Tuesday, 18 April 2017

ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸ್ಥಿತಿ ಬಂದೊದಗಿದೆ ಎಂದಾದರೆ ಎಲ್ಲೋ ಎಡವಟ್ಟಾಗಿದೆ ಎಂದೇ ಅರ್ಥ.  ನನ್ನನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ ದ್ವಂದ್ವಗಳು ಆರಂಭವಾದರೆ ಅಲ್ಲಿಗೆ ಬಿರುಕು ಸೃಷ್ಠಿಯಾಗುತ್ತ ಹೋಗುತ್ತದೆ.  ಬಿರುಕು ದೊಡ್ಡದಾಗುತ್ತ ಕಂದಕವಾಗುವವರೆಗೂ ನಾವು ಬಿಟ್ಟಿದ್ದೇ ಆದರೆ ಆ ಕಂದಕದಲ್ಲಿ ನಮಗೆ ಗೊತ್ತಿಲ್ಲದೇ ನಾವೇ ಬೀಳುವ ಪರಿಸ್ಥಿತಿ ಉಂಟಾಗುತ್ತದೆ.  ಹಾಗಾಗಬಾರದು ಎಂದರೆ ಬಿರುಕು ಬಿಟ್ಟಾಗಲೇ ಅದನ್ನು ಮುಚ್ಚುವ ಕಾರ್ಯಕ್ಕೆ ಸಿದ್ದರಾಗಬೇಕು.  ನಾವು ಒಬ್ಬರನ್ನೊಬ್ಬರು ಕ್ಷಮಿಸುತ್ತೇವೆ ಎಂದಾದರೆ, ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೇ ಅಂತ 'ಎಮ್ಮಾ ಗೋಲ್ಡಮ್ಯಾನ್' ಎಂಬಾತ ಹೇಳುತ್ತಾನೆ.  ನನ್ನನ್ನು ಬೇರೆಯವರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಕರುಬುವುದಕ್ಕೆ ಮೊದಲು ನಾನು ಬೇರೆಯವರಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ.  ನಮಗೆ ನಾವೇ ಮೊದಲು ಅರ್ಥವಾಗಬೇಕು.  ಹಾಗಾದಾಗ ಮಾತ್ರ ನಾವು ಬೇರೆಯವರಿಗೆ ಅರ್ಥವಾಗಲು ಸಾಧ್ಯ.  ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದೂ ಸಾಧ್ಯ.  ನನ್ನನ್ನು ಬೇರೆಯವರು ಇದೇ ರೀತಿ ಅರ್ಥಮಾಡಿಕೊಳ್ಳಲಿ ಅಂತ ಅಭಿಪ್ರಾಯ ಹೇರುವುದು ಮೂರ್ಖತನದ ಪರಮಾವಧಿಯಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಾಗುವ ದಾರಿ ಎಷ್ಟು ಸುಲಭದ್ದೋ ಅಷ್ಟೆ ಜಟಿಲವೂ ಕೂಡ.  ಒಂದು ಬಲೂನಿಗೆ ಎಷ್ಟು ಬೇಕೋ ಅಷ್ಟೆ ಗಾಳಿ ತುಂಬಿದರೆ ಬಲೂನು ಒಡೆಯುವುದಿಲ್ಲ.  ಗಾಳಿಯಲ್ಲಿ ತೇಲಾಡುತ್ತ ಮನಸ್ಸಿಗೆ ಮುದ ನೀಡುತ್ತದೆ.  ಅದೇ ಬಲೂನಿಗೆ ಜಾಸ್ತಿ ಗಾಳಿ ತುಂಬಿದರೆ ತೇಲಾಡುವ ಬದಲು ಒಡೆದು ಹೋಗುತ್ತದೆ.  ತೇಲಾಡಬೇಕೋ! ಒಡೆದುಹೋಗಬೇಕೋ!  