಿ ತಡೆದುನಿಲ್ಲಿಸಿ ಏನೋ ಮಾತನಾಡುತ್ತಿದ್ದಂತೆ ಕಾಣುತ್ತಿತ್ತು.  ಒಂದೆರಡು ನಿಮಿಷಗಳಲ್ಲಿ ಸೀನ್ಯಾನನ್ನು ದರ ದರ ಎಳೆದುಕೊಂಡು ಮ್ಯಾನೇಜರ್ ಟೆಂಟ್‌ನತ್ತ ನಡೆಯತೊಡಗಿದ.  ಎಲ್ಲೋ ಎಡವಟ್ಟಾಗಿರಬೇಕೆಂದು ನಾನು ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.  ಇಬ್ಬರಿಗೂ ಅಪಾಯದ ಗಂಟೆ ಒಮ್ಮೆಲೆ ಬಾರಿಸಿದಂತಾಗಿ ಮನೆಸೇರಿಕೊಳ್ಳುವದು ಉಳಿದಿರುವ ಒಂದೇ ಮಾರ್ಗವೆಂದು ತಿಳಿದು ಮನೆಯತ್ತ ಹೆಜ್ಜೆಹಾಕಿದೆವು.   

ಒಂದುತಾಸಿನ ನಂತರ ನಮ್ಮ ಮನೆಯ ಆಳು ಬಂದು ನಿಮ್ಮ ಗೆಳ್ಯಾನ್ನ ಸಿನಿಮಾದ ರೀಲು ಬಿಡೊ ರೂಂನ್ಯಾಗೆ ಕೂಡಿಹಾಕ್ಯಾರಂತ ಅಂತ ಹೇಳಿದ.  ನಾನು ಯಾರು? ಯಾಕ? ಏನಾತು? ಅಂತ ಬಡಬಡಿಸಿದೆ.  ಅದಕ್ಕವನು ಟಿಕೆಟ್‌ಬುಕ್ ಕದ್ದಾನಂತ, ಅದರೀ ..... ಎದುರುಮನಿ ಸೊಟ್ಟಸೀನಪ್ಪ,  ಹಳ್ಳಿಜನರಿಗೆ ಅರ್ಧರೇಟಿನಂಗ ಮರ್‍ಯಾನಂತ ಅಂತ ಹೇಳಿದ.

ಹಾಡು ಶುರುವಾಗುವದಕ್ಕೆ ಮುಂಚೆಯ ಟೆಂಟಿನತ್ತ ಜನ ಬರಲಾರಂಭಿಸಿದ್ದು ಟಿಕೆಟ್ ತೋರಿಸಿ ಒಳಗೆ ಹೋಗಲು ಕೇಳುತ್ತಿದ್ದರು.    ಕೌಂಟರ್ ಶುರುಮಾಡದ ಮ್ಯಾನೇಜರ್‌ಗೆ ಆಶ್ಚರ್ಯ ಉಂಟುಮಾಡಿತ್ತು.  ಹಳ್ಳಿಜನರನ್ನು ಕೇಳಲಾಗಿ, ಸೊಟ್ಟೆಗಾಲಿನ ಹುಡುಗನೊಬ್ಬ ನಮಗೆ ಈ ಟಿಕೇಟ್‌ನ್ನು ರಿಯಾಯಿತಿ ದರದಲ್ಲಿ ಕೊಟ್ಟಿದ್ದಾಗಿಯೂ ಹಾಗೂ ಟೆಂಟ್‌ನವರು ಹಬ್ಬದ ಪ್ರಯುಕ್ತ ವಿಶೇಷ ರಿಬೇಟ್ ಇಟ್ಟಿದ್ದಾರೆಂದು ಜನರನ್ನು ನಂಬಿಸಿ ಮಾರಾಟಮಾಡಿದ್ದ. ಕದ್ದ ಪುಗಸಟ್ಟೆ ಟಿಕೆಟ್‌ಗೆ ರಿಬೇಟ್ ಬೇರೆ ಕೇಡು.....!  ವ್ಯವಸ್ಥಿತವಾಗಿ ಹೆಣೆದ ಪ್ಲಾನೊಂದು ಸೀನ್ಯಾನ ದಡ್ಡತನದಿಂದಾಗಿ ಮಣ್ಣುಪಾಲಾಗಿತ್ತು.  

