Friday, 28 April 2017

ಸಂತೆ


ಸಂತೆ


ಜೋಳಿಗೆ ಹಿಡಿದ ಮಧುರ ಜೀವನದ ಸಂತೆ
ಕಳೆದು ಹೋಯಿತು ಕಹಿಯ ಜೀವನದ ಕಂತೆ
ಬಿಕರಿಗಿಟ್ಟ ಸಾಮಾನು......ಮಾನಗಳು.....
ಬಿಕರಿಯಾಗದೆ ಉಳಿದ ಮನಗಳು......
ಕಾಲ ವರ್ಷಾಧಾರೆಯಲಿ ತೇಲಿದ ಮನ ಮಾನಗಳು
ಉಳಿದು ಹೋದವೋ.......ಮಾನಗಳು?
ಅಳಿದು ಹೋದವೋ.......ಮನಗಳು?
ಇದಕುತ್ತರ ಗೊತ್ತೇ ......ಮಾನ ಬಿಕರಿಗಿಟ್ಟ ಮಾನವಂತರೇ?
ಮುಂದೇನಾಯಿತು ಗೊತ್ತೇ........ಮನವಂತರೇ?
ಕದಡಿ ಹೋದವು ಪ್ರತಿಷ್ಠೆ ಮಾನಗಳು
ಮುದುಡಿ ಹೋದವು ಕೋಮಲ ಮನಗಳು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

Wednesday, 26 April 2017

ವಿಕೃತ ಕುತೂಹಲ


ವಿಕೃತ ಕುತೂಹಲ



ಇದೇನಿದು ವಿಕೃತ ಕುತೂಹಲ!  ವಿಕೃತ ಕಾಮ, ವಿಕೃತ ಪ್ರೇಮ ಅಂತ ಕೇಳಿಗೊತ್ತು ಅಂತ ಕೇಳಿಯೇ ಕೇಳುತ್ತೀರೆಂದು ಗೊತ್ತು.   ಅದರಂತೆ ಕುತೂಹಲ ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೆ.  ಒಂದು ಒಳ್ಳೆಯ ವಿಷಯದ ಬಗ್ಗೆ ಕುತೂಹಲ ಇಟ್ಟುಕೊಂಡು ಆ ನಿಟ್ಟಿನಲ್ಲಿ ನಮ್ಮ ವಿಷಯ ಸಂಗ್ರಹವಿದ್ದಲ್ಲಿ ಅದು ಸಕಾರಾತ್ಮಕ ಬೆಳವಣಿಗೆ.  ಅದೇ ಕೆಟ್ಟ ವಿಷಯಗಳಿಗೆ, ಸಂಬಂಧ ಪಡದ ವಿಷಯಗಳಿಗೆ ಕುತೂಹಲ ಬೆಳೆಸಿಕೊಂಡರೆ ಅದು ನಕಾರಾತ್ಮಕ ಬೆಳವಣಿಗೆ.  ಇದನ್ನೆ ವಿಕೃತ ಕುತೂಹಲ ಅಂತ ಕರೆದರೆ ತಪ್ಪೇನು!  ನಮ್ಮ ದಿನನಿತ್ಯದ ಆಗು ಹೋಗುಗಳಲ್ಲಿ ಇಂಥ ವಿಕೃತ ಕುತೂಹಲಿಗಳನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತೇವೆ.  ಇಂಥವರು ನಿಮ್ಮ ಸಮೀಪದ ಸಂಬಂಧಿಗಳೂ ಆಗಿರಬಹುದು, ಮಿತ್ರರೂ ಆಗಿರಬಹುದು, ಸಹೋದ್ಯೋಗಿಗಳಾಗಿರಬಹುದು ಅಥವಾ ಅಕ್ಕಪಕ್ಕದ ಮನೆಯವರೂ ಆಗಿರಬಹುದು.  ಇವರ ಒಂದಂಶದ ಕಾರ್ಯಕ್ರಮ - ಇತರರ ಬಗ್ಗೆ ಇನಿಲ್ಲದ ಕುತೂಹಲ ಬೆಳೆಸಿಕೊಂಡು, ಸಂಬಂಧವಿರಲಿ ಬಿಡಲಿ ಅವರ ಬಗ್ಗೆ ಮಾಹಿತಿ ಕಲೆ ಹಾಕುವುದು.  ಕಲೆ ಹಾಕಿದ ಮಾಹಿತಿಗಳನ್ನು ಇಂಥಹುದೆ ವಿಕೃತ ಮನಸ್ಥಿತಿಯವರ ಜೊತೆ ವಿನಿಮಯ ಮಾಡಿಕೊಂಡು ಚಪಲ ತೀರಿಸಿಕೊಳ್ಳುತ್ತಾರೆ.  ವಿಕೃತ ಮನಸ್ಥಿತಿಯವರು ಸಿಗದೆ ಹೋದರೆ ಅವರೇನು ತಲೆ ಕೆಡಿಸಿಕೊಳ್ಳುವುದಿಲ್ಲ.  ಎದುರಿಗೆ ಸಿಕ್ಕಿದವರನ್ನೆ ಮಾತಿಗೆಳೆದು ಅವರ ತಲೆ ಕೆಡಿಸಿ ಚಟ ತೀರಿಸಿಕೊಳ್ಳುತ್ತಾರೆ.  ಅವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದರು ಸರಿಯೇ. .. . . ಇನ್ನೊಬ್ಬರ ತಟ್ಟೆಯ ನೊಣದ ಬಗ್ಗೆ ಇವರಿಗೆ ಇನ್ನಿಲ್ಲದ ಮಹಾನ್ ಕುತೂಹಲ.  ಇತರರ ಕುಂದು ಕೊರತೆಗಳನ್ನು ಎತ್ತಿ ಆಡುವುದರಲ್ಲಿ ಇವರು ನಿಸ್ಸೀಮರು.  ಒಂದು ವೇಳೆ ನೀವು ಅವರ ಮುಂದೆ ಎಡವಿ ಬಿದ್ದರೆ, ನಿಮ್ಮ ಕತೆ ಮುಗಿದಂತೆಯೆ!  ಬಿದ್ದವರ ಏಳಿಸುವ ಗೋಜಿಗೆ ಇವರು ಹೋಗುವುದೇ ಇಲ್ಲ.  ಬಿದ್ದವನು ಈ ರಸ್ತೆಯಲ್ಲೆ ಯಾಕೆ ಬಂದ?  ಅದೇ ಕಲ್ಲಿಗೆ ಯಾಕೆ ಎಡವಿದ?  ಬೇರೆ ರಸ್ತೆ ಇರಲಿಲ್ಲವೇ?  ಇತ್ಯಾದಿ ಇತ್ಯಾದಿ ಚರ್ಚೆಮಾಡಿ ಎಡವಿ ಬಿದ್ದವನು ಶಾಶ್ವತವಾಗಿ ಬಿದ್ದಲ್ಲಿಯೆ ಮಲಗಿ ಬಿಡುವಂತೆ ವರ್ತಿಸಿಬಿಡುತ್ತಾರೆ.