ಎಂಬ ನಿರ್ಧಾರ ನಾವು ಬೇರೆಯವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದರ ಮೇಲೆ ನಿಂತಿರುತ್ತದೆ.  ಹಾಗೇಯೇ ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳುವುದು ನಾವು ತೆಗೆದುಕೊಳ್ಳುವ ನಿಲುವುಗಳ ಮೇಲೆ ನಿರ್ಧಾರವಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೆಂದರೆ ಅರ್ಥಮಾಡಿಕೊಂಡವರ ಗೆಲುವು, ಅರ್ಥಮಾಡಿಕೊಳ್ಳಲಾಗದವರ ಸೋಲು ಅಂತ ಅರ್ಥ ಅಲ್ಲ.  ಒಬ್ಬರ ಗೆಲುವಿಗೆ ಇನ್ನೊಬ್ಬರ ಸೋಲು ಹೇಗೆ ಕಾರಣವೋ ಅದೇ ರೀತಿ ಒಬ್ಬರ ಸೋಲಿಗೆ ಇನ್ನೊಬ್ಬರ ಗೆಲುವೂ ಕಾರಣ.  ಆದರೆ ಸೋಲು ಗೆಲುವುಗಳ ತಕ್ಕಡಿಯಲ್ಲಿ ಒಬ್ಬರನೊಬ್ಬರು ಅರ್ಥೈಸಿಕೊಳ್ಳುವುದನ್ನು ತೂಗಿ ನಿರ್ಣಯಿಸಲಾಗದು.  ಅದು ತೀರ ಭಾವನಾತ್ಮಕವಾದ ಸೂಕ್ಷ್ಮ ಸಂಬಂಧಗಳಿಗೆ ಮುಡಿಪಿಟ್ಟ ವಿಷಯ.  ಏನೇ ಹೇಳಿ ಅರ್ಥೈಸಿಕೊಳ್ಳುವ ವಿಧಾನ ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗುವ ಪ್ರಕ್ರಿಯೆ.  ಇಂದು ಸರಿಯೆನಿಸಿದ ವಿಷಯ ನಾಳೆ ತಪ್ಪಾಗಿ ಕಾಣಬಹುದು.  ಇಂದು ಮಾಡಿದ ತಪ್ಪು ನಾಳಿನ ಸರಿ ನಿರ್ಣಯಕ್ಕೆ ಸೋಪಾನವೂ ಆದೀತು!  ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಅಲೆಗಳಗುಂಟ ಈಜಿದರೆ ಯಶಸ್ಸು ನಮ್ಮದಾಗುತ್ತದೆ.  ಅಲೆಗಳ ವಿರುದ್ಧ ಈಜುವ ಸಾಹಸಕ್ಕಿಳಿದರೆ ದಡ ಸೇರಲಾಗದೆ ಮುಳುಗುವ ಆತಂಕ ಇದ್ದೇ ಇರುತ್ತದೆ.

ನಾನಾರಿಗೆ ಅರ್ಥವಾಗಿದ್ದೇನೆ?  ನಾನು ಬೇರೆಯವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ? ಎಂಬುದನ್ನು ಪರಾಮರ್ಶೆಗೆ ನಮ್ಮನ್ನು ನಾವೇ ತೆರೆದಿಟ್ಟುಕೊಳ್ಳಬೇಕು.  ಕೊನೆಗೊಂದು ಮಾತು ಅಗಾಧವಾದ ಕ್ಷಮಾಗುಣ ಹೊಂದಿದವರು ಇತರರಿಗಿಂತ ಎತ್ತರದಲ್ಲಿ ನಿಲ್ಲುತ್ತಾರೆ.  ಅಂಥ ಸಾಲಿಗೆ ಸೇರುವ ಪ್ರಯತ್ನ ನಮ್ಮಿಂದಲೇ ಯಾಕೆ ಪ್ರಾರಂಭವಾಗಬಾರದು!

ಏನಂತೀರಿ........!? 
-- ಮಹೇಶ್ ಶ್ರೀ ದೇಶಪಾಂಡೆ
           (ತುಷಾರ ಪ್ರಿಯ)

No comments:

Post a Comment