ಮುಂದುವಾಗುವ ವಿಚಾರಣೆ ಸುಳಿವು ಹಾಗೂ ಆದರಿಂದ ಪಾರಾಗುವ ನಿಟ್ಟಿನಲ್ಲಿ ಕ್ಷಿಪ್ರವಾಗಿ ಯೋಚಿಸಿ ಕಾಕ್ಯಾನ ಮನೆಗೆ ಓಡಿದೆ ನಡೆದಿರುವ ರಾದ್ದಾಂತವನ್ನು ಒಂದೇ ಉಸಿರಿಗೆ ಅವನಿಗೆ ಒದರಿದೆ.  ಟಿಕೇಟ್ ಬಂಡಲ್ ನಮ್ಮ ಹತ್ತಿರ ಇರುವದು ಸುರಕ್ಷಿತವಲ್ಲ ಮತ್ತು ಈ ಹಗರಣದಲ್ಲಿ ನಾವು ಶಾಮಿಲಾಗಿದ್ದೇವೆಂದು ಸೀನ್ಯಾ ಬಾಯಿಬಿಡುವದಕ್ಕೂ ಮೊದಲು ಶ್ರೀಕ್ಯಾನ ಕೈಗೆ ನಮ್ಮಲ್ಲಿದ್ದ ಟಿಕೆಟ್ ಬಂಡಲ್‌ಗಳನ್ನು ಏನೋ ಸಬೂಬು ಹೇಳಿ ವರ್ಗಾಯಿಸಿ ಸುಮ್ಮನಾಗಿಬಿಟ್ಟೆವು.  ಶ್ರೀಕ್ಯಾನಿಗೆ ಬಸ್‌ಸ್ಟಾಂಡ್ ಹಾಗೂ ಟೆಂಟ್‌ನಲ್ಲಿ ನಡೆದ ಸಂಗತಿಗಳು ಇನ್ನೂಗೊತ್ತಾಗಿರಲಿಲ್ಲ. ರಾತ್ರಿ ಒಂಬತ್ತರ ಸುಮಾರು ಸೀನ್ಯಾ, ಟೆಂಟ್‌ಮ್ಯಾನೇಜರ್, ಮಾಲಿಕರು, ಶ್ರೀಕ್ಯಾ, ಸೀನ್ಯಾ ಹಾಗೂ ಅವನ ಅಪ್ಪ ಎಲ್ಲರು ವಿಚಾರಣೆಗೆ ಹಾಜರಾಗಿ ನಮ್ಮಪ್ಪನ ಬರುವಿಗಾಗಿ ಮನೆಯ ಪಡಸಾಲೆಯಲ್ಲಿ ಸೇರಿದ್ದರು.  ಊರಿಗೆಲ್ಲ ಧರ್ಮನಿರ್ಣಯ ಹೇಳುವನಮ್ಮಪ್ಪನ ಮುಂದೆ ನಾವು ಅಪರಾಧಿಸ್ಥಾನದಲ್ಲಿ ನಿಂತು ವಿಚಾರಣೆ ಎದುರಿಸುವ ದೃಶ್ಯ ನೆನಪಿಕೊಂಡು ಒಂದುಕ್ಷಣ ಗಾಭರಿಯಾಯಿತು.  ನಾನು ಹಾಗೂ ಕಾಕ್ಯಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.  ಸಂದೇಶ ಸ್ಪಷ್ಟವಾಗಿತ್ತು.  ಸೀನ್ಯಾ ಕೊಡುವ ಹೇಳಿಕೆಯಮೇಲೆ ನಮ್ಮಿಬ್ಬರ ಹಣೆಬರಹ ನಿಂತಿದೆಯೆಂದು.