ನನ್ನಲ್ಲಿರುವುದು ಅವನಲ್ಲಿ ಇಲ್ಲ ಎಂದೋ ನನ್ನಲ್ಲಿ ಇಲ್ಲದಿರುವುದು ಅವನಲ್ಲಿಯೂ ಇಲ್ಲ ಎಂದೋ ಸುಖಿಸುವ ವಿಕೃತ ಕುತೂಹಲಿಗಳವರು.  ಇವರನ್ನು ವಿಕೃತ ತೃಪ್ತರೂ ಅಂತ ಕೂಡ ಕರೆಯಬಹುದು.  ಇದೊಂದು ವಿಚಿತ್ರವಾದ ಮನೋವಿಕಾರವೇ ಸರಿ!  ಅವರ ಯೋಗ್ಯತೆಗಳ ಬಗ್ಗೆ ಅರಿವಿದ್ದರೂ ಇತರರ ಯೋಗ್ಯತೆಗಳ ಬಗ್ಗೆ ವೇದಾಂತ ಭಾಷಣ ಬಿಗಿಯುತ್ತಾರೆ.  ಇವರ ಸಾಧನೆ ಶೂನ್ಯವಾದರೂ ಇತರರ ಸಾಧನೆಗಳ ಜೊತೆ ಆ ಶೂನ್ಯವನ್ನು ಸೇರಿಸಿ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ.  ಅಂಕಿಯ ಎಡಕ್ಕಿರುವ ಶೂನ್ಯವನ್ನು ಬಲಕ್ಕಿದೆ ಎಂಬ ಭ್ರಮೆಯಲ್ಲಿ ಬೀಗುತ್ತಾರೆ.  ತಾವು ಬೇರೆಯವರಿಂದ ಉಪಕೃತಗೊಳ್ಳುವುದಕ್ಕೆ ಹುಟ್ಟಿರುವ ಹಾಗೇ ವರ್ತಿಸುತ್ತಾರೆ. ಅದು ಅವರ ಹಕ್ಕೆಂದು ಪ್ರತಿಪಾದಿಸುವ ಮಟ್ಟಿಗೆ 
ಭಂಢತನ ಮೆರೆಯುತ್ತಾರೆ.  ನಾಚಿಕೆಗೆಟ್ಟ ಜೀವನ!  ಹಾಗೆ ಬದುಕುವುದೆ ಅವರ ವಿಶೇಷತೆ!

ಇತರರ ಬ್ಯಾಂಕ್ ಬ್ಯಾಲನ್ಸ್, ಕಾರು, ಬಂಗಲೆ, ಸಂಬಳ, ವಯಸ್ಸು, ಮದುವೆ, ಮಕ್ಕಳು ಹೀಗೆ ಒಂದಿಲ್ಲೊಂದು ವಿಷಯ ಇವರ ಹರಕು ಬಾಯಿಗೆ ಆಹಾರವಾಗುತ್ತವೆ.  ಇಂಥ ವ್ಯಕ್ತಿಗಳು ನಮ್ಮ ಜೀವನದಲ್ಲಿ ನುಸುಳದಂತೆ ಎಚ್ಚರ ವಹಿಸಬೇಕು.  ಸಂಬಂಧ ಕಡಿದುಕೊಳ್ಳುವುದು ಒಮ್ಮೊಮ್ಮೆ ಅಸಾಧ್ಯ.  ಅಂಥ ಸಂದರ್ಭಗಳಲ್ಲಿ ಸಾಕಷ್ಟು ಅಂತರ ಕಾಯ್ದು ಕೊಂಡರೆ ಮನಸ್ಸಿನ ನೆಮ್ಮದಿ ಹಾಳಾಗಲಾರದು.

ಇಂಥವರು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕಂಟಕಪ್ರಾಯರೇ ಹೊರತು, ಸಂಕಟ ನಿವಾರಕರಂತೂ ಅಲ್ಲವೇ ಅಲ್ಲ.  ನಾವು ನೀವೂ ಸಂಕಟ ನಿವಾರಕರಾಗದಿದ್ದರೂ ಚಿಂತೆಯಿಲ್ಲ, ಕಂಟಕಪ್ರಾಯರಾಗುವುದು ಬೇಡವೇ ಬೇಡ.

ಏನಂತೀರಿ. . . . . . . .!?

-- ಮಹೇಶ ಶ್ರೀ. ದೇಶಪಾಂಡೆ
       ತುಷಾರಪ್ರಿಯ


Tuesday, 18 April 2017

ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ನಾನೆಷ್ಟು ಅರ್ಥ ಮಾಡಿಕೊಂಡಿದ್ದೇನೆ


ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸ್ಥಿತಿ ಬಂದೊದಗಿದೆ ಎಂದಾದರೆ ಎಲ್ಲೋ ಎಡವಟ್ಟಾಗಿದೆ ಎಂದೇ ಅರ್ಥ.  ನನ್ನನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ, ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ ಎಂದೋ ದ್ವಂದ್ವಗಳು ಆರಂಭವಾದರೆ ಅಲ್ಲಿಗೆ ಬಿರುಕು ಸೃಷ್ಠಿಯಾಗುತ್ತ ಹೋಗುತ್ತದೆ.  ಬಿರುಕು ದೊಡ್ಡದಾಗುತ್ತ ಕಂದಕವಾಗುವವರೆಗೂ ನಾವು ಬಿಟ್ಟಿದ್ದೇ ಆದರೆ ಆ ಕಂದಕದಲ್ಲಿ ನಮಗೆ ಗೊತ್ತಿಲ್ಲದೇ ನಾವೇ ಬೀಳುವ ಪರಿಸ್ಥಿತಿ ಉಂಟಾಗುತ್ತದೆ.  ಹಾಗಾಗಬಾರದು ಎಂದರೆ ಬಿರುಕು ಬಿಟ್ಟಾಗಲೇ ಅದನ್ನು ಮುಚ್ಚುವ ಕಾರ್ಯಕ್ಕೆ ಸಿದ್ದರಾಗಬೇಕು.  ನಾವು ಒಬ್ಬರನ್ನೊಬ್ಬರು ಕ್ಷಮಿಸುತ್ತೇವೆ ಎಂದಾದರೆ, ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗಲೇ ಅಂತ 'ಎಮ್ಮಾ ಗೋಲ್ಡಮ್ಯಾನ್' ಎಂಬಾತ ಹೇಳುತ್ತಾನೆ.  ನನ್ನನ್ನು ಬೇರೆಯವರು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಕರುಬುವುದಕ್ಕೆ ಮೊದಲು ನಾನು ಬೇರೆಯವರಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ.  ನಮಗೆ ನಾವೇ ಮೊದಲು ಅರ್ಥವಾಗಬೇಕು.  ಹಾಗಾದಾಗ ಮಾತ್ರ ನಾವು ಬೇರೆಯವರಿಗೆ ಅರ್ಥವಾಗಲು ಸಾಧ್ಯ.  ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದೂ ಸಾಧ್ಯ.  ನನ್ನನ್ನು ಬೇರೆಯವರು ಇದೇ ರೀತಿ ಅರ್ಥಮಾಡಿಕೊಳ್ಳಲಿ ಅಂತ ಅಭಿಪ್ರಾಯ ಹೇರುವುದು ಮೂರ್ಖತನದ ಪರಮಾವಧಿಯಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಸಾಗುವ ದಾರಿ ಎಷ್ಟು ಸುಲಭದ್ದೋ ಅಷ್ಟೆ ಜಟಿಲವೂ ಕೂಡ.  ಒಂದು ಬಲೂನಿಗೆ ಎಷ್ಟು ಬೇಕೋ ಅಷ್ಟೆ ಗಾಳಿ ತುಂಬಿದರೆ ಬಲೂನು ಒಡೆಯುವುದಿಲ್ಲ.  ಗಾಳಿಯಲ್ಲಿ ತೇಲಾಡುತ್ತ ಮನಸ್ಸಿಗೆ ಮುದ ನೀಡುತ್ತದೆ.  ಅದೇ ಬಲೂನಿಗೆ ಜಾಸ್ತಿ ಗಾಳಿ ತುಂಬಿದರೆ ತೇಲಾಡುವ ಬದಲು ಒಡೆದು ಹೋಗುತ್ತದೆ.  ತೇಲಾಡಬೇಕೋ! ಒಡೆದುಹೋಗಬೇಕೋ!  ಎಂಬ ನಿರ್ಧಾರ ನಾವು ಬೇರೆಯವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ ಎಂಬುದರ ಮೇಲೆ ನಿಂತಿರುತ್ತದೆ.  ಹಾಗೇಯೇ ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳುವುದು ನಾವು ತೆಗೆದುಕೊಳ್ಳುವ ನಿಲುವುಗಳ ಮೇಲೆ ನಿರ್ಧಾರವಾಗುತ್ತದೆ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೆಂದರೆ ಅರ್ಥಮಾಡಿಕೊಂಡವರ ಗೆಲುವು, ಅರ್ಥಮಾಡಿಕೊಳ್ಳಲಾಗದವರ ಸೋಲು ಅಂತ ಅರ್ಥ ಅಲ್ಲ.  ಒಬ್ಬರ ಗೆಲುವಿಗೆ ಇನ್ನೊಬ್ಬರ ಸೋಲು ಹೇಗೆ ಕಾರಣವೋ ಅದೇ ರೀತಿ ಒಬ್ಬರ ಸೋಲಿಗೆ ಇನ್ನೊಬ್ಬರ ಗೆಲುವೂ ಕಾರಣ.  ಆದರೆ ಸೋಲು ಗೆಲುವುಗಳ ತಕ್ಕಡಿಯಲ್ಲಿ ಒಬ್ಬರನೊಬ್ಬರು ಅರ್ಥೈಸಿಕೊಳ್ಳುವುದನ್ನು ತೂಗಿ ನಿರ್ಣಯಿಸಲಾಗದು.  ಅದು ತೀರ ಭಾವನಾತ್ಮಕವಾದ ಸೂಕ್ಷ್ಮ ಸಂಬಂಧಗಳಿಗೆ ಮುಡಿಪಿಟ್ಟ ವಿಷಯ.  ಏನೇ ಹೇಳಿ ಅರ್ಥೈಸಿಕೊಳ್ಳುವ ವಿಧಾನ ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗುವ ಪ್ರಕ್ರಿಯೆ.  ಇಂದು ಸರಿಯೆನಿಸಿದ ವಿಷಯ ನಾಳೆ ತಪ್ಪಾಗಿ ಕಾಣಬಹುದು.  ಇಂದು ಮಾಡಿದ ತಪ್ಪು ನಾಳಿನ ಸರಿ ನಿರ್ಣಯಕ್ಕೆ ಸೋಪಾನವೂ ಆದೀತು!  ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಅಲೆಗಳಗುಂಟ ಈಜಿದರೆ ಯಶಸ್ಸು ನಮ್ಮದಾಗುತ್ತದೆ.  ಅಲೆಗಳ ವಿರುದ್ಧ ಈಜುವ ಸಾಹಸಕ್ಕಿಳಿದರೆ ದಡ ಸೇರಲಾಗದೆ ಮುಳುಗುವ ಆತಂಕ ಇದ್ದೇ ಇರುತ್ತದೆ.

ನಾನಾರಿಗೆ ಅರ್ಥವಾಗಿದ್ದೇನೆ?  ನಾನು ಬೇರೆಯವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ? ಎಂಬುದನ್ನು ಪರಾಮರ್ಶೆಗೆ ನಮ್ಮನ್ನು ನಾವೇ ತೆರೆದಿಟ್ಟುಕೊಳ್ಳಬೇಕು.  ಕೊನೆಗೊಂದು ಮಾತು ಅಗಾಧವಾದ ಕ್ಷಮಾಗುಣ ಹೊಂದಿದವರು ಇತರರಿಗಿಂತ ಎತ್ತರದಲ್ಲಿ ನಿಲ್ಲುತ್ತಾರೆ.  ಅಂಥ ಸಾಲಿಗೆ ಸೇರುವ ಪ್ರಯತ್ನ ನಮ್ಮಿಂದಲೇ ಯಾಕೆ ಪ್ರಾರಂಭವಾಗಬಾರದು!

ಏನಂತೀರಿ........!? 
-- ಮಹೇಶ್ ಶ್ರೀ ದೇಶಪಾಂಡೆ
           (ತುಷಾರ ಪ್ರಿಯ)

Monday, 10 April 2017

ಗಮ್ಮತ್ತು


ಗಮ್ಮತ್ತು


ಸೋತು ಗೆಲ್ಲುವ ಗತ್ತು
ಗೆದ್ದು ಸೋಲುವ ಗಮ್ಮತ್ತು
ಪ್ರೀತಿ ಕಲಹದಲಿ ಇದಕಿಲ್ಲ ಕಿಮ್ಮತ್ತು
ಸ್ಥಿರವಾಗಿ ಉಳಿಯೋದು ನಿಯತ್ತು


-- ಮಹೇಶ ಶ್ರೀ. ದೇಶಪಾಂಡೆ

Saturday, 8 April 2017

ನಕ್ಕುಬಿಡು


ನಕ್ಕುಬಿಡು


ನೀನೊಮ್ಮೆ ನಕ್ಕುಬಿಡು
ಗೆಳತಿ..... ನೀನೊಮ್ಮೆ ನಕ್ಕುಬಿಡು
ಆಚೀಚೆ ನೋಡದೆ ನೀನೊಮ್ಮೆ ನಕ್ಕುಬಿಡು
ಅರಳು ಮಲ್ಲಿಗೆ ಹುರಿದು ನಕ್ಕುಬಿಡು
ಸೂಜಿ ಮಲ್ಲಿಗೆ ಸೂರಿ ನಕ್ಕುಬಿಡು
ಸಂಪಿಗೆ ಕಂಪುಸೂಸಿ ನಕ್ಕುಬಿಡು
ನನ್ನೆದೆಗೆ ತಂಪೆರೆದು ನಕ್ಕುಬಿಡು
ನೀನೊಮ್ಮೆ ನಕ್ಕುಬಿಡು
ನನ್ನುಸಿರ ಇಂಪಾಗಿ ನಕ್ಕುಬಿಡು
ನನ್ನುಸಿರು ಬಸಿದು ಕುಸಿಯುವ ಮೊದಲು
ಗೆಳತಿ..... ನೀನೊಮ್ಮೆ ನಕ್ಕುಬಿಡು
ನಾನತ್ತು ಹೊತ್ತಿ ಉರಿಯುವ ಮೊದಲು
ನೀನೊಮ್ಮೆ ನಕ್ಕುಬಿಡು
ಗೆಳತಿ..... ನೀನೊಮ್ಮೆ ನಕ್ಕುಬಿಡು
ನನ್ನೆದೆಯ ತಾಳಕೆ ಕುಣಿದುಬಿಡು
ನಕ್ಕುಬಿಡು.... 
ಕುಣಿದುಬಿಡು..... 
ನಕ್ಕುಬಿಡು......

--ಮಹೇಶ ಶ್ರೀ. ದೇಶಪಾಂಡೆ


Thursday, 6 April 2017

ಜೇಡರ ಹುಳು


ಜೇಡರ ಹುಳು


ಅಳುಕದಿರು ಮನವೆ,
ಅಸಹಾಯಕತೆ ಮೆಟ್ಟಿ ಎದೆಯುಬ್ಬಿಸುವ ಹೊತ್ತು
ಅಳುಕದಿರು ಮನವೆ,
ನೋವಿನ ಸರಳು ಕಳಚಿ ನಲಿಯುವ ಹೊತ್ತು
ಅಳುಕದಿರು ಮನವೆ,
ಅತ್ತುಸುಸ್ತಾಗಿ ಆನಂದಬಾಷ್ಪ ಸುರಿಸುವ ಹೊತ್ತು
ಅಳುಕದಿರು ಮನವೆ,
ದಿಟಹೂರಣ ಬಯಲಾಗಿ ಸುಳ್ಳುಹರಣದ ಹೊತ್ತು
ಅಳುಕದಿರು ಮನವೆ,
ಅಣುಕಣವೂ ಬಣ್ಣದ ರಂಗೋಲಿಯಾಗುವ ಹೊತ್ತು
ಅಳುಕದಿರು ಮನವೆ,
ಮಂಜು ಕರಗಿ ಕಿರಣ ಸೂಸುವ ಹೊತ್ತು
ಅಳುಕದಿರು ಮನವೆ,
ಹೆಣೆದ ಬಲೆಯ ಒಡೆಯ ನೀ ಜೇಡರಹುಳುವಾಗೋ ಹೊತ್ತು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

**__**__**

Tuesday, 4 April 2017

ಸಣ್ಣ ಖುಷಿಗಳ ಕಣಜ



ಸಣ್ಣ ಖುಷಿಗಳ ಕಣಜ


ಒಮ್ಮೊಮ್ಮೆ ಚಿಕ್ಕ ಚಿಕ್ಕ ಸಂಗತಿಗಳು ಎಷ್ಟೊಂದು ಖುಷಿ ಕೊಡುತ್ತವೆ ಅನ್ನೋದಕ್ಕೆ ನಿನ್ನೆ ನಡೆದ ಘಟನೆ ನನ್ನ ಮನಸ್ಸಿನಲ್ಲಿ ಇನ್ನೂ ಮರುಕಳಿಸುತ್ತಲೇ ಇದೆ.  ಬಹಳ ದಿನಗಳ ನಂತರ ಶಾಪಿಂಗ್‌ಗೆ ಅಂತ ಮನೆಗೆ ಬಂದ ಮಗಳು ನನ್ನನ್ನು ಹೊರಡಿಸಿದ್ದಳು.  ಶಾಪಿಂಗ್  ಅಂದ್ರೆ ನನಗೆ ಅಷ್ಟಕ್ಕಷ್ಟೆ!.  ನನಗಂತೂ ಅದು ಬಲು ಬೋರಿನ ವಿಷಯ.  ಒಲ್ಲದ ಮನಸ್ಸಿನಿಂದಲೆ ತಯಾರಾಗಿ ಹತ್ತಿರದ ಶಾಪಿಂಗ್‌ಮಾಲ್  ಒಂದಕ್ಕೆ ನಿನ್ನೆ ಸಾಯಂಕಾಲ ಹೋಗಿದ್ವಿ. ನನ್ನಾಕೆಗೆ ವಿಂಡೋ  ಶಾಪಿಂಗ್ ಅಂದ್ರೆ ಎಲ್ಲಿಲ್ಲದ ಹುರುಪು.  ಹೋದ ಅರ್ಧ ಗಂಟೆಯಲ್ಲಿ ನನಗಾಗಿ ೨-೩ ಶರ್ಟ್‌ಗಳನ್ನು ತೆಗೆದುಕೊಂಡಿದ್ದೂ ಆಯಿತು.  ಇನ್ನು ಅವರ ಸರದಿ.  ಅದು ಅಷ್ಟುಬೇಗ ಸುಲಭಕ್ಕೆ ಮುಗಿಯುವಂಥಾದ್ದಲ್ಲ  ಎಂಬುದು ನನಗೆ ಗುತ್ತು.

ಯಥಾ ಪ್ರಕಾರ ನಾನು ಅದು ಇದು ನೋಡುತ್ತ ನನ್ನ ಪಾಡಿಗೆ ನಾನು ಸಮಯ ಕಳೆಯುತ್ತಾ ಓಡಾಡುತ್ತಿದ್ದೆ. ಓಡಾಡಿ ಓಡಾಡಿ ಬೇಸರವಾದಾಗಲೆಲ್ಲ ಒಂದೆಡೆ ನಿಂತು ಎಸ್ಕಲೇಟರ್‌ನಲ್ಲಿ ಮೇಲೆ ಬರುವವರ - ಕೆಳಗೆ ಇಳಿಯುವವರ ನೋಡುತ್ತ ನಿಂತಿದ್ದೆ.    ನಿಂತು ನಿಂತು ಸಾಕಾಗಿ ನನ್ನ ಮಗಳಿಗೆ ಫೋನಾಯಿಸಿದೆ. 'ಇನ್ನೂ ಎಷ್ಟೊತ್ತು? ಆ ಕಡೆಯಿಂದ ಅಷ್ಟೇ ತ್ವರಿತವಾಗಿ ಬಿಲ್ಲಿಂಗ್ ಕೌಂಟರ್‌ನಲ್ಲಿ ನಿಂತಿದ್ದೇವೆ ನಾನು 'ಓಕೆ' ಅಂದು ಫೋನ್‌ಕಟ್ ಮಾಡಿದೆ.



ಸರಿ ಇನ್ನೇನು ಮಾಡುವುದು ಅಂದುಕೊಳ್ಳುತ್ತ ಮತ್ತೆ ಅದೇ ಎಸ್ಕಲೇಟರ್ ನತ್ತ ಕತ್ತು ತಿರುಗಿಸಿದೆ.  ಹಿಂದಿನಿಂದ ಧ್ವನಿ ಕೇಳಿಸಿತು 'ಹಲೋ ಅಂಕಲ್!' ತಿರುಗಿ ನೋಡಿದರೆ ಇಬ್ಬರು ಕಾಲೇಜು ಓದುವ ಹುಡುಗಿಯರು ಅಂತ ಕಾಣುತ್ತೆ, ಕೈಯಲ್ಲಿ ಒಂದು ಕುರ್ತಾ ಹಿಡಿದುಕೊಂಡು ನಿಂತಿದ್ದರು.  ನಾನು ಪ್ರಶ್ನಾರ್ಥಕವಾಗಿ ಅವರತ್ತ ನೋಡಿದೆ. ಆಗ ಅವರಲ್ಲಿ ಒಂದು ಹುಡುಗಿ, ನಮ್ಮ ಅಪ್ಪನೂ ನಿಮ್ಮಥರಾನೆ ಎತ್ತರ ಇದ್ದಾರೆ, ನಿಮ್ಮದೇ ಮೈಕಟ್ಟು.  ಅವರಿಗೊಂದು ಕುರ್ತಾ ತೆಗೆದುಕೊಳ್ಳಬೇಕು.  ನಮ್ಮ ಜೊತೆ ಅವರು ಬಂದಿಲ್ಲ. ಈ ಕುರ್ತಾ ಟ್ರೈ ಮಾಡ್ತಿರಾ? ಅಂತ ಕೇಳಿದಾಗ ನನಗೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ತೋಚಲಿಲ್ಲ.  ಈ ಹುಡುಗಿಯರು ಅವರ ಅಪ್ಪನ ಹುಟ್ಟುಹಬ್ಬಕ್ಕೋ ಅಥವಾ ಇನ್ಯಾವುದೋ ಸಂದರ್ಭಕ್ಕೆ ಆಶ್ಚರ್ಯ ಗೊಳಿಸಲೋ ಅಂತ ಇರಬೇಕು!  ನಾನು ಮರುಮಾತನಾಡದೆ ಅವರ ಕೈಯಲ್ಲಿನ ಕುರ್ತಾ ತೆಗೆದುಕೊಂಡು ಭುಜದ ಅಳತೆ ನೋಡುವಂತೆ ಹೇಳಿದೆ.  ಸರಿಯಾಗಿ ಇದೆ ಎಂದು ಅವರು ಹೇಳಿದಾಗ ಇದೇ ಸೈಜಿನ ಕುರ್ತಾ ತೆಗೆದುಕೊಳ್ಳುವಂತೆ ಹೇಳಿದೆ. ಅಲ್ಲೇ ನಿಂತಿದ್ದ ಸೇಲ್ಸ್ ಬಾಯ್‌ಗೂ ನಾನು ಹೇಳಿರುವ ಸೈಜು ಸರಿಯಾಗಿದೆಯೋ ಎಂದು ಖಾತ್ರಿ ಮಾಡಿಕೊಂಡೆ.  'ಸರಿ' ಅಂತ ಹೇಳಿದ ಆ ಹುಡುಗಿಯರು ನನ್ನತ್ತ  ಧನ್ಯತಾ ಭಾವದಿಂದ ನೋಡಿದರು.  ನಸುನಕ್ಕ ನಾನು ಅವರತ್ತ  ಕೈಬೀಸುವದಕ್ಕೂ ನನ್ನ ಮಗಳ ಫೋನ್ ಬಂತು 'ಪಪ್ಪಾ, ನಾವು ಗ್ರೌಂಡ್ ಫ್ಲೋರ್‌ನಲ್ಲಿ ಕಾಯುತ್ತಿದ್ದೇವೆ .. ಬಾ' ಅಂತ. 

ಮೊದಲ ಮಹಡಿಯ ಎಸ್ಕಲೇಟರ್ ಇಳಿಯುತ್ತ ಯೋಚಿಸ ತೊಡಗಿದೆ ಶಾಪಿಂಗ್‌ಗೂ ನನಗೂ ಆಗದ ಸಮಾಚಾರ ಆದರೆ ಇವತ್ತಿನ ಶಾಪಿಂಗ್ ಬೇರೆಯದೇ ಆದ ಅನುಭವ ನೀಡಿತ್ತು.  ನಾನು ಬೇರೆಯವರ ಖುಷಿಗೆ ಆ ಸಂದರ್ಭಕ್ಕೆ ಕಾರಣವಾಗಿದ್ದು ನನಗೆ ಗೊತ್ತಿಲ್ಲದಂತೆ ನನ್ನನು ಉಲ್ಲಸಿತನಾಗಿಸಿತ್ತು.  ನಾನು ಖುಷಿಪಡದ ಜಾಗದಲ್ಲಿ ಬೇರೇಯವರಿಗೆ ಆ ಖುಷಿಯನ್ನು ಹಂಚಿದ್ದು ನಿಜವಾಗಿಯೂ ನನ್ನಲ್ಲೂ ಧನ್ಯತಾಭಾವ ಮೂಡಿಸಿತ್ತು.  ಅದೇ ಅಲ್ಲವೇ!  ಚಿಕ್ಕ ಚಿಕ್ಕ ವಿಷಯಗಳಲ್ಲಿ ಎಷ್ಟೊಂದು ಸಂತೋಷಕರ ತಿಷಯಗಳನ್ನು ಹೆಕ್ಕಿ ತೆಗೆಯಬಹುದು.  ಇಂಥ ಸಣ್ಣ ಸಣ್ಣ ಖುಷಿಗಳು ನಮ್ಮಲ್ಲಿ ಸಕಾರಾತ್ಮಕ ಯೋಚನೆಗಳು ಮೂಡುವಂತೆ ಮಾಡಿ ಜೀವನೋತ್ಸಾಹ ಇಮ್ಮಡಿಸುವಲ್ಲಿ ಸಂಶಯವೇ ಇಲ್ಲ.  ನಿಮಗೂ ಇಂಥ ಅನುಭವಾಗಿದ್ದಲ್ಲಿ ನನ್ನ ಅನಿಸಿಕೆಯೂ ಸಾರ್ಥಕ.

ಏನಂತೀರಿ .........! ಮಹೇಶ ಶ್ರೀ. ದೇಶಪಾಂಡೆ
   ತುಷಾರಪ್ರಿಯ