ವಿಕೃತ ಕುತೂಹಲ
ಇದೇನಿದು ವಿಕೃತ ಕುತೂಹಲ! ವಿಕೃತ ಕಾಮ, ವಿಕೃತ ಪ್ರೇಮ ಅಂತ ಕೇಳಿಗೊತ್ತು ಅಂತ ಕೇಳಿಯೇ ಕೇಳುತ್ತೀರೆಂದು ಗೊತ್ತು. ಅದರಂತೆ ಕುತೂಹಲ ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೆ. ಒಂದು ಒಳ್ಳೆಯ ವಿಷಯದ ಬಗ್ಗೆ ಕುತೂಹಲ ಇಟ್ಟುಕೊಂಡು ಆ ನಿಟ್ಟಿನಲ್ಲಿ ನಮ್ಮ ವಿಷಯ ಸಂಗ್ರಹವಿದ್ದಲ್ಲಿ ಅದು ಸಕಾರಾತ್ಮಕ ಬೆಳವಣಿಗೆ. ಅದೇ ಕೆಟ್ಟ ವಿಷಯಗಳಿಗೆ, ಸಂಬಂಧ ಪಡದ ವಿಷಯಗಳಿಗೆ ಕುತೂಹಲ ಬೆಳೆಸಿಕೊಂಡರೆ ಅದು ನಕಾರಾತ್ಮಕ ಬೆಳವಣಿಗೆ. ಇದನ್ನೆ ವಿಕೃತ ಕುತೂಹಲ ಅಂತ ಕರೆದರೆ ತಪ್ಪೇನು! ನಮ್ಮ ದಿನನಿತ್ಯದ ಆಗು ಹೋಗುಗಳಲ್ಲಿ ಇಂಥ ವಿಕೃತ ಕುತೂಹಲಿಗಳನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ. ಇಂಥವರು ನಿಮ್ಮ ಸಮೀಪದ ಸಂಬಂಧಿಗಳೂ ಆಗಿರಬಹುದು, ಮಿತ್ರರೂ ಆಗಿರಬಹುದು, ಸಹೋದ್ಯೋಗಿಗಳಾಗಿರಬಹುದು ಅಥವಾ ಅಕ್ಕಪಕ್ಕದ ಮನೆಯವರೂ ಆಗಿರಬಹುದು. ಇವರ ಒಂದಂಶದ ಕಾರ್ಯಕ್ರಮ - ಇತರರ ಬಗ್ಗೆ ಇನಿಲ್ಲದ ಕುತೂಹಲ ಬೆಳೆಸಿಕೊಂಡು, ಸಂಬಂಧವಿರಲಿ ಬಿಡಲಿ ಅವರ ಬಗ್ಗೆ ಮಾಹಿತಿ ಕಲೆ ಹಾಕುವುದು. ಕಲೆ ಹಾಕಿದ ಮಾಹಿತಿಗಳನ್ನು ಇಂಥಹುದೆ ವಿಕೃತ ಮನಸ್ಥಿತಿಯವರ ಜೊತೆ ವಿನಿಮಯ ಮಾಡಿಕೊಂಡು ಚಪಲ ತೀರಿಸಿಕೊಳ್ಳುತ್ತಾರೆ. ವಿಕೃತ ಮನಸ್ಥಿತಿಯವರು ಸಿಗದೆ ಹೋದರೆ ಅವರೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಎದುರಿಗೆ ಸಿಕ್ಕಿದವರನ್ನೆ ಮಾತಿಗೆಳೆದು ಅವರ ತಲೆ ಕೆಡಿಸಿ ಚಟ ತೀರಿಸಿಕೊಳ್ಳುತ್ತಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದರು ಸರಿಯೇ. .. . . ಇನ್ನೊಬ್ಬರ ತಟ್ಟೆಯ ನೊಣದ ಬಗ್ಗೆ ಇವರಿಗೆ ಇನ್ನಿಲ್ಲದ ಮಹಾನ್ ಕುತೂಹಲ. ಇತರರ ಕುಂದು ಕೊರತೆಗಳನ್ನು ಎತ್ತಿ ಆಡುವುದರಲ್ಲಿ ಇವರು ನಿಸ್ಸೀಮರು. ಒಂದು ವೇಳೆ ನೀವು ಅವರ ಮುಂದೆ ಎಡವಿ ಬಿದ್ದರೆ, ನಿಮ್ಮ ಕತೆ ಮುಗಿದಂತೆಯೆ! ಬಿದ್ದವರ ಏಳಿಸುವ ಗೋಜಿಗೆ ಇವರು ಹೋಗುವುದೇ ಇಲ್ಲ. ಬಿದ್ದವನು ಈ ರಸ್ತೆಯಲ್ಲೆ ಯಾಕೆ ಬಂದ? ಅದೇ ಕಲ್ಲಿಗೆ ಯಾಕೆ ಎಡವಿದ? ಬೇರೆ ರಸ್ತೆ ಇರಲಿಲ್ಲವೇ? ಇತ್ಯಾದಿ ಇತ್ಯಾದಿ ಚರ್ಚೆಮಾಡಿ ಎಡವಿ ಬಿದ್ದವನು ಶಾಶ್ವತವಾಗಿ ಬಿದ್ದಲ್ಲಿಯೆ ಮಲಗಿ ಬಿಡುವಂತೆ ವರ್ತಿಸಿಬಿಡುತ್ತಾರೆ.
ನನ್ನಲ್ಲಿರುವುದು ಅವನಲ್ಲಿ ಇಲ್ಲ ಎಂದೋ ನನ್ನಲ್ಲಿ ಇಲ್ಲದಿರುವುದು ಅವನಲ್ಲಿಯೂ ಇಲ್ಲ ಎಂದೋ ಸುಖಿಸುವ ವಿಕೃತ ಕುತೂಹಲಿಗಳವರು. ಇವರನ್ನು ವಿಕೃತ ತೃಪ್ತರೂ ಅಂತ ಕೂಡ ಕರೆಯಬಹುದು. ಇದೊಂದು ವಿಚಿತ್ರವಾದ ಮನೋವಿಕಾರವೇ ಸರಿ! ಅವರ ಯೋಗ್ಯತೆಗಳ ಬಗ್ಗೆ ಅರಿವಿದ್ದರೂ ಇತರರ ಯೋಗ್ಯತೆಗಳ ಬಗ್ಗೆ ವೇದಾಂತ ಭಾಷಣ ಬಿಗಿಯುತ್ತಾರೆ. ಇವರ ಸಾಧನೆ ಶೂನ್ಯವಾದರೂ ಇತರರ ಸಾಧನೆಗಳ ಜೊತೆ ಆ ಶೂನ್ಯವನ್ನು ಸೇರಿಸಿ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂಕಿಯ ಎಡಕ್ಕಿರುವ ಶೂನ್ಯವನ್ನು ಬಲಕ್ಕಿದೆ ಎಂಬ ಭ್ರಮೆಯಲ್ಲಿ ಬೀಗುತ್ತಾರೆ. ತಾವು ಬೇರೆಯವರಿಂದ ಉಪಕೃತಗೊಳ್ಳುವುದಕ್ಕೆ ಹುಟ್ಟಿರುವ ಹಾಗೇ ವರ್ತಿಸುತ್ತಾರೆ. ಅದು ಅವರ ಹಕ್ಕೆಂದು ಪ್ರತಿಪಾದಿಸುವ ಮಟ್ಟಿಗೆ
ಭಂಢತನ ಮೆರೆಯುತ್ತಾರೆ. ನಾಚಿಕೆಗೆಟ್ಟ ಜೀವನ! ಹಾಗೆ ಬದುಕುವುದೆ ಅವರ ವಿಶೇಷತೆ!
ಇತರರ ಬ್ಯಾಂಕ್ ಬ್ಯಾಲನ್ಸ್, ಕಾರು, ಬಂಗಲೆ, ಸಂಬಳ, ವಯಸ್ಸು, ಮದುವೆ, ಮಕ್ಕಳು ಹೀಗೆ ಒಂದಿಲ್ಲೊಂದು ವಿಷಯ ಇವರ ಹರಕು ಬಾಯಿಗೆ ಆಹಾರವಾಗುತ್ತವೆ. ಇಂಥ ವ್ಯಕ್ತಿಗಳು ನಮ್ಮ ಜೀವನದಲ್ಲಿ ನುಸುಳದಂತೆ ಎಚ್ಚರ ವಹಿಸಬೇಕು. ಸಂಬಂಧ ಕಡಿದುಕೊಳ್ಳುವುದು ಒಮ್ಮೊಮ್ಮೆ ಅಸಾಧ್ಯ. ಅಂಥ ಸಂದರ್ಭಗಳಲ್ಲಿ ಸಾಕಷ್ಟು ಅಂತರ ಕಾಯ್ದು ಕೊಂಡರೆ ಮನಸ್ಸಿನ ನೆಮ್ಮದಿ ಹಾಳಾಗಲಾರದು.
ಇಂಥವರು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಂಟಕಪ್ರಾಯರೇ ಹೊರತು, ಸಂಕಟ ನಿವಾರಕರಂತೂ ಅಲ್ಲವೇ ಅಲ್ಲ. ನಾವು ನೀವೂ ಸಂಕಟ ನಿವಾರಕರಾಗದಿದ್ದರೂ ಚಿಂತೆಯಿಲ್ಲ, ಕಂಟಕಪ್ರಾಯರಾಗುವುದು ಬೇಡವೇ ಬೇಡ.
ಏನಂತೀರಿ. . . . . . . .!?
-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

super sir
ReplyDeletethanks
ReplyDelete