ವಿಚಾರಣೆ ಆರಂಭವಾದಾಗ ನಮಗೆಲ್ಲ ದಿಗಿಲು ಎಲ್ಲಿ ಹೆಸರುಗಳು ಬಹಿರಂಗಗೊಂಡು ಮರ್ಯಾದೆ ಮೂರುಕಾಸಾಗುವ ಹೊತ್ತು ದೂರವಿಲ್ಲವೆಂದು ಬೆವತು ಹಸಿಯಾದ ಮುಖವನ್ನು ಕೈಯಿಂದ ಬರೆಸಿಕೊಳ್ಳುತ್ತ ಚಣ್ಣಕ್ಕ ತಿಕ್ಕಿಕೊಳ್ಳುತ್ತಿದ್ದೆವು.  ನಾವು ಮಾಡಿದ್ದ ಘನಂದಾರಿ ಕೆಲಸಕ್ಕೆ ಮರ್ಯಾದೆ ಬೇರೇ ಕೇಡು!  

ವಿಚಾರಣೆ ವೇಳೆ ಎಲ್ಲ ತಪ್ಪುಗಳನ್ನು ಸೊಟ್ಟಸೀನ್ಯಾ ತನ್ನಮೇಲೆ ಹಾಕಿಕೊಂಡು ಎಲ್ಲರ ಹತ್ತಿರ ತಾರಾಮಾರಾ ಬಯ್ಯಿಸಿಕೊಂಡ.  ನಮ್ಮ  ಹೆಸರುಗಳು ಹೊರಬರದ್ದರಿಂದ ಮನಸ್ಸು ನಿರಾಳವಾಗಿತ್ತು.  ಆದರೆ ಸೀನ್ಯಾ ನಮ್ಮಗಳ ಹೆದರಿಕೆಗೆ ನಮ್ಮ ಹೆಸರುಗಳನ್ನು ಬಾಯಿಬಿಡಲಿಲ್ಲವೋ?  ಅಥವಾ ಇನ್ನೇನಾದರೂ ಕಾರಣವಿದೆಯೋ?  ಎಂಬುದು ಅರ್ಥವಾಗಲಿಲ್ಲ.  ಮಾರನೆದಿನ ಶಾಲೆಗೆ ಹೊರಡುವ ಸಮಯದಲ್ಲಿ ನಾನು ಸೀನ್ಯಾನನ್ನು ಕೇಳಿದೆ, ನಮಗ ಹೆದರಿ ಎಲ್ಲಾ ತಪ್ಪು ನಿನ್ನಮ್ಯಾಲೆ ಹಕ್ಕೊಂಡಿ ಹೌದಲ್ಲೋ? ಅಂದೆ.  ಅದಕ್ಕ್‌ವನು ಸುಮ್ಮನೆ ನಕ್ಕು, ದೋಸ್ತಾ, ಅದಕಲ್ಲೋ......... ನಿಮ್ಮೆಲ್ಲಾರ ಹೆಸರು ಹೇಳಿದ್ರ ನಮ್ಮ ಗೆಳ್ತನ ಮೂರಾಬಟ್ಟಿ ಯಾಕ್ತಿತ್ತು.  ಅದ್ಯಾವ ದೊಡ್ಡ ವಿಷ್ಯಾ ಬಿಡೋ ಅಂದು ಬಿಟ್ಟಿದ್ದ.  ಅದಕ್ಕೆ ನಾನು, ಅಲ್ಲಲೇ, ಸೀನ್ಯಾ ನೀ ತಣ್ಣಗ ಇದ್ದಿದ್ರ ಯಾರಿಗೂ ಗೊತ್ತಿಲ್ಲದಂಗ ವರ್ಷಾನುಗಟ್ಟಲೆ ಪುಗಸಟ್ಟೆ ಸಿನೆಮಾ ನೋಡುತ್ತಿದ್ವಲ್ಲೋ.....! ಎಲ್ಲಾ ಹಾಳಮಾಡಿಬಿಟ್ಟೆಲ್ಲೊ. ಅಂದೆ.  ಅದಕ್ಕವನು ಚುಟ್ಟಾ ಸೇದಲಿಕ್ಕೆ ಸ್ವಲ್ಪ ರೊಕ್ಕಾ ಮಾಡಿಕೊಂಡ್ರಾತು ಅಂತ ಹಂಗ ಮಾಡ್ದೆ ಅಂದಿದ್ದ.  

ಚುಟ್ಟಾ ಸೇದುವ ಸೀನ್ಯಾನ ಹುಕಿಗೆ ನಮ್ಮ ಸಿನಿಮಾ ನೋಡುವ ಚಪಲಕ್ಕೆ ಕಲ್ಲುಬಿದ್ದ...... ಪೆಚ್ಚಾಗಿದ್ದ......  ಎಲ್ಲ ಈಗ ಸುಮಧುರ ನೆನಪುಗಳು.  ಗೆಳೆತನ ಮುರಿದು ಬೀಳ್ತದೆ ಅಂತ ಸುಳ್ಳು ಅಪಾದನೆಗಳನ್ನು ತನ್ನ ಮೇಲೆ ಹಾಕಿಕೊಂಡು ಗೆಳೆತನ ಉಳಿಸಿಕೊಂಡ ಅವನನ್ನು ನಾವು ಆಗ ಅರ್ಥ ಮಾಡಿಕೊಳ್ಳಲೇ‌ಇಲ್ಲ.  ಚಿಕ್ಕಂದಿನಲ್ಲಿ ಪೋಲಿಯೋ ಪೀಡಿತನಾಗಿ ಒಂದುಕಾಲು ಸ್ವಾಧೀನ ಕಳೆದುಕೊಂಡಿದ್ದ ಈ ಗೆಳೆಯ ಈಗ್ಗೆ ೪-೫ ವರ್ಷಗಳ ಕೆಳಗೆ ವಾಸಿಯಾಗದ ಯಾವದೋ ಕಾಯಿಲೆಯಿಂದ ತೀರಕೊಂಡ ವಿಚಾರ ತಿಳಿಯಿತು.  ಸುದ್ದಿ ತಿಳಿದಾಗ ಯಾವರೀತಿ ಪ್ರತಿಕ್ರಯಿಸಿಬೇಕೆಂದು ತಿಳಿಯದೆ ಮೌನಕ್ಕೆ ಶರಣಾಗಿದ್ದೆ.  ಕಾಲಚಕ್ರದ ಸುಳಿ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ತರಹ ಸುತ್ತುತ್ತಿತ್ತು.  ಒಬ್ಬ ಪ್ರೈಮರಿ ಸ್ಕೂಲ ಹೆಡ್‌ಮಾಸ್ಟರ್, ಇನ್ನೊಬ್ಬ ಇಂಜನಿಯರ್, ಮತ್ತೊಬ್ಬ ಮೆಡಿಕಲ್ ರೆಪ್ರಜೆಂಟೇಟಿವ್ ಆಗಿ ಬೇರೆಬೇರೆ ಊರುಗಳಿಗೆ ಹೊರಟುಹೋದರು.  ಇನ್ನು ಕೆಲವರು ಹೊಲಗದ್ದೆ, ಕಿರಾಣ ಅಂಗಡಿ, ದಲಾಲಿ ಅಂಗಡಿ, ಚಾ ಅಂಗಡಿ ಅಂತ ಊರಲ್ಲೇ ಉಳಿದರು.  ಮತ್ತೊಬ್ಬ ಗೆಳೆಯ ಬೆಳಗಾಗುವದರೊಳಗೆ ಕಾವಿತೊಟ್ಟು ರುದ್ರಾಕ್ಷಿಸರ ಕೈಯಲ್ಲಿ ಹಿಡಿದು ಓಂ ನಮಃ ಶಿವಾಯ ಮಂತ್ರ ಪಠಿಸುತ್ತ ಮಠಾಧಿಪತಿಯಾಗಿದ್ದ. ಬದುಕಿನಲ್ಲಿ ಶಿಸ್ತು ಅಳವಡಿಕೊಳ್ಳದ ಹಾಗೂ ಬದುಕನ್ನು ಸೀರಿಯಸ್ ಆಗಿ ತಗೆದುಕೊಳ್ಳದ ಒಬ್ಬನೆ ಒಬ್ಬ ಎಂದರೆ ಅವನು ಸೀನ್ಯಾ.  ಅರ್ಧಂಬರ್ಧ ಕಲಿತು ಊರಲ್ಲೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವನನ್ನು ತಿದ್ದಲು ನಾವು ಆಗಾಗ ಪ್ರಯತ್ನಿಸಿದ್ದೆವು.  ಬಲಿತಮರ ಬಗ್ಗಿತೇ?  ಧ್ಯೇಯಗಳನ್ನು ಇಟ್ಟುಕೊಳ್ಳದ ಗೊತ್ತುಗುರಿ‌ಇಲ್ಲದ ಅಡ್ನಾಡಿ ಜೀವನ ಅವನದಾಗಿತ್ತು.   ಆದರೆ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದುಕಡೆ ಮರುಕವಿತ್ತು.  ಅಯ್ಯೋ ಸುಖದ ಬದುಕು ಕೊನೆಗೂ ನೋಡಲೇ ಇಲ್ಲ ಅಂತ ಕನಿಕರಿಸುತ್ತ ಆತನ ಆತ್ಮಕ್ಕೆ  ಶಾಂತಿ ಕೋರುವದೊಂದೆ ಈಗ ಉಳಿದಿರುವ ಮಾರ್ಗ.  ಕೆಲವರ ಕಣ್ಣುಗಳು ಜೀವನದ ಎಲ್ಲತರಹದ ಬಣ್ಣಗಳನ್ನು ನೋಡೋದೇ ಇಲ್ಲ.  ಕೆಲವರು ನೋಡುವ ಶಕ್ತಿ ಇದ್ದರೂ ಕಣ್ಣುಮುಚ್ಚಿಕೊಂಡಿರುತ್ತಾರೆ. ಇದೆಂಥ ಜೀವನದ ವೈಚಿತ್ರ್ಯ!  
ಊಟಮಾಡಿ ಕೈತೊಳಿದಾಗ ಎಫ಼್.ಎಂ. ನಲ್ಲಿ ಕೊನೆಯ ಗೀತೆ ಪ್ರಸಾರವಾಗುತ್ತಿತ್ತು.  
ಇದು ಯಾರು ಬರೆದ ಕಥೆಯೋ ನನಗಾಗಿ ಬಂದ ವ್ಯಥೆಯೋ
ಕೊನೆಹೇಗೋ ಅರಿಯಲಾರೆ, ಮರೆಯಾಗಿ ಹೋಗಲಾರೆ 
ಮಸುಕು ಮಸುಕಾದ ನೆನಪುಗಳು ಮಂಪರಿನಲ್ಲಿ ತೇಲುತ್ತಾ ಗಾಢನಿದ್ರೆಗೆ ಜಾರಿದ್ದು ಗೊತ್ತಾಗಲೇ‌ಇಲ್ಲ.


-- ಮಹೇಶ. ಶ್ರೀ. ದೇಶಪಾಂಡೆ
    (ತುಷಾರಪ್ರಿಯ)
(ದಿನಾಂಕ ೨೧.೦೪.೨೦೧೩ ರಂದು ಕರ್ಮವೀರವಾರಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